ನಾವು ಈ ವರ್ಷ ಹಿತ್ತಿಲಲ್ಲಿ ಸ್ನೋ ಪೀಸ್ ಗಿಡಗಳನ್ನು ಹಾಕಿದ್ದೆವು. ಹಾಕಿರುವ ಐದಾರು ಗಿಡದಲ್ಲೇ ನಮ್ಮ ಪುಟ್ಟ ಸಂಸಾರಕ್ಕೆ ಸಾಕಾಗುವಷ್ಟು ಬೀನ್ಸ್ ಸಿಗುತ್ತಿವೆ. ಸುಲಭದಲ್ಲಿ ಬೆಳೆಯಬಹುದಾದ ಈ ಬೀನ್ಸ್ ಸಾಂಬಾರ್, ಪಲ್ಯ, ರೈಸ್ ಐಟಮ್ಸ್, ಸಲಾಡ್ ಎಲ್ಲಕ್ಕೂ ಚೆನ್ನಾಗಿರುತ್ತದೆ. ಸಿಹಿ ಯಾಗಿರುವ ಸ್ನೋ ಪೀಸ್ ನ್ನು ನನ್ನ ಮಕ್ಕಳು ಗಿಡದಿಂದ ಕಿತ್ತು ಹಾಗೆಯೇ ತಿನ್ನುತ್ತಾರೆ.
ಆಲೂಗಡ್ಡೆ, ಸ್ನೋ ಪೀಸ್, ಕ್ಯಾಪ್ಸಿಕಂ, ಹಸಿ ಬಟಾಣಿ - ಇಷ್ಟನ್ನೂ ಬಳಸಿ ತಯಾರಿಸಬಹುದಾದ ಪಲ್ಯದ ರೆಸಿಪಿ ಇಲ್ಲಿದೆ. ಕ್ಯಾಪ್ಸಿಕಂ ಅಥವಾ ಹಸಿ ಬಟಾಣಿ ಇಲ್ಲದೆಯೂ ಈ ಪಲ್ಯ ತಯಾರಿಸಬಹುದು.
ತಯಾರಿಸಲು ಬೇಕಾಗುವ ಸಮಯ: 25 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ದೊಡ್ಡ ಆಲೂಗಡ್ಡೆ - 2
- ಸ್ನೋ ಪೀಸ್ - 8ರಿಂದ 10
- ಹೆಚ್ಚಿದ ಕ್ಯಾಪ್ಸಿಕಂ - 3/4 ಕಪ್
- ಹಸಿ ಬಟಾಣಿ - 3/4 ಕಪ್ (ನಾನು ಫ್ರೋಜನ್ ಪೀಸ್ ಬಳಸಿದ್ದೇನೆ)
- ಕಸೂರಿ ಮೇಥಿ - 1 ಟೇಬಲ್ ಚಮಚ
- ಕೊತ್ತಂಬರಿ ಜೀರಿಗೆ ಪುಡಿ - 1 ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಪೆಪ್ಪರ್ (ಕಾಳುಮೆಣಸು) ಪುಡಿ - 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
- ಒಗ್ಗರಣೆಗೆ:
- ಎಣ್ಣೆ - 2 ಟೇಬಲ್ ಚಮಚ
- ಮೆಂತ್ಯ - 1/4 ಟೀ ಚಮಚ
ತಯಾರಿಸುವ ವಿಧಾನ:
- ಎಲ್ಲ ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ.
- ಕ್ಯಾಪ್ಸಿಕಂ ಮತ್ತು ಸ್ನೋ ಪೀಸ್ ನ್ನು ಮೀಡಿಯಮ್ ಅಳತೆಯ ಚೂರುಗಳಾಗಿ ಕತ್ತರಿಸಿಕೊಳ್ಳಿ.
- ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚಿಕ್ಕ , ಉದ್ದನೆಯ ಚೂರುಗಳಾಗಿ ಹೆಚ್ಚಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ 2 ಟೇಬಲ್ ಚಮಚದಷ್ಟು ಎಣ್ಣೆ ಬಿಸಿಮಾಡಿ ಮೆಂತ್ಯ ಸೇರಿಸಿ ಪರಿಮಳ ಬರುವಂತೆ ಹುರಿಯಿರಿ.
- ನಂತರ ಇದಕ್ಕೆ ಹೆಚ್ಚಿದ ಆಲೂಗಡ್ಡೆ ಸೇರಿಸಿ ಕೈಯಾಡಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ಆಲೂಗಡ್ಡೆ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ.
- ಆಲೂಗಡ್ಡೆ ಚೂರುಗಳು ಅರ್ಧ ಬೆಂದಾಗ ಇದಕ್ಕೆ ಹೆಚ್ಚಿದ ಸ್ನೋ ಪೀಸ್, ಕ್ಯಾಪ್ಸಿಕಮ್, ಹಸಿ ಬಟಾಣಿ ಮತ್ತು ಕಸೂರಿ ಮೇಥಿ ಸೇರಿಸಿ ಮುಚ್ಚಳ ಮುಚ್ಚಿ 8 - 10 ನಿಮಿಷ ಬೇಯಿಸಿ. ಮಿಶ್ರಣವನ್ನು ಆಗಾಗ ಕೈಯಾಡಿಸುತ್ತಿರಿ.
- ಆಲೂಗಡ್ಡೆ ಚೂರುಗಳು ಮುಕ್ಕಾಲುಭಾಗ ಬೆಂದಾಗ ಇದಕ್ಕೆ ಪೆಪ್ಪರ್ ಪೌಡರ್, ಕೊತ್ತಂಬರಿ - ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಾಡಿಸಿ ಇನ್ನೂ 3 - 4 ನಿಮಿಷ ಬೇಯಿಸಿ ಉರಿ ಆಫ್ ಮಾಡಿ.
- ಈ ಪಲ್ಯ ಅನ್ನ, ಚಪಾತಿ, ಪೂರಿಯೊಡನೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.
Click here for English version.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)