ಎಗ್ ಲೆಸ್ ಮ್ಯಾಂಗೋ ಲೋಫ್ ಕೇಕ್ । ಮಾವಿನಹಣ್ಣಿನ ಬ್ರೆಡ್


ಕಳೆದ ವಾರ ಹಣ್ಣು ತರಲು ಹೋದಾಗ ಒಳ್ಳೆಯ ಮಾವಿನ ಹಣ್ಣುಗಳು ಕಂಡವು. ಸೀದಾ ಹೋಗಿ ಒಂದಷ್ಟು ಹಣ್ಣುಗಳನ್ನು ತಂದೆ. ಮಾವಿನ ಹಣ್ಣು ತಂದಮೇಲೆ ರಸಾಯನ (ಸೀಕರಣೆ) ಮಾಡದೇ ಇರಲು ಸಾಧ್ಯವೆ? ರಸಾಯನ ಮಾಡಿ ನಾವಿಬ್ಬರು ಸವಿದರೆ, ನನ್ನ ಮಗಳು ಅಮ್ಮಾ, ಕೇಕ್ ಬೇಕು! ಎಂದಳು. ಅವಳಿಗಾಗಿ ಮ್ಯಾಂಗೋ ಕೇಕ್ ತಯಾರಿಸಿದ್ದಾಯಿತು. ಮಾವಿನಹಣ್ಣಿನ ಪರಿಮಳದ ಕೇಕ್ ನಮಗೆಲ್ಲ ಬಹಳ ಇಷ್ಟವಾಯಿತು.
ಮಾವಿನಹಣ್ಣು ಬಳಸಿ ನಾನು ಕೇಕ್ ತಯಾರಿಸಿದ್ದು ಇದೇ ಮೊದಲು. ರೆಸಿಪಿಗಾಗಿ ಇಂಟರ್ ನೆಟ್ ನಲ್ಲಿ ಹುಡುಕಿದಾಗ ನನ್ನ ಬ್ಲಾಗ್ ಫ್ರೆಂಡ್ ಜೂಲಿಯ ಮ್ಯಾಂಗೋ ಕೇಕ್ ರೆಸಿಪಿ ಬಹಳ ಇಷ್ಟವಾಯಿತು. ಆ ರೆಸಿಪಿಯಲ್ಲಿ ನನ್ನ ಅನುಕೂಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ತಯಾರಿಸಿದ್ದು ಈ ಕೇಕ್! ಸಂಜೆಯ ಟೀಯೊಡನೆ ಸವಿಯಲು ಅಥವಾ ಮಕ್ಕಳ ಸ್ನ್ಯಾಕ್ಸ್ ಗೆ ಈ ಕೇಕ್ ಬಹಳ ಚೆನ್ನಾಗಿರುತ್ತದೆ.
ಮ್ಯಾಂಗೋ ಲೋಫ್ ಕೇಕ್ ತಯಾರಿಸುವ ವಿಧಾನ ಇಂತಿದೆ..


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಬೇಕಿಂಗ್ ಟೈಮ್: 35 - 40 ನಿಮಿಷಗಳು
ಈ ಅಳತೆಯಿಂದ 1 ಲೋಫ್ ಕೇಕ್ ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
  • ಮೈದಾಹಿಟ್ಟು - 2 ಕಪ್ (1 ಕಪ್ = 75 ಗ್ರಾಂ ಅಂದಾಜು)
  • ಸಣ್ಣ ರವೆ - 1/2 ಕಪ್ 
  • 1 ದೊಡ್ಡ ಮಾವಿನಹಣ್ಣು ( 2 ಕಪ್ ನಷ್ಟು ಮಾವಿನ ಪಲ್ಪ್ ಅಥವಾ ಪ್ಯೂರಿ)
  • 1 1/2 ಕಪ್ ಸಕ್ಕರೆ
  • ದೊಡ್ಡ ಚಿಟಿಕೆ ಉಪ್ಪು
  • ಹಾಲು - 1/2 ಕಪ್ 
  • ಎಣ್ಣೆ - 1/2 ಕಪ್ 
  • ಬೇಕಿಂಗ್ ಪೌಡರ್ - 2 ಟೀ ಸ್ಪೂನ್ 
  • ಬೇಕಿಂಗ್ ಸೋಡಾ - 1 ಟೀ ಸ್ಪೂನ್ 
  • ಕೇಸರಿ ದಳಗಳು (ಬೇಕಿದ್ದರೆ) - 8ರಿಂದ 10 

ತಯಾರಿಸುವ ವಿಧಾನ:
  • ಮೈದಾಹಿಟ್ಟು ಮತ್ತು ಬೇಕಿಂಗ್ ಪೌಡರ್ ನ್ನು ಮಿಕ್ಸ್ ಮಾಡಿ 2 - 3 ಬಾರಿ ಜರಡಿಯಾಡಿಕೊಳ್ಳಿ. ಇದಕ್ಕೆ ರವಾ ಸೇರಿಸಿ ಮಿಕ್ಸ್ ಮಾಡಿ. 
  • ಓವನ್ ನ್ನು 175 °C ಗೆ ಪ್ರಿ-ಹೀಟ್ ಮಾಡಿಕೊಳ್ಳಿ. ಬೇಕಿಂಗ್ ಪಾತ್ರೆಗೆ ಜಿಡ್ಡು ಸವರಿಡಿ. 
  • ಮಾವಿನಹಣ್ಣಿನ ಸಿಪ್ಪೆ ಮತ್ತು ಓಟೆ ಬೇರ್ಪಡಿಸಿ. ಹಣ್ಣನ್ನು ಹೆಚ್ಚಿ ಮಿಕ್ಸಿಯಲ್ಲಿ ತಿರುವಿ 2 ಕಪ್ ನಷ್ಟು ಹಣ್ಣಿನ ಪ್ಯೂರಿ/ ಪಲ್ಪ್ ತಯಾರಿಸಿಕೊಳ್ಳಿ. ಕೇಸರಿ ದಳಗಳನ್ನು ಹಾಕುವುದಾದರೆ ರುಬ್ಬುವಾಗಲೇ ಸೇರಿಸಿ.
  • ಮಾವಿನ ಪ್ಯೂರಿಗೆ ಉಪ್ಪು, ಸಕ್ಕರೆ ಮತ್ತು ಹಾಲು ಸೇರಿಸಿ, ಸಕ್ಕರೆ ಕರಗುವತನಕ ಕದಡಿ. ಇದಕ್ಕೆ ಎಣ್ಣೆ, ಬೇಕಿಂಗ್ ಸೋಡಾ ಸೇರಿಸಿ ಮಿಕ್ಸ್ ಮಾಡಿ. 
  • ಇದಕ್ಕೆ ಮೈದಾಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿಕೊಳ್ಳಿ. 
  • ತಯಾರಾದ ಹಿಟ್ಟನ್ನು ಜಿಡ್ಡು ಸವರಿದ ಲೋಫ್ ಪಾತ್ರೆಯಲ್ಲಿ ಹಾಕಿ 35 - 40 ನಿಮಿಷ ಬೇಯಿಸಿ. 
  • ಕೇಕ್ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ. 


ಟಿಪ್ಸ್:
  • ಮಾವಿನಹಣ್ಣು ಸಿಗದಿದ್ದರೆ ಅಂಗಡಿಯಲ್ಲಿ ಸಿಗುವ ಮಾವಿನ ಪಲ್ಪ್ ಬಳಸಬಹುದು. ಪಲ್ಪ್ ನ ಸಿಹಿ ನೋಡಿಕೊಂಡು ಸಕ್ಕರೆಯ ಪ್ರಮಾಣವನ್ನು ಅಡ್ಜಸ್ಟ್ ಮಾಡಿ.

ಕಾಮೆಂಟ್‌ಗಳು