ನಮ್ಮ ಮನೆಯಲ್ಲಿ ಸ್ನ್ಯಾಕ್ಸ್ ಗೆ ಅಂಗಡಿಯಿಂದ ತಿಂಡಿಗಳನ್ನು ತರುವುದು ಬಹಳ ಅಪರೂಪ. ಮನೆಯಲ್ಲೇ ತಯಾರಿಸಿದ ಸ್ವೀಟ್, ಕುರುಕಲು, ಬಿಸ್ಕಿಟ್ ಹೀಗೆ ಏನಾದರೂ ಒಂದಿಷ್ಟು ತಿಂಡಿಗಳು ಯಾವಾಗಲೂ ಟೀ ಟೈಮ್ ಗೆ ಇದ್ದೇ ಇರುತ್ತವೆ. ಮನೆಯಲ್ಲಿ ಎಷ್ಟು ಬಗೆಯ ಬಿಸ್ಕಿಟ್ ಗಳನ್ನು ತಯಾರಿಸಿದರೂ ನನ್ನ ಮಗಳಿಗೆ ಅಂಗಡಿಯಿಂದ ತರುವ ಬಿಸ್ಕಿಟ್ ಗಳೇ ಹೆಚ್ಚು ಇಷ್ಟ. 'ಅಮ್ಮಾ, ನನಗೆ ತೂತು ಇರುವ ಬಿಸ್ಕಿಟ್ ಬೇಕು!' ಎಂದು ಕೇಳುತ್ತಾಳೆ. ಹೀಗಾಗಿ ಅವಳಿಗಾಗಿ ಒಂದಿಷ್ಟು ಬಿಸ್ಕಿಟ್ ಪೊಟ್ಟಣಗಳನ್ನು ಯಾವಾಗಲಾದರೊಮ್ಮೆ ತರುತ್ತಿರುತ್ತೇವೆ.
ಕಾರ್ನ್ ಫ್ಲೇಕ್ಸ್ ಮಿಕ್ಸ್ಚರ್ - ಇದು ನಾನು ಸಾಮಾನ್ಯವಾಗಿ ತಯಾರಿಸುವ ಸ್ನ್ಯಾಕ್ಸ್ ಗಳಲ್ಲಿ ಒಂದು. ದಿಢೀರ್ ಆಗಿ ಬೆಳಗ್ಗಿನ ತಿಂಡಿ ತಯಾರಿಸಲು ಬೇಕೆಂದು ತರುವ ಕಾರ್ನ್ ಫ್ಲೇಕ್ಸ್ ನಮ್ಮ ಮನೆಯಲ್ಲಿ ಬೆಳಗಿನ ತಿಂಡಿಗಿಂತ ಹೆಚ್ಚಾಗಿ ಈ ಸ್ನ್ಯಾಕ್ಸ್ ಮಿಕ್ಸ್ಚರ್ ತಯಾರಿಸುವುದಕ್ಕೆ ಬಳಕೆಯಾಗುತ್ತದೆ. ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಮಿಕ್ಸ್ಚರ್ ನಿಮಗೆ ಇಷ್ಟವಾಗುವುದೋ ನೋಡಿ!
ತಯಾರಿಸಲು ಬೇಕಾಗುವ ಸಮಯ: 5 - 10 ನಿಮಿಷಗಳು
ಸರ್ವಿಂಗ್ಸ್: 15 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಕಾರ್ನ್ ಫ್ಲೇಕ್ಸ್ (ಪ್ಲೇನ್, ಫ್ಲೇವರ್ ಇಲ್ಲದ್ದು) - 5 ಕಪ್ (ದೊಡ್ಡ ಕಪ್)
- ಶೇಂಗಾ / ನೆಲಗಡಲೆ - 1/2 ಕಪ್
- ಬಾದಾಮಿ - 3 ಟೇಬಲ್ ಸ್ಪೂನ್
- ಗೋಡಂಬಿ ಚೂರುಗಳು - 1/8 ಕಪ್ ಅಥವಾ ಸ್ವಲ್ಪ ಜಾಸ್ತಿ
- ಒಣದ್ರಾಕ್ಷಿ - 20
- ಪುಟಾಣಿಬೇಳೆ - 3 ಟೇಬಲ್ ಸ್ಪೂನ್
- ಉದ್ದಿನಬೇಳೆ - 1 ಟೀ ಸ್ಪೂನ್
- ಸಾಸಿವೆ - 1 ಟೀ ಸ್ಪೂನ್
- ಅರಿಶಿನ - 1/4 ಟೀ ಸ್ಪೂನ್
- ಮಸಾಲಾ ಪೌಡರ್ - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಕರಿಬೇವು - 1 ಎಸಳು
- ಎಣ್ಣೆ - ಒಂದು ಸೌಟು ಅಥವಾ 10ರಿಂದ 11 ಟೇಬಲ್ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆಪುಡಿ - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
- ಕಾರ್ನ್ ಫ್ಲೇಕ್ಸ್ ಗರಿಯಾಗಿದ್ದರೆ ಹಾಗೆಯೇ ಬಳಸಬಹುದು. ಇಲ್ಲದಿದ್ದರೆ ಕಾರ್ನ್ ಫ್ಲೇಕ್ಸ್ ನ್ನು ಓವನ್ ನಲ್ಲಿ ಬಿಸಿಮಾಡಿ ಅಥವಾ ಒಲೆಯಮೇಲೆ ಕಡಿಮೆ ಉರಿಯಲ್ಲಿ ಹುರಿದು ಗರಿಗರಿ ಮಾಡಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಬಿಸಿಯಾದ ನಂತರ ಇದಕ್ಕೆ ಬಾದಾಮಿ, ಶೇಂಗಾ ಸೇರಿಸಿ 2 - 3 ನಿಮಿಷ ಹುರಿಯಿರಿ.
- ನಂತರ ಇದಕ್ಕೆ ಗೋಡಂಬಿ ಚೂರುಗಳನ್ನು ಸೇರಿಸಿ ಒಂದು ನಿಮಿಷ ಹುರಿದು ದ್ರಾಕ್ಷಿ, ಪುಟಾಣಿಬೇಳೆ, ಉದ್ದಿನಬೇಳೆ, ಸಾಸಿವೆ ಸೇರಿಸಿ ಸಾಸಿವೆ ಚಟಪಟ ಎನ್ನುವತನಕ ಹುರಿಯಿರಿ. ನಂತರ ಇದಕ್ಕೆ ಅರಿಶಿನ ಸೇರಿಸಿ, ದ್ರಾಕ್ಷಿ ಉಬ್ಬುವತನಕ ಹುರಿಯಿರಿ.
- ಕೊನೆಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿ ಒಂದು ನಿಮಿಷ ಹುರಿದು, ಮಸಾಲಾ ಪೌಡರ್ ಸೇರಿಸಿ ಒಲೆಯಿಂದ ಇಳಿಸಿ.
- ಒಗ್ಗರಣೆ ಮಿಶ್ರಣಕ್ಕೆ ಪುಡಿ ಉಪ್ಪು, ಸಕ್ಕರೆಪುಡಿ ಸೇರಿಸಿ ಮಿಕ್ಸ್ ಮಾಡಿ.
- ಈಗ ಕಾರ್ನ್ ಫ್ಲೇಕ್ಸ್ ನ್ನು ಒಗ್ಗರಣೆಗೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಅಥವಾ ಸಕ್ಕರೆಪುಡಿ ಬೇಕಿದ್ದರೆ ಸೇರಿಸಿ.
- ತಯಾರಾದ ಕಾರ್ನ್ ಫ್ಲೇಕ್ಸ್ ಮಿಕ್ಸ್ಚರ್ ನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಬೇಕಾದಾಗ ಬಳಸಿ. ಟೀ ಅಥವಾ ಕಾಫಿಯೊಡನೆ ಇದು ಒಳ್ಳೆಯ ಸ್ನ್ಯಾಕ್ಸ್. ರವಾ ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿಯೊಡನೆ ಹಾಕಿಕೊಳ್ಳುವುದಕ್ಕೂ ಈ ಮಿಕ್ಸ್ಚರ್ ಚೆನ್ನಾಗಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)