ಮನೆಗೆ ಯಾರಾದರೂ ಅತಿಥಿಗಳು ಬರುವರೆಂದಾದರೆ ತಕ್ಷಣ ತಯಾರಿಸಬಹುದಾದ ಸಿಹಿ ತಿಂಡಿಗಳಲ್ಲಿ ಇದೂ ಒಂದು. ಗೋಧಿಹಿಟ್ಟು, ಸಕ್ಕರೆ, ತುಪ್ಪ ಇತ್ಯಾದಿ ಒಳ್ಳೆಯ ಪದಾರ್ಥಗಳನ್ನು ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ನನ್ನ ಮಗಳಂತೂ ಈ ಲಾಡು ಕಂಡರೆ ಸಾಕು, 'ಟುಣ್ ಟುಣ್ ಲಾಡು' ಎಂದು ಹೇಳುತ್ತ ಒಂದು ಲಾಡನ್ನು ಖಾಲಿ ಮಾಡುತ್ತಾಳೆ. 'ತುಪ್ಪ ' ಎಂದ ತಕ್ಷಣ ಕ್ಯಾಲೋರಿಗಳ ಬಗ್ಗೆ ಯೋಚನೆ ಮಾಡಬೇಡಿ, ಏಕೆಂದರೆ ಈ ಲಾಡು ತಯಾರಿಸಲು ಬಹಳ ಕಡಿಮೆ ತುಪ್ಪ ಸಾಕು!
ನನ್ನ ಚಿಕ್ಕಂದಿನ ದಿನಗಳಿಂದಲೂ ಈ ಲಾಡು ನನಗೆ ಪ್ರಿಯ. ಗೋಧಿ ಹಿಟ್ಟಿನಲ್ಲಿ ಇನ್ನೊಂದು ಬಗೆಯಲ್ಲೂ ಲಾಡು ತಯಾರಿಸಬಹುದು. ಸಕ್ಕರೆ ಪಾಕ ಹಾಕಿ ತಯಾರಿಸುವ ಆ ಲಾಡು ಬೇರೆಯದೇ ರುಚಿ.
ಸುಲಭದಲ್ಲಿ ತಯಾರಿಸಬಹುದಾದ ಗೋಧಿ ಹಿಟ್ಟಿನ ಲಾಡನ್ನು ನೀವೂ ತಯಾರಿಸಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಈ ಅಳತೆಯಿಂದ 12 ಲಾಡುಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 1 ಕಪ್ (1 ಕಪ್ = 200 ಗ್ರಾಂ)
ತುಪ್ಪ - 1/2 ಕಪ್
ಸಕ್ಕರೆ ಪುಡಿ - 3/4 ಕಪ್
ಗೋಡಂಬಿ - 4
ಒಣದ್ರಾಕ್ಷಿ - 15 ರಿಂದ 20
ಏಲಕ್ಕಿ - 2
ಲವಂಗ - 1
ತಯಾರಿಸುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ.
ತುಪ್ಪ ಕರಗಿದ ನಂತರ ಇದಕ್ಕೆ ಗೋಧಿಹಿಟ್ಟು, ಗೋಡಂಬಿ ಚೂರುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಪರಿಮಳ ಬರುವಂತೆ ಹುರಿಯಿರಿ.
ಹುರಿದ ಮಿಶ್ರಣವನ್ನು ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
ಏಲಕ್ಕಿ, ಲವಂಗವನ್ನು ಪುಡಿಮಾಡಿಕೊಳ್ಳಿ. ಬೇಕಿದ್ದರೆ ಸಕ್ಕರೆ ಪುಡಿಮಾಡುವಾಗಲೇ ಇವನ್ನೂ ಸೇರಿಸಿ ಪುಡಿಮಾಡಬಹುದು .
ಹುರಿದ ಗೋಧಿಹಿಟ್ಟು ತಣ್ಣಗಾದ ನಂತರ ಇದಕ್ಕೆ ಸಕ್ಕರೆ, ಒಣದ್ರಾಕ್ಷಿ, ಏಲಕ್ಕಿ - ಲವಂಗದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ತಯಾರಾದ ಲಾಡುಗಳನ್ನು ಗಾಳಿಯಾಡದಂತೆ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಬಳಸಿ.
ಟಿಪ್ಸ್:
ಮಿಶ್ರಣ ತುಂಬಾ ಪುಡಿಪುಡಿಯಾಗಿ ಲಾಡು ಕಟ್ಟಲು ಬರದಿದ್ದರೆ ಒಂದೆರಡು ಚಮಚದಷ್ಟು ತುಪ್ಪವನ್ನು ಬಿಸಿಮಾಡಿ ಹಿಟ್ಟಿನೊಡನೆ ಮಿಕ್ಸ್ ಮಾಡಿ.
ಧನ್ಯವಾದಗಳು.. ಸುಲಭದಲ್ಲಿ ಮಾಡುವ ಲಾಡು...
ಪ್ರತ್ಯುತ್ತರಅಳಿಸಿ