ಕ್ಯಾಂಡೀಡ್ ಆರೆಂಜ್ ಪೀಲ್

ಕ್ರಿಸ್ ಮಸ್ ಹಬ್ಬ ಇನ್ನೇನು ಎರಡು ದಿನಗಳಿವೆ. ಮನೆಗಳು, ಶಾಪಿಂಗ್ ಮಾಲ್ ಎಲ್ಲಿ ನೋಡಿದರೂ ಹಬ್ಬದ ಸಂಭ್ರಮ ತುಳುಕಾಡುತ್ತಿದೆ. ಅಂಗಡಿಗಳಲ್ಲೆಲ್ಲ ಡಿಸ್ಕೌಂಟ್ ಮಾರಾಟ, ಅದನ್ನಂತೂ ಮಿಸ್ ಮಾಡುವ ಹಾಗೇ ಇಲ್ಲ!😁 ನಮ್ಮ ಮನೆಯಲ್ಲಿ ಕ್ರಿಸ್ ಮಸ್ ಆಚರಿಸುವ ರೂಢಿ ಇಲ್ಲ. ಆದರೆ ಕ್ರಿಸ್ ಮಸ್ ಸಮಯದಲ್ಲಿ ತಯಾರಿಸುವ ಫ್ರೂಟ್ ಕೇಕ್ ಅಥವಾ ಪ್ಲಮ್ ಕೇಕ್ ನಮಗೆಲ್ಲ ಇಷ್ಟ! ಹೀಗಾಗಿ ಕೇಕ್ ತಯಾರಿಸಲು ಬೇಕಾದ ಎಲ್ಲ ಸಿದ್ಧತೆಗಳೂ ಮನೆಯಲ್ಲಿ ನಡೆಯುತ್ತಿವೆ. 
ಕ್ಯಾಂಡೀಡ್ ಪೀಲ್ - ಇದು ಫ್ರೂಟ್ ಕೇಕ್ ತಯಾರಿಸಲು ಬೇಕಾಗುವ ಒಂದು ಪ್ರಮುಖ ಪದಾರ್ಥ. ಕಿತ್ತಳೆ, ನಿಂಬೆ ಇತ್ಯಾದಿ ಹುಳಿ ಹಣ್ಣುಗಳ ಸಿಪ್ಪೆಯನ್ನು ಬೇಯಿಸಿ ಅದರಲ್ಲಿನ ಕಹಿ ಅಂಶವನ್ನು ತೆಗೆದು ನಂತರ ಸಕ್ಕರೆ ಪಾಕದಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಕ್ಯಾಂಡಿಡ್ ಪೀಲ್ ಹೆಚ್ಚಿನ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಹಾಗೆಂದು ಇದನ್ನು ಮನೆಯಲ್ಲಿ ತಯಾರಿಸುವುದು ಕಷ್ಟವೇನಿಲ್ಲ. ನಾನು ಫ್ರೂಟ್ ಕೇಕ್ ತಯಾರಿಸುವಾಗಲೆಲ್ಲ ಕ್ಯಾಂಡೀಡ್ ಪೀಲ್ ನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತೇನೆ. 
ಕ್ಯಾಂಡೀಡ್ ಆರೆಂಜ್ ಪೀಲ್ ರೆಸಿಪಿ ಈ ಕೆಳಗಿನಂತಿದೆ. ನಾನು ಇದನ್ನು ಕಲಿತದ್ದು ಸುಮಾ ಅವರ ವೆಬ್ ಸೈಟ್ ನಿಂದ. 


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ 
ಸೆಟ್ ಆಗಲು ಬೇಕಾಗುವ ಸಮಯ: 1 ಘಂಟೆ 
ಈ ಅಳತೆಯಿಂದ 30 - 32 ಒಂದೇ ಅಳತೆಯ ಕ್ಯಾಂಡೀಡ್ ಆರೆಂಜ್ ಪೀಲ್ಸ್ ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಕಿತ್ತಳೆ ಹಣ್ಣು - 2 (ಮೀಡಿಯಮ್ ಸೈಜಿನವು)
  • ಸಕ್ಕರೆ - 1/2 ಕಪ್ 
  • ನೀರು - 1/2 ಕಪ್ + ಕಿತ್ತಳೆ ಸಿಪ್ಪೆ ಬೇಯಲು ಬೇಕಾಗುವಷ್ಟು 

ತಯಾರಿಸುವ ವಿಧಾನ:
  • ಕಿತ್ತಳೆ ಹಣ್ಣನ್ನು ಉದ್ದುದ್ದಕ್ಕೆ ನಾಲ್ಕು ಸಮಭಾಗಗಳಾಗಿ ಕತ್ತರಿಸಿ, ಸಿಪ್ಪೆಯನ್ನು ಹುಷಾರಾಗಿ ಬೇರ್ಪಡಿಸಿಕೊಳ್ಳಿ. 
  • ಸಿಪ್ಪೆಯನ್ನು ಒಂದೇ ಅಳತೆಯ ಚೂರುಗಳಾಗಿ ಹೆಚ್ಚಿಕೊಳ್ಳಿ. 
  • ಎರಡು ಕಪ್ ಅಥವಾ ಸಿಪ್ಪೆ ಮುಳುಗುವಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಬಿಸಿಗಿಡಿ. ಇದಕ್ಕೆ ಸೀಳಿದ ಕಿತ್ತಳೆ ಸಿಪ್ಪೆ ಸೇರಿಸಿ 4 - 5 ನಿಮಿಷ ಕುದಿಸಿ. ನಂತರ ನೀರನ್ನು ಬಸಿದು ತೆಗೆಯಿರಿ. 
  • ಕಿತ್ತಳೆ ಸಿಪ್ಪೆಯ ಕಹಿ ಅಂಶ ಹೋಗಲು ಮೇಲೆ ಹೇಳಿದ ಸ್ಟೆಪ್ ನ್ನು 2 - 3 ಬಾರಿ ಪುನರಾವರ್ತನೆ ಮಾಡಿ. 
  • ಅರ್ಧ ಕಪ್ ನಷ್ಟು ನೀರಿಗೆ ಅರ್ಧ ಕಪ್ ನಷ್ಟು ಸಕ್ಕರೆ ಸೇರಿಸಿ ಬಿಸಿಗಿಡಿ. ಸಕ್ಕರೆ ಪೂರ್ತಿ ಕರಗಿದ ನಂತರ ಇದಕ್ಕೆ ಕಿತ್ತಳೆ ಸಿಪ್ಪೆಯ ಚೂರುಗಳನ್ನು ಸೇರಿಸಿ ಆದಷ್ಟು ಸಣ್ಣ ಉರಿಯಲ್ಲಿ ಬೇಯಿಸಿ. 
  • ಮುಕ್ಕಾಲು ಘಂಟೆ ಅಥವಾ ಒಂದು ಘಂಟೆಕಾಲ ಸಣ್ಣ ಉರಿಯಲ್ಲಿ ಬೇಯಿಸಿದಾಗ ಕಿತ್ತಳೆ ಸಿಪ್ಪೆಯ ಚೂರುಗಳು ಸಕ್ಕರೆ ಪಾಕವನ್ನೆಲ್ಲ ಹೀರಿಕೊಂಡು ಒಣಗಲು ಆರಂಭಿಸುತ್ತವೆ. ಸಕ್ಕರೆ ಪಾಕವೆಲ್ಲ ಒಣಗಿದ ನಂತರ ಉರಿ ಆಫ್ ಮಾಡಿ, ಕಿತ್ತಳೆ ಸಿಪ್ಪೆಯ ಚೂರುಗಳನ್ನು ಕೂಲಿಂಗ್ ಸ್ಟ್ಯಾಂಡ್ ಮೇಲೆ ಒಂದು ಘಂಟೆಕಾಲ ಹರವಿ ತಣ್ಣಗಾಗಲು ಬಿಡಿ. 
  • ತಯಾರಾದ ಕ್ಯಾಂಡೀಡ್ ಆರೆಂಜ್ ಪೀಲ್ ನ್ನು ಗಾಳಿಯಾಡದ ಕಂಟೇನರ್ ನಲ್ಲಿ ಹಾಕಿಟ್ಟು, ಬೇಕಾದಾಗ ಬಳಸಿ. 



ಟಿಪ್ಸ್:
  • ಇದೇ ವಿಧಾನದಲ್ಲೇ ಕಿತ್ತಳೆ ಸಿಪ್ಪೆಯ ಬದಲು ನಿಂಬೆಹಣ್ಣಿನ ಸಿಪ್ಪೆ ಬಳಸಿ ಕ್ಯಾಂಡೀಡ್ ಲೆಮನ್ ಪೀಲ್ ತಯಾರಿಸಬಹುದು. 

ಕಾಮೆಂಟ್‌ಗಳು