ನೆಲ್ಲಿಕಾಯಿ ಉಪ್ಪಿನಕಾಯಿ

ದಿನಕ್ಕೊಂದು ನೆಲ್ಲಿಕಾಯಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆರೋಗ್ಯಕ್ಕೆ ಹಿತಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ, ಮುರಬ್ಬ, ಚ್ಯವನ್ ಪ್ರಾಶ್, ನೀರುನೆಲ್ಲಿಕಾಯಿ, ಜ್ಯೂಸ್, ನೆಲ್ಲಿಸಟ್ಟು, ಚಟ್ನಿ, ತಂಬ್ಳಿ ಇತ್ಯಾದಿಗಳ ತಯಾರಿಕೆಗೆ ಪ್ರಶಸ್ತವಾಗಿದೆ. ಆಯುರ್ವೇದದಲ್ಲಿಯೂ ನೆಲ್ಲಿಕಾಯಿಗೆ ಪ್ರಮುಖ ಸ್ಥಾನವಿದೆ. ಕೂದಲು ಮತ್ತು ಚರ್ಮದ ಉತ್ತಮ ಬೆಳವಣಿಗೆಗೆ ನೆಲ್ಲಿಕಾಯಿ ಸಹಕಾರಿ. ಅಜೀರ್ಣ ಇತ್ಯಾದಿ ಹೊಟ್ಟೆಯ ತೊಂದರೆಗಳಿಗೆ ನೆಲ್ಲಿಕಾಯಿಯ ಸೇವನೆ ಬಹಳ ಒಳ್ಳೆಯದು. 
ನಾವೆಲ್ಲ ಚಿಕ್ಕವರಿದ್ದಾಗ ಬೆಟ್ಟದ ನೆಲ್ಲಿಕಾಯನ್ನು ಕೊಯ್ದು ತಂದು ಉಪ್ಪು, ಮೆಣಸು ಜಜ್ಜಿಹಾಕಿದ ನೀರಿನಲ್ಲಿ ಅದನ್ನು ಮುಳುಗಿಸಿ ಇಡುತ್ತಿದ್ದೆವು. ಉಪ್ಪು, ಖಾರ ಕುಡಿದ ಆ ನೆಲ್ಲಿಕಾಯಿಗಳು ತಿನ್ನಲು ಅದೆಷ್ಟು ರುಚಿ! ಉಪ್ಪುನೀರಿನಲ್ಲಿ ಹಾಕಿದ ನೆಲ್ಲಿಕಾಯಿಗಳನ್ನು ತಿನ್ನದೆ ವರ್ಷಗಳೇ ಕಳೆದುಹೋಗಿವೆ. 
ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಿಸುವ ವಿಧಾನವನ್ನು ಬ್ಲಾಗ್ ನಲ್ಲಿ ಬರೆಯಲು ನನ್ನ ಫ್ರೆಂಡ್ ಒಬ್ಬರು ಕೆಲದಿನಗಳ ಹಿಂದೆ ಹೇಳಿದ್ದರು. ಉಪ್ಪಿನಕಾಯಿ ತಯಾರಿಸಿ ಫೋಟೋ ಕ್ಲಿಕ್ಕಿಸಿದ್ದರೂ ಊರಿನ ಪ್ರವಾಸದ ಗಡಿಬಿಡಿಯಲ್ಲಿ ಬ್ಲಾಗ್ ಕಡೆ ಗಮನ ಕೊಡಲು ಸಾಧ್ಯವಾಗಲೇ ಇಲ್ಲ. ಕೊನೆಗೂ ಬಿಡುವು ಮಾಡಿಕೊಂಡು ರೆಸಿಪಿಯನ್ನು ಹಾಕುತ್ತಿದ್ದೇನೆ..ಇನ್ನೂ ಕೆಲವು ರೆಸಿಪಿ ಫೋಟೋಗಳು ಬರವಣಿಗೆಗಾಗಿ ಕಾದು ಕುಳಿತಿವೆ. ಆದಷ್ಟು ಬೇಗ ಅವನ್ನೆಲ್ಲ ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು. ಯಾವುದಕ್ಕೂ ಕಾದುನೋಡಿ!


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 400ರಿಂದ 450 ಗ್ರಾಂ ನಷ್ಟು ಉಪ್ಪಿನಕಾಯಿ ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ನೆಲ್ಲಿಕಾಯಿ - 340 ಗ್ರಾಂ (14 - 15 ದೊಡ್ಡ ಸೈಜಿನ ನೆಲ್ಲಿಕಾಯಿಗಳು)
  • ನೀರು - 2 ಕಪ್ (1 ಕಪ್ = 180 ml)
  • ಉಪ್ಪು - 10 ಟೇಬಲ್ ಸ್ಪೂನ್ (ಅಂದಾಜು)
  • ಇಂಗು - 1/2 ಟೀ ಸ್ಪೂನ್ 
  • ಜೀರಿಗೆ - 1 1/2 ಟೀ ಸ್ಪೂನ್ 
  • ಅರಿಶಿನ - 1/2 ಟೀ ಸ್ಪೂನ್ 
  • ಸಾಸಿವೆ - 3 1/2 ಟೀ ಸ್ಪೂನ್ 
  • ಅಚ್ಚಮೆಣಸಿನ ಪುಡಿ - 6 ಟೇಬಲ್ ಸ್ಪೂನ್ (ಖಾರಕ್ಕೆ ತಕ್ಕಂತೆ)
  • ನಿಂಬೆಹಣ್ಣು - 1 ದೊಡ್ಡದು 

ಒಗ್ಗರಣೆಗೆ: ಎಣ್ಣೆ - 5 ಟೇಬಲ್ ಸ್ಪೂನ್, ಸಾಸಿವೆ - 1 ಟೀ ಸ್ಪೂನ್, ಇಂಗು - ದೊಡ್ಡ ಚಿಟಿಕೆ

ತಯಾರಿಸುವ ವಿಧಾನ:

  • ಎರಡು ಕಪ್ ನಷ್ಟು ನೀರಿಗೆ 4 ಟೇಬಲ್ ಸ್ಪೂನ್ ನಷ್ಟು ಉಪ್ಪು ಸೇರಿಸಿ ಬಿಸಿಗಿಡಿ. ಇದು 4 - 5 ನಿಮಿಷ ಚೆನ್ನಾಗಿ ಕುದಿದ ನಂತರ ನೆಲ್ಲಿಕಾಯಿಗಳನ್ನು ಕುದಿಯುತ್ತಿರುವ ನೀರಿಗೆ ಸೇರಿಸಿ. ಇದನ್ನು 4ರಿಂದ 5 ನಿಮಿಷ ಅಥವಾ ನೆಲ್ಲಿಕಾಯಿ ಬೇಯುವವರೆಗೆ ಕುದಿಸಿ ಉರಿ ಆಫ್ ಮಾಡಿ. ಪಾತ್ರೆಗೆ ಮುಚ್ಚಳ ಮುಚ್ಚಿ ತಣ್ಣಗಾಗಲು ಬಿಡಿ. 
  • ಜೀರಿಗೆ, ಸಾಸಿವೆ ಹಾಗೂ ಇಂಗು ಇಷ್ಟನ್ನೂ ಎಣ್ಣೆ ಹಾಕದೆ, ಪರಿಮಳ ಬರುವಂತೆ ಹುರಿದುಕೊಳ್ಳಿ. ಕೊನೆಯಲ್ಲಿ ಅರಿಶಿನ ಸೇರಿಸಿ ಉರಿಯನ್ನು ಆಫ್ ಮಾಡಿ. ತಣ್ಣಗಾದ ನಂತರ ಇದಕ್ಕೆ 2 ಟೀ ಸ್ಪೂನ್ ನಷ್ಟು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. 
  • ನೆಲ್ಲಿಕಾಯಿ ತಣ್ಣಗಾದ ನಂತರ ನೀರಿನಿಂದ ತೆಗೆದು ಚಾಕುವಿನಿಂದ ಕತ್ತರಿಸಿ ಬೀಜವನ್ನು ಬೇರ್ಪಡಿಸಿ. 
  • ಚೂರುಮಾಡಿದ ನೆಲ್ಲಿಕಾಯಿಗೆ ಮೇಲೆ ಮೊದಲೇ ತಯಾರಿಸಿಟ್ಟ ಮಸಾಲೆಪುಡಿ, ಅಚ್ಚಮೆಣಸಿನಪುಡಿ ಸೇರಿಸಿ. ಜೊತೆಗೆ 7 ಟೇಬಲ್ ಸ್ಪೂನ್ ನಷ್ಟು ಉಪ್ಪುನೀರು (ನೆಲ್ಲಿಕಾಯಿ ಬೇಯಿಸಿದ ನೀರು), ನಿಂಬೆರಸ  ಸೇರಿಸಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು, ಖಾರ ಬೇಕಿದ್ದರೆ ಸೇರಿಸಿ. 
  • ಎಣ್ಣೆ ಕಾಯಿಸಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ತಣ್ಣಗಾದ ನಂತರ ಉಪ್ಪಿನಕಾಯಿಗೆ ಸೇರಿಸಿ ಮಿಕ್ಸ್ ಮಾಡಿ. 
  • ಮೊಸರನ್ನದೊಡನೆ ನೆಲ್ಲಿಕಾಯಿ ಉಪ್ಪಿನಕಾಯಿ ಒಳ್ಳೆಯ ಕಾಂಬಿನೇಶನ್!


ಟಿಪ್ಸ್:

  • ಫ್ರೆಶ್ ನೆಲ್ಲಿಕಾಯಿ ಸಿಗದಿದ್ದರೆ ಫ್ರೋಜನ್ ನೆಲ್ಲಿಕಾಯಿ ಬಳಸಿದರೂ ಆಗುತ್ತದೆ. ನಾನು ಇಲ್ಲಿ ಫ್ರೋಜನ್ ನೆಲ್ಲಿಕಾಯಿಗಳನ್ನು ಬಳಸಿದ್ದೇನೆ. 

English version

ಕಾಮೆಂಟ್‌ಗಳು