ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದಾದ ಮತ್ತು ಬಹಳ ಕಾಲದವರೆಗೆ ಉಳಿಯುವ ಗಿಡಗಳಲ್ಲಿ ದಾಸವಾಳವೂ ಒಂದು. ದಾಸವಾಳದಲ್ಲೂ ವಿವಿಧ ಬಗೆಗಳು; ವಿವಿಧ ಬಣ್ಣದ ಹೂಗಳನ್ನು ಬಿಡುವ ಈ ಗಿಡ ಗಾರ್ಡನ್ ಗೆ ಶೋಭೆಯೂ ಹೌದು.ಹಾಗೆಯೇ ಈ ಗಿಡದ ಉಪಯೋಗಗಳೂ ಅನೇಕ. ಸಾಮಾನ್ಯವಾಗಿ ದಾಸವಾಳ ಹೂಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ದಾಸವಾಳ ಗಿಡದ ಎಲೆ ತಲೆಕೂದಲಿನ ಬೆಳವಣಿಗೆಗೆ ಬಹಳ ಒಳ್ಳೆಯದು. ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಣಾಮಕಾರಿ ಜೊತೆಗೆ ತಲೆಯನ್ನು ತಂಪಾಗಿಡುತ್ತದೆ. ದಾಸವಾಳ ಹೂವಿನಿಂದ ತಯಾರಿಸುವ ಜ್ಯೂಸ್ ಮತ್ತು ಟೀ ಆರೋಗ್ಯಕ್ಕೆ ಒಳ್ಳೆಯದು.
ನಮ್ಮ ಮನೆಯ ಹಿತ್ತಲಲ್ಲಿ ಒಂದು ಕೆಂಪು ದಾಸವಾಳದ ಗಿಡವಿದೆ. ನಾವು ದೇವರಿಗೆ ಇಡುವುದಕ್ಕೆಂದು ದಿನವೂ ದಾಸವಾಳ ಹೂಗಳನ್ನು ಕೊಯ್ಯುತ್ತೇವೆ. ನನ್ನ ಮಗಳು ಆಟ ಆಡಲೆಂದು ಒಂದಿಷ್ಟು ಹೂಗಳನ್ನು ಕೀಳುತ್ತಾಳೆ. ಎಷ್ಟೇ ಹೂಗಳನ್ನು ಕಿತ್ತರೂ ಆ ಗಿಡದಲ್ಲಿ ಇನ್ನೂ ತುಂಬಾ ಹೂಗಳು ಉಳಿದಿರುತ್ತವೆ. ಇತ್ತೀಚೆಗೆ ನಾವು ಕೆಂಪು ದಾಸವಾಳ ಹೂಗಳನ್ನು ಬಳಸಿ ಜ್ಯೂಸ್ ತಯಾರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಸುಲಭದಲ್ಲಿ ತಯಾರಿಸಬಹುದಾದ ಈ ಜ್ಯೂಸ್ ನೋಡಲೂ ಚೆಂದ, ಕುಡಿಯಲೂ ರುಚಿ!
ದಾಸವಾಳ ಹೂವಿನ ಜ್ಯೂಸ್ ತಯಾರಿಸುವ ವಿಧಾನ ಇಂತಿದೆ:
ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಕೆಂಪು ದಾಸವಾಳ ಹೂ - 3
- ಶುಂಟಿ - 2 ಇಂಚು
- ಸಕ್ಕರೆ - 4 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ನೀರು - 1 1/2 ಕಪ್ (1 ಕಪ್ = 400 ml)
- ನಿಂಬೆಹಣ್ಣು - ಒಂದು ನಿಂಬೆಯ ಅರ್ಧಭಾಗ ಅಥವಾ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
- ಒಂದು ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಅದಕ್ಕೆ ಶುಂಟಿ ಸ್ಲೈಸ್ ಹಾಗೂ ದಾಸವಾಳ ದಳಗಳನ್ನು ಸೇರಿಸಿ 8 - 10 ನಿಮಿಷ ಕುದಿಸಿ.
- ಇದನ್ನು ಸೋಸಿ ರುಚಿಗೆ ತಕ್ಕಷ್ಟು ಸಕ್ಕರೆ, ನಿಂಬೆರಸ ಸೇರಿಸಿ. ನಿಂಬೆರಸ ಸೇರಿಸಿದ ತಕ್ಷಣ ಜ್ಯೂಸ್ ಒಳ್ಳೆಯ ಕೆಂಬಣ್ಣಕ್ಕೆ ತಿರುಗುತ್ತದೆ.
- ಜ್ಯೂಸ್ ತಣ್ಣಗಾದ ನಂತರ ಕುಡಿಯಿರಿ. ಬೇಕಿದ್ದರೆ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಟ್ಟು ಅಥವಾ ಐಸ್ ಪೀಸ್ ಗಳನ್ನು ಸೇರಿಸಿ ಕುಡಿಯಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)