ಎಗ್ ಲೆಸ್ ಚಾಕೋಲೇಟ್ ಕೇಕ್


ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷದ ಮೊದಲ ರೆಸಿಪಿಯನ್ನು ಆದಷ್ಟು ಬೇಗ ಹಾಕಬೇಕೆಂದು ಅಂದುಕೊಂಡಿದ್ದೆ. ಆದರೆ ಕ್ರಿಸ್ ಮಸ್ ಹಾಗೂ ಹೊಸವರ್ಷದ ಪ್ರಯುಕ್ತ ವಾರಗಟ್ಟಲೆ ರಜಾ ಇದ್ದುದರಿಂದ ಅಲ್ಲಿ-ಇಲ್ಲಿ ಸುತ್ತಾಟ, ಅಡುಗೆ, ಮನೆಕೆಲಸ, ಇವುಗಳ ನಡುವೆ ಬಿಡುವಾಗಲೇ ಇಲ್ಲ.
ಹೊಸ ವರ್ಷದ ಮೊದಲ ರೆಸಿಪಿ ಎಗ್ ಲೆಸ್ ಚಾಕೋಲೇಟ್ ಕೇಕ್. ಈ ರೆಸಿಪಿಯನ್ನು ನಾನು ಬ್ಲಾಗ್ ಫ್ರೆಂಡ್ ಒಬ್ಬರಿಂದ ಕಲಿತದ್ದು. ಓವನ್ ಬಳಸಲು ಶುರುಮಾಡಿದ ಹೊಸದರಲ್ಲಿ ವಿವಿಧ ಕೇಕ್ ರೆಸಿಪಿಗಳನ್ನು ಇಂಟರ್ ನೆಟ್ ನಲ್ಲಿ ಹುಡುಕಿ ಇಷ್ಟವಾದವುಗಳನ್ನು ಟ್ರೈ ಮಾಡುವುದೆಂದರೆ ಖುಷಿಯೋ ಖುಷಿ! ನಾನು ತಯಾರಿಸಿದ ಮೊದಲ ಚಾಕೋಲೇಟ್ ಕೇಕ್ ಬಹುಶಃ ಇದೇ ಎನಿಸುತ್ತದೆ. ಕಲಿತ ನಂತರ ಈ ಕೇಕ್ ನ್ನು ಎಷ್ಟೋ ಬಾರಿ ತಯಾರಿಸಿದ್ದೇನೆ. ಹಾಲು, ಬೆಣ್ಣೆ ಬಳಸದೆ ತಯಾರಿಸುವ ಈ ಕೇಕ್ ತಯಾರಿಸುವುದೂ ಸುಲಭ, ರುಚಿಕರವೂ ಕೂಡ.
ಈ ರೆಸಿಪಿ ರಕ್ಸ್ ಕಿಚನ್ ವೆಬ್ ಸೈಟ್ ನಿಂದ ಕಲಿತದ್ದು. ಮೂಲ ರೆಸಿಪಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಈ ಕೇಕ್ ತಯಾರಿಸಿದ್ದೇನೆ. ರುಚಿಕರವಾದ ಈ ಚಾಕೋಲೇಟ್ ಕೇಕ್ ನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಬೇಕಿಂಗ್ ಟೈಮ್: 35 - 40 ನಿಮಿಷಗಳು
ಸರ್ವಿಂಗ್ಸ್: 10 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
 • ಮೈದಾಹಿಟ್ಟು - 1 1/2 ಕಪ್
 • ಕೊಕೋವಾ (ಕೋಕೋ) ಪೌಡರ್ - 3 ಟೇಬಲ್ ಸ್ಪೂನ್
 • ಬೇಕಿಂಗ್ ಸೋಡಾ - 1 ಟೀ ಸ್ಪೂನ್
 • ಉಪ್ಪು - 1/4 ಟೀ ಸ್ಪೂನ್
 • ಸಕ್ಕರೆ - 1 ಕಪ್
 • ನೀರು - 1 ಕಪ್
 • ಎಣ್ಣೆ (ವೆಜಿಟೆಬಲ್ ಆಯಿಲ್ ಅಥವಾ ಸನ್ ಫ್ಲವರ್ ಆಯಿಲ್) - 1/4 ಕಪ್
 • ನಿಂಬೆರಸ / ವಿನೆಗರ್ - 1 ಟೇಬಲ್ ಸ್ಪೂನ್
 • ವೆನಿಲ್ಲಾ ಎಸೆನ್ಸ್ - 1/2 ಟೇಬಲ್ ಸ್ಪೂನ್


ತಯಾರಿಸುವ ವಿಧಾನ:
 • ಓವನ್ ನ್ನು 180°C ಗೆ ಪ್ರಿಹೀಟ್ ಮಾಡಿಕೊಳ್ಳಿ. 
 • ಬೇಕಿಂಗ್ ಪಾತ್ರೆಗೆ ಎಣ್ಣೆ ಸವರಿ, ಅದರಮೇಲೆ ಸ್ವಲ್ಪ ಒಣ ಹಿಟ್ಟನ್ನು ತೆಳ್ಳಗೆ ಉದುರಿಸಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಕೇಕ್ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ. 
 • ಮೈದಾಹಿಟ್ಟು, ಕೊಕೋವಾ ಪೌಡರ್, ಬೇಕಿಂಗ್ ಸೋಡಾ, ಉಪ್ಪು ಇಷ್ಟನ್ನೂ ಮಿಕ್ಸ್ ಮಾಡಿ ಜರಡಿಯಾಡಿಕೊಳ್ಳಿ.
 • ಸಕ್ಕರೆಯನ್ನು ಪುಡಿಮಾಡಿಕೊಂಡು ಅದನ್ನು ನೀರಿಗೆ ಸೇರಿಸಿ ಕದಡಿ. ಸಕ್ಕರೆ ಪೂರ್ತಿ ಕರಗಿದ ನಂತರ ಅದಕ್ಕೆ ನಿಂಬೆರಸ, ಎಣ್ಣೆ ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ ಕದಡಿ. 
 • ಇದಕ್ಕೆ ಮೈದಾ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿಕೊಳ್ಳಿ.
 • ತಯಾರಾದ ಹಿಟ್ಟನ್ನು ಬೇಕಿಂಗ್ ಪಾತ್ರೆಗೆ ಹಾಕಿ. ಇದನ್ನು ಪ್ರಿ-ಹೀಟ್ ಮಾಡಿದ ಓವನ್ ನಲ್ಲಿಟ್ಟು 35 - 40 ನಿಮಿಷ ಬೇಯಿಸಿ. ಕೇಕ್ ಬೆಂದಿದೆಯೇ ಎಂದು ನೋಡಲು ಒಂದು ಕಡ್ಡಿಯನ್ನು ಕೇಕ್ ನ ತಳದವರೆಗೆ ಚುಚ್ಚಿ ನೋಡಿ. ಹಿಟ್ಟು ಕಡ್ಡಿಗೆ ಅಂಟದಿದ್ದರೆ ಕೇಕ್ ಬೆಂದಿದೆ ಎಂದರ್ಥ. 
 • ಕೇಕ್ ತಣ್ಣಗಾದ ನಂತರ ಪಾತ್ರೆಯಿಂದ ಹೊರತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.

ಕಾಮೆಂಟ್‌ಗಳು