ಹವ್ಯಕ ಸ್ಟೈಲ್ ಬಾಳೆಕಾಯಿ ಪಲ್ಯ

ಬಾಳೆಕಾಯಿ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ತರಕಾರಿಗಳಲ್ಲೊಂದು. ನಮಗಿಲ್ಲಿ ಯಾವಾಗಲಾದರೊಮ್ಮೆ ಫ್ರೆಶ್ ಬಾಳೆಕಾಯಿ ಇಂಡಿಯನ್ ಸ್ಟೋರ್ ನಲ್ಲಿ ಸಿಗುತ್ತದೆ. ಕಳೆದ ಬಾರಿ ಗ್ರಾಸರಿ ಸ್ಟೋರ್ ಗೆ ಹೋದಾಗ ಬಹಳ ದಿನಗಳ ನಂತರ ಬಾಳೆಕಾಯಿ ಸಿಕ್ಕಿತ್ತು. ನನ್ನ ಮಗಳು ಬಾಳೆಕಾಯಿ ನೋಡಿದವಳೇ ಬಾಳೆಕಾಯಿ ಚಿಪ್ಸ್ ಮಾಡು ಎಂದು ದುಂಬಾಲು ಬಿದ್ದಳು. ಚಿಪ್ಸ್ ತಯಾರಿಸಿ ಉಳಿದ ಬಾಳೆಕಾಯಿಯಲ್ಲಿ ಪಲ್ಯ ತಯಾರಿಸಿದ್ದಾಯಿತು. ನಮ್ಮ ಮನೆಯಲ್ಲಿ ಬಾಳೆಕಾಯಿ ಪಲ್ಯಕ್ಕೆ ಬೇಡಿಕೆ ಹೆಚ್ಚು. ರುಚಿಯಾದ ಹಾಗೂ ಸುಲಭದಲ್ಲಿ ತಯಾರಿಸಬಹುದಾದ ಈ ಹವ್ಯಕ ಸ್ಟೈಲ್ ಬಾಳೆಕಾಯಿ ಪಲ್ಯವನ್ನು ನೀವೂ ಟ್ರೈ ಮಾಡಿ. 



ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 
ಸರ್ವಿಂಗ್ಸ್: 4 - 5 ಜನರಿಗೆ ಆಗುತ್ತದೆ 


ಬೇಕಾಗುವ ಸಾಮಗ್ರಿಗಳು:

  • ಮೀಡಿಯಂ ಸೈಜಿನ ಬಾಳೆಕಾಯಿ - 3
  • ತೆಂಗಿನತುರಿ - 3 ಟೇಬಲ್ ಚಮಚ 
  • ಹಸಿಮೆಣಸು - 1 (ಖಾರಕ್ಕೆ ತಕ್ಕಷ್ಟು)
  • ಉಪ್ಪು - ರುಚಿಗೆ ತಕ್ಕಷ್ಟು 
  • ಸಕ್ಕರೆ - ದೊಡ್ಡ ಚಿಟಿಕೆಯಷ್ಟು  
  • ನಿಂಬೆರಸ - 2 ಟೇಬಲ್ ಚಮಚ ಅಥವಾ ರುಚಿಗೆ ತಕ್ಕಷ್ಟು 
  • ಕರಿಬೇವು - ಒಂದು ಎಸಳು
  • ಒಣಮೆಣಸು - 1 ಚಿಕ್ಕ ಚೂರು 
  • ಉದ್ದಿನಬೇಳೆ - 1 ಟೀ ಚಮಚ 
  • ಸಾಸಿವೆ - 3/4 ಟೀ ಚಮಚ 
  • ಇಂಗು - ದೊಡ್ಡ ಚಿಟಿಕೆ 
  • ಅರಿಶಿನ - 3/4 ಟೀ ಚಮಚ 
  • ಎಣ್ಣೆ - 2 1/2 ಟೇಬಲ್ ಚಮಚ (ಕೊಬ್ಬರಿ ಎಣ್ಣೆ ಆದರೆ ಉತ್ತಮ)
  • ನೀರು - 4 ರಿಂದ 5 ಕಪ್ (ಬಾಳೆಕಾಯಿ ಬೇಯಿಸಲು) 


ತಯಾರಿಸುವ ವಿಧಾನ: 

  • ಒಂದು ಪಾತ್ರೆಯಲ್ಲಿ ಬಾಳೆಕಾಯಿ ಮುಳುಗುವಷ್ಟು ನೀರು, ಒಂದೆರಡು ಹನಿಯಷ್ಟು ಎಣ್ಣೆ ಹಾಕಿ ಬಿಸಿಗಿಡಿ. ನೀರು ಬಿಸಿಯಾದಾಗ ಇದಕ್ಕೆ ಬಾಳೆಕಾಯಿಗಳನ್ನು  ಇಡಿಯಾಗಿ ಹಾಕಿ 8 - 10 ನಿಮಿಷ ಅಥವಾ ಮುಕ್ಕಾಲುಭಾಗ ಬೇಯುವಷ್ಟು ಬೇಯಿಸಿ. ಬೆಂದಾಗ ಬಾಳೆಕಾಯಿಯ ಸಿಪ್ಪೆ ಕಂದು ಬಣ್ಣಕ್ಕೆ ತಿರುಗಿ, ಬಾಳೆಕಾಯಿ ಸ್ವಲ್ಪ ಮೆತ್ತಗಾಗಿರುತ್ತದೆ. 
  • ಬೆಂದ ಬಾಳೆಕಾಯಿಗಳನ್ನು ನೀರಿನಿಂದ ಹೊರತೆಗೆದು ತಣ್ಣಗಾಗಲು ಬಿಡಿ. 
  • ಬಾಳೆಕಾಯಿ ಸ್ವಲ್ಪ ತಣ್ಣಗಾದ ನಂತರ ಅದರ ಸಿಪ್ಪೆ ತೆಗೆಯಿರಿ. ಸಿಪ್ಪೆ ತೆಗೆದ ಬಾಳೆಕಾಯನ್ನು ಗ್ರೇಟರ್ (ಮಾಂದ್ರಿ) ಬಳಸಿ ತುರಿದುಕೊಳ್ಳಿ. 
  • ತುರಿದ ಬಾಳೆಕಾಯಿಗೆ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಡಿ. ಎರಡೂವರೆ ಟೇಬಲ್ ಚಮಚದಷ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಒಣಮೆಣಸಿನ ಚೂರು, ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಕೈಯಾಡಿಸಿ. ಸಾಸಿವೆ ಸಿಡಿಯತೊಡಗಿದಾಗ ಇದಕ್ಕೆ ಅರಿಶಿನ, ಸೀಳಿದ ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಒಮ್ಮೆ ಕೈಯಾಡಿಸಿ. 
  • ತುರಿದ ಬಾಳೆಕಾಯಿಯನ್ನು ಒಗ್ಗರಣೆಗೆ ಸೇರಿಸಿ ಕೈಯಾಡಿಸಿ. ಬಾಣಲೆಗೆ ಮುಚ್ಚಳವನ್ನು ಅರೆಬರೆ ಮುಚ್ಚಿ ಪಲ್ಯವನ್ನು ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ. ಬಿಸಿಮಾಡುವಾಗ ಪಲ್ಯವನ್ನು ಒಂದೆರಡು ಬಾರಿ ಕೈಯಾಡಿಸಲು ಮರೆಯಬೇಡಿ. 


ಟಿಪ್ಸ್:

  • ಬಾಳೆಕಾಯಿ ಜಾಸ್ತಿ ಬೆಂದುಬಿಟ್ಟರೆ ತಕ್ಷಣ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದರಿಂದ ಬಾಳೆಕಾಯಿ ಇನ್ನೂ ಮೆತ್ತಗಾಗುವುದು ತಪ್ಪುತ್ತದೆ.    
  • ನಿಂಬೆರಸದ ಬದಲು ಆಮಚೂರ್ ಪೌಡರ್ (ಹುಳಿಪುಡಿ) ಬಳಸಬಹುದು. 


Click here for English version

ಕಾಮೆಂಟ್‌ಗಳು