ಡ್ರೈ ಫ್ರೂಟ್ಸ್ ಲಡ್ಡು । ಒಣ ಹಣ್ಣುಗಳ ಉಂಡೆ

ಕರ್ನಾಟಕದಲ್ಲಿ ಸಾಮಾನ್ಯವಾಗಿ ಯಾವುದೇ ಸ್ವೀಟ್ ಸ್ಟಾಲ್ ಗೆ ಹೋದರೂ ನಿಮಗೆ ಡ್ರೈ ಫ್ರೂಟ್ಸ್ ಉಂಡೆ ಕಾಣಸಿಗುತ್ತದೆ. ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಗಸಗಸೆ, ಖರ್ಜೂರ ಇತ್ಯಾದಿ ಆರೋಗ್ಯಕ್ಕೆ ಉತ್ತಮವಾದ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಉಂಡೆ ತಿನ್ನಲು ಬಹಳ ರುಚಿ! ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲ ವಯಸ್ಸಿನವರಿಗೂ ಈ ಉಂಡೆ ಬಹಳ ಒಳ್ಳೆಯದು. 
ನಮ್ಮ ಮನೆಯಲ್ಲಿ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ತಿನ್ನುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ದಿನವೂ ನಿಯಮಿತ ಪ್ರಮಾಣದಲ್ಲಿ ತಿನ್ನುವುದು ಸ್ವಲ್ಪ ಕಷ್ಟದ ವಿಷಯ; ಒಂದು ದಿನ ಜಾಸ್ತಿ ಡ್ರೈ ಫ್ರೂಟ್ಸ್ ತಿನ್ನುವುದು, ನಂತರ ಕೆಲವು ದಿನ ಅವನ್ನು ತಿನ್ನಲು ಮರೆತುಬಿಡುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಅದರ ಬದಲು ಡ್ರೈ ಫ್ರೂಟ್ಸ್ ಉಂಡೆ ಮಾಡಿಟ್ಟರೆ ದಿನವೂ ಮರೆಯದೆ ಇಷ್ಟಪಟ್ಟು ತಿನ್ನುತ್ತೇವೆ! 
ನಾನು ತಯಾರಿಸುವ ಡ್ರೈ ಫ್ರೂಟ್ಸ್ ಉಂಡೆಯ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು 
ಈ ಅಳತೆಯಿಂದ 30 ಮೀಡಿಯಂ ಅಳತೆಯ ಉಂಡೆಗಳನ್ನು ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್  

ಬೇಕಾಗುವ ಸಾಮಗ್ರಿಗಳು:

  • ಖರ್ಜೂರ (ಬೀಜ ತೆಗೆದು ಮಾಧ್ಯಮ ಅಳತೆಯ ಚೂರುಗಳಾಗಿ ಹೆಚ್ಚಿದ್ದು) - 2 ಕಪ್ (1 ಕಪ್ = 
  • ಹೆಚ್ಚಿದ ಬಾದಾಮಿ - 1/2 ಕಪ್ 
  • ಗೋಡಂಬಿ ಚೂರುಗಳು - 1/2 ಕಪ್ 
  • ಒಣದ್ರಾಕ್ಷಿ - 1/2 ಕಪ್
  • ಒಣಕೊಬ್ಬರಿ ತುರಿ - 1/2 ಕಪ್
  • ಗಸಗಸೆ - 1/4 ಕಪ್ 
  • ತುಪ್ಪ - 4 ಟೇಬಲ್ ಸ್ಪೂನ್ 


ತಯಾರಿಸುವ ವಿಧಾನ:

  • ಒಂದು ದಪ್ಪ ತಳದ ಬಾಣಲೆಯನ್ನು ಬಿಸಿಮಾಡಿ ಬಾದಾಮಿ ಚೂರುಗಳು, ಗೋಡಂಬಿ ಚೂರುಗಳು ಮತ್ತು ಗಸಗಸೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. 
  • ಅದೇ ಬಾಣಲೆಯಲ್ಲಿ ತುಪ್ಪವನ್ನು ಬಿಸಿಗಿಡಿ. ಇದಕ್ಕೆ ಖರ್ಜೂರದ ಚೂರುಗಳು ಮತ್ತು ಒಣದ್ರಾಕ್ಷಿ ಸೇರಿಸಿ ಕೈಯಾಡಿಸುತ್ತಿರಿ. ಮಿಶ್ರಣ ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ. 
  • ಖರ್ಜೂರ - ಒಣದ್ರಾಕ್ಷಿ ಮಿಶ್ರಣಕ್ಕೆ ಉಳಿದೆಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
  • ಮಿಶ್ರಣದಿಂದ ಬೇಕಾದ ಅಳತೆಯ ಉಂಡೆಗಳನ್ನು ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬಳಸಿ. 

ಕಾಮೆಂಟ್‌ಗಳು