ಗೋರಿಕಾಯಿ ಪಲ್ಯ | Cluster Beans Palya (Dry Curry)

Click here for English version.

ಬೆಂಗಳೂರಿನಲ್ಲಿ ಎಲ್ಲ ಸೀಜನ್ ನಲ್ಲೂ ಸಿಗುವ ತರಕಾರಿಗಳಲ್ಲಿ ಗೋರಿಕಾಯಿಯೂ ಒಂದು. ಇದನ್ನು ಚವಳಿಕಾಯಿ ಎಂತಲೂ ಕರೆಯುತ್ತಾರೆ. ಪ್ರೋಟೀನ್ ಮತ್ತು ಫೈಬರ್ ಇದರಲ್ಲಿ ಹೇರಳವಾಗಿರುತ್ತದೆ. ಗೋರಿಕಾಯಿಯ ಬೀಜವನ್ನು ಒಣಗಿಸಿ ಪುಡಿಮಾಡಿ ಐಸ್ ಕ್ರೀಮ್, ಸಾಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. 
ನಮ್ಮ ಮನೆಯಲ್ಲಿ ಗೋರಿಕಾಯಿಯ ಬಳಕೆ ಕಡಿಮೆಯೇ ಎನ್ನಬಹುದು. ನನ್ನ ಅಕ್ಕ ಅವರ ಮನೆಯಲ್ಲಿ ಗೋರಿಕಾಯಿ ತಂದಾಗಲೆಲ್ಲ ಅದರ ಪಲ್ಯ ತಯಾರಿಸುತ್ತಾರೆ. ಅನ್ನ, ರೊಟ್ಟಿ, ಚಪಾತಿ ಎಲ್ಲಕ್ಕೂ ಈ ಪಲ್ಯ ಒಳ್ಳೆಯ ಕಾಂಬಿನೇಶನ್. ತಯಾರಿಸುವುದಕ್ಕೂ ಬಹಳ ಸುಲಭ! ಅಕ್ಕನಿಂದ ಕಲಿತ ಗೋರಿಕಾಯಿ ಪಲ್ಯದ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಗೋರಿಕಾಯಿ (ಚವಳಿಕಾಯಿ) - 25 ರಿಂದ 30
1 ಮೀಡಿಯಮ್ ಸೈಜ್ ಟೊಮೆಟೋ 
ಸಾಂಬಾರ್ ಪುಡಿ - 3/4 ಚಮಚ ಅಥವಾ ರುಚಿಗೆ ತಕ್ಕಷ್ಟು 
ತೆಂಗಿನತುರಿ (ಬೇಕಿದ್ದರೆ) - 1/2 ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 2ರಿಂದ 3 ಚಮಚ    
ಸಕ್ಕರೆ - 1/4 ಚಮಚ ಅಥವಾ ರುಚಿಗೆ ತಕ್ಕಷ್ಟು (ಬೆಲ್ಲವನ್ನೂ ಬಳಸಬಹುದು)
ರುಚಿಗೆ ತಕ್ಕಷ್ಟು ಉಪ್ಪು  
ಒಗ್ಗರಣೆಗೆ: ಎಣ್ಣೆ - 3ರಿಂದ 4 ಚಮಚ, ಉದ್ದಿನಬೇಳೆ - 1 ಚಮಚ, ಸಾಸಿವೆ - 1 ಚಮಚ, ಜೀರಿಗೆ - 1/2 ಚಮಚ, ಚಿಟಿಕೆ ಅರಿಚಿನ, 1 ಎಸಳು ಕರಿಬೇವು 


ಮಾಡುವ ವಿಧಾನ:
ಗೋರಿಕಾಯಿ ಮತ್ತು ಟೊಮೆಟೋವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮೀಡಿಯಂ ಸೈಜ್ ಗೆ ಹೆಚ್ಚಿಕೊಂಡರೂ ಆಗುತ್ತದೆ.
ಬಾಣಲೆಯಲ್ಲಿ 3 - 4 ಚಮಚ ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. ಸಾಸಿವೆ ಚಟಗುಟ್ಟಿದ ನಂತರ ಚಿಟಿಕೆ ಅರಿಶಿನ, ಕರಿಬೇವು, ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ 2 ನಿಮಿಷ ಕೈಯಾಡಿಸಿ, ಸಣ್ಣಗೆ ಹೆಚ್ಚಿದ ಗೋರಿಕಾಯಿ, 1 1/2 ಕಪ್ ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಬೇಯಿಸಿ.
ಪಲ್ಯದ ಮಿಶ್ರಣವನ್ನು ಒಂದೆರಡು ಬಾರಿ ಕೈಯಾಡಿಸಿ. ಗೋರಿಕಾಯಿ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ ಇನ್ನೂ 5 ನಿಮಿಷ ಬೇಯಿಸಿ. 
ಕೊನೆಯಲ್ಲಿ ತೆಂಗಿನತುರಿ (ಬೇಕಿದ್ದರೆ) ಸೇರಿಸಿ 2 ನಿಮಿಷ ಬಿಸಿಮಾಡಿ ಇಳಿಸಿ.
ರುಚಿಕರವಾದ ಗೋರಿಕಾಯಿ ಪಲ್ಯವನ್ನು ಅನ್ನ, ರೊಟ್ಟಿ ಅಥವಾ ಚಪಾತಿಯೊಡನೆ ಸವಿಯಿರಿ.

ಕಾಮೆಂಟ್‌ಗಳು