ಈಗಂತೂ ಎಲ್ಲ ಕಡೆ ಕೊರೋನಾ ವೈರಸ್ ನ ಭೀತಿ, ಕರ್ಫ್ಯು..ಒಟ್ಟಿನಲ್ಲಿ ಮನೆಯಿಂದ ಹೊರಗೆ ಹೋಗಲು ಹೆದರಬೇಕಾದ ಪರಿಸ್ಥಿತಿ. ನಾವು ಇರುವ ಜಾಗದಲ್ಲೂ ನಿಧಾನಕ್ಕೆ ಕೊರೋನಾ ವೈರಸ್ ಹರಡುತ್ತಿದೆ. ಹೀಗಾಗಿ ಮಗಳ ಸ್ಕೂಲ್, ಮನೆಯವರ ಆಫೀಸ್ ಎಲ್ಲವೂ ಮನೆಯಿಂದಲೇ ನಡೆಯುತ್ತಿದೆ. ಎರಡು ವಾರಕ್ಕೊಮ್ಮೆ ಸೂಪರ್ ಮಾರ್ಕೆಟ್ ಗೆ ಗ್ರಾಸರಿ ಶಾಪಿಂಗ್ ಗೆ ಹೋಗುವುದನ್ನು ಬಿಟ್ಟರೆ ಹೊರಗಿನ ಓಡಾಟ ಸಂಪೂರ್ಣ ಕಟ್. ಆದಷ್ಟು ಬೇಗ ಈ ವೈರಸ್ ದೂರವಾಗಿ ವಾತಾವರಣ ಮೊದಲಿನಂತೆ ಆಗಲೆಂದು ನಾವೆಲ್ಲ ಆಶಿಸೋಣ ಅಲ್ಲವೆ?
ಮನೆಯಲ್ಲೇ ಇರುವ ಸಿಂಪಲ್ ಪದಾರ್ಥಗಳನ್ನು ಬಳಸಿ ತಯಾರಿಸಬಹುದಾದ ಒಂದು ಚಟ್ನಿಯ ರೆಸಿಪಿ ಇಲ್ಲಿದೆ. ನನ್ನ ಅಕ್ಕ ನಿಂದ ಕಲಿತ ಈ ಚಟ್ನಿ ಊಟಕ್ಕೆ ಬಹಳ ರುಚಿ. ಇಡ್ಲಿಯೊಡನೆಯೂ ಒಳ್ಳೆಯ ಕಾಂಬಿನೇಷನ್! ಸುಲಭದಲ್ಲಿ ತಯಾರಿಸಬಹುದಾದ ಕಡ್ಲೆಬೇಳೆ ಚಟ್ನಿ ಅಥವಾ ಕಡ್ಲೆಕಾಳಿನ ಗೊಜ್ಜು ರೆಸಿಪಿಯನ್ನು ನೀವೂ ಟ್ರೈ ಮಾಡಿ ನೋಡಿ:
ತಯಾರಿಸಲು ಬೇಕಾಗುವ ಸಮಯ: 10 - 12 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಬೇಕಾಗುವ ದಮಗ್ರಿಗಳು:
- ಕಡಲೆಬೇಳೆ - 2 ಟೇಬಲ್ ಚಮಚ
- ಒಣಮೆಣಸು - 1 ಅಥವಾ 2 (ಖಾರಕ್ಕೆ ತಕ್ಕಂತೆ)
- ಉದ್ದಿನಬೇಳೆ: 1 ಟೀ ಚಮಚ
- ಇಂಗು - ದೊಡ್ಡ ಚಿಟಿಕೆ
- ಸಾಸಿವೆ - 1 ಟೀ ಚಮಚ + 1 ಟೀ ಚಮಚ
- ಅರಿಶಿನ - 1/4 ಟೀ ಚಮಚ
- ಹಸಿಮೆಣಸು (ಬೇಕಿದ್ದರೆ) - 1
- ಹುಣಸೆಹಣ್ಣು - 1 1/2 ಟೇಬಲ್ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ - 1/4 ಟೀ ಚಮಚ
- ತೆಂಗಿನತುರಿ - 1 ಕಪ್
- ಕರಿಬೇವು (ಬೇಕಿದ್ದರೆ) - 4 ಎಲೆಗಳು
- ಎಣ್ಣೆ - 1 1/2 ಟೀ ಚಮಚ + 1 ಟೀ ಚಮಚ
ತಯಾರಿಸುವ ವಿಧಾನ:
- ಒಂದು ದಪ್ಪ ತಳದ ಬಾಣಲಿ ಅಥವಾ ಒಗ್ಗರಣೆ ಸೌಟಿನಲ್ಲಿ ಒಂದೂವರೆ ಚಮಚದಷ್ಟು ಎಣ್ಣೆ ಬಿಸಿಮಾಡಿ ಇದಕ್ಕೆ ಕಡ್ಲೆಬೇಳೆ ಸೇರಿಸಿ 1 - 2 ನಿಮಿಷ ಹುರಿಯಿರಿ.
- ಇದಕ್ಕೆ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಸೇರಿಸಿ. ಸಾಸಿವೆ ಚಟಪಟ ಎಂದಾಗ ಕಾಲು ಚಮಚ ಅರಿಶಿನ, ಕರಿಬೇವು (ಬೇಕಿದ್ದರೆ), ಹಸಿಮೆಣಸು ಸೇರಿಸಿ ಒಂದು ನಿಮಿಷ ಹುರಿದು ಉರಿ ಆಫ್ ಮಾಡಿ.
- ಮಿಕ್ಸಿ ಜಾರ್ ನಲ್ಲಿ ಹುರಿದ ಮಿಶ್ರಣ, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಹುಣಸೆಹಣ್ಣು ಸೇರಿಸಿ ಸ್ವಲ್ಪ ನೀರು ಸೇರಿಸಿ ತರಿಯಾಗಿ ರುಬ್ಬಿ. ಜಾಸ್ತಿ ನೀರು ಸೇರಿಸಿದರೆ ಚಟ್ನಿ ತೆಳ್ಳಗಾಗಿಬಿಡುತ್ತದೆ. ಹೀಗಾಗಿ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ.
- ಬಾಣಲೆಯಲ್ಲಿ ಒಂದು ಟೀ ಚಮಚದಷ್ಟು ಎಣ್ಣೆ ಬಿಸಿಮಾಡಿ ಒಂದು ಚಮಚ ಸಾಸಿವೆ, ಚಿಟಿಕೆ ಇಂಗು ಸೇರಿಸಿ ಸಿಡಿಸಿ ಚಟ್ನಿಗೆ ಸೇರಿಸಿ ಮಿಕ್ಸ್ ಮಾಡಿ.
- ಈ ಚಟ್ನಿ ಅನ್ನ ಹಾಗೂ ಇಡ್ಲಿಯೊಡನೆ ಒಳ್ಳೆಯ ಕಾಂಬಿನೇಷನ್.
ಟಿಪ್ಸ್:
- ಹಸಿಮೆಣಸು ಬಳಸಲು ಇಷ್ಟಪಡದವರು ಖಾರಕ್ಕೆ ಬರೀ ಒಣಮೆಣಸನ್ನು ಬಳಸಬಹುದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)