ಕಟ್ನೆ - ಇದು ಮಲೆನಾಡ ಕಡೆ ತಯಾರಿಸುವ ಒಂದು ವಿಶಿಷ್ಟ ಮೇಲೋಗರ. ಮಲೆನಾಡಿನಲ್ಲಿ ಸಿಗುವ ಕನ್ನೆಕುಡಿ ಎನ್ನುವ ಎಲೆಗಳನ್ನು ಬಳಸಿ ಈ ಮೇಲೋಗರ ತಯಾರಿಸಲಾಗುತ್ತದೆ. ಧೋ ಎಂದು ಮಳೆ ಸುರಿಯುವಾಗ ಬಿಸಿ ಅನ್ನದ ಜೊತೆಗೆ ಕಟ್ನೆ ಇದ್ದುಬಿಟ್ಟರೆ ಊಟದ ರುಚಿ ಇನ್ನೂ ಹೆಚ್ಚು. ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ಶೀತ, ಜ್ವರಕ್ಕೂ ಇದರ ಸೇವನೆ ಒಳ್ಳೆಯದು. ನಮಗೆ ಇಲ್ಲಿ ಕನ್ನೆಕುಡಿ ಸಿಗದಿದ್ದರೂ, ಪಾಲಕ್ ಸೊಪ್ಪು ಬಳಸಿ ಕಟ್ನೆ ತಯಾರಿಸುತ್ತಿರುತ್ತೇನೆ ನಾನು. ರುಚಿಕರವಾದ ಈ ಮೇಲೋಗರವನ್ನು ನೀವೂ ತಯಾರಿಸಿ ನೋಡಿ..
ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ಪಾಲಕ್ ಸೊಪ್ಪು - 1 ಕಟ್ಟು
- ಕಾಳುಮೆಣಸು - 10 ರಿಂದ 12 (ಖಾರಕ್ಕೆ ತಕ್ಕಂತೆ)
- ಜೀರಿಗೆ - 1 ಟೀ ಚಮಚ
- ತೆಂಗಿನತುರಿ - 1 ಕಪ್
- ಆಮಚೂರ್ ಪುಡಿ (ಹುಳಿಪುಡಿ) - 3/4 ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ನಿಂಬೆರಸ - ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
- ಎಣ್ಣೆ - ಒಗ್ಗರಣೆಗೆ
- ಜಜ್ಜಿದ ಬೆಳ್ಳುಳ್ಳಿ - 1 1/2 ಟೀ ಚಮಚ
- ನೀರು - ಸ್ವಲ್ಪ
ತಯಾರಿಸುವ ವಿಧಾನ:
- ಪಾಲಕ್ ಸೊಪ್ಪನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು, ಹೆಚ್ಚಿಕೊಳ್ಳಿ.
- ಒಂದು ಬಾಣಲೆಯಲ್ಲಿ 1 1/2 ಟೀ ಚಮಚದಷ್ಟು ಎಣ್ಣೆ ಬಿಸಿಮಾಡಿ. ಇದಕ್ಕೆ ಕಾಳುಮೆಣಸು ಸೇರಿಸಿ ಚಟಪಟ ಎನ್ನುವತನಕ ಹುರಿಯಿರಿ. ನಂತರ ಇದಕ್ಕೆ ಜೀರಿಗೆ ಸೇರಿಸಿ ಕೈಯಾಡಿಸಿ ಪಾಲಕ್ ಸೊಪ್ಪು ಸೇರಿಸಿ ಬಾಡಿಸಿ ಉರಿ ಆಫ್ ಮಾಡಿ.
- ಸೊಪ್ಪಿನ ಮಿಶ್ರಣಕ್ಕೆ ತೆಂಗಿನತುರಿ, ಆಮಚೂರ್ ಪೌಡರ್ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸಿ.
- ರುಬ್ಬಿದ ಮಿಶ್ರಣಕ್ಕೆ ಉಪ್ಪು, ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಬಿಸಿಗಿಡಿ. ಜೊತೆಗೆ, ನೀರು ಬೇಕಿದ್ದರೆ ಸೇರಿಸಿ. ಕಟ್ನೆ ಮಿಶ್ರಣ ತಿಳಿಸಾರಿನ ಹದಕ್ಕಿರಲಿ.
- ಕಟ್ನೆ ಮಿಶ್ರಣವನ್ನು 5 ನಿಮಿಷ ಚೆನ್ನಾಗಿ ಕುದಿಸಿ.
- ಒಗ್ಗರಣೆ ಸೌಟಿನಲ್ಲಿ 1 1/2 ಟೀ ಚಮಚದಷ್ಟು ಎಣ್ಣೆ ಬಿಸಿಮಾಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವಂತೆ ಹುರಿದು ಕಟ್ನೆ ಮಿಶ್ರಣಕ್ಕೆ ಸೇರಿಸಿ.
- ಬಿಸಿಬಿಸಿ ಕಟ್ನೆಯನ್ನು ಅನ್ನದೊಡನೆ ಸರ್ವ್ ಮಾಡಿ.
ಟಿಪ್ಸ್:
- ನಿಂಬೆರಸ ಬಳಸದಿದ್ದರೆ ಆಮಚೂರ್ ಪುಡಿಯನ್ನು ಜಾಸ್ತಿ ಬಳಸಿ ರುಚಿ ಅಡ್ಜಸ್ಟ್ ಮಾಡಿ.
- ಮಹಿಳೆಯರಿಗೆ ಹೆರಿಗೆಯ ನಂತರದ ಪಥ್ಯದ ಊಟಕ್ಕೆ ಈ ಕಟ್ನೆ ಬಹಳ ಒಳ್ಳೆಯದು. ಆದರೆ ನಿಂಬೆರಸದ ಬದಲು ಆಮಚೂರ್ ಪೌಡರ್ ನ್ನು ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)