ಹನಿ ಡ್ಯೂ ಮೆಲನ್ ಪೇಯ | ಹನಿ ಡ್ಯೂ ಮೆಲನ್ ಕೂಲರ್

ಹನಿ ಡ್ಯೂ ಮೆಲನ್ - ಇದು ಕರಬೂಜ ಹಣ್ಣಿನ ತರಹದ್ದೇ ತಳಿಗೆ ಸೇರಿದ ಹಣ್ಣು. ಸಿಹಿಯಾಗಿ, ರುಚಿಕರವಾಗಿರುವ ಈ ಹಣ್ಣು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ. ಈ ಹಣ್ಣನ್ನು ನಾವು ಸಾಮಾನ್ಯವಾಗಿ ಹಾಗೆಯೇ ಕತ್ತರಿಸಿ ತಿನ್ನುತ್ತೇವೆ. ತಂದಿಟ್ಟ ಹಣ್ಣು ಖಾಲಿಯಾಗದೇ ಫ್ರಿಡ್ಜ್ ನಲ್ಲಿ ಉಳಿದಾಗ ಏನಾದರೂ ಮಾಡಲೇಬೇಕಲ್ಲವೇ? ಆಗ ನೆನಪಾದದ್ದು ಈ ಪೇಯ! 


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು  
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
  • ಹನಿ ಡ್ಯೂ ಮೆಲನ್ - ಒಂದು ಹಣ್ಣಿನ ಕಾಲುಭಾಗ 
  • ಹಾಲು - 1 ಕಪ್ 
  • ಸಿಹಿಗೆ - ಬೆಲ್ಲ, ಸಕ್ಕರೆ ಅಥವಾ ಮೇಪಲ್ ಸಿರಪ್ - ಸಿಹಿಯಾಗುವಷ್ಟು (ನಾನು 5 ಟೇಬಲ್ ಚಮಚದಷ್ಟು ಬೆಲ್ಲ ಬಳಸಿದ್ದೇನೆ)
  • ಉಪ್ಪು - ಚಿಟಿಕೆ 
  • ಏಲಕ್ಕಿ ಪುಡಿ  - ಕಾಲು ಟೀ ಚಮಚ 

ತಯಾರಿಸುವ ವಿಧಾನ:
  • ಹನಿ ಡ್ಯೂ ಮೆಲನ್ ನ ಬೀಜ ಮತ್ತು ಸಿಪ್ಪೆ ಬೇರ್ಪಡಿಸಿ ಉಳಿದ ಭಾಗವನ್ನು ತುರಿದುಕೊಳ್ಳಿ. ಹಣ್ಣಿನ ತುರಿ ಮತ್ತು ರಸ ಎರಡೂ ಸೇರಿಸಿ ಒಂದೂವರೆ ಕಪ್ ನಷ್ಟು ಆದರೆ ಸಾಕು. 
  • ತುರಿದ ಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಚಿಟಿಕೆ ಉಪ್ಪು, ಸಿಹಿಯಾಗುವಷ್ಟು ಬೆಲ್ಲ, ಸಕ್ಕರೆ ಅಥವಾ ಮೇಪಲ್ ಸಿರಪ್ ಹಾಕಿ ಮಿಕ್ಸ್ ಮಾಡಿ. 
  • ನಂತರ ಹಾಲು, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ, ಅರ್ಧ ಘಂಟೆ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ನಂತರ ಸವಿಯಿರಿ. 
  • ಸರ್ವಿಂಗ್ ಬೌಲ್ ಗೆ ಹಾಕುವಾಗ ರಸ ಹಾಗೂ ಹಣ್ಣಿನ ತುರಿ ಎರಡೂ ಬರುವಂತೆ ಮಿಕ್ಸ್ ಮಾಡಿ ಹಾಕಿ. 

ಟಿಪ್ಸ್:
  • ತಕ್ಷಣ ಸರ್ವ್ ಮಾಡಬೇಕು ಅಂದರೆ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಹಣ್ಣು ಮತ್ತು ತಣ್ಣಗಿನ ಹಾಲು ಉಪಯೋಗಿಸಿ. 

ಕಾಮೆಂಟ್‌ಗಳು