ಬದನೇಕಾಯಿ ಹಿಂಡಿ | ಬದನೇಕಾಯಿ ಸುಟ್ಟ ಬಜ್ಜಿ (ಗೊಜ್ಜು)। ಬದನೇಕಾಯಿ ಬರ್ತ

ವರ್ಷದ ಎಲ್ಲ ಕಾಲದಲ್ಲೂ ಸಿಗುವ ತರಕಾರಿಗಳಲ್ಲೊಂದಾದ ಬದನೇಕಾಯಿ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಲು ಉಪಯುಕ್ತ. ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲದಿದ್ದರೂ ಅಡುಗೆಗಂತೂ ಈ ತರಕಾರಿ ತುಂಬ ರುಚಿ! ಬದನೆಕಾಯಿಯಲ್ಲೂ ಅನೇಕ ಬಗೆ; ಯಾವ ಬಗೆಯ ಬದನೇಕಾಯಿ ಮನೆಗೆ ಬಂದಿದೆ ಎನ್ನುವುದನ್ನು ನೋಡಿಕೊಂಡು ಅಡುಗೆ ನಿರ್ಧರಿಸಬೇಕು. ಉದಾಹರಣೆಗೆ: ದೊಡ್ಡ ಬದನೇಕಾಯಿ ತಂದಾಗ ನಾನು ತಯಾರಿಸುವ ಸೈಡ್ ಡಿಶ್ ಗಳಲ್ಲಿ ಬದನೇಕಾಯಿ ಸುಟ್ಟ ಗೊಜ್ಜು ಕೂಡ ಒಂದು. 
ನನ್ನ ತಂಗಿಗೆ ಬದನೇಕಾಯಿ ಹಿಂಡಿ / ಸುಟ್ಟ ಬಜ್ಜಿ ತುಂಬಾ ಇಷ್ಟ. ಬದನೇಕಾಯಿ ಹಿಂಡಿಯನ್ನು ತಯಾರಿಸಿದ್ದಾರೆಂದರೆ ಅವಳ ಊಟವೆಲ್ಲ ಅದರಲ್ಲೇ ಮುಗಿಯುತ್ತದೆ. ಅವಳಿಗೆ ಇಷ್ಟವಾದ್ದರಿಂದ ಈ ಬಜ್ಜಿಯನ್ನು ತಯಾರಿಸುವುದರಲ್ಲೂ ಅವಳು ಎಕ್ಸ್ಪರ್ಟ್! ತಂಗಿಯಿಂದ ಕಲಿತ ಬದನೇಕಾಯಿ ಹಿಂಡಿ ಅಥವಾ ಸುಟ್ಟ ಬಜ್ಜಿಯ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
 • ಬದನೇಕಾಯಿ - 1 (ಮೀಡಿಯಮ್ ಸೈಜಿನದು)  
 • ಉಪ್ಪು - ರುಚಿಗೆ ತಕ್ಕಷ್ಟು 
 • ಆಮಚೂರ್ ಪೌಡರ್ (ಹುಳಿಪುಡಿ) - 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು 
 • ಸಕ್ಕರೆ / ಬೆಲ್ಲ - ದೊಡ್ಡ ಚಿಟಿಕೆ  
 • ಈರುಳ್ಳಿ (ಚಿಕ್ಕದು) - 1
 • ತೆಂಗಿನತುರಿ (ಬೇಕಿದ್ದರೆ) - 2 ಅಥವಾ 3 ಟೇಬಲ್ ಚಮಚ  
 - ಒಗ್ಗರಣೆಗೆ:
 • ಎಣ್ಣೆ - 1 1/2 ಟೇಬಲ್ ಚಮಚ 
 • ಒಣಮೆಣಸು - 1 
 • ಉದ್ದಿನಬೇಳೆ - 1 ಟೀ ಚಮಚ
 • ಇಂಗು - ದೊಡ್ಡ ಚಿಟಿಕೆ 
 • ಸಾಸಿವೆ - 1/2 ಟೀ ಚಮಚ  
 • ಅರಿಶಿನ - ಚಿಟಿಕೆ 
 • ಹಸಿಮೆಣಸು - 1 
 • ಕರಿಬೇವು - 5 ಅಥವಾ 6 ಎಲೆಗಳು 

ತಯಾರಿಸುವ ವಿಧಾನ:
 • ಬದನೆಕಾಯಿಯನ್ನು ಒಲೆ ಅಥವಾ ಸ್ಟವ್ ನ ಬೆಂಕಿಯಲ್ಲಿ ಮೆತ್ತಗಾಗುವಂತೆ ಸುಟ್ಟುಕೊಳ್ಳಿ. ಸಣ್ಣ ಉರಿಯಲ್ಲಿ ಬದನೇಕಾಯಿ ಸುಡಲು ಸುಮಾರು 15 ನಿಮಿಷ ಬೇಕು. 
 • ಸುಟ್ಟ ಬದನೇಕಾಯಿ ಸ್ವಲ್ಪ ತಣ್ಣಗಾದ ನಂತರ ಇದರ ಹೊರಭಾಗದ ಕಪ್ಪಗಿನ ಸಿಪ್ಪೆಯನ್ನು ತೆಗೆದುಬಿಡಿ. ಕೈಯನ್ನು ಆಗಾಗ ನೀರಿನಲ್ಲಿ ಅದ್ದಿಕೊಳ್ಳುವುದರಿಂದ ಕಪ್ಪಗಿನ ಸಿಪ್ಪೆ ಬದನೇಕಾಯಿ ಮಿಶ್ರಣಕ್ಕೆ ಸೇರುವುದು ತಪ್ಪುತ್ತದೆ. 
 • ಸಿಪ್ಪೆ ತೆಗೆದ ಬದನೆಕಾಯಿಯನ್ನು ಸೌಟಿನ ಸಹಾಯದಿಂದ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. 
 • ಒಂದು ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನಬೇಳೆ, ಒಣಮೆಣಸು, ಇಂಗು, ಸಾಸಿವೆ ಸೇರಿಸಿ ಹುರಿಯಿರಿ. ಸಾಸಿವೆ ಸಿಡಿಯತೊಡಗಿದಾಗ ಅರಿಶಿನ, ಹಸಿಮೆಣಸಿನ ಚೂರುಗಳು, ಕರಿಬೇವು ಸೇರಿಸಿ ಹುರಿದು ಇದನ್ನು ಬದನೇಕಾಯಿ ಮಿಶ್ರಣಕ್ಕೆ ಸೇರಿಸಿ. ಮೆಣಸಿನ ಚೂರುಗಳನ್ನು ಮ್ಯಾಶ್ ಮಾಡಿ. 
 • ರುಚಿಗೆ ತಕ್ಕಷ್ಟು ಉಪ್ಪು, ಆಮಚೂರ ಪೌಡರ್ ಹಾಗೂ ಒಂದು ದೊಡ್ಡ ಚಿಟಿಕೆಯಷ್ಟು ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. 
 • ಸರ್ವ್ ಮಾಡುವ ಮೊದಲು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಬದನೇಕಾಯಿ ಮಿಶ್ರಣಕ್ಕೆ ಸೇರಿಸಿ. 
 • ಬೇಕಿದ್ದರೆ ಸ್ವಲ್ಪ ತೆಂಗಿನತುರಿಯನ್ನೂ ಸೇರಿಸಬಹುದು. ನಾನು ತೆಂಗಿನತುರಿ ಸೇರಿಸಿಲ್ಲ. 

ಟಿಪ್ಸ್:
 • ಬದನೇಕಾಯಿ ಹಿಂಡಿಯನ್ನು ಜಾಸ್ತಿ ತಯಾರಿಸಿದ್ದರೆ ಸರ್ವ್ ಮಾಡುವಷ್ಟನ್ನೇ ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಮಾತ್ರ ಈರುಳ್ಳಿ ಸೇರಿಸಿ. ಈ ಸೈಡ್ ಡಿಶ್ ಗೆ ಈರುಳ್ಳಿಯನ್ನು ಫ್ರೆಶ್ ಆಗಿ ಸೇರಿಸಿದಾಗಲೇ ಚೆನ್ನ. 


ಕಾಮೆಂಟ್‌ಗಳು