ಮೂಲಂಗಿ ಎಲೆಯ ತೇಪ್ಲಾ । ಮೂಲಂಗಿ ಎಲೆ ಪರೋಟ | ಮೂಲಂಗಿ ಎಲೆಯ ರೊಟ್ಟಿ

ಈ ವರ್ಷ ಬೇಸಿಗೆಯಲ್ಲಿ ನಮ್ಮ ಹಿತ್ತಿಲಲ್ಲಿ ಅನೇಕ ತರಕಾರಿಗಳನ್ನು ಬೆಳೆದಿದ್ದೆವು. ಬೀಜ ಹಾಕಿದಷ್ಟೂ ಮೂಲಂಗಿ ಗಿಡಗಳು ಹುಟ್ಟಿದ್ದವು. ಎಲ್ಲವೂ ಬೆಳೆಯುವಷ್ಟರಲ್ಲಿ ಕೋವಿಡ್ ಲಾಕ್ ಡೌನ್ ಶುರುವಾಯಿತು. ತರಕಾರಿಗಳ ಬೆಲೆ ಹೆಚ್ಚಾಗಿರುವ ಸಮಯದಲ್ಲಿ ಮನೆಯ ಹಿತ್ತಿಲಲ್ಲೇ ಬೆಳೆದ ತರಕಾರಿಗಳು ನಮ್ಮ ಗ್ರಾಸರಿ ಬಿಲ್ ನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ. ಇನ್ನೇನು, ಚಳಿಗಾಲ ಶುರುವಾಯಿತು. ಚಳಿಗಾಲ ಮುಗಿದಮೇಲೆ ನಮ್ಮ ಹಿತ್ತಿಲು ಪುನರಾರಂಭವಾಗಬೇಕು. 
ಮೂಲಂಗಿ ಎಲೆಗಳನ್ನು ಬಳಸಿ ತಯಾರಿಸಬಹುದಾದ ತೇಪ್ಲ ಅಥವಾ ಪರೋಟದ ರೆಸಿಪಿ ಇಲ್ಲಿದೆ:


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 
ಸರ್ವಿಂಗ್ಸ್: ಈ ಅಳತೆಯಿಂದ 10 - 11 ಪರೋಟಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:

 • ಮೂಲಂಗಿ ಎಲೆಗಳು - 1 ಚಿಕ್ಕ ಕಟ್ಟು 
 • ಗೋಧಿ ಹಿಟ್ಟು - 2 1/4 ಕಪ್ 
 • ಕಡ್ಲೆ ಹಿಟ್ಟು - 2 ಟೇಬಲ್ ಚಮಚ 
 • ಎಣ್ಣೆ - ಸ್ವಲ್ಪ 
 • ಕೊತ್ತಂಬರಿ ಜೀರಿಗೆ ಪುಡಿ - 1 ಟೀ ಚಮಚ 
 • ಗರಂ ಮಸಾಲೆ ಪುಡಿ - 1/2 ಟೀ ಚಮಚ 
 • ಅರಿಶಿನ - 1/4 ಟೀ ಚಮಚ 
 • ಅಚ್ಚಮೆಣಸಿನ ಪುಡಿ - 1 ಟೀ ಚಮಚ ಅಥವಾ ಖಾರಕ್ಕೆ ತಕ್ಕಷ್ಟು 
 • ಚಿಲ್ಲಿ ಫ್ಲೇಕ್ಸ್ (ಬೇಕಿದ್ದರೆ) - 1/2 ಟೀ ಚಮಚ 
 • ಉಪ್ಪು - ರುಚಿಗೆ ತಕ್ಕಷ್ಟು 
 • ಸಕ್ಕರೆ - 1 1/2 ಟೀ ಚಮಚ 
 • ಆಮಚೂರ್ ಪೌಡರ್ - 1/3 ಟೀ ಚಮಚ 
 • ಬೆಚ್ಚಗಿನ ನೀರು - 1 ಕಪ್ 

ತಯಾರಿಸುವ ವಿಧಾನ:

 • ಮೂಲಂಗಿ ಎಲೆಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. Pull Chopper ಬಳಸಿದರೆ ಹೆಚ್ಚುವುದು ಬಹಳ ಸುಲಭ. 
 • ಒಂದು ದಪ್ಪ ತಳದ ಬಾಣಲೆಯಲ್ಲಿ 1 1/2 ಟೇಬಲ್ ಚಮಚದಷ್ಟು ಎಣ್ಣೆ ಬಿಸಿಗಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಮೂಲಂಗಿ ಎಲೆಗಳನ್ನು ಸೇರಿಸಿ 5 - 8 ನಿಮಿಷ ಅಥವಾ ಎಲೆಯ ಬಣ್ಣ ಬದಲಾಗುವವರೆಗೆ ಹುರಿಯಿರಿ.   
 • ಉರಿ ಆಫ್ ಮಾಡಿ ಮತ್ತು ಇದಕ್ಕೆ ಅರಿಶಿನ, ಕೊತ್ತಂಬರಿ - ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಅಚ್ಚಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್ ಸೇರಿಸಿ ಕೈಯಾಡಿಸಿ.
 • ನಂತರ ಇದಕ್ಕೆ ಗೋಧಿಹಿಟ್ಟು, ಕಡ್ಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಆಮಚೂರ್ ಪೌಡರ್ ಮತ್ತು ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
 • ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಉಂಡೆ ಕಟ್ಟುವ ಹದಕ್ಕೆ ಹಿಟ್ಟನ್ನು ತಯಾರಿಸಿ.
 • ಮೆತ್ತಗಿನ ಆದರೆ ಕೈಗೆ ಅಂಟದ ಹಿಟ್ಟನ್ನು ಒಮ್ಮೆ ನಾದಿ, ಮೇಲಿನಿಂದ ಎಣ್ಣೆ ಸವರಿ 5 ನಿಮಿಷ ಪಾತ್ರೆಯಲ್ಲಿ ಮುಚ್ಚಿಟ್ಟು ಸೆಟ್ ಆಗಲು ಬಿಡಿ. ಸಮಯ ಜಾಸ್ತಿ ಇಲ್ಲದಿದ್ದರೆ ಹಾಗೆಯೇ ತೇಪ್ಲ ತಯಾರಿಸಬಹುದು.
 • ತಯಾರಿಸಿದ ಹಿಟ್ಟಿನಿಂದ ನಿಂಬೆಗಾತ್ರದ 10 - 11 ಉಂಡೆಗಳನ್ನು ಮಾಡಿಕೊಳ್ಳಿ.
 • ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಒಣ ಹಿಟ್ಟಿನಲ್ಲಿ ಒಮ್ಮೆ ಹೊರಳಿಸಿ ತೆಳ್ಳಗೆ ಗೋಲಾಕಾರಕ್ಕೆ ಲಟ್ಟಿಸಿ.
 • ಲಟ್ಟಿಸಿದ ತೇಪ್ಲ ವನ್ನು ಕಾದ ತವಾದ ಮೇಲೆ ಎರಡೂ ಕಡೆ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ.
 • ಬಿಸಿ ಬಿಸಿ ತೇಪ್ಲ ವನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ. 
 • ಮೂಲಂಗಿ ಎಲೆಯ ತೇಪ್ಲಾ ಅಥವಾ ಪರೋಟ ಬೆಳಗಿನ ತಿಂಡಿ, ಲಂಚ್ ಬಾಕ್ಸ್, ಊಟ ಎಲ್ಲಕ್ಕೂ ಚೆನ್ನಾಗಿರುತ್ತದೆ. 

ಕಾಮೆಂಟ್‌ಗಳು