ಕೆಸುವಿನ ದಂಟಿನ ದೋಸೆ । ಕೆಸುವಿನ ದಡಿ ದೋಸೆ | ಕೆಸುವಿನ ದೊಡ್ನ

ನಮ್ಮೂರ ಕಡೆ ಬೆಳಗ್ಗಿನ ತಿಂಡಿಗೆ ಥರಾವರಿ ದೋಸೆಗಳನ್ನು ತಯಾರಿಸುತ್ತಾರೆ. ಹಳ್ಳಿಗಳ ಕಡೆ ಸಿಗುವ ಅನೇಕ ಬಗೆಯ ಸೊಪ್ಪು-ತರಕಾರಿಗಳನ್ನು ದೋಸೆ ತಯಾರಿಸಲು ಬಳಸುತ್ತಾರೆ. ಮಳೆಗಾಲದಲ್ಲಿ ಎಲ್ಲೆಡೆ ಬೆಳೆಯುವ ಕೆಸುವಿನ ದಂಟು ಬಳಸಿ ರುಚಿಕರವಾದ ದೋಸೆ ತಯಾರಿಸಬಹುದು. ಊರಲ್ಲಿ ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ಗಂಗಾಷ್ಟಮಿ ಹಬ್ಬಕ್ಕೆ ಕೆಸುವಿನ ದಂಟಿನ ದೋಸೆ ಮಾಡುತ್ತಾರೆ.
ಇಲ್ಲಿ ಆಸ್ಟ್ರೇಲಿಯಾದಲ್ಲಿ ನಮಗೆ ಫಾರ್ಮರ್ಸ್ ಮಾರ್ಕೆಟ್ ಗೆ ಹೋದಾಗ ಕೆಲವೊಮ್ಮೆ ಕೆಸುವಿನ ಗಿಡಗಳು ಸಿಗುತ್ತವೆ. ಅವನ್ನು ತಂದಾಗ ನಮ್ಮ ಮನೆಯಲ್ಲಿ ಕೆಸುವಿನ ದಂಟಿನ ದೋಸೆ ತಯಾರಾಗುತ್ತದೆ. ಸಿಹಿಯಾದ ದೋಸೆಯ ಜೊತೆ ಬೆಣ್ಣೆ ಹಾಕಿಕೊಂಡು ತಿಂದರೆ ಬಹಳ ರುಚಿ!


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಅಕ್ಕಿ/ಹಿಟ್ಟು ನೆನೆಹಾಕುವ ಸಮಯ: 4 - 5 ಘಂಟೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 10 - 11 ದೋಸೆಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಅಕ್ಕಿ - 3 ಕಪ್ (1 ಕಪ್ = 110 ಗ್ರಾಮ್)
  • ಮೀಡಿಯಮ್ ಸೈಜಿಗೆ ಹೆಚ್ಚಿದ ಕೆಸುವಿನ ದಂಟು - 7 ಕಪ್ ಅಥವಾ ಸ್ವಲ್ಪ ಜಾಸ್ತಿ 
  • ಬೆಲ್ಲ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು 
  • ಉಪ್ಪು - ರುಚಿಗೆ ತಕ್ಕಷ್ಟು  

ತಯಾರಿಸುವ ವಿಧಾನ:

  • ಅಕ್ಕಿಯನ್ನು ತೊಳೆದು 2 - 3 ಘಂಟೆಕಾಲ ನೆನೆಸಿಡಿ. 
  • ಕೆಸುವಿನ ದಂಟನ್ನು ಮೀಡಿಯಮ್ ಸೈಜಿನ ಹೋಳುಗಳಾಗಿ ಹೆಚ್ಚಿಕೊಳ್ಳಿ. 
  • ಈ ಹೋಳುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು, ಬೆಲ್ಲ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಬೇಯಿಸಲು ನೀರು ಸೇರಿಸಬೇಡಿ, ಕೆಸುವಿನ ದಂಟಿನಲ್ಲಿರುವ ನೀರಿನಂಶವೇ ಹೋಳು ಬೇಯಲು ಸಾಕಾಗುತ್ತದೆ.  
  • ಬೇಯಿಸಿದ ಹೋಳಿನ ಮಿಶ್ರಣ ತಣ್ಣಗಾದ ನಂತರ ಇದಕ್ಕೆ ನೀರು ಬಸಿದ ಅಕ್ಕಿಯನ್ನು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬುವಾಗಲೂ ನೀರು ಸೇರಿಸಬೇಡಿ; ಕೆಸುವಿನ ಮಿಶ್ರಣ ನೀರಾಗಿರುವುದರಿಂದ ಅದರಲ್ಲೇ ಅಕ್ಕಿ ರುಬ್ಬಬಹುದು. 
  • ತಯಾರಾದ ಹಿಟ್ಟನ್ನು 1 - 2 ಘಂಟೆಕಾಲ ಹಾಗೇ ಸೆಟ್ ಆಗಲು ಬಿಡಿ. 
  • ನಂತರ ಬಿಸಿ ಕಾವಲಿಯಮೇಲೆ ಒಂದು ಸೌಟಿನಷ್ಟು ಹಿಟ್ಟನ್ನು ಹಾಕಿ ಸಣ್ಣ ವೃತ್ತಾಕಾರಕ್ಕೆ ಹರವಿ ಎರಡೂ ಕಡೆ ಬೇಯಿಸಿ. ದೋಸೆ ಕಾವಲಿಗೆ ಅಂಟದಂತೆ ಬೇಯಿಸುವಾಗ ನಾಲ್ಕೈದು ಹನಿ ಎಣ್ಣೆ ಹಾಕಿ.  
  • ಬಿಸಿಬಿಸಿ ದೋಸೆಯನ್ನು ಬೆಣ್ಣೆ ಹಾಕಿಕೊಂಡು ತಿನ್ನಿ!


English version

ಕಾಮೆಂಟ್‌ಗಳು