ಕಳೆದ ವಾರ ತರಕಾರಿ ಕೊಳ್ಳಲು ಹೋದಾಗ ಅಪರೂಪಕ್ಕೆ ನುಗ್ಗೆಸೊಪ್ಪು ಸಿಕ್ಕಿತು. ನುಗ್ಗೆಸೊಪ್ಪಿನ ಅಡುಗೆ ಮಾಡದೆ ತುಂಬಾ ದಿನವಾಗಿಬಿಟ್ಟಿತ್ತು. ನುಗ್ಗೆಸೊಪ್ಪು ಊಟಕ್ಕೆ ರುಚಿಕರ, ಜೊತೆಗೇ ವಿವಿಧ ಪೋಷಕಾಂಶಗಳ ಆಗರವೂ ಹೌದು. ವಿಟಾಮಿನ್ ಎ, ವಿಟಾಮಿನ್ ಸಿ, ಕ್ಯಾಲ್ಸಿಯಂ ಇತ್ಯಾದಿ ಅಂಶಗಳನ್ನು ಹೇರಳವಾಗಿ ಹೊಂದಿರುವ ನುಗ್ಗೆಸೊಪ್ಪು ಕಣ್ಣು, ಹೃದಯ, ನರಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಸಹಾಯಕಾರಿ.
ನಮ್ಮ ಮನೆಯಲ್ಲಿ ನುಗ್ಗೆಸೊಪ್ಪನ್ನು ಬಳಸಿ ರುಚಿಕರವಾದ ಸಾಂಬಾರ್, ಪಲ್ಯ, ತೊವ್ವೆ, ತಂಬ್ಳಿ ಇತ್ಯಾದಿ ಅಡುಗೆಗಳನ್ನು ತಯಾರಿಸುತ್ತೇವೆ. ನುಗ್ಗೆಸೊಪ್ಪು ಹಾಗೂ ಟೊಮೆಟೋ ಬಳಸಿ ತಯಾರಿಸುವ ಸಾರು ಅಥವಾ ಸಾಂಬಾರ್ ರೆಸಿಪಿ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
- ತೊಗರಿಬೇಳೆ - 1/2 ಕಪ್ (1 ಕಪ್ = 50 ಗ್ರಾಂ)
- ಹೆಸರುಬೇಳೆ - 2 ಟೇಬಲ್ ಸ್ಪೂನ್
- ನುಗ್ಗೆಸೊಪ್ಪು - 1 ಕಪ್
- ಟೊಮೆಟೋ - 1
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ / ಬೆಲ್ಲ (ಬೇಕಿದ್ದರೆ) - 1/4 ಟೀ ಸ್ಪೂನ್
- ಹುಣಸೆಹಣ್ಣು - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಈರುಳ್ಳಿ (ಬೇಕಿದ್ದರೆ) - 1 ಚಿಕ್ಕದು
- ನೀರು - 5 ಕಪ್ (ಅಂದಾಜು)
- ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
- ಮೆಂತ್ಯ - 3/4 ಟೀ ಸ್ಪೂನ್
- ಕೊತ್ತಂಬರಿ - 2 ಟೀ ಸ್ಪೂನ್
- ಜೀರಿಗೆ - 3/4 ಟೀ ಸ್ಪೂನ್
- ಸಾಸಿವೆ - 3/4 ಟೀ ಸ್ಪೂನ್
- ಇಂಗು - ದೊಡ್ಡ ಚಿಟಿಕೆ
- ಅರಿಶಿನ - 1/4 ಟೀ ಸ್ಪೂನ್
- ಎಣ್ಣೆ - 1 1/2 ಟೀ ಸ್ಪೂನ್
- ತೆಂಗಿನತುರಿ ಅಥವಾ ಕೊಬ್ಬರಿತುರಿ - 3 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
- ಟೊಮೇಟೊ ಹಣ್ಣನ್ನು ತೊಳೆದು ಮೀಡಿಯಂ ಸೈಜಿನ ಹೋಳುಗಳಾಗಿ ಹೆಚ್ಚಿಕೊಳ್ಳಿ.
- ತೊಗರಿಬೇಳೆ ಮತ್ತು ಹೆಸರುಬೇಳೆಯನ್ನು ತೊಳೆದು 4 ಕಪ್ ನಷ್ಟು ನೀರು, ಚಿಟಿಕೆ ಅರಿಶಿನ, ಎರಡು ಹನಿ ಎಣ್ಣೆ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸುವುದಾದರೆ 3 ವಿಸಿಲ್ ಆಗುವವರೆಗೆ ಬೇಯಿಸಿದರೆ ಸಾಕು.
- ತೆಂಗಿನತುರಿ ಹೊರತಾಗಿ ಮಸಾಲೆಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನತುರಿ ಹಾಗೂ ಹುಣಸೆಹಣ್ಣು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಅಗತ್ಯವಿರುವಷ್ಟು ನೀರು ಸೇರಿಸಿ.
- ಬೇಯಿಸಿದ ಬೇಳೆಗೆ ನುಗ್ಗೆಸೊಪ್ಪು ಹಾಗೂ ಹೆಚ್ಚಿದ ಟೊಮೆಟೋ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ 5 ನಿಮಿಷ ಕುದಿಸಿ.
- ನಂತರ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ಅಗತ್ಯವಿರುವಷ್ಟು ನೀರು ಸೇರಿಸಿ 8 - 10 ನಿಮಿಷ ಕುದಿಸಿ. ಉರಿ ಆಫ್ ಮಾಡಲು 2 - 3 ನಿಮಿಷ ಮೊದಲು ಹೆಚ್ಚಿದ ಈರುಳ್ಳಿ ಸೇರಿಸಿ.
- ರುಚಿಕಟ್ಟಾದ ಸಾಂಬಾರ್ ನ್ನು ಬಿಸಿಬಿಸಿ ಅನ್ನದೊಡನೆ ಹಾಕಿಕೊಂಡು ಊಟ ಮಾಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)