ಬಾಳೆಕಾಯಿ ಚಿಪ್ಸ್


ನಮ್ಮೂರ ಕಡೆ ಟೀ ಟೈಮ್ ಸ್ನ್ಯಾಕ್ಸ್ ಗೆಂದು ಬಗೆಬಗೆಯ ಚಿಪ್ಸ್ ಗಳನ್ನು ತಯಾರಿಸುತ್ತಾರೆ. ಬಾಳೆಕಾಯಿ ಚಿಪ್ಸ್, ಹಲಸಿನಕಾಯಿ ಚಿಪ್ಸ್, ದೀವಿಹಲಸು (ಬೇರುಹಲಸು) ಚಿಪ್ಸ್, ಗೆಣಸಿನ ಚಿಪ್ಸ್, ಮುಂತಾಗಿ ಆಯಾ ಸೀಜನ್ ನಲ್ಲಿ ಲಭ್ಯವಿರುವ ತರಕಾರಿಗಳನ್ನು ಬಳಸಿ ಚಿಪ್ಸ್ ರೆಡಿಯಾಗುತ್ತದೆ. ಬಾಳೆಕಾಯಿಯಂತೂ ವರ್ಷದ ಎಲ್ಲಾ ಕಾಲದಲ್ಲೂ ಸಿಗುವುದರಿಂದ ಬಾಳೆಕಾಯಿ ಚಿಪ್ಸ್ ತಯಾರಿಸುವುದು ಸರ್ವೇ ಸಾಮಾನ್ಯ. ಬಾಳೆಯಲ್ಲಿ ವಿವಿಧ ತಳಿಗಳಿವೆ. ಅದರಲ್ಲಿ ನೇಂದ್ರ ಬಾಳೆಕಾಯಿ ಚಿಪ್ಸ್ ತಯಾರಿಸಲು ಪ್ರಶಸ್ತವಾದುದು. 
ನಾವು ಊರು ಕಡೆಯ ಬಾಳೆಕಾಯಿ ಚಿಪ್ಸ್ ತಿನ್ನದೇ ವರ್ಷಗಳೇ ಆಗಿಬಿಟ್ಟಿತ್ತು. ಕೆಲ ದಿನಗಳ ಹಿಂದೆ ನಾನು ಇಂಡಿಯನ್ ಸ್ಟೋರ್ ನಿಂದ ಅಡುಗೆಗೆಂದು ತಂದಿದ್ದ ಬಾಳೆಕಾಯಿಯಲ್ಲಿ ಸ್ವಲ್ಪ ಚಿಪ್ಸ್ ತಯಾರಿಸಿದ್ದೆ. ಅಮ್ಮ ತಯಾರಿಸುವಂಥ ಮಸಾಲೆ ಪುಡಿ ಹಾಕಿದಮೇಲಂತೂ ಊರಲ್ಲಿ ತಯಾರಿಸುವ ಚಿಪ್ಸ್ ನಂತೆಯೇ ಅನಿಸಿತು. ಒಮ್ಮೆ ಚಿಪ್ಸ್ ತಯಾರಿಸಿದ ನಂತರ ಇನ್ನು ಬೇಕೆನಿಸಿದಾಗಲೆಲ್ಲ ಮನೆಯಲ್ಲೇ ಬಾಳೆಕಾಯಿ ಚಿಪ್ಸ್ ತಯಾರಿಸಬಹುದೆಂಬ ಕಾನ್ಫಿಡೆನ್ಸ್ ಬಂದಿದೆ!


ತಯಾರಿಸಲು ಬೇಕಾಗುವ ಸಮಯ: 1 ಘಂಟೆ 
ಸರ್ವಿಂಗ್ಸ್: 5 - 6
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
ಬಲಿತ ಬಾಳೆಕಾಯಿ - 5
ಚಿಪ್ಸ್ ಮಸಾಲಾ ಪೌಡರ್ - 4 ಟೇಬಲ್ ಸ್ಪೂನ್ 
ಉಪ್ಪು - ರುಚಿಗೆ ತಕ್ಕಷ್ಟು 
ಕರಿಯಲು ಎಣ್ಣೆ 

ತಯಾರಿಸುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ 5 ಕಪ್ ನಷ್ಟು ನೀರು ಹಾಕಿ ಇದಕ್ಕೆ 4 - 5 ಹನಿಗಳಷ್ಟು ಎಣ್ಣೆ ಹಾಕಿಟ್ಟಿರಿ. ಸಿಪ್ಪೆ ತೆಗೆದ ಬಾಳೆಕಾಯಿಗಳನ್ನು ನೀರಿನ ಪಾತ್ರೆಯಲ್ಲಿ ಮುಳುಗಿಸಿಡಿ. 
ಒಂದೊಂದೇ ಬಾಳೆಕಾಯಿಯನ್ನು ನೀರಿನಿಂದ ತೆಗೆದು ಒಣಬಟ್ಟೆಯಲ್ಲಿ ಒರೆಸಿಕೊಂಡು, ತೆಳ್ಳಗಿನ ಸ್ಲೈಸ್ ಗಳಾಗಿ ಹೆಚ್ಚಿಕೊಳ್ಳಿ. 
ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಬಾಳೆಕಾಯಿ ಸ್ಲೈಸ್ ಗಳನ್ನು ಹಾಕಿ ಹೊಂಬಣ್ಣಕ್ಕೆ ಅಥವಾ ಗರಿಯಾಗುವತನಕ ಕರಿಯಿರಿ. 
ಕರಿದ ಚಿಪ್ಸ್ ನ್ನು ಒಂದು ಟಿಶ್ಯೂ ಪೇಪರ್ ಮೇಲೆ ಎರಡು ನಿಮಿಷ ಹರವಿ. ನಂತರ ಚಿಪ್ಸ್ ನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಮಸಾಲಾ ಪೌಡರ್ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
ತಯಾರಾದ ಚಿಪ್ಸ್ ನ್ನು ಬಿಸಿಬಿಸಿ ಟೀ ಅಥವಾ ಕಾಫಿ ಯೊಡನೆ ಸವಿಯಿರಿ. 


ಟಿಪ್ಸ್:
 ಬಾಳೆಕಾಯಿ ಚಿಪ್ಸ್ ಗೆ ಮಸಾಲಾ ಪೌಡರ್ ಬದಲಾಗಿ ಇಂಗು ಹಾಗೂ ಅರಿಶಿನ ವನ್ನು ಹಾಕಿದರೂ ಚೆನ್ನಾಗಿರುತ್ತದೆ.
ಸೂರ್ಯಕಾಂತಿ ಎಣ್ಣೆ ಅಥವಾ ತೆಂಗಿನೆಣ್ಣೆಯಲ್ಲಿ ಬಾಳೆಕಾಯಿ ಚಿಪ್ಸ್ ಕರಿದರೆ ರುಚಿ ಹೆಚ್ಚು.
ಬಲಿತ ಬಾಳೆಕಾಯಿಗಳು ಇಟ್ಟಲ್ಲೇ ಬಹುಬೇಗ ಹಣ್ಣಾಗಿಬಿಡುತ್ತವೆ. ಸಿಪ್ಪೆ ತೆಗೆದ ಕಾಯಿಗಳು ಹಣ್ಣಾಗದಂತೆ ತಡೆಯಲು ಇವನ್ನು ನೀರಿನಲ್ಲಿ ನೆನೆಸಿಡಲಾಗುತ್ತದೆ. ಸಿಪ್ಪೆತೆಗೆದ ಬಾಳೆಕಾಯಿಗಳನ್ನು ತಕ್ಷಣವೇ ಬಳಸುವುದಾದರೆ ನೀರಿನಲ್ಲಿ ನೆನೆಸಿಡುವ ಅಗತ್ಯವಿಲ್ಲ.

ಕಾಮೆಂಟ್‌ಗಳು