ನಮ್ಮ ಮನೆಯಲ್ಲಿ ಎಲ್ಲರಿಗೂ ಪ್ರಿಯವಾದ ತರಕಾರಿಗಳಲ್ಲಿ ಬ್ರೋಕ್ಲಿ ಅಥವಾ ಬ್ರಾಕ್ಲಿಯೂ ಒಂದು. ಕೆಲವರಿಗೆ ಇದರ ವಾಸನೆ ಸಹ್ಯವಾಗುವುದಿಲ್ಲ ಎನ್ನುವುದನ್ನು ಕೇಳಿದ್ದೇನೆ ನಾನು. ಆದರೆ ನಮಗಂತೂ ಬ್ರಾಕ್ಲಿಯಿಂದ ತಯಾರಿಸುವ ಎಲ್ಲ ಬಗೆಯ ತಿನಿಸುಗಳೂ ಇಷ್ಟವಾಗುತ್ತವೆ. 
ಈಗ ಮೂರು ವರ್ಷಗಳ ಹಿಂದೆ ಊರಿನಿಂದ ನನ್ನ ಅಮ್ಮ - ಅಪ್ಪ ಬಂದಾಗ, ನಾವು ತರಕಾರಿ ತರುವಾಗ ಅವರಿಗೆ ಇಷ್ಟವಾಗುವುದೋ ಇಲ್ಲವೋ ಎಂದು ಯೋಚಿಸಿ ಯೋಚಿಸಿ ತರುತ್ತಿದ್ದೆವು. ತರಕಾರಿಗಳನ್ನು ತರಲು ಮಾರ್ಕೆಟ್ ಗೆ ಹೋದರೆ ನನ್ನಮ್ಮನ ಕಣ್ಣುಗಳು ಊರಲ್ಲಿ ಸಿಗುವ ತರಕಾರಿಗಳನ್ನೇ ಹುಡುಕುತ್ತಿದ್ದವು! ಅದು ಹೇಗೋ ಗೊತ್ತಿಲ್ಲ, ಬ್ರಾಕ್ಲಿ ಅವರಿಗೆ ಬಹಳವೇ ಇಷ್ಟವಾಗಿಬಿಟ್ಟಿತ್ತು. ಬ್ರಾಕ್ಲಿ ಪಲ್ಯವನ್ನು ಅವರೇ ವಾರದಲ್ಲಿ 2 - 3 ಬಾರಿ ತಯಾರಿಸುತ್ತಿದ್ದರು.  
ನಾನು ಈಗ ಹೇಳ ಹೊರಟಿರುವುದು ಬ್ರಾಕ್ಲಿ ಬಳಸಿ ತಯಾರಿಸುವ ಕಟ್ಲೆಟ್ ಬಗ್ಗೆ. ಈ ಕಟ್ಲೆಟ್ ಬೆಳಗ್ಗಿನ ಉಪಾಹಾರ, ಮಕ್ಕಳ ಲಂಚ್ ಬಾಕ್ಸ್, ಸ್ನ್ಯಾಕ್ಸ್, ಸ್ಟಾರ್ಟರ್ ಎಲ್ಲಕ್ಕೂ ಚೆನ್ನಾಗಿರುತ್ತದೆ. ಬ್ರಾಕ್ಲಿ - ಆಲೂ ಕಟ್ಲೆಟ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:  
ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 
ಬೇಕಾಗುವ ಸಾಮಗ್ರಿಗಳು:
- ಬ್ರೋಕ್ಲಿ ಚೂರುಗಳು - 2ಕಪ್ ನಷ್ಟು
 - ಆಲೂಗಡ್ಡೆ - 1 ಮೀಡಿಯಮ್ ಸೈಜಿನದು
 - ಚಾಟ್ ಮಸಾಲಾ ಪೌಡರ್ - 1 ಟೀ ಸ್ಪೂನ್
 - ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
 - ಈರುಳ್ಳಿ - 1 ಚಿಕ್ಕದು
 - ಆಮಚೂರ್ ಪೌಡರ್ / ನಿಂಬೆರಸ - 1/2 ಟೀ ಸ್ಪೂನ್
 - ಉಪ್ಪು - ರುಚಿಗೆ ತಕ್ಕಷ್ಟು
 - ಬ್ರೆಡ್ ಕ್ರಂಬ್ಸ್ - 1 ಕಪ್ ಅಥವಾ ಬೇಕಾದಷ್ಟು
 - ಎಣ್ಣೆ - ಕಟ್ಲೆಟ್ ಬೇಯಿಸಲು
 
ತಯಾರಿಸುವ ವಿಧಾನ: 
- ಆಲೂಗಡ್ಡೆಯನ್ನು ಮೆತ್ತಗೆ ಬೇಯಿಸಿಕೊಳ್ಳಿ. ನಾನು ಪ್ರೆಶರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿದ್ದೇನೆ.
 - ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
 - ಹಸಿಮೆಣಸನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ.
 - ತೊಳೆದ ಬ್ರೋಕ್ಲಿ ಪೀಸ್ ಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಉಪ್ಪು ಸೇರಿಸಿ. ಇದಕ್ಕೆ 4 ಕಪ್ ನಷ್ಟು ಬಿಸಿಬಿಸಿ ನೀರು ಸೇರಿಸಿ 5 ನಿಮಿಷ ಬಿಡಿ.
 - ನಂತರ ನೀರನ್ನು ಪೂರ್ತಿ ಸೋಸಿ ತೆಗೆದು ಬ್ರೋಕ್ಲಿ ಪೀಸ್ ಗಳನ್ನು ಒಂದು ದಪ್ಪನೆಯ ಟಿಷ್ಯು ಪೇಪರ್ ನ ಮೇಲೆ 4 - 5 ನಿಮಿಷ ಹರವಿ ನೀರು ಆರಲು ಬಿಡಿ.
 - ಬ್ರೋಕ್ಲಿ ಪೀಸ್ ಗಳನ್ನು ಮಿಕ್ಸಿ / ಬ್ಲೆಂಡರ್ ನಲ್ಲಿ ಒಮ್ಮೆ ತಿರುವಿ ತರಿತರಿ ಆಗುವಂತೆ ಮಾಡಿಕೊಳ್ಳಿ.
 - ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಮ್ಯಾಶ್ ಮಾಡಿಕೊಳ್ಳಿ.
 - ನಂತರ ಮಿಕ್ಸಿಂಗ್ ಬೌಲ್ ನಲ್ಲಿ ಬ್ರೋಕ್ಲಿ, ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನ ಪೇಸ್ಟ್, ಚಾಟ್ ಮಸಾಲಾ ಪೌಡರ್, ಆಮಚೂರ್ ಪೌಡರ್ / ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ಇಷ್ಟನ್ನೂ ಸೇರಿಸಿ ಮಿಕ್ಸ್ ಮಾಡಿ.
 - ಇದಕ್ಕೆ 2 - 3 ಟೇಬಲ್ ಚಮಚದಷ್ಟು ಬ್ರೆಡ್ ಕ್ರಂಬ್ಸ್ ಸೇರಿಸಿ ಮಿಕ್ಸ್ ಮಾಡಿ.
 - ತಯಾರಾದ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿ ಅಂಗೈಯಲ್ಲಿ ಅಗಲವಾಗಿ ತಟ್ಟಿ.
 - ಎಲ್ಲ ಉಂಡೆಗಳನ್ನೂ ಹೀಗೆಯೇ ಮಾಡಿಕೊಂಡು ಬ್ರೆಡ್ ಕ್ರಂಬ್ಸ್ ನಲ್ಲಿ ಒಮ್ಮೆ ಹೊರಳಿಸಿ, ಕಾದ ತವಾದ ಮೇಲೆ ಎಣ್ಣೆ ಹಾಕಿ ಎರಡೂ ಕಡೆ ಹೊಂಬಣ್ಣಕ್ಕೆ ಬೇಯಿಸಿ(ಶಾಲೋ ಫ್ರೈ).
 - ಬಿಸಿ ಬಿಸಿ ಕಟ್ಲೆಟ್ ನ್ನು ಟೊಮ್ಯಾಟೋ ಸಾಸ್ ಅಥವಾ ಚಟ್ನಿಯೊಡನೆ ಸರ್ವ್ ಮಾಡಿ.
 


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)