ದೊಡ್ಡಪತ್ರೆ ಎಲೆಯ ಸಿಹಿ ಗೊಜ್ಜು । ಸಾಂಬಾರ್ ಸೊಪ್ಪಿನ ಗೊಜ್ಜು

ದೊಡ್ಡಪತ್ರೆ ಗಿಡ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಶಹರದಲ್ಲಿರುವವರೂ ಸುಲಭದಲ್ಲಿ ಪಾಟ್ ನಲ್ಲಿ ಬೆಳೆಸಬಹುದಾದ ಈ ಗಿಡ ಅಡುಗೆಗೂ ಸೈ, ಔಷಧಕ್ಕೂ ಸೈ! ಶೀತಕ್ಕಂತೂ ಇದರ ಸೇವನೆ ಬಹಳ ಒಳ್ಳೆಯದು. ನಮ್ಮ ಮನೆಯಲ್ಲಿ ನೆಗಡಿ, ಜ್ವರ ಆದಾಗ ಡಾಕ್ಟರ್ ಬಳಿ ಹೋಗುವುದು ಬಹಳ ಕಮ್ಮಿ. ಮನೆಯಲ್ಲೇ ಇರುವ ಸಂಬಾರ ಎಲೆ, ಜೇನುತುಪ್ಪ, ಅರಿಶಿನ, ಕಾಳುಮೆಣಸು ಇವೆಲ್ಲದರ ಬಳಕೆಯಿಂದ ಶೀತ, ಜ್ವರ ಎಲ್ಲವೂ ಬೇಗ ವಾಸಿಯಾಗಿಬಿಡುತ್ತದೆ. ಚಟ್ನಿ, ಗೊಜ್ಜು ಇತ್ಯಾದಿ ಅಡುಗೆಗೂ ದೊಡ್ಡಪತ್ರೆ ಚೆನ್ನಾಗಿರುತ್ತದೆ. 
ದೊಡ್ಡಪತ್ರೆ ಎಲೆಯಿಂದ ಸಿಹಿ ಗೊಜ್ಜು ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಸರ್ವಿಂಗ್ಸ್: 4 ರಿಂದ 5 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
  • ದೊಡ್ಡಪತ್ರೆ ಎಲೆಗಳು - 7 ರಿಂದ 8
  • ಕಡ್ಲೆಬೇಳೆ - 2 ಟೇಬಲ್ ಚಮಚ
  • ಒಣಮೆಣಸು - 2
  • ಉದ್ದಿನಬೇಳೆ - 1 ಟೀ ಚಮಚ
  • ಸಾಸಿವೆ - 1/2 ಟೀ ಚಮಚ 
  • ಇಂಗು - ಚಿಟಿಕೆ 
  • ಕೊತ್ತಂಬರಿ - 3/4 ಟೀ ಚಮಚ 
  • ಜೀರಿಗೆ - 1/4 ಟೀ  ಚಮಚ 
  • ಎಳ್ಳು - 1/2 ಟೀ ಚಮಚ 
  • ಅರಿಶಿನ - 1/2 ಟೀ ಚಮಚ 
  • ಉಪ್ಪು - ರುಚಿಗೆ ತಕ್ಕಷ್ಟು 
  • ಹುಣಸೆಹಣ್ಣು - 1 1/2 ಟೇಬಲ್ ಚಮಚ ಅಥವಾ ರುಚಿಗೆ ತಕ್ಕಷ್ಟು
  • ಬೆಲ್ಲ / ಸಕ್ಕರೆ - 3 ಟೇಬಲ್ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ತೆಂಗಿನತುರಿ - 1 ಕಪ್ 
  • ಎಣ್ಣೆ - 1 1/2 ಟೀ ಚಮಚ 
- ಒಗ್ಗರಣೆಗೆ: 
  • ಉದ್ದಿನಬೇಳೆ - 1/2 ಟೀ ಚಮಚ
  • ಸಾಸಿವೆ - 1/2 ಟೀ ಚಮಚ 
  • ಎಣ್ಣೆ - 1 ಟೀ ಚಮಚ 

ತಯಾರಿಸುವ ವಿಧಾನ:
  • ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದೂವರೆ ಚಮಚದಷ್ಟು ಎಣ್ಣೆ ಬಿಸಿಮಾಡಿ. 
  • ಎಣ್ಣೆ ಬಿಸಿಯಾಗುತ್ತಿದ್ದಂತೆ ಇದಕ್ಕೆ ಕಡ್ಲೆಬೇಳೆ ಸೇರಿಸಿ ಸಣ್ಣ ಅಥವಾ ಮಾಧ್ಯಮ ಉರಿಯಲ್ಲಿ ಒಂದು ನಿಮಿಷ ಹುರಿಯಿರಿ. 
  • ನಂತರ ಇದಕ್ಕೆ ಉದ್ದಿನಬೇಳೆ, ಒಣಮೆಣಸು ಸೇರಿಸಿ ಕೈಯಾಡಿಸಿ. ನಂತರ ಕೊತ್ತಂಬರಿ, ಜೀರಿಗೆ, ಸಾಸಿವೆ, ಎಳ್ಳು, ಚಿಟಿಕೆ ಇಂಗು ಸೇರಿಸಿ ಹುರಿಯಿರಿ. 
  • ಸಾಸಿವೆ ಚಟಪಟ ಎಂದಾಗ ಅರಿಶಿನ ಸೇರಿಸಿ ಒಮ್ಮೆ ಕೈಯಾಡಿಸಿ, ದೊಡ್ಡಪತ್ರೆ ಎಲೆಗಳನ್ನು ಸೇರಿಸಿ. 
  • ಮಿಶ್ರಣವನ್ನು ಕೈಯಾಡಿಸುತ್ತಿದ್ದು, ದೊಡ್ಡಪತ್ರೆ ಎಲೆಗಳು ಬಾಡಿದ ನಂತರ ಉರಿ ಆಫ್ ಮಾಡಿ. 
  • ಮಿಕ್ಸಿ ಜಾರ್ ನಲ್ಲಿ ತೆಂಗಿನತುರಿ, ಒಗ್ಗರಣೆ ಮಿಶ್ರಣ, ರುಚಿಗೆ ತಕ್ಕಷ್ಟು ಹುಣಸೆಹಣ್ಣು ಸೇರಿಸಿ ಸ್ವಲ್ಪ ತರಿಯಾಗಿ ರುಬ್ಬಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸಿ; ಮಿಶ್ರಣ ಚಟ್ನಿಯ ಹದಕ್ಕಿರಲಿ.  
  • ಬಾಣಲಿಯಲ್ಲಿ ಒಂದು ಚಮಚ ಎಣ್ಣೆ ಬಿಸಿಮಾಡಿ ಉದ್ದಿನಬೇಳೆ, ಸಾಸಿವೆ ಸೇರಿಸಿ ಚಟಗುಟ್ಟಿದ ನಂತರ ರುಬ್ಬಿದ ಮಿಶ್ರಣ ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ / ಸಕ್ಕರೆ ಸೇರಿಸಿ ಕೈಯಾಡಿಸಿ. 
  • ಗೊಜ್ಜು ಮಿಶ್ರಣ ಬಿಸಿಯಾಗಿ ಗುಳ್ಳೆಗಳು ಬರತೊಡಗಿದಾಗ ಉರಿ ಆಫ್ ಮಾಡಿ. 
  • ರುಚಿಕರವಾದ ಈ ಗೊಜ್ಜನ್ನು ಅನ್ನದೊಡನೆ ಮಿಕ್ಸ್ ಮಾಡಿ ಸವಿಯಿರಿ. 


ಕಾಮೆಂಟ್‌ಗಳು