ಹಸಿರು ಬೀನ್ಸ್ ಪಲ್ಯ | Green Beans Palya | Green Beans Poriyal | French Beans Stir Fry

Click here for English version. 

ಹಸಿರು ಬೀನ್ಸ್, ಟೊಮೆಟೋ ಇತ್ಯಾದಿ ತರಕಾರಿಗಳು ಅಡುಗೆ ಮನೆಯಲ್ಲಿ ಇಲ್ಲದಿದ್ದರೆ ಎಷ್ಟೋ ಬಾರಿ ಅಡುಗೆ ಮಾಡುವುದು ಕಷ್ಟವೆನಿಸಿಬಿಡುತ್ತದೆ. ಮಾರ್ಕೆಟ್ ನಲ್ಲಿ ಯಾವಾಗಲೂ ಸಿಗುವ ಈ ತರಕಾರಿಗಳು ಸಾಂಬಾರ್, ಪಲ್ಯ, ರೈಸ್ ಐಟಂ ಮುಂತಾದ ಅಡುಗೆಗಳಿಗೆ ಬೇಕೇ ಬೇಕು. 
ಹಸಿರು ಬೀನ್ಸ್ ಬಳಸಿ ನಾನು ಸಾಮಾನ್ಯವಾಗಿ ತಯಾರಿಸುವ ಅಡುಗೆಗಳೆಂದರೆ ಸಾಂಬಾರ್, ಪಲ್ಯ, ಪಲಾವ್, ಹಶಿ ಇತ್ಯಾದಿ.
ನನ್ನ ಮಗಳಿಗೆ ಗ್ರೀನ್ ಬೀನ್ಸ್ ಎಂದರೆ ತುಂಬ ಇಷ್ಟ. ಹಸಿಯಾಗಿಯೇ ಬೀನ್ಸ್ ತಿನ್ನುವ ಅವಳು ಇದನ್ನು ಬಳಸಿ ಅಡುಗೆ ಮಾಡಿದರೆ ಖುಷಿಯಿಂದ ಊಟ ಮಾಡುತ್ತಾಳೆ. ಹೀಗಾಗಿ ನಮ್ಮ ಮನೆಯಲ್ಲಿ ತರಕಾರಿ ತರಲು ಹೋದೆವೆಂದರೆ ಹಸಿರು ಬೀನ್ಸ್ ತರಲೇಬೇಕು!
ಹಸಿರು ಬೀನ್ಸ್ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು: 
  • ಹಸಿರು ಬೀನ್ಸ್ - 300 ಗ್ರಾಂ
  • ಒಣಮೆಣಸು - ಒಂದು ಮೆಣಸಿನ ಅರ್ಧಭಾಗ 
  • ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
  • ಉದ್ದಿನಬೇಳೆ - 1 ಟೀ ಸ್ಪೂನ್
  • ಸಾಸಿವೆ - 1/2 ಟೀ ಸ್ಪೂನ್
  • ಇಂಗು - ಚಿಟಿಕೆ
  • ಅರಿಶಿನ - 1/4 ಟೀ ಸ್ಪೂನ್
  • ಕರಿಬೇವು - 8,10 ಎಲೆಗಳು
  • ಉಪ್ಪು - ರುಚಿಗೆ ತಕ್ಕಷ್ಟು
  • ಆಮ್ ಚೂರ್ ಪೌಡರ್ - 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
  • ಸಕ್ಕರೆ - 3/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
  • ಎಣ್ಣೆ - 2 ಟೇಬಲ್ ಸ್ಪೂನ್
  • ತೆಂಗಿನತುರಿ (ಬೇಕಿದ್ದರೆ) - 2 ಅಥವಾ 3 ಟೇಬಲ್ ಸ್ಪೂನ್
  • ನೀರು - 1/2 ಕಪ್ ಅಥವಾ ಜಾಸ್ತಿ


ತಯಾರಿಸುವ ವಿಧಾನ:
  • ಹಸಿರು ಬೀನ್ಸ್ ನ್ನು ಸ್ವಚ್ಛಗೊಳಿಸಿ ಆದಷ್ಟು ತೆಳ್ಳಗೆ ಹೆಚ್ಚಿಕೊಳ್ಳಿ.
  • ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಬಿಸಿಯಾದ ನಂತರ ಅದಕ್ಕೆ ಒಣಮೆಣಸಿನ ಚೂರುಗಳು, ಉದ್ದಿನಬೇಳೆ, ಸಾಸಿವೆ, ಇಂಗು, ಅರಿಶಿನ ಹಾಕಿ ಚಟಪಟ ಎಂದ ನಂತರ ಕರಿಬೇವಿನ ಎಲೆಗಳು ಮತ್ತು ಹೆಚ್ಚಿದ ಹಸಿಮೆಣಸು ಸೇರಿಸಿ ಒಂದು ನಿಮಿಷ ಕೈಯಾಡಿಸಿ.
  • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿರು ಬೀನ್ಸ್ ಸೇರಿಸಿ ಕೈಯಾಡಿಸಿ. ಇದಕ್ಕೆ ಬೇಯಲು ಬೇಕಾಗುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. ಬೀನ್ಸ್ ಇನ್ನೂ ಬೆಳೆದಿಲ್ಲವಾದರೆ ಬೇಯಿಸಲು ಕಡಿಮೆ ನೀರು ಸಾಕು. ಚೆನ್ನಾಗಿ ಬೆಳೆದ ಬೀನ್ಸ್ ಆದರೆ ಬೇಯಿಸಲು ಹೆಚ್ಚು ನೀರು ಬೇಕಾಗುತ್ತದೆ. 
  • ಪಲ್ಯದ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಮಿಶ್ರಣ ಅರ್ಧ ಬೆಂದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ.
  • ಹಸಿರು ಬೀನ್ಸ್ ಎಳೆಯದಾಗಿದ್ದರೆ 10 - 12 ನಿಮಿಷಗಳಲ್ಲಿ ಬೆಂದುಬಿಡುತ್ತದೆ. ಬೆಳೆದ ಬೀನ್ಸ್ ಆದರೆ ಪಲ್ಯ ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕು. 
  • ಪಲ್ಯ ಪೂರ್ತಿ ಬೆಂದ ನಂತರ ಇದಕ್ಕೆ ತೆಂಗಿನತುರಿ ಸೇರಿಸಿ ಇನ್ನೂ 5 ನಿಮಿಷ ಬೇಯಿಸಿ ಉರಿ ಆಫ್ ಮಾಡಿ. 
  • ಈ ಪಲ್ಯ ಅನ್ನ, ರೊಟ್ಟಿ ಅಥವಾ ದೋಸೆಯೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ. 

ಕಾಮೆಂಟ್‌ಗಳು