ಗಡ್ ಬಡ್ ಐಸ್ ಕ್ರೀಮ್

ಗಡ್ ಬಡ್ ಐಸ್ ಕ್ರೀಮ್ - ಇದು ಕರ್ನಾಟಕದ ಸ್ಪೆಶಲ್ ಡೆಸರ್ಟ್ ತಿಂಡಿಗಳಲ್ಲಿ ಒಂದು. ಮಂಗಳೂರು ಮೂಲದ ಐಸ್ ಕ್ರೀಮ್ ಪಾರ್ಲರ್ ನ ಈ ಸೂಪರ್ ಹಿಟ್ ಡೆಸರ್ಟ್ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮೂರು ಶಿರಸಿಯಲ್ಲೂ ಐಸ್ ಕ್ರೀಮ್ ಪಾರ್ಲರ್ ಗಳಲ್ಲಿ ಸಿಗುವ ಗಡ್ ಬಡ್ ಐಸ್ ಕ್ರೀಮ್ ತುಂಬಾ ಚೆನ್ನಾಗಿರುತ್ತದೆ. ನಾವು ಊರಿಗೆ ಹೋದಾಗಲೆಲ್ಲ ಒಂದೆರಡು ಬಾರಿಯಾದರೂ ಈ ಐಸ್ ಕ್ರೀಮ್ ಸವಿಯಲೆಂದೇ ಐಸ್ ಕ್ರೀಮ್ ಪಾರ್ಲರ್ ಗೆ ಭೇಟಿ ಕೊಡುತ್ತೇವೆ.
ವಿವಿಧ ಹಣ್ಣುಗಳು, ಐಸ್ ಕ್ರೀಮ್, ಜೆಲ್ಲಿ, ಡ್ರೈ ಫ್ರೂಟ್ಸ್ ಗಳನ್ನು ಬಳಸಿ ತಯಾರಿಸುವ ಗಡ್ ಬಡ್ ಐಸ್ ಕ್ರೀಮ್ ನ್ನು ಸುಲಭದಲ್ಲಿ ಮನೆಯಲ್ಲೇ ತಯಾರಿಸಬಹುದು. ನಾನು ಸೆಖೆಗಾಲದಲ್ಲಿ ಮನೆಯಲ್ಲಿ ಮಾವಿನಹಣ್ಣು ಇದ್ದಾಗಲೆಲ್ಲ ಈ ಐಸ್ ಕ್ರೀಮ್ ತಯಾರಿಸುತ್ತಿರುತ್ತೇನೆ.


ತಯಾರಿಸಲು ಬೇಕಾಗುವ ಸಮಯ: 30 - 35ನಿಮಿಷಗಳು 
ಫ್ರಿಜ್ ನಲ್ಲಿಡಬೇಕಾದ ಸಮಯ: 1 ಘಂಟೆ 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಮಾವಿನಹಣ್ಣು - 1 
  • ಸೇಬುಹಣ್ಣು - ಅರ್ಧಭಾಗ 
  • ಬಾಳೆಹಣ್ಣು - 1
  • ಸಕ್ಕರೆ - 2 ಟೇಬಲ್ ಸ್ಪೂನ್ 
  • ಒಣದ್ರಾಕ್ಷಿ - 3 ಟೇಬಲ್ ಸ್ಪೂನ್
  • ಗೋಡಂಬಿ ಚೂರುಗಳು - 4 ರಿಂದ 5 ಟೇಬಲ್ ಸ್ಪೂನ್
  • ಚೆರ್ರಿ ಹಣ್ಣು (ಬೇಕಿದ್ದರೆ) - 2
  • ಟೂಟಿ ಫ್ರೂಟಿ (ಬೇಕಿದ್ದರೆ) - 2 ರಿಂದ 3 ಟೇಬಲ್ ಸ್ಪೂನ್ 
  • ಐಸ್ ಕ್ರೀಮ್ - ಬೇಕಾದಷ್ಟು

ತಯಾರಿಸುವ ವಿಧಾನ:
  • ಮಾವು, ಸೇಬು ಹಾಗೂ ಬಾಳೆಹಣ್ಣುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹೆಚ್ಚಿರುವ ಹಣ್ಣುಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಇದಕ್ಕೆ 2 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ತಣ್ಣಗಾಗಲು 1 ಘಂಟೆಕಾಲ ಫ್ರಿಜ್ ನಲ್ಲಿಡಿ.
  • ಗೋಡಂಬಿ ಚೂರುಗಳನ್ನು ಎಣ್ಣೆ ಹಾಕದೆ ಹೊಂಬಣ್ಣಕ್ಕೆ ಹುರಿಯಿರಿ. 
  • ಎರಡು ಗ್ಲಾಸ್ ಕಪ್ ಗಳನ್ನು ತೆಗೆದುಕೊಂಡು ಪ್ರತಿ ಗ್ಲಾಸ್ ನಲ್ಲೂ ಒಂದು ಲೇಯರ್ ಹೆಚ್ಚಿದ ಹಣ್ಣಿನ ಮಿಶ್ರಣವನ್ನು ಹಾಕಿ. ಇದರಮೇಲೆ ಸ್ವಲ್ಪ ದ್ರಾಕ್ಷಿ, ಗೋಡಂಬಿ ಉದುರಿಸಿ ಎರಡು ಟೇಬಲ್ ಸ್ಪೂನ್ ನಷ್ಟು ಐಸ್ ಕ್ರೀಮ್ ಹಾಕಿ. ಪುನಃ ಇದರಮೇಲೆ ಹಣ್ಣಿನ ಮಿಶ್ರಣ ಹಾಕಿ ದ್ರಾಕ್ಷಿ, ಗೋಡಂಬಿ ಉದುರಿಸಿ ಇನ್ನೊಂದು ಲೇಯರ್ ಐಸ್ ಕ್ರೀಮ್ ಹಾಕಿ. ಈ ರೀತಿ ಎರಡು ಅಥವಾ ಮೂರು ಬಾರಿ ಮಾಡಿ.
  • ಕೊನೆಯಲ್ಲಿ ಐಸ್ ಕ್ರೀಮ್ ನ ಮೇಲೆ ಗೋಡಂಬಿ, ದ್ರಾಕ್ಷಿ , ಟೂಟಿ ಫ್ರೂಟಿ ಉದುರಿಸಿ ಚೆರ್ರಿ ಹಣ್ಣಿನಿಂದ ಅಲಂಕರಿಸಿ.


ಟಿಪ್ಸ್:
  • ಗಡ್ ಬಡ್ ಐಸ್ ಕ್ರೀಮ್ ಗೆ ಕಿತ್ತಳೆ, ಪೈನಾಪಲ್ ಅಥವಾ ಸಪೋಟ ಹಣ್ಣುಗಳನ್ನು ಹಾಕಿದರೂ ಚೆನ್ನಾಗಿರುತ್ತದೆ. ಈ ರೆಸಿಪಿಯಲ್ಲಿ ಹೇಳಿರುವ ಹಣ್ಣುಗಳನ್ನೇ ಬಳಸಬೇಕೆಂದೇನೂ ಇಲ್ಲ; ನಿಮ್ಮಿಷ್ಟದ ಯಾವುದೇ ಹಣ್ಣುಗಳನ್ನು ಬಳಸಬಹುದು.
  • ಪ್ರತಿ ಲೇಯರ್ ಗೂ ಬೇರೆಬೇರೆ ಫ್ಲೇವರ್ ನ ಐಸ್ ಕ್ರೀಮ್ ಬಳಸಿದರೆ ಇನ್ನೂ ಚೆನ್ನಾಗಿರುತ್ತದೆ.

English version

ಕಾಮೆಂಟ್‌ಗಳು