ಬದನೇಕಾಯಿ ಹುಡಿ ಪಲ್ಯ

ಬದನೆಕಾಯಿಯಿಂದ ವಿವಿಧ ಬಗೆಯ ಮೇಲೋಗರ ಹಾಗೂ ಸೈಡ್ ಡಿಶ್ ಗಳನ್ನು ತಯಾರಿಸಬಹುದು. ಊರಲ್ಲಿ ನಮ್ಮ ಮನೆಯಲ್ಲಿ ಬದನೇಕಾಯಿ ಬಳಸಿ ಒಂದು ಬಗೆಯ ಪಲ್ಯ ತಯಾರಿಸುತ್ತಾರೆ. ಸಾಮಾನ್ಯವಾಗಿ ಬದನೆಕಾಯಿಯಿಂದ ತಯಾರಿಸುವ ಅಡುಗೆ ಪದಾರ್ಥಗಳು ಈರುಳ್ಳಿ / ಬೆಳ್ಳುಳ್ಳಿ ಇಲ್ಲದೆ ರುಚಿ ಎನ್ನಿಸುವುದೇ ಇಲ್ಲ. ಆದರೆ ನಾನು ಈಗ ಹೇಳ ಹೊರಟಿರುವ ಪಲ್ಯ ಈರುಳ್ಳಿ / ಬೆಳ್ಳುಳ್ಳಿ ಬಳಸದೆಯೇ ತಯಾರಿಸಿದರೂ ಬಹಳ ಚೆನ್ನಾಗಿರುತ್ತದೆ. ಉದುರಾಗಿರುವ ಈ ಪಲ್ಯಕ್ಕೆ ಹುಡಿ ಪಲ್ಯ ಎಂತಲೇ ಹೆಸರು!


ತಯಾರಿಸಲು ಬೇಕಾಗುವ ಸಮಯ: 20 ನಿಮಿಷ 
ಮಿಶ್ರಣ ನೆನೆಸಿಡುವ ಸಮಯ: 15 ನಿಮಿಷ
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:

  • ಬದನೇಕಾಯಿ - 1 ದೊಡ್ಡದು (ಸಣ್ಣಗೆ ಹೆಚ್ಚಿಕೊಳ್ಳಿ)
  • ಒಣಮೆಣಸು (ಬೇಕಿದ್ದರೆ) - ಒಂದು ಚಿಕ್ಕ ಚೂರು 
  • ಎಣ್ಣೆ - 5 ರಿಂದ 6 ಟೇಬಲ್ ಚಮಚದಷ್ಟು 
  • ಉದ್ದಿನಬೇಳೆ - 1 ಟೀ ಚಮಚ 
  • ಸಾಸಿವೆ - 1 ಟೀ ಚಮಚ 
  • ಇಂಗು - ಒಂದು ದೊಡ್ಡ ಚಿಟಿಕೆ 
  • ಅರಿಶಿನ - 1/4 ಟೀ ಚಮಚ 
  • ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
  • ಕರಿಬೇವು - 1 ಎಸಳು 
  • ಉಪ್ಪು - ರುಚಿಗೆ ತಕ್ಕಷ್ಟು 
  • ಆಮ್ ಚೂರ್ ಪೌಡರ್ / ಹುಳಿಪುಡಿ - 1 1/2 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು  
  • ತೆಂಗಿನತುರಿ - 4 ಟೇಬಲ್ ಚಮಚ 

ತಯಾರಿಸುವ ವಿಧಾನ:

  • ಸಣ್ಣಗೆ ಹೆಚ್ಚಿಕೊಂಡ ಬದನೆಕಾಯಿಗೆ 1 1/2 ಟೀ ಚಮಚದಷ್ಟು ಉಪ್ಪು, 1 ಟೀ ಚಮಚದಷ್ಟು ಆಮ್ ಚೂರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ನೆನೆಯಲು ಬಿಡಿ. 
  • ನಂತರ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಅದರಲ್ಲಿರುವ ನೀರಿನಂಶವನ್ನು ಹಿಂಡಿ ತೆಗೆಯಿರಿ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಕಾದ ನಂತರ ಒಣಮೆಣಸು, ಉದ್ದಿನಬೇಳೆ, ಇಂಗು, ಸಾಸಿವೆ, ಅರಿಶಿನ ಸೇರಿಸಿ ಕೈಯಾಡಿಸಿ. 
  • ಸಾಸಿವೆ ಚಟಪಟ ಎಂದ ನಂತರ ಸೀಳಿದ ಹಸಿಮೆಣಸು, ಕರಿಬೇವು ಹಾಕಿ ಒಂದು ನಿಮಿಷ ಕೈಯಾಡಿಸಿ. 
  • ನಂತರ ಇದಕ್ಕೆ ಬದನೇಕಾಯಿ ಮಿಶ್ರಣ ಸೇರಿಸಿ. ರುಚಿ ನೋಡಿಕೊಂಡು ಉಪ್ಪು, ಹುಳಿಪುಡಿ ಸೇರಿಸಿ. 
  • ಈ ಪಲ್ಯವನ್ನು ಮುಚ್ಚಳ ಮುಚ್ಚದೆ ಸಣ್ಣ ಉರಿಯಲ್ಲಿ 8 - 10 ನಿಮಿಷ ಬೇಯಿಸಿ. 
  • ಮಿಶ್ರಣ ಅರ್ಧ ಬೆಂದಾಗ ಇದಕ್ಕೆ ತೆಂಗಿನತುರಿ ಸೇರಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. 
  • ಬದನೇಕಾಯಿ ಹೋಳುಗಳು ಮೆತ್ತಗೆ ಬೆಂದಾಗ ಉರಿ ಆಫ್ ಮಾಡಿ. 
  • ಅನ್ನದೊಡನೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಈ ಪಲ್ಯ ಚೆನ್ನಾಗಿರುತ್ತದೆ. ಚೆನ್ನಾಗಿ ಹುರಿದು ಇಟ್ಟುಕೊಂಡರೆ 2 - 3 ದಿನದವರೆಗೂ ಕೆಡುವುದಿಲ್ಲ. 


ಟಿಪ್ಸ್:

  • ಈರುಳ್ಳಿ ಇಷ್ಟಪಡುವವರು ತೆಂಗಿನತುರಿ ಸೇರಿಸುವಾಗ ಹೆಚ್ಚಿದ ಈರುಳ್ಳಿಯನ್ನೂ ಸೇರಿಸಬಹುದು. 
  • ಈ ಪಲ್ಯಕ್ಕೆ ಬದನೆಕಾಯನ್ನು ಸಣ್ಣಗೆ ಹೆಚ್ಚಿದಷ್ಟೂ ಒಳ್ಳೆಯದು. 

ಕಾಮೆಂಟ್‌ಗಳು