ಅಕ್ಕಿಹಿಟ್ಟಿನ ಚಕ್ಲಿ

ಎಲ್ಲರಿಗೂ ನಮಸ್ಕಾರ!
ಇಷ್ಟು ದಿನವಾದರೂ ರೆಸಿಪಿ ಹಾಕದ ಕಾರಣ ನನ್ನ ಬರವಣಿಗೆ ನಿಂತುಹೋಯಿತೇನೋ ಎಂದು ಪರಿಚಯದವರೆಲ್ಲ ಕೇಳತೊಡಗಿದ್ದರು. ನಿಜ ಹೇಳಬೇಕೆಂದರೆ ನನಗೂ ಹಾಗೇ ಅನ್ನಿಸಿಬಿಟ್ಟಿತ್ತು! ಅಂತೂ ಇಂತೂ ತುಂಬಾ ದಿನಗಳ ನಂತರ ಬ್ಲಾಗ್ ಕಡೆಗೆ ನೋಡಲು ಸಮಯ ಸಿಕ್ಕಿದೆ. ನಮ್ಮ ಎರಡನೇ ಮಗುವಿನ ಆಗಮನ, ಊರು ಪ್ರಯಾಣ, ಮಕ್ಕಳ ಆರೈಕೆ ಇವುಗಳ ನಡುವೆ ಬರವಣಿಗೆಗೆ ಸಮಯವೇ ಸಿಗದಂತಾಗಿಬಿಟ್ಟಿದೆ. ಇನ್ನಾದರೂ ನಿಯಮಿತವಾಗಿ ಬ್ಲಾಗ್ ಕಡೆ ಸ್ವಲ್ಪ ಸಮಯ ಹೊಂದಿಸಿಕೊಳ್ಳೋಣವೆಂದುಕೊಂಡಿದ್ದೇನೆ, ಏನಾಗುವುದೋ ನೋಡೋಣ!
ಈಗ ನಾನು ಬರೆಯ ಹೊರಟಿರುವ ಚಕ್ಲಿ ರೆಸಿಪಿ ನನ್ನ ಅಮ್ಮನಿಂದ ಕಲಿತದ್ದು. ನನ್ನ ಬಾಳಂತನಕ್ಕೆ ಅಮ್ಮ ನಮ್ಮಲ್ಲಿಗೆ ಬಂದಾಗ ಮೊಮ್ಮಗಳಿಗೆ ಇಷ್ಟವೆಂದು ಚಕ್ಲಿ ಮಾಡಿದ್ದರು. ಗರಿಯಾಗಿ, ಬಾಯಲ್ಲಿಟ್ಟರೆ ಕರಗುವಂತಿದ್ದ ಚಕ್ಲಿ ಮಾಡಿದಷ್ಟೇ ಬೇಗ ಖಾಲಿಯೂ ಆಯಿತು. ರುಚಿಕರವಾದ ಈ ಚಕ್ಲಿಯನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 2 ಘಂಟೆ
ಅಕ್ಕಿ ನೆನೆಸುವ ಸಮಯ: 2 - 3 ಘಂಟೆ 
ಡಿಫಿಕಲ್ಟಿ ಲೆವೆಲ್: ಕಷ್ಟಕರ 
ಈ ಅಳತೆಯಿಂದ ಸುಮಾರು 60 ಚಕ್ಲಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:

  • ಅಕ್ಕಿ - 1 ದೊಡ್ಡ ಕಪ್ ನಷ್ಟು (1 ಕಪ್ = 175ಗ್ರಾಂ)
  • ಹುರಿದ ಅಕ್ಕಿಹಿಟ್ಟು - 3 1/2 ಕಪ್ (ಅಂದಾಜು)
  • ಎಳ್ಳು - 4 ಟೀ ಸ್ಪೂನ್ 
  • ಜೀರಿಗೆ - 2 ಟೀ ಸ್ಪೂನ್ 
  • ಓಮ - 2 ಟೇಬಲ್ ಸ್ಪೂನ್ 
  • ಬೆಣ್ಣೆ - ನಿಂಬೆಗಾತ್ರ 
  • ಉಪ್ಪು - ರುಚಿಗೆ ತಕ್ಕಷ್ಟು 
  • ನೀರು - ಹಿಟ್ಟು ರುಬ್ಬಲು 
  • ಕರಿಯಲು ಎಣ್ಣೆ 


ತಯಾರಿಸುವ ವಿಧಾನ:

  • ಅಕ್ಕಿಯನ್ನು ಎರಡುಸಲ ತೊಳೆದು, 2 - 3 ಘಂಟೆಕಾಲ ನೀರಿನಲ್ಲಿ ನೆನೆಸಿಡಿ. 
  • ನೆನೆಸಿದ ಅಕ್ಕಿಯ ನೀರನ್ನು ಬಸಿದುಕೊಳ್ಳಿ. ಅಕ್ಕಿ, ಎಳ್ಳು, ಜೀರಿಗೆ, ಓಮ ಇಷ್ಟನ್ನೂ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ. ರುಬ್ಬಲು ಬೇಕಾಗುವಷ್ಟು ನೀರು ಸೇರಿಸಿಕೊಳ್ಳಿ. 
  • ರುಬ್ಬಿಕೊಂಡ ಹಿಟ್ಟಿಗೆ 2 1/2 ಟೀ ಸ್ಪೂನ್ ನಷ್ಟು ಉಪ್ಪು, ಎರಡು ಕಪ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. 
  • ರುಬ್ಬಿಕೊಂಡ ಹಿಟ್ಟನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಕಾಯಲಿಡಿ. 
  • ಇದಕ್ಕೆ ನಿಂಬೆಗಾತ್ರದಷ್ಟು ಬೆಣ್ಣೆಯನ್ನು ಸೇರಿಸಿ ಹಿಟ್ಟು ದಪ್ಪಗಾಗುವವರೆಗೆ ಬಿಡದೇ ಕೈಯಾಡಿಸುತ್ತಿರಿ. 
  • ಹಿಟ್ಟು ದಪ್ಪಗಾದಾಗ ಇದಕ್ಕೆ 3 1/2 ಕಪ್ ನಷ್ಟು ಹುರಿದ ಅಕ್ಕಿಹಿಟ್ಟನ್ನು ಸೇರಿಸಿ ಬಿಸಿ ಇರುವಾಗಲೇ ಚೆನ್ನಾಗಿ ಮಿಕ್ಸ್ ಮಾಡಿ. 
  • ಮಿಶ್ರಣವನ್ನು ಚೆನ್ನಾಗಿ ನಾದಿ ಮೆತ್ತಗಿನ ಆದರೆ ಕೈಗೆ ಅಂಟದ ಹದಕ್ಕೆ ಹಿಟ್ಟನ್ನು ರೆಡಿಮಾಡಿಕೊಳ್ಳಿ. 
  • ಚಕ್ಲಿ ಹಿಟ್ಟನ್ನು ಒದ್ದೆ ಬಟ್ಟೆ ಮುಚ್ಚಿ ಇಟ್ಟು, ಬೇಕಾದಷ್ಟೇ ಹಿಟ್ಟನ್ನು ತೆಗೆದುಕೊಂಡು ಚಕ್ಲಿ ಒರಳಿನಲ್ಲಿ ಹಾಕಿ ಒತ್ತಿ ಚಕ್ಲಿ ಆಕಾರಕ್ಕೆ ಸುತ್ತಿಕೊಂಡು ಕಾದ ಎಣ್ಣೆಯಲ್ಲಿ ಗರಿಯಾಗುವಂತೆ ಕರಿಯಿರಿ.   

ಕಾಮೆಂಟ್‌ಗಳು