ಹಾಲುಗುಂಬಳಕಾಯಿ ಪಾಯಸ । ಸೋರೆಕಾಯಿ ಪಾಯಸ

ಹಾಲುಗುಂಬಳ ಅಥವಾ ಸೋರೆಕಾಯಿ ನಮಗೆ ಇಲ್ಲಿ ವರ್ಷದ ಎಲ್ಲ ಕಾಲದಲ್ಲೂ ಸಾಮಾನ್ಯವಾಗಿ ಸಿಗುವ ತರಕಾರಿಗಳಲ್ಲಿ ಒಂದು.  ಚೀನಾ ದೇಶದವರೂ ಈ ತರಕಾರಿಯನ್ನು ಬಳಸುವುದರಿಂದ ಕೇವಲ ಭಾರತೀಯ ಅಂಗಡಿಗಳಲ್ಲಷ್ಟೇ ಅಲ್ಲದೆ ಏಶಿಯನ್ ಗ್ರಾಸರಿ ಅಂಗಡಿಗಳಲ್ಲೂ ಸೋರೆಕಾಯಿ ಸಿಗುತ್ತದೆ. ನಮ್ಮ ಮನೆಯಲ್ಲಿ ಹೆಚ್ಚಿನ ದಿನಗಳಲ್ಲಿ ಅಪ್ಪಟ ಭಾರತೀಯ ಶೈಲಿಯ ಅಡುಗೆಯಾದ್ದರಿಂದ ಸೋರೆಕಾಯಿ ಆಗಾಗ ಅಡುಗೆಯಲ್ಲಿ ಬಳಕೆಯಾಗುತ್ತಿರುತ್ತದೆ. ಅನೇಕ ವಿಟಾಮಿನ್ ಹಾಗೂ ಮಿನರಲ್ ಗಳ ಆಗರವಾಗಿರುವ ಈ ತರಕಾರಿಯ ನಿಯಮಿತ ಸೇವನೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. 
ಹಾಲುಗುಂಬಳಕಾಯಿ ಪಲ್ಯ ತಯಾರಿಸುವ ವಿಧಾನವನ್ನು ಈ ಮೊದಲೇ ಬರೆದಿದ್ದೆ. ಹಾಲುಗುಂಬಳಕಾಯಿ ಬಳಸಿ ಪಾಯಸ ತಯಾರಿಸುವ ವಿಧಾನವನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರುಚಿಕರವಾದ ಈ ಪಾಯಸವನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:

  • ಸಕ್ಕರೆ - 3/4 ಕಪ್ (1 ಕಪ್ =
  • ಸಿಪ್ಪೆ, ಬೀಜ ತೆಗೆದು ಸಣ್ಣಗೆ / ಮೀಡಿಯಂ ಸೈಜಿಗೆ ಹೆಚ್ಚಿದ ಹಾಲುಗುಂಬಳ ಹೋಳುಗಳು - 2 ಕಪ್ 
  • ಮೀಡಿಯಮ್ ರವೆ - 1/3 ಕಪ್ 
  • ಬೆಲ್ಲ - 2 ಟೇಬಲ್ ಚಮಚ (ಟಿಪ್ಸ್ ನೋಡಿ)
  • ಉಪ್ಪು - ದೊಡ್ಡ ಚಿಟಿಕೆ 
  • ತುಪ್ಪ - 1 ಟೀ ಚಮಚ 
  • ಹಾಲು - 2 1/2 ಕಪ್ 
  • ನೀರು - 2 1/2 ಕಪ್ 
  • ಏಲಕ್ಕಿಪುಡಿ - 1 ಟೀ ಚಮಚ
  • ಕೇಸರಿ ದಳ - 8 ರಿಂದ 10 (ಬೇಕಿದ್ದರೆ)

ತಯಾರಿಸುವ ವಿಧಾನ:

  • ಒಂದು ಪಾತ್ರೆಯಲ್ಲಿ ನೀರು ಬಿಸಿಗಿಡಿ. ಬೆಚ್ಚಗಾದ ನಂತರ ಇದಕ್ಕೆ ತುಪ್ಪ, ಹೆಚ್ಚಿದ ಹಾಲುಗುಂಬಳ ಸೇರಿಸಿ ಹಾಲುಗುಂಬಳ ಹೋಳುಗಳು ಮೆತ್ತಗಾಗುವವರೆಗೆ ಬೇಯಿಸಿ. 
  • ರವೆಯನ್ನು ನೀರಿನಲ್ಲಿ ತೊಳೆದು, ನೀರು ಬಸಿದಿಡಿ. 
  • ಹೋಳು ಮೆತ್ತಗಾದ ನಂತರ ಅದಕ್ಕೆ ತೊಳೆದ ರವೆ ಸೇರಿಸಿ ಗಂಟಾಗದಂತೆ ಎರಡು ನಿಮಿಷ ಕೈಯಾಡಿಸಿ. 
  • ನಂತರ ಇದಕ್ಕೆ ಉಪ್ಪು, ಸಕ್ಕರೆ, ಬೆಲ್ಲ, ಹಾಲು, ಕೇಸರಿದಳ ಸೇರಿಸಿ 8 - 10 ನಿಮಿಷ ಕುದಿಸಿ. 
  • ಕೊನೆಯಲ್ಲಿ ಏಲಕ್ಕಿಪುಡಿ ಸೇರಿಸಿ ಉರಿ ಆಫ್ ಮಾಡಿ. 
  • ಈ ಪಾಯಸವನ್ನು ಬಿಸಿಯಾಗಿಯೂ ತಿನ್ನಬಹುದು ಅಥವಾ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಕೊಂಡೂ ಸವಿಯಬಹುದು. 


ಟಿಪ್ಸ್:

  • ಬೆಲ್ಲ ಇಷ್ಟವಾದರೆ ಸಕ್ಕರೆಯ ಪ್ರಮಾಣ ಕಡಿಮೆ ಮಾಡಿ, ಜಾಸ್ತಿ ಬೆಲ್ಲ ಬಳಸಿ. ಬೆಲ್ಲ ಇಷ್ಟವಾಗದಿದ್ದರೆ ಸಕ್ಕರೆಯೊಂದನ್ನೇ ಬಳಸಿ. ಜಾಸ್ತಿ ಬೆಲ್ಲ ಬಳಸುವುದಾದರೆ ಕೇಸರಿ ದಳಗಳನ್ನು ಸೇರಿಸದಿದ್ದರೂ ಆಗುತ್ತದೆ. 

ಕಾಮೆಂಟ್‌ಗಳು