ಅವರೆಕಾಳು ಹುಳಿ (ಸಾಂಬಾರ್) | Avarekalu (Hyacinth Beans) Sambar

Click here for English version.

ಈ ಸಾಂಬಾರ್ ನ್ನು ನಾನು ಕಲಿತದ್ದು ಇತ್ತೀಚೆಗೆ. ಅವರೆಕಾಳಿನ ಸಾಂಬಾರ್ ತುಂಬಾ ಚೆನ್ನಾಗಿರುವುದೆಂದು ಕೇಳಿದ್ದು ಬಿಟ್ಟರೆ ಎಂದೂ ರುಚಿ ನೋಡಿರಲಿಲ್ಲ. ಹಳೆಯ ಕನ್ನಡ ಮ್ಯಾಗಜಿನ್ ಒಂದರಲ್ಲಿ ಇದ್ದ ರೆಸಿಪಿಯನ್ನು ಓದುತ್ತಿದ್ದಾಗ ಟ್ರೈ ಮಾಡೋಣವೆನಿಸಿತು. ಹೇಗೂ ಮನೆಯಲ್ಲಿ ಅವರೆಕಾಳು ಇದ್ದುದರಿಂದ ತಯಾರಿಸುವುದಕ್ಕೆ ಕಷ್ಟವೇನೂ ಇರಲಿಲ್ಲ. ಸುಲಭದಲ್ಲಿ ತಯಾರಿಸಬಹುದಾದ ಈ ಸಾಂಬಾರ್ ಬಹಳ ರುಚಿಕಟ್ಟಾಗಿತ್ತು! ಅವರೇಕಾಳು ಸಾಂಬಾರ್ ತಯಾರಿಕಾ ವಿಧಾನವನ್ನು ನಿಮ್ಮೊಡನೆಯೂ ಹಂಚಿಕೊಳ್ಳುತ್ತಿದ್ದೇನೆ, ಟ್ರೈ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಅವರೆಕಾಳು - 1 1/4 ಕಪ್ (ಮೆತ್ತಗೆ ಬೇಯಿಸಿಕೊಳ್ಳಿ)
ಎಣ್ಣೆ - 5 ಚಮಚ
ಚಕ್ಕೆ - 1 ಚಿಕ್ಕ ಚೂರು
ಒಣಮೆಣಸು - 2 (ಖಾರಕ್ಕೆ ತಕ್ಕಂತೆ)
ಮೆಂತ್ಯ - 1/4 ಚಮಚ
ಕೊತ್ತಂಬರಿ - 1 1/2 ಚಮಚ
ಜೀರಿಗೆ - 1/2 ಚಮಚ
ಗಸಗಸೆ - 1 ಚಮಚ
1 ಮಧ್ಯಮ ಗಾತ್ರದ ಈರುಳ್ಳಿ  
2 ಎಸಳು ಬೆಳ್ಳುಳ್ಳಿ
ತೆಂಗಿನತುರಿ - 4 ಟೇಬಲ್ ಚಮಚ
ಹುಣಸೆಹಣ್ಣು - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 1 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ನೀರು - 2 ರಿಂದ 2 1/2 ಕಪ್ 


ಮಾಡುವ ವಿಧಾನ:
ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿಕೊಂಡು ಒಂದು ಭಾಗವನ್ನು ದೊಡ್ಡ ಹೋಳುಗಳಾಗಿ ಹೆಚ್ಚಿಕೊಳ್ಳಿ. ಇನ್ನೊಂದು ಭಾಗವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ಬಾಣಲಿಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಚಕ್ಕೆ, ಒಣಮೆಣಸು, ಕೊತ್ತಂಬರಿ, ಜೀರಿಗೆ, ಗಸಗಸೆ ಸೇರಿಸಿ ಹುರಿದುಕೊಳ್ಳಿ.
ಪುನಃ ಅದೇ ಬಾಣಲಿಯಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ ಬೆಳ್ಳುಳ್ಳಿ ಮತ್ತು ದೊಡ್ಡದಾಗಿ ಹೆಚ್ಚಿದ ಈರುಳ್ಳಿ ಹೋಳುಗಳನ್ನು ಸೇರಿಸಿ 3 - 4 ನಿಮಿಷ ಹುರಿಯಿರಿ.
ಹುರಿದ ಎಲ್ಲಾ ಸಾಮಗ್ರಿಗಳನ್ನು ತೆಂಗಿನತುರಿ, 1/4 ಕಪ್ ನಷ್ಟು ಬೇಯಿಸಿದ ಅವರೆಕಾಳು ಮತ್ತು ಹುಣಸೆಹಣ್ಣಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಬಾಣಲಿಯಲ್ಲಿ 3 ಚಮಚ ಎಣ್ಣೆ ಕಾಯಿಸಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಇದಕ್ಕೆ ಅವರೆಕಾಳು ಸೇರಿಸಿ 3 - 4 ನಿಮಿಷ ಹುರಿಯಿರಿ.
ರುಬ್ಬಿದ ಮಿಶ್ರಣವನ್ನು ಅವರೆಕಾಳಿಗೆ ಸೇರಿಸಿ 2 ನಿಮಿಷ ಅಥವಾ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಇದಕ್ಕೆ 2 ರಿಂದ 2 1/2 ಕಪ್ ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ 10 ನಿಮಿಷ ಕುದಿಸಿ ಇಳಿಸಿ.
ಈ ಸಾಂಬಾರ್ ಅನ್ನ, ರೊಟ್ಟಿ, ಚಪಾತಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು