ಕಡ್ಲೇಬೀಜದ ಕಟ್ಲಿ । 10 ನಿಮಿಷದಲ್ಲಿ ಶೇಂಗಾ ಬರ್ಫಿ । ಪ್ರೆಷರ್ ಕುಕರ್ ನಲ್ಲಿ ತಯಾರಿಸಬಹುದಾದ ನೆಲಗಡಲೆ ಬರ್ಫಿ | ಒಪೋಸ್ ಕಡ್ಲೆಕಾಯಿ ಬರ್ಫಿ

ಕಾಜು ಕಟ್ಲಿ ಅಥವಾ ಕಾಜು ಬರ್ಫಿಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತೀರಿ. ಅದರಂತೆಯೇ ಬಾದಾಮ್ ಕಟ್ಲಿಯೂ ಸಿಹಿ ಪ್ರಿಯರಿಗೆಲ್ಲ ಚಿರಪರಿಚಿತ. ಮೊದಲೆಲ್ಲ ಸ್ವೀಟ್ ಸ್ಟಾಲ್ ನಿಂದ ತಂದು ತಿನ್ನುತ್ತಿದ್ದ ಈ ಸಿಹಿತಿಂಡಿಗಳನ್ನು ಈಗ ತುಂಬಾ ಜನ ಮನೆಯಲ್ಲೇ ಬಹಳ ಚೆನ್ನಾಗಿ ತಯಾರಿಸುತ್ತಾರೆ. ಒಪೋಸ್ (One Pot One Shot) ಅಡುಗೆ ವಿಧಾನ ಬಂದಮೇಲಂತೂ ಅಡುಗೆ ಬರದಿದ್ದವರೂ ಥರಾವರಿ ಅಡುಗೆ, ಸ್ವೀಟ್ಸ್ ಮಾಡುವುದು ಸಾಧ್ಯವಾಗಿದೆ.
ಈಗ ಕೆಲವು ತಿಂಗಳುಗಳ ಹಿಂದೆ ನನ್ನ ಫ್ರೆಂಡ್ ಒಬ್ಬರು ಒಪೋಸ್ ಅಡುಗೆ ಪದ್ಧತಿಯನ್ನು ನನಗೆ ಪರಿಚಯಿಸಿದರು. ಒಪೋಸ್ ರೂವಾರಿಯಾದ ರಾಮಕೃಷ್ಣನ್ ರವರು ಯೂಟ್ಯೂಬ್ ನಲ್ಲಿ ಒಪೋಸ್ ವಿಧಾನದಲ್ಲಿ ಅಡುಗೆ ಮಾಡುವುದರ ಬಗ್ಗೆ ಅನೇಕ ವಿಡಿಯೋ ಗಳನ್ನು ಹಾಕಿದ್ದಾರೆ. ಕಷ್ಟದ ಅಡುಗೆಗಳನ್ನೂ ಈ ವಿಧಾನದಲ್ಲಿ ಎಷ್ಟು ಸುಲಭದಲ್ಲಿ ತಯಾರಿಸಬಹುದೆಂದು ನೋಡಿದರೆ ಆಶ್ಚರ್ಯವಾಗುತ್ತದೆ!
ಒಪೋಸ್ ವಿಧಾನ ಕಲಿತಮೇಲೆ ನನಗೆ ಬೇಗ ಅಡುಗೆ ಕೆಲಸ ಮುಗಿಸಲು ಸಾಧ್ಯವಾಗುತ್ತಿದೆ. ದಿನನಿತ್ಯ ತಯಾರಿಸುವ ಸೈಡ್ ಡಿಶ್ ಗಳಿಗೆ ಹೆಚ್ಚಾಗಿ ಒಪೋಸ್ ವಿಧಾನವನ್ನೇ ಅನುಸರಿಸುತ್ತೇನೆ. ಒಪೋಸ್ ಅಡುಗೆಗೆ ಎರಡು ಲೀಟರ್ ನ ಪ್ರೆಷರ್ ಕುಕರ್ ನನ್ನ ಬಳಿ ಇಲ್ಲ. ಭಯಪಡುತ್ತಲೇ ನನ್ನಲ್ಲಿರುವ 3 ಲೀಟರ್ ಕುಕರ್ ನಲ್ಲಿ ಶುರುವಾದವು ನನ್ನ ಪ್ರಯೋಗಗಳು. ಮೊದಲ ಪ್ರಯೋಗ ಸಕ್ಸೆಸ್ ಆದದ್ದರಿಂದ ಹಾಗೇ ಮುಂದುವರಿಯತೊಡಗಿದೆ ಈ ಅಡುಗೆ ವಿಧಾನ! ಇತ್ತೀಚೆಗೆ ಒಪೋಸ್ ಕಾಜು ಕಟ್ಲಿಯ ರೆಸಿಪಿ ನೋಡಿದಾಗ ಯೋಚನೆ ಬಂತು ಇದೇ ವಿಧದಲ್ಲಿ ಶೇಂಗಾ ಕಟ್ಲಿ ತಯಾರಿಸಿದರೆ ಚೆನ್ನಾಗಿ ಬರಬಹುದೆಂದು. ನನ್ನ ಅಮ್ಮ ಶೇಂಗಾ ಬರ್ಫಿಯನ್ನು ಬಹಳ ಚೆನ್ನಾಗಿ ತಯಾರಿಸುತ್ತಾರೆ. ಆದರೆ ಬರ್ಫಿ ಎಂದರೆ ಕೇಳಬೇಕೆ? ಮಿಶ್ರಣವನ್ನು ತಾಸುಗಟ್ಟಲೆ ಒಲೆಯಮೇಲೆ ಕೈಯಾಡಿಸುತ್ತ ಕಷ್ಟಪಡಬೇಕು. ನಾನು ಅಮ್ಮನ ರೆಸಿಪಿಯ ಅಳತೆಗಳನ್ನು ಒಪೋಸ್ ವಿಧಾನಕ್ಕೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಂಡು ಶೇಂಗಾ ಕಟ್ಲಿ ತಯಾರಿಸಿದ್ದಾಯಿತು. ಈ ಸ್ವೀಟ್ ಇಷ್ಟು ಚೆನ್ನಾಗಿ ಬರಬಹುದೆಂದು ನಾನೂ ನಿರೀಕ್ಷಿಸಿರಲಿಲ್ಲ! ನನ್ನ ಮಗಳಂತೂ ಈಗ ಶೇಂಗಾ ಕಟ್ಲಿಯ ದೊಡ್ಡ ಫ್ಯಾನ್ ಆಗಿಬಿಟ್ಟಿದ್ದಾಳೆ.
ಶೇಂಗಾ ಕಟ್ಲಿಯ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 7 - 8 ನಿಮಿಷಗಳು
ಸೆಟ್ ಆಗಲು ಬೇಕಾಗುವ ಸಮಯ: 20 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಸುಲಭ
ಈ ಅಳತೆಯಿಂದ 35 ಕಟ್ಲಿ / ಬರ್ಫಿ ಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಸಕ್ಕರೆ - 1 ಕಪ್ ಗಿಂತ 1 ಟೇಬಲ್ ಸ್ಪೂನ್ ಕಡಿಮೆ (1 ಕಪ್ = 200 ಗ್ರಾಂ)
  • ಹಾಲು - 1/2 ಕಪ್ 
  • ಶೇಂಗಾ ಪುಡಿ (ಹುರಿದು ಸಿಪ್ಪೆ ತೆಗೆದು ಪುಡಿಮಾಡಿದ್ದು) - 1 ಕಪ್ 
  • ತುಪ್ಪ - 1 ಟೀ ಚಮಚ 
  • ಪ್ರೆಶರ್ ಕುಕ್ಕರ್ 2 ಅಥವಾ 3 ಲೀಟರ್ ನದು (ನಾನು 3 ಲೀಟರ್ ನ ಕುಕ್ಕರ್ ಬಳಸಿದ್ದೇನೆ)

ತಯಾರಿಸುವ ವಿಧಾನ:
  • ಪ್ರೆಷರ್ ಕುಕ್ಕರ್ ನಲ್ಲಿ ಸಕ್ಕರೆ, ಹಾಲು ಸೇರಿಸಿ ಒಮ್ಮೆ ಮಿಕ್ಸ್ ಮಾಡಿ. ಸಕ್ಕರೆ ಹರಳುಗಳು ದೊಡ್ಡದಾಗಿದ್ದರೆ ಕರಗುವತನಕ ಕದಡಿ. 
  • ಕುಕ್ಕರ್ ನ ಮುಚ್ಚಳ ಮುಚ್ಚಿ ಸ್ವಲ್ಪ ದೊಡ್ಡ ಉರಿಯಲ್ಲಿ 6 ವಿಸಿಲ್ ಕೂಗಿಸಿ. ಪ್ರತಿ ವಿಸಿಲ್ ಆದಾಗಲೂ ಹೊರಚಿಮ್ಮುವ ನೀರನ್ನು ಸ್ವಚ್ಛಮಾಡಲು ಮರೆಯದಿರಿ. ಇಲ್ಲದಿದ್ದರೆ ವಿಸಿಲ್ ಸರಿಯಾಗಿ ಆಗುವುದಿಲ್ಲ. 
  • ಉರಿ ಆಫ್ ಮಾಡಿದ ತಕ್ಷಣ ಕುಕರ್ ನ ವೇಯ್ಟ್ ನ್ನು ಸ್ಪೂನ್ ನಿಂದ ಸ್ವಲ್ಪವೇ ಎತ್ತಿ ಪ್ರೆಷರ್ ಎಲ್ಲ ಹೋಗುವಂತೆ ಮಾಡಿ. 
  • ಪ್ರೆಷರ್ ಇಳಿದನಂತರ ಕುಕರ್ ಮುಚ್ಚಳ ತೆಗೆದು ಇದಕ್ಕೆ ಶೇಂಗಾಪುಡಿ ಸೇರಿಸಿ ಗಂಟಿಲ್ಲದಂತೆ ಬೇಗ ಮಿಕ್ಸ್ ಮಾಡಿ, ಮತ್ತೆ ಮುಚ್ಚಳ ಮುಚ್ಚಿ 20 ನಿಮಿಷ ಸೆಟ್ ಆಗಲು ಬಿಡಿ. 
  • 20 ನಿಮಿಷದ ನಂತರ ಕುಕ್ಕರ್ ಮುಚ್ಚಳ ತೆಗೆದು, ಕೈಗೆ ತುಪ್ಪ ಸವರಿಕೊಂಡು ಮಿಶ್ರಣವನ್ನು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. 
  • ತಯಾರಾದ ಮಿಶ್ರಣವನ್ನು ಜಿಡ್ಡು ಸವರಿದ ಪ್ಲೇಟ್ ನ ಮೇಲೆ ತೆಳ್ಳಗೆ ಹರಡಿ. ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ. 


ಟಿಪ್ಸ್:
  • ಈ ವಿಧಾನ ಅನುಸರಿಸಲು ಗ್ಯಾಸ್ ಸ್ಟವ್ ಅಥವಾ ಇಂಡಕ್ಷನ್ ಸ್ಟವ್ ಅಗತ್ಯ.    
  • ಶೇಂಗಾ ಪುಡಿ ಮಾಡುವಾಗ ಒಂದೇ ಸಮನೆ ತಿರುವಿಬಿಟ್ಟರೆ ಎಣ್ಣೆ ಬಿಟ್ಟುಕೊಳ್ಳುತ್ತದೆ. ಅದರ ಬದಲು ವಿಪ್ ಮಾಡುತ್ತ ಪೌಡರ್ ಮಾಡಿದರೆ ಚೆನ್ನಾಗಿ ಬರುತ್ತದೆ. 

ಕಾಮೆಂಟ್‌ಗಳು