ಪುದೀನಾ ಎಲೆಯ ತೊಕ್ಕು | ತೆಂಗಿನತುರಿ ಹಾಕದ ಪುದೀನಾ ಚಟ್ನಿ

ನಮ್ಮ ಮನೆಯಲ್ಲಿ ಎಲ್ಲರಿಗೂ ಊಟಕ್ಕೆ ಮೇಲೋಗರದ ಜೊತೆಗೆ ಚಟ್ನಿ, ಗೊಜ್ಜು, ತೊಕ್ಕು ಇತ್ಯಾದಿ ಅನ್ನಕ್ಕೆ ಕಳಸಿಕೊಳ್ಳುವ ಅಥವಾ ನೆಂಜಿಕೊಳ್ಳಬಹುದಾದ ಸೈಡ್ ಡಿಶ್ ಗಳು ಇಷ್ಟ. ಹೀಗಾಗಿ ಬಗೆಬಗೆಯ ಗೊಜ್ಜು, ತೊಕ್ಕು, ಉಪ್ಪಿನಕಾಯಿ ಇವೆಲ್ಲ ನಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಇರುತ್ತವೆ. ಒಮ್ಮೊಮ್ಮೆ ಅಡುಗೆ ಮಾಡಲು ಜಾಸ್ತಿ ಸಮಯ ಇಲ್ಲದಿದ್ದಾಗ ಅಥವಾ ಬೋರ್ ಆದಾಗ ಇವು ಊಟದ ರುಚಿ ಹೆಚ್ಚಿಸುತ್ತವೆ. 
ನಾವು ಕಳೆದ ವರ್ಷ ಊರಿಗೆ ಹೋದಾಗ ಪುದೀನಾ ತೊಕ್ಕು ತಯಾರಿಸುವ ವಿಧಾನವನ್ನು ಕಲಿತಿದ್ದೆ. ಈಗ ಪಾಟ್ ನಲ್ಲಿರುವ ಪುದೀನಾ ಗಿಡ ಚೆನ್ನಾಗಿ ಎಲೆ ಬಿಡುವುದೇ ತಡ, ಪುದೀನಾ ತೊಕ್ಕು ತಯಾರಿಸುವ ನೆನಪಾಗುತ್ತದೆ. ಉಪ್ಪು, ಹುಳಿ, ಖಾರದೊಂದಿಗೆ ರುಚಿಕಟ್ಟಾದ ಈ ತೊಕ್ಕು ಅನ್ನ, ದೋಸೆ, ಚಪಾತಿ ಇವೆಲ್ಲದರೊಡನೆಯೂ ಚೆನ್ನಾಗಿರುತ್ತದೆ. 


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: 20 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
  • ಪುದೀನಾ ಎಲೆಗಳು - 50 ಗ್ರಾಂ 
  • ಒಣಮೆಣಸು - 50 ಗ್ರಾಂ
  • ಸಿಪ್ಪೆ ತೆಗೆದ ಬೆಳ್ಳುಳ್ಳಿ - 50 ಗ್ರಾಂ
  • ಹುಣಸೆಹಣ್ಣು - 50 ಗ್ರಾಂ
  • ಉಪ್ಪು - ರುಚಿಗೆ ತಕ್ಕಷ್ಟು 
  • ಬೆಲ್ಲ / ಸಕ್ಕರೆ - 1/2 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ನೀರು - 1/4 ಕಪ್ (ಬೇಕಿದ್ದರೆ)
 - ಒಗ್ಗರಣೆಗೆ:
  • ಎಣ್ಣೆ - 5ರಿಂದ 6 ಟೇಬಲ್ ಚಮಚ 
  • ಸಾಸಿವೆ - 1 ಟೀ ಚಮಚ 

ತಯಾರಿಸುವ ವಿಧಾನ:
  • ಬ್ಲೆಂಡರ್ ಅಥವಾ ಮಿಕ್ಸಿ ಜಾರ್ ನಲ್ಲಿ ಪುದೀನಾ ಎಲೆಗಳು, ಒಣಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣು ಇಷ್ಟನ್ನೂ ರುಬ್ಬಿ ನುಣ್ಣಗಿನ ಪೇಸ್ಟ್ ತಯಾರಿಸಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಬೇಕಿದ್ದರೆ ಸೇರಿಸಿ, ಆದರೆ ಮಿಶ್ರಣವನ್ನು ಆದಷ್ಟೂ ಗಟ್ಟಿ ಇದ್ದರೆ ಉತ್ತಮ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿಮಾಡಿ ಸಾಸಿವೆ ಸೇರಿಸಿ. 
  • ಸಾಸಿವೆ ಸಿಡಿಯತೊಡಗಿದಾಗ ರುಬ್ಬಿದ ಪುದೀನಾ ಮಿಶ್ರಣವನ್ನು ಒಗ್ಗರಣೆ ಬಾಣಲಿಗೆ ನಿಧಾನವಾಗಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ / ಸಕ್ಕರೆ ಯನ್ನೂ ಸೇರಿಸಿ. 
  • ತೊಕ್ಕು ಮಿಶ್ರಣವನ್ನು ನೀರಿನಂಶ ಆರಿ ದಪ್ಪಗಾಗುವವರೆಗೆ ಕುದಿಸಿ. ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ. 
  • ಮಿಶ್ರಣ ಗಟ್ಟಿಯಾಗಿ ತಳ ಬಿಡತೊಡಗಿದಾಗ ಉರಿ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ. 
  • ತೊಕ್ಕು ಮಿಶ್ರಣ ಪೂರ್ತಿ ತಣ್ಣಗಾದ ನಂತರ ಇದನ್ನು ಗಾಳಿಯಾಡದ ಜಾರ್ ನಲ್ಲಿ ಹಾಕಿಡಿ. ಈ ತೊಕ್ಕು ರೂಮ್ ಟೆಂಪರೇಚರ್ ನಲ್ಲಿ 3 - 4 ದಿನ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಾದರೆ ತಿಂಗಳುಗಟ್ಟಲೆ ಇಡಬಹುದು. 
  • ಉಪ್ಪು, ಹುಳಿ, ಖಾರದೊಂದಿಗೆ ರುಚಿಕಟ್ಟಾದ ಈ ತೊಕ್ಕು ಅನ್ನ, ದೋಸೆ, ಚಪಾತಿ ಇವೆಲ್ಲದರೊಡನೆಯೂ ಚೆನ್ನಾಗಿರುತ್ತದೆ.  


ಟಿಪ್ಸ್:
  • ಹುಳಿ ಜಾಸ್ತಿ ಬೇಡ ಎಂದರೆ ಕಡಿಮೆ ಹುಣಸೆಹಣ್ಣು ಬಳಸಿ. 


ಕಾಮೆಂಟ್‌ಗಳು