ಸಂಡಿಗೆ ಮೆಣಸು । ಮಜ್ಜಿಗೆ ಮೆಣಸು (ಬಾಳಕ)

ನಾವು ಕಳೆದ ವರ್ಷ ಊರಿಗೆ ಹೋದಾಗ ನನ್ನ ಅಕ್ಕ ಅವರ ಮನೆಯಲ್ಲಿ ತಯಾರಿಸಿದ ಸಂಡಿಗೆ ಮೆಣಸನ್ನು ಪ್ಯಾಕ್ ಮಾಡಿ ಕಳಿಸಿದ್ದಳು. ಊರಲ್ಲಿ ಸಿಗುವ ಗೋಕರ್ಣ ಮೆಣಸು ಸಂಡಿಗೆ ಮೆಣಸು ತಯಾರಿಸಲು ಬಹಳ ಚೆನ್ನಾಗಿರುತ್ತದೆ. ಖಾರ ಬಹಳ ಕಡಿಮೆ ಇದ್ದುದರಿಂದ ನಮ್ಮ ಮನೆಯಲ್ಲಿ ಮಕ್ಕಳಿಗೂ ಈ ಮೆಣಸು ಇಷ್ಟವಾಯಿತು. ಮಾರ್ಕೆಟ್ ನಿಂದ ಜಾಸ್ತಿ ಮೆಣಸನ್ನು ತಂದಾಗ ಅಕ್ಕನ ಬಳಿ ರೆಸಿಪಿ ಕೇಳಿಕೊಂಡು ನಾನೂ ಸ್ವಲ್ಪ ಸಂಡಿಗೆ ಮೆಣಸು ತಯಾರಿಸಿದೆ. ಊರಿನ ಮೆಣಸಿಗಿಂತ ಸ್ವಲ್ಪ ಖಾರವೆನ್ನಿಸಿದರೂ, ಸಂಡಿಗೆ ಮೆಣಸು ಚೆನ್ನಾಗಿ ಬಂದಿವೆ.
ಸಂಡಿಗೆ ಮೆಣಸು ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಒಣಗಿಸಲು ಬೇಕಾಗುವ ಸಮಯ: 1 ವಾರ
ಡಿಫಿಕಲ್ಟಿ ಲೆವೆಲ್: ಕಷ್ಟಕರ

ಬೇಕಾಗುವ ಸಾಮಗ್ರಿಗಳು:
  • ಹಸಿಮೆಣಸು - 1/2 kg (ಖಾರ ಕಡಿಮೆ ಇದ್ದರೆ ಒಳ್ಳೆಯದು)
  • ಉಪ್ಪು - ರುಚಿಗೆ ತಕ್ಕಷ್ಟು 
  • ಗಟ್ಟಿ ಮೊಸರು ಅಥವಾ ದಪ್ಪ ಮಜ್ಜಿಗೆ - 2 ಕಪ್ (ಅಂದಾಜು)
  • ಉದ್ದಿನಬೇಳೆ - 2 ಟೀ ಚಮಚ 
  • ಮೆಂತ್ಯ - 4 ಅಥವಾ 5 ಕಾಳುಗಳು 
  • ಜೀರಿಗೆ - 1/2 ಟೀ ಚಮಚ 
  • ಇಂಗು - 1/4 ಟೀ ಚಮಚ 
  • ನಿಂಬೆರಸ (ಬೇಕಿದ್ದರೆ) - ರುಚಿಗೆ ತಕ್ಕಷ್ಟು 
  • ನೀರು - ಸ್ವಲ್ಪ 

ತಯಾರಿಸುವ ವಿಧಾನ:
  • ಹಸಿಮೆಣಸನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ. 
  • ಒಂದೊಂದೇ ಹಸಿಮೆಣಸನ್ನು ತೆಗೆದುಕೊಂಡು ಚಾಕುವಿನಿಂದ ಮೆಣಸಿನ ಮಧ್ಯಭಾಗದಲ್ಲಿ ಮಾತ್ರ ಸೀಳು ಮಾಡಿಕೊಳ್ಳಿ. ಹೀಗೆ ಸೀಳುವುದರಿಂದ ಮಜ್ಜಿಗೆ ಮಿಶ್ರಣವನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.    
  • ಒಂದು ಪಾತ್ರೆಯಲ್ಲಿ 4 - 5 ಕಪ್ ಅಥವಾ ಎಲ್ಲ ಹಸಿಮೆಣಸು ಮುಳುಗುವಷ್ಟು ನೀರು ಹಾಕಿಕೊಳ್ಳಿ. 
  • ನೀರು ಬಿಸಿಯಾಗಿ ಕುದಿಯತೊಡಗಿದಾಗ ಇದಕ್ಕೆ ಸೀಳಿದ ಹಸಿಮೆಣಸನ್ನು ಹಾಕಿ ಕೈಯಾಡಿಸಿ. ಅರ್ಧ ನಿಮಿಷದ ನಂತರ ನೀರನ್ನು ಬಸಿದು, ಹಸಿಮೆಣಸನ್ನು ಒಣ ಬಟ್ಟೆ ಅಥವಾ ಪೇಪರ್ ಟವೆಲ್ ಮೇಲೆ 15 ನಿಮಿಷ ಹರವಿ.   
  • ಹಸಿಮೆಣಸನ್ನು ಒಂದು ಪ್ಲೇಟ್ ನಲ್ಲಿ ಹರವಿ ಮೇಲಿನಿಂದ ಒಂದು ತೆಳ್ಳಗಿನ ಬಟ್ಟೆ ಮುಚ್ಚಿ ಎರಡು ದಿನ ಬಿಸಿಲಿನಲ್ಲಿ ಒಣಗಿಸಿ, ನಂತರ ಮಜ್ಜಿಗೆಯಲ್ಲಿ ನೆನೆಸಿ. 

ಮಜ್ಜಿಗೆ ತಯಾರಿಕೆ: ಎರಡನೇ ದಿನ ಈ ಕೆಳಗಿನಂತೆ ಮಜ್ಜಿಗೆ ತಯಾರಿಸಿಕೊಳ್ಳಿ: 
ಉದ್ದಿನಬೇಳೆ, ಮೆಂತ್ಯ, ಇಂಗು ಮತ್ತು ಜೀರಿಗೆಯನ್ನು ಪರಿಮಳ ಬರುವಂತೆ ಹುರಿದು ನುಣ್ಣಗೆ ಪುಡಿಮಾಡಿಕೊಳ್ಳಿ.
ಈ ಮಸಾಲೆ ಪುಡಿಯನ್ನು ಮೊಸರಿಗೆ ಸೇರಿಸಿ. ಮೊಸರನ್ನು ಮಿಕ್ಸಿಯಲ್ಲಿ ಎರಡು ನಿಮಿಷ ತಿರುವಿಕೊಳ್ಳಿ.
ತಯಾರಾದ ದಪ್ಪನೆಯ ಮಜ್ಜಿಗೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮೊಸರು ಹುಳಿ ಇದ್ದಷ್ಟು ಉತ್ತಮ; ಹುಳಿ ಕಡಿಮೆ ಇದ್ದರೆ ಸ್ವಲ್ಪ ನಿಂಬೆರಸ ಸೇರಿಸಿ. 
  • ಎರಡು ದಿನ ಬಿಸಿಲಿನಲ್ಲಿ ಒಣಗಿಸಿದ ಹಸಿಮೆಣಸನ್ನು ಎರಡನೇ ದಿನ ಸಂಜೆ ಮಜ್ಜಿಗೆ ಮಿಶ್ರಣದಲ್ಲಿ ನೆನೆಸಿ. 
  • ಮಾರನೇದಿನ ಬೆಳಿಗ್ಗೆ ಮೆಣಸನ್ನು ಮಜ್ಜಿಗೆಯಿಂದ ತೆಗೆದು ಪ್ಲೇಟ್ ನಲ್ಲಿ ಹರವಿ, ತೆಳ್ಳಗಿನ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ಒಣಗಿಸಿ. ಮಜ್ಜಿಗೆಯನ್ನು ಹಾಗೇ ಇಡಿ. 
  • ಸಂಜೆ ಪುನಃ ಮೆಣಸನ್ನು ಮಜ್ಜಿಗೆ ಮಿಶ್ರಣದಲ್ಲಿ ನೆನೆಸಿಡಿ. ಮಜ್ಜಿಗೆ ಮಿಶ್ರಣ ಖಾಲಿಯಾಗುವವರೆಗೂ ಹೀಗೇ ಮಾಡಿ. 
  • ಮಜ್ಜಿಗೆಯೆಲ್ಲ ಖಾಲಿಯಾಗಿ ಮೆಣಸು ಒಣಗಿ ಗರಿಗರಿಯಾಗುವವರೆಗೂ ಚೆನ್ನಾಗಿ ಒಣಗಿಸಿ. 
  • ತಯಾರಾದ ಸಂಡಿಗೆ ಮೆಣಸನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವರ್ಷಗಟ್ಟಲೆ ಚೆನ್ನಾಗಿರುತ್ತದೆ. 

ಮೆಣಸನ್ನು ಕರಿಯುವ ಬಗೆ: 
  • ಒಂದು ಚಿಕ್ಕ ಬಾಣಲೆಯಲ್ಲಿ 3 - 4 ಚಮಚ ಎಣ್ಣೆ ಬಿಸಿಮಾಡಿ ಇದಕ್ಕೆ 5 - 6 ಸಂಡಿಗೆ ಮೆಣಸು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಿರಿ. 
  • ಅನ್ನ - ಮೊಸರಿನೊಡನೆ ಸಂಡಿಗೆ ಮೆಣಸು ಬಹಳ ರುಚಿ! 


ಕಾಮೆಂಟ್‌ಗಳು