ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಜನವರಿ ತಿಂಗಳೆಂದರೆ ರೈತರು ಹೊಲ - ತೋಟಗಳಲ್ಲಿ ಬೆಳೆದ ದವಸಧಾನ್ಯ ಹಾಗೂ ಇತರ ಬೆಳೆಗಳು ಕೊಯ್ಲಿಗೆ ಬರುವ ಸಮಯ. ಬೆಳೆ ಕೊಯ್ಲನ್ನು ಮುಗಿಸಿದ ಖುಷಿಯಲ್ಲಿ ಆಚರಿಸುವ ಹಬ್ಬ ಇದು! ಭಾರತದ ವಿವಿಧೆಡೆ ಈ ಹಬ್ಬವನ್ನು ಪೊಂಗಲ್, ಭೋಗಿ ಪಲ್ಲು ಇತ್ಯಾದಿ ಹೆಸರುಗಳಿಂದ ಆಚರಿಸುತ್ತಾರೆ.
ನಮ್ಮೂರ ಕಡೆ ಸಂಕ್ರಾಂತಿ ಹಬ್ಬಕ್ಕೆ 'ಸಂಕ್ರಾಂತಿ ಕಾಳು' ಎಂಬ ವಿಶಿಷ್ಟ ತಿಂಡಿಯನ್ನು ತಯಾರಿಸುತ್ತಾರೆ. ಎಳ್ಳನ್ನು ಸಕ್ಕರೆಪಾಕದಲ್ಲಿ ಅದ್ದಿ ತಯಾರಿಸುವ ಈ ಕಾಳುಗಳು ಮಕ್ಕಳಿಗೆ ಬಹಳ ಪ್ರಿಯ! ಸಂಕ್ರಾಂತಿ ಹಬ್ಬದ ದಿನ ಮನೆಮಂದಿಗೆ ಹಾಗೂ ಬಂಧುಗಳಿಗೆಲ್ಲ ಸಂಕ್ರಾಂತಿ ಕಾಳನ್ನು ಹಂಚಿ 'ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ' ಎಂದು ಹೇಳುವುದು ವಾಡಿಕೆ.
ಸಂಕ್ರಾಂತಿ ಕಾಳನ್ನು ಮನೆಯಲ್ಲಿ ತಯಾರಿಸುವುದು ಕಷ್ಟದ ಕೆಲಸ ಹಾಗೂ ಸಮಯವೂ ಬಹಳ ಬೇಕು. ಹೀಗಾಗಿ ಮನೆಯಲ್ಲಿ ತಯಾರಿಸುವುದಕ್ಕಿಂತ ಅಂಗಡಿಯಿಂದ ಕೊಂಡು ತರುವುದೇ ಸುಲಭ. ನನ್ನ ಅಮ್ಮನ ಮನೆಯಲ್ಲಿ ಈಗಲೂ ಮನೆಯಲ್ಲಿ ಸ್ವಲ್ಪವಾದರೂ ಸಂಕ್ರಾಂತಿ ಕಾಳನ್ನು ತಯಾರಿಸುವ ವಾಡಿಕೆಯಿದೆ.
ಸಂಕ್ರಾಂತಿ ಕಾಳು ತಯಾರಿಸುವ ವಿಧಾನ ಇಂತಿದೆ:
ತಯಾರಿಸಲು ಬೇಕಾಗುವ ಸಮಯ: 4 ಘಂಟೆ
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಈ ಅಳತೆಯಿಂದ ಒಂದು ಪುಟ್ಟ ಬೌಲ್ ನಷ್ಟು ಸಂಕ್ರಾಂತಿ ಕಾಳುಗಳನ್ನು ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
- ಬಿಳಿ ಎಳ್ಳು - 4 ಟೀ ಸ್ಪೂನ್
- ಸಕ್ಕರೆ - 3 ಕಪ್ (1 ಕಪ್ = 110 ಗ್ರಾಂ)
- ನೀರು - 1 1/4 ಕಪ್
- ಹಾಲು - 4 ಟೇಬಲ್ ಸ್ಪೂನ್
- ನಿಂಬೆರಸ - 1 ಟೀ ಸ್ಪೂನ್
- ಒಂದು ಮಸ್ಲಿನ್ ಬಟ್ಟೆ
- ಫುಡ್ ಕಲರ್ (ಬೇಕಿದ್ದರೆ) - ಸ್ವಲ್ಪ
ತಯಾರಿಸುವ ವಿಧಾನ:
- ಸಕ್ಕರೆಗೆ ನೀರು ಸೇರಿಸಿ ಬಿಸಿಗಿಡಿ. ನೀರು ಕುದಿಯತೊಡಗಿದಾಗ ಇದಕ್ಕೆ 2 ಟೇಬಲ್ ಸ್ಪೂನ್ ಹಾಲು, 1/2 ಟೀ ಸ್ಪೂನ್ ನಷ್ಟು ನಿಂಬೆರಸ ಸೇರಿಸಿ.
- 3 - 4 ನಿಮಿಷ ಕುದಿಸಿದ ನಂತರ ಮೊಸರಿನಂತಹ ಬಿಳಿ ಮಿಶ್ರಣ ಮೇಲೆ ತೇಲತೊಡಗುತ್ತದೆ. ಈಗ ಸಕ್ಕರೆ ಪಾಕವನ್ನು ಮಸ್ಲಿನ್ ಬಟ್ಟೆಯಲ್ಲಿ ಶೋಧಿಸಿ ಪುನಃ ಕುದಿಯಲಿಡಿ.
- ಸಕ್ಕರೆ ಪಾಕಕ್ಕೆ ಇನ್ನೊಮ್ಮೆ 2 ಟೇಬಲ್ ಸ್ಪೂನ್ ಹಾಲು, 1/2 ಟೀ ಸ್ಪೂನ್ ನಷ್ಟು ನಿಂಬೆರಸ ಸೇರಿಸಿ 3 - 4 ನಿಮಿಷ ಕುದಿಸಿ, ಮೊಸರಿನಂತಹ ಮಿಶ್ರಣ ಪಾತ್ರೆಯ ಮೇಲ್ಭಾಗದಲ್ಲಿ ಕಂಡಾಗ ಇದನ್ನು ಮಸ್ಲಿನ್ ಬಟ್ಟೆಯಲ್ಲಿ ಶೋಧಿಸಿ.
- ಸಕ್ಕರೆ ಒಂದೆಳೆ ಪಾಕ ಬಂದಾಗ ಉರಿಯನ್ನು ಆಫ್ ಮಾಡಿ ಪಾಕವನ್ನು ತಣಿಯಲು ಬಿಡಿ. ಈಗ ಶುದ್ಧವಾದ ಸಕ್ಕರೆಪಾಕ ಸಂಕ್ರಾಂತಿ ಕಾಳು ತಯಾರಿಸಲು ಸಿದ್ಧವಾಯಿತು.
- ಯಾವ ಹಂತದಲ್ಲಾದರೂ ಸಕ್ಕರೆಪಾಕ ದಪ್ಪಗಾಗಿಬಿಟ್ಟಿದ್ದರೆ ಇದಕ್ಕೆ ಸ್ವಲ್ಪ ನೀರು ಸೇರಿಸಿ ಬಿಸಿಮಾಡಿ ಒಂದೆಳೆ ಪಾಕ ಮಾಡಿಕೊಳ್ಳಬಹುದು.
- ಒಂದು ಅಗಲವಾದ ಬಾಣಲೆಯನ್ನು ಸಣ್ಣ ಉರಿಯಲ್ಲಿ ಬಿಸಿಗಿಡಿ. ಇದಕ್ಕೆ 4 ಟೀ ಸ್ಪೂನ್ ನಷ್ಟು ಬಿಳಿ ಎಳ್ಳನ್ನು ಹಾಕಿ. ಇದಕ್ಕೆ 3 ಹನಿಯಷ್ಟು ಸಕ್ಕರೆಪಾಕ ಸೇರಿಸಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಎಳ್ಳು ಒಂದಕ್ಕೊಂದು ಅಂಟದಂತೆ ಎಚ್ಚರಿಕೆ ವಹಿಸಿ. ಸಕ್ಕರೆಪಾಕ ಪೂರ್ತಿ ಒಣಗಿ ಎಳ್ಳು ಗರಿಯಾಗುವವರೆಗೂ ಹೀಗೇ ಕೈಯಾಡಿಸುತ್ತಿರಿ. ಕೈ ಸುಡದಂತೆ ಹುಷಾರಾಗಿ ಕೆಲಸ ಮಾಡಿ.
- ಬಾಣಲಿ ಜಾಸ್ತಿ ಬಿಸಿಯಾಗದಂತೆ ಎಚ್ಚರಿಕೆವಹಿಸಿ. ಕೈಗೆ ಜಾಸ್ತಿ ಬಿಸಿ ಎನಿಸಿದರೆ ಆಗಾಗ ಬಾಣಲಿಯನ್ನು ಉರಿಯಿಂದ ಕೆಳಗಿಸಿಕೊಂಡು, ಬಾಣಲಿ ಸ್ವಲ್ಪ ತಣಿಯುವ ತನಕ ಹಾಗೇ ಕೈಯಾಡಿಸುತ್ತಿರಿ.
- ಎಳ್ಳು ಪೂರ್ತಿ ಒಣಗಿದ ನಂತರ ಪುನಃ ಇದಕ್ಕೆ 3 - 4 ಹನಿಯಷ್ಟು ಸಕ್ಕರೆಪಾಕ ಸೇರಿಸಿ ಎಳ್ಳು ಒಂದಕ್ಕೊಂದು ಅಂಟದಂತೆ, ಪಾಕ ಪೂರ್ತಿ ಒಣಗುವವರೆಗೂ ಕೈಯಾಡಿಸಿ. ಸಂಕ್ರಾಂತಿ ಕಾಳು ಕೊತ್ತಂಬರಿ ಬೀಜದಷ್ಟು ದೊಡ್ದದಾಗುವವರೆಗೂ ಇದೇ ರೀತಿ ಮಾಡಿ.
- ಸಂಕ್ರಾಂತಿ ಕಾಳಿಗೆ ಬಣ್ಣ ಹಾಕುವುದಾದರೆ ಕಾಳು ಪೂರ್ತಿ ರೆಡಿಯಾದ ನಂತರ ಅರ್ಧ ಟೀ ಚಮಚದಷ್ಟು ಸಕ್ಕರೆ ಪಾಕಕ್ಕೆ ನಿಮಗಿಷ್ಟವಾದ ಬಣ್ಣವನ್ನು ಸೇರಿಸಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಒಂದೆರಡು ಚಮಚದಷ್ಟು ಸಂಕ್ರಾಂತಿ ಕಾಳನ್ನು ಹಾಕಿಕೊಂಡು ಅದಕ್ಕೆ 2 - 3 ಹನಿಯಷ್ಟು ಕಲರ್ ಸೇರಿಸಿದ ಸಕ್ಕರೆಪಾಕ ಹಾಕಿ ಪಾಕ ಆರುವವರೆಗೆ ಕೈಯಲ್ಲಿ ಮಿಕ್ಸ್ ಮಾಡಿ. ಇದೇ ರೀತಿ ಎರಡು ಬಾರಿ ಬಣ್ಣದ ಪಾಕ ಹಾಕಿ ಕೈಯಾಡಿಸಿದರೆ ಬಣ್ಣ ಚೆನ್ನಾಗಿ ಹಿಡಿಯುತ್ತದೆ. ಇದೇ ವಿಧಾನದಲ್ಲಿ ನಿಮಗಿಷ್ಟವಾದ ಬೇರೆಬೇರೆ ಬಣ್ಣಗಳನ್ನು ಸೇರಿಸಬಹುದು.
ಟಿಪ್ಸ್:
- ಸಂಕ್ರಾಂತಿ ಕಾಳು ತಯಾರಿಸಲು ಎಳ್ಳು ಹಾಕುವಂತೆಯೇ ಸೋಂಪು, ನೆಲಗಡಲೆ ಇವನ್ನು ಬಳಸಿಯೂ ತಯಾರಿಸಬಹುದು. ನಾನು ಒಂದು ಬ್ಯಾಚ್ ಎಳ್ಳಿನ ಕಾಳುಗಳು ಹಾಗೂ ಒಂದು ಬ್ಯಾಚ್ ಸೋಂಪಿನ ಕಾಳುಗಳನ್ನು ತಯಾರಿಸಿ ಎರಡನ್ನೂ ಮಿಕ್ಸ್ ಮಾಡಿದ್ದೇನೆ.
- ಸಂಕ್ರಾಂತಿ ಕಾಳುಗಳನ್ನು ತಯಾರಿಸಲು ಬಹಳ ಸಮಯ ಬೇಕು. ಸಕ್ಕರೆಪಾಕ ತಯಾರಿಸಿ ಇಟ್ಟುಕೊಂಡರೆ ದಿನವೂ ಅರ್ಧ ಘಂಟೆ, ಮುಕ್ಕಾಲು ಘಂಟೆ ಹೀಗೆ ಕೆಲಸಮಾಡಿ 4 - 5 ದಿನಗಳಲ್ಲಿ ಕಾಳನ್ನು ಮಾಡಿ ಮುಗಿಸಬಹುದು.
- ಸಂಕ್ರಾಂತಿ ಕಾಳಿಗೆ ಕಲರ್ ಹಾಕಲು ಕೃತಕ ಬಣ್ಣಗಳ ಬದಲು ಅರಿಶಿನ, ಬೀಟ್ರೂಟ್ ರಸ, ಕೇಸರಿ ದಳ ನೆನೆಸಿದ ನೀರು ಇವನ್ನು ಬಳಸಬಹುದು.
Thanks for giving the recipie.
ಪ್ರತ್ಯುತ್ತರಅಳಿಸಿ