ಬೆಲ್ಲದ ಪಾನಕ | Jaggery Juice (Jaggery Cool Drink)

Click here for English version.

ಬೇಸಿಗೆಯಲ್ಲಿ ನಾನು ತಯಾರಿಸುವ ತಂಪು ಪಾನೀಯಗಳಲ್ಲಿ ಬೆಲ್ಲದ ಪಾನಕವೂ ಒಂದು. ಬೆಲ್ಲಕ್ಕೆ ಆರೋಗ್ಯದ ದೃಷ್ಟಿಯಿಂದ ತುಂಬ ಮಹತ್ವವಿದೆ. ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಇದು ನಮ್ಮ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಿತ್ತ, ಅಜೀರ್ಣದಂತಹ ತೊಂದರೆಗಳಿಗಂತೂ ಬೆಲ್ಲ ಬಹಳ ಒಳ್ಳೆಯ ಔಷಧ. ಅಜೀರ್ಣ ಹಾಗೂ ಹಸಿವಿನ ತೊಂದರೆ ಇರುವವರು ಊಟಕ್ಕೆ ಅರ್ಧ ಘಂಟೆ ಮೊದಲು ಒಂದು ಲೋಟದಷ್ಟು ನೀರಿಗೆ ಒಂದು ಚಮಚ ಬೆಲ್ಲ ಸೇರಿಸಿ ಕದಡಿ ಕುಡಿದರೆ ಚೆನ್ನಾಗಿ ಹಸಿವಾಗುತ್ತದೆ.
ಆರೋಗ್ಯಕರವಾದ ಬೆಲ್ಲದ ಪಾನಕ ಕುಡಿಯಲೂ ತುಂಬ ರುಚಿ. ಮನೆಯಲ್ಲಿ ಸುಲಭದಲ್ಲಿ ಸಿಗುವ ಸಾಮಗ್ರಿಗಳಿಂದ ತಯಾರಿಸಬಹುದಾದ ಬೆಲ್ಲದ ಪಾನಕವನ್ನು ನೀವೂ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ತಣ್ಣನೆಯ ನೀರು - 2 ಗ್ಲಾಸ್ ನಷ್ಟು  
ಬೆಲ್ಲ - 4 ಚಮಚ (ಸಿಹಿಯಾಗುವಷ್ಟು)  
ನಿಂಬೆರಸ - 1 ಚಮಚ 
ಕಾಳುಮೆಣಸಿನ ಪುಡಿ - ಚಿಟಿಕೆ 
ಐಸ್ ಕ್ಯೂಬ್ಸ್ - ಬೇಕಿದ್ದರೆ 


ಮಾಡುವ ವಿಧಾನ:
ನೀರಿಗೆ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಕದಡಿ.
ಇದಕ್ಕೆ ನಿಂಬೆರಸ, ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ.
ರುಚಿ ನೋಡಿಕೊಂಡು ಸಿಹಿ ಅಥವಾ ಹುಳಿ ಬೇಕಿದ್ದರೆ ಸೇರಿಸಿ.
ತಯಾರಾದ ಪಾನಕವನ್ನು ಸರ್ವಿಂಗ್ ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ. ಬೇಕಿದ್ದರೆ ಐಸ್ ಕ್ಯೂಬ್ಸ್ ಸೇರಿಸಬಹುದು.

ಕಾಮೆಂಟ್‌ಗಳು