ಪಾಲಕ್ ಪನೀರ್

English version

ಪಾಲಕ್ ಪನೀರ್ - ಇದು ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತವಾದ ಸೈಡ್ ಡಿಶ್. ಪಾಲಕ್ ಸೊಪ್ಪಿನ ಗ್ರೇವಿಯಲ್ಲಿ ಪನೀರ್ ಪೀಸ್ ಗಳನ್ನು ಸೇರಿಸಿ ತಯಾರಿಸುವ ಈ ಸೈಡ್ ಡಿಶ್ ಚಪಾತಿ, ರೊಟ್ಟಿ, ಪೂರಿಯೊಡನೆ ತಿನ್ನಲು ಬಹಳ ಚೆನ್ನಾಗಿರುತ್ತದೆ.
ಪಾಲಕ್ ಸೊಪ್ಪನ್ನು ಮನೆಯಲ್ಲೇ ಪಾಟ್ ಗಳಲ್ಲಿ ಬೆಳೆಸಬಹುದು. ನನ್ನ ಫ್ರೆಂಡ್ ಒಬ್ಬರು ರಜಕ್ಕೆ ಊರಿಗೆ ಹೋಗುವಾಗ ಅವರ ಮನೆಯಲ್ಲಿದ್ದ ಪಾಲಕ್ ಗಿಡಗಳ ಪಾಟ್ ನ್ನು ನಮ್ಮ ಮನೆಯಲ್ಲಿಟ್ಟು ಹೋಗಿದ್ದಾರೆ. ಅವರು ಹೇಳುವ ಪ್ರಕಾರ, ಪಾಲಕ್ ಗಿಡವನ್ನು ಬೇರುಸಹಿತ ಕೀಳಬಾರದಂತೆ. ಬದಲಾಗಿ ಚೆನ್ನಾಗಿ ಬಲಿತ ಎಲೆಗಳನ್ನು ಮಾತ್ರ ಕೀಳುತ್ತಿದ್ದರೆ ಪುನಃ ಅದೇ ಗಿಡದಲ್ಲೇ ಹೊಸ ಎಲೆಗಳು ಬೆಳೆಯುತ್ತಿರುತ್ತವೆ. ಒಂದೊಂದು ಗಿಡವನ್ನೂ ಐದಾರು ತಿಂಗಳತನಕ ಬಳಸಬಹುದು. ಇಲ್ಲಿ ಈಗ ಬೇಸಿಗೆ ಕಾಲವಾದ್ದರಿಂದ ಮೂರು ವಾರಕ್ಕೆ ಒಮ್ಮೆ ಪಾಲಕ್ ಸೊಪ್ಪು ಕೊಯ್ಲಿಗೆ ಸಿಗುತ್ತಿದೆ. ನಾನು ಅಡಿಲೇಡ್ ನಲ್ಲಿದ್ದಾಗ ಮನೆಯ ಹಿತ್ತಿಲಲ್ಲಿ ಪಾಲಕ್ ಗಿಡಗಳನ್ನು ಹಾಕಿಕೊಂಡಿದ್ದೆ. ಆದರೆ ಈ ರೀತಿ ಬಲಿತ ಎಲೆಗಳನ್ನು ಮಾತ್ರ ಕಿತ್ತು ಗಿಡವನ್ನು ಹಾಗೇ ಬಿಡಬೇಕೆಂದು ಗೊತ್ತಿರಲಿಲ್ಲ. ಇದು ಒಳ್ಳೆಯ ಟ್ರಿಕ್ ಅಲ್ಲವೆ?
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷ ನಿಮಗೆಲ್ಲರಿಗೂ ಸಂತೋಷ, ನೆಮ್ಮದಿಗಳನ್ನು ತರಲೆಂದು ಹಾರೈಸುವೆ!
ಪಾಲಕ್ ಪನೀರ್ ರೆಸಿಪಿ ಈ ಕೆಳಗಿನಂತಿದೆ:

ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್


ಬೇಕಾಗುವ ಸಾಮಗ್ರಿಗಳು: 
 • ಪಾಲಕ್ ಸೊಪ್ಪು - 1 ದೊಡ್ಡ ಕಟ್ಟು 
 • ಟೊಮೆಟೋ - 1 
 • ಈರುಳ್ಳಿ - 1, ಮೀಡಿಯಮ್ ಸೈಜಿನದು 
 • ತುರಿದ ಬೆಳ್ಳುಳ್ಳಿ - 1 ಟೀ ಸ್ಪೂನ್ 
 • ತುರಿದ ಶುಂಟಿ - 1 ಟೀ ಸ್ಪೂನ್ 
 • ಜೀರಿಗೆ - 1 ಟೀ ಸ್ಪೂನ್
 • ಕೊತ್ತಂಬರಿ ಪುಡಿ - 1 1/2 ಟೀ ಸ್ಪೂನ್ 
 • ಗರಮ್ ಮಸಾಲಾ ಪುಡಿ - 1/2 ಟೀ ಸ್ಪೂನ್ 
 • ಅಚ್ಚಮೆಣಸಿನಪುಡಿ - 1 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
 • ಉಪ್ಪು - ರುಚಿಗೆ ತಕ್ಕಷ್ಟು 
 • ನಿಂಬೆರಸ - 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
 • ಪನೀರ್ - 300 ಗ್ರಾಂ
 • ಎಣ್ಣೆ - 7 ಟೇಬಲ್ ಸ್ಪೂನ್ 
 • ನೀರು - 3 ಕಪ್ 


ತಯಾರಿಸುವ ವಿಧಾನ:
 • ಟೊಮೆಟೋ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ತುರಿದುಕೊಳ್ಳಿ.
 • ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದುಕೊಂಡು 1 1/2 ಕಪ್ ಅಥವಾ ಅಗತ್ಯವಿರುವಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಸೊಪ್ಪು ಬೇಯಿಸಿದ ನೀರನ್ನು ಎತ್ತಿಟ್ಟುಕೊಂಡು, ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. 
 • ಪನೀರ್ ನ್ನು ಬೇಕಾದ ಸೈಜಿಗೆ ಕತ್ತರಿಸಿಕೊಂಡು ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೊಂಬಣ್ಣಕ್ಕೆ ಬೇಯಿಸಿಕೊಳ್ಳಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ 5 - 6 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಬಿಸಿಮಾಡಿ ಜೀರಿಗೆ ಸೇರಿಸಿ ಒಗ್ಗರಣೆ ಮಾಡಿಕೊಂಡು ತುರಿದ ಶುಂಟಿ - ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ. 
 • ಇದಕ್ಕೆ ತುರಿದ ಈರುಳ್ಳಿ ಸೇರಿಸಿ ನಸು ಕಂದುಬಣ್ಣ ಬರುವವರೆಗೆ ಹುರಿಯಿರಿ. 
 • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೋ, 1/4 ಟೀ ಸ್ಪೂನ್ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಬೇಯಿಸಿ. 
 • ಇದನ್ನು ಆಗಾಗ್ಗೆ ಕೈಯಾಡಿಸುತ್ತಿದ್ದು, ಮಿಶ್ರಣ ಎಣ್ಣೆ ಬಿಡತೊಡಗಿದಾಗ ಪಾಲಕ್ ಪೇಸ್ಟ್ ಸೇರಿಸಿ. ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಪಾಲಕ್ ಸೊಪ್ಪು ಬೇಯಿಸಿದ ನೀರನ್ನೇ ಇಲ್ಲಿ ಬಳಸಬಹುದು. 
 • ಪಾಲಕ್ ಮಿಶ್ರಣಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ ಹಾಗೂ ಅಚ್ಚಮೆಣಸಿನಪುಡಿ ಸೇರಿಸಿ ಕೈಯಾಡಿಸಿ 3 - 4 ನಿಮಿಷ ಕುದಿಸಿ ಇಳಿಸಿ.
 • ತಯಾರಾದ ಪಾಲಕ್ ಗ್ರೇವಿಗೆ ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿಕೊಂಡು ಪನೀರ್ ಪೀಸ್ ಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. 
 • ಹಬೆಯಾಡುವ ಪಾಲಕ್ ಪನೀರ್ ನ್ನು ರೊಟ್ಟಿ, ಚಪಾತಿ ಅಥವಾ ಪೂರಿಯೊಡನೆ ಸರ್ವ್ ಮಾಡಿ. 


ಟಿಪ್ಸ್: 
 • ಪನೀರ್ ತಯಾರಿಸುವಾಗ ಉಳಿಯುವ ನೀರನ್ನು ಚೆಲ್ಲದೆ ಇಟ್ಟರೆ ವಿವಿಧ ಗ್ರೇವಿಗಳಲ್ಲಿ ಬಳಸಲು ಚೆನ್ನಾಗಿರುತ್ತದೆ. ನಾನು ಇಲ್ಲಿ ಪನೀರ್ ತಯಾರಿಸಿದ ನೀರನ್ನೇ ಬಳಸಿದ್ದೇನೆ. 
 • ಅಚ್ಚಮೆಣಸಿನಪುಡಿಯ ಬದಲು ಹಸಿಮೆಣಸನ್ನು ಬೇಕಿದ್ದರೂ ಬಳಸಬಹುದು. ಹಸಿಮೆಣಸು ಬಳಸುವುದಾದರೆ ಶುಂಟಿ - ಬೆಳ್ಳುಳ್ಳಿ - ಹಸಿಮೆಣಸು ಇಷ್ಟನ್ನೂ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಂಡು ಬಳಸಿ.

ಕಾಮೆಂಟ್‌ಗಳು