ಮ್ಯಾಂಗೋ - ಸ್ವೀಟ್ ಕಾರ್ನ್ ಚಾಟ್ । ಮಾವಿನಕಾಯಿ - ಸ್ವೀಟ್ ಕಾರ್ನ್ ಚಾಟ್


ಬೆಂಗಳೂರಿನಲ್ಲಿ ಶಾಪಿಂಗ್ ಪ್ರಿಯರಿಗೆ ಇಷ್ಟವಾಗುವ ಸ್ಥಳಗಳಲ್ಲಿ ಗಾಂಧಿ ಬಜಾರ್ ಕೂಡ ಒಂದು. ಸಂಜೆ ವೇಳೆಯಲ್ಲಿ ಅಲ್ಲಿ ಹೋಗಿ ಒಂದಿಷ್ಟು ತಿರುಗಾಡಿ ಶಾಪಿಂಗ್ ಮುಗಿಸುತ್ತಿದ್ದಂತೆ ಅಲ್ಲಲ್ಲಿ ಕಾಣಸಿಗುವ ಫಾಸ್ಟ್ ಫುಡ್ ಅಂಗಡಿಗಳು ಹೊಟ್ಟೆಯ ಹಸಿವನ್ನು ಕೆಣಕುತ್ತವೆ! ಅಲ್ಲಿ ಹೋಗಿ ಏನಾದರೂ ತಿಂದ ನಂತರವೇ ಮನೆಯತ್ತ ಮನಸ್ಸು ಹೊರಳುವುದು. 
ಹೀಗೇ ಒಮ್ಮೆ ಶಾಪಿಂಗ್ ಗೆ ಹೋದಾಗ ಗಾಂಧಿ ಬಜಾರ್ ನ ಪಕ್ಕದ ಗವಿಪುರಂ ಏರಿಯಾಗೆ ನನ್ನ ತಂಗಿ ಕರೆದೊಯ್ದಿದ್ದಳು, ಅಲ್ಲಿ ಸಿಗುವ ಮ್ಯಾಂಗೋ - ಸ್ವೀಟ್ ಕಾರ್ನ್ ಚಾಟ್ ಸವಿ ತೋರಿಸಲು. ಬೆಂಕಿಯಲ್ಲಿ ಸ್ವೀಟ್ ಕಾರ್ನ್ ನ್ನು ಕೆಂಪಗೆ ಸುಟ್ಟು ಅದರೊಡನೆ ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ ಸೇರಿಸಿ ಹದವಾಗಿ ಉಪ್ಪು, ಹುಳಿ, ಖಾರ ಹಾಕಿ ತಯಾರಿಸುವ ಈ ಚಾಟ್ ನ ರುಚಿಯಂತೂ.. ಸೂಪರ್ಬ್! 
ಈ ಚಾಟ್ ಗೆ ಹದವಾಗಿ ಬೆಳೆದ ತೋತಾಪುರಿ ಮಾವಿನಕಾಯಿ ಹಾಕಿದರೆ ಚೆನ್ನಾಗಿರುತ್ತದೆ. ಇನ್ನೊಂದು ವಿಷಯವೆಂದರೆ, ತಯಾರಿಸಿದ ತಕ್ಷಣವೇ ಈ ತಿಂಡಿಯನ್ನು ತಿಂದುಬಿಡಬೇಕು. ಮಾವಿನಕಾಯಿ ಹೋಳುಗಳು ಮೆತ್ತಗಾಗಿಬಿಟ್ಟರೆ ಇದರ ರುಚಿ ಅಷ್ಟು ಚೆನ್ನಾಗಿರುವುದಿಲ್ಲ. 


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಸರ್ವಿಂಗ್ಸ್ : 3 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಸ್ವೀಟ್ ಕಾರ್ನ್ - 2 (ಮೀಡಿಯಮ್ ಸೈಜ್ ನವು)
  • ತೋತಾಪುರಿ ಮ್ಯಾಂಗೋ (ಮೀಡಿಯಮ್ ಸೈಜ್) - 1 
  • ಹಸಿಮೆಣಸಿನ ಪೇಸ್ಟ್ - 1 ಟೀ ಸ್ಪೂನ್ (ಖಾರಕ್ಕೆ ತಕ್ಕಂತೆ)
  • ನಿಂಬೆರಸ - ರುಚಿಗೆ ತಕ್ಕಷ್ಟು 
  • ಉಪ್ಪು - ರುಚಿಗೆ ತಕ್ಕಷ್ಟು 


ತಯಾರಿಸುವ ವಿಧಾನ:
  • ಸ್ವೀಟ್ ಕಾರ್ನ್ ನ್ನು ಬೆಂಕಿಯಲ್ಲಿ ಕೆಂಪಗೆ ಸುಟ್ಟು, ಬೀಜವನ್ನೆಲ್ಲ ಬೇರ್ಪಡಿಸಿಕೊಳ್ಳಿ. ಚಾಕುವಿನಿಂದ ಬಿಡಿಸಿದರೆ ಈ ಕೆಲಸ ಸುಲಭವಾಗುತ್ತದೆ. 
  • ಮಾವಿನಕಾಯಿಯನ್ನು ಸಿಪ್ಪೆಸಹಿತ ಸಣ್ಣಗೆ ಹೆಚ್ಚಿಕೊಳ್ಳಿ. ಸ್ವೀಟ್ ಕಾರ್ನ್ ಬೀಜಗಳ ಸೈಜಿಗೆ ಹೆಚ್ಚಿದರೆ ಒಳ್ಳೆಯದು. 
  • ಹೆಚ್ಚಿದ ಮಾವಿನಕಾಯಿ, ಸ್ವೀಟ್ ಕಾರ್ನ್ ಎರಡನ್ನೂ ಮಿಕ್ಸ್ ಮಾಡಿ 
  • ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಹಸಿಮೆಣಸಿನ ಪೇಸ್ಟ್ ಸೇರಿಸಿದರೆ ರುಚಿಕರವಾದ ಮ್ಯಾಂಗೋ - ಸ್ವೀಟ್ ಕಾರ್ನ್ ಚಾಟ್ ಸವಿಯಲು ಸಿದ್ಧ!
  • ಮಾವಿನ ಹೋಳುಗಳು ಮೆತ್ತಗಾಗುವ ಮುನ್ನವೇ ಈ ಚಾಟ್ ನ್ನು ತಿನ್ನಲು ಮರೆಯಬೇಡಿ. ಇದನ್ನು ಊಟದೊಡನೆ ಸಲಾಡ್ ನಂತೆಯೂ ಹಾಕಿಕೊಳ್ಳಬಹುದು ಅಥವಾ ಸಂಜೆಯ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)