ಝುಕಿನಿ - ಅಕ್ಕಿ ರೊಟ್ಟಿ । ಝುಕಿನಿ ವಡಪೆ

Click here for English version. 

ಝುಕಿನಿ - ಇಟಲಿ ಮೂಲದ ಈ ತರಕಾರಿ ನೋಡುವುದಕ್ಕೆ ಸವತೆ ಕಾಯಿಯಂತಿದ್ದು, ರುಚಿಯಲ್ಲಿ ಸೋರೆಕಾಯನ್ನು ಹೋಲುತ್ತದೆ. ಈ ತರಕಾರಿ ಯಾವುದೇ ವಿಶೇಷ ವಾಸನೆ ಹೊಂದಿಲ್ಲ ಹಾಗೂ ಅಡುಗೆ ಪದಾರ್ಥಗಳಲ್ಲಿ ಇತರ ಅನೇಕ ಬಗೆಯ ತರಕಾರಿಗಳೊಡನೆ ಚೆನ್ನಾಗಿ ಹೊಂದಿಕೆಯಾಗುತ್ತದೆ. 

ಆಸ್ಟ್ರೇಲಿಯಾ ಗೆ ಬಂದ ಹೊಸತರಲ್ಲಿ ಒಮ್ಮೆ ನಮ್ಮೆಜಮಾನರು ಫಾರ್ಮರ್ಸ್ ಮಾರ್ಕೆಟ್ ನಿಂದ ಸವತೆ ಕಾಯಿ ಎಂದು ಭಾವಿಸಿ ಒಂದು ದೊಡ್ಡ ಬಾಕ್ಸ್ ನಷ್ಟು ಝುಕಿನಿ ತಂದುಬಿಟ್ಟಿದ್ದರು! ಮನೆಯಲ್ಲಿ ಇರುವದೇ ಇಬ್ಬರು. ತೋಚಿದ ಅಡುಗೆ ಪದಾರ್ಥಗಳಲ್ಲೆಲ್ಲ ಝುಕಿನಿ ಬಳಸಿ, ಅಂತೂ ಇಂತೂ ಬಾಕ್ಸ್ ಖಾಲಿ ಮಾಡುವಷ್ಟರಲ್ಲಿ ಸುಸ್ತಾಗಿಬಿಟ್ಟಿದ್ದೆವು 😅. ಆದರೆ ಈಗ ಹಾಗಿಲ್ಲ, ಝುಕಿನಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಧಾರಾಳವಾಗಿ ಬಳಕೆಯಾಗುತ್ತದೆ. ವಾರದ ಗ್ರಾಸರಿ ಲಿಸ್ಟ್ ನಲ್ಲಿ ಈ ತರಕಾರಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. 

ಸವತೇಕಾಯಿ ಬಳಸಿ ಅಕ್ಕಿರೊಟ್ಟಿ ತಯಾರಿಸುವಂತೆಯೇ ಝುಕಿನಿ ಬಳಸಿಯೂ ರುಚಿಕರವಾಗಿ ಅಕ್ಕಿರೊಟ್ಟಿ ತಯಾರಿಸಬಹುದು. ಬೆಳಗಿನ ಉಪಹಾರ ಅಥವಾ ಸಂಜೆಯ ತಿಂಡಿ / ಊಟಕ್ಕೆ ಈ ರೊಟ್ಟಿ ಚೆನ್ನಾಗಿರುತ್ತದೆ. ಝುಕಿನಿ - ಅಕ್ಕಿರೊಟ್ಟಿ ಅಥವಾ ಝುಕಿನಿ ವಡಪೆ ತಯಾರಿಸುವ ವಿಧಾನ ಈ ಕೆಳಗಿನಂತಿದೆ:

 • ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
 • ಬೇಯಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
 • ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
 • ಸರ್ವಿಂಗ್ಸ್: ಈ ಅಳತೆಯಿಂದ 7 ದೊಡ್ಡ ರೊಟ್ಟಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:

 • ಝುಕಿನಿ - 1 ಮೀಡಿಯಮ್ ಸೈಜಿನದು (ಅಥವಾ ತುರಿದ ಝುಕಿನಿ 1 1/4 ಕಪ್)
 • ಈರುಳ್ಳಿ - 1 ಮೀಡಿಯಮ್ ಸೈಜಿನದು 
 • ಹಸಿಮೆಣಸು - 2 ರಿಂದ 3 (ಖಾರಕ್ಕೆ ತಕ್ಕಂತೆ - ಟಿಪ್ಸ್ ನೋಡಿ)
 • ಕ್ಯಾಪ್ಸಿಕಂ (ಡೊಳ್ಳುಮೆಣಸು) - 1 
 • ಕರಿಬೇವು - 10 ರಿಂದ 12 ಎಲೆಗಳು 
 • ಹಸಿ ಶುಂಠಿ - 1/2 ಇಂಚು 
 • ಉಪ್ಪು - ರುಚಿಗೆ ತಕ್ಕಷ್ಟು 
 • ಸಕ್ಕರೆ - 1/2 ಟೀ ಚಮಚ 
 • ಮೊಸರು - 2 ಟೇಬಲ್ ಚಮಚ 
 • ಅಕ್ಕಿಹಿಟ್ಟು - 2 1/2 ಕಪ್ ನಷ್ಟು  

ತಯಾರಿಸುವ ವಿಧಾನ:

 • ಝುಕಿನಿಯನ್ನು ಸಣ್ಣಗೆ ತುರಿದು ಒಂದು ಮಿಕ್ಸಿಂಗ್ ಪಾತ್ರೆಗೆ ಹಾಕಿಕೊಳ್ಳಿ. 
 • ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ. ನಾನು ಇಲ್ಲಿ ಈರುಳ್ಳಿ ಹೆಚ್ಚಲು (ಪುಲ್ ಚಾಪರ್) Pull chopper ಬಳಸಿದ್ದೇನೆ. 
 • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್, ಹೆಚ್ಚಿದ ಕರಿಬೇವಿನ ಎಲೆಗಳನ್ನು ಸೇರಿಸಿ. ಶುಂಠಿಯನ್ನು ಜಜ್ಜಿ ಸೇರಿಸಿ.  
 • ಹಸಿಮೆಣಸನ್ನು ಸಣ್ಣಗೆ ಹೆಚ್ಚಿ, ಸ್ವಲ್ಪ ಜಜ್ಜಿ ಅಥವಾ ಬಾಯಿಗೆ ಸಿಗದಂತೆ ಪೇಸ್ಟ್ ಮಾಡಿ ಸೇರಿಸಿ. 
 • ಹೆಚ್ಚಿದ ತರಕಾರಿ ಮಿಶ್ರಣಕ್ಕೆ ಅರ್ಧ ಟೀ ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 2 ಟೇಬಲ್ ಚಮಚದಷ್ಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಬಿಡಿ. ಹೀಗೆ ಮಾಡುವುದರಿಂದ ತರಕಾರಿಯಲ್ಲಿರುವ ನೀರು ಬಿಟ್ಟುಕೊಂಡು, ಹಿಟ್ಟನ್ನು ಕಲಸಲು ಅನುಕೂಲವಾಗುತ್ತದೆ. 
 • ತರಕಾರಿ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಹಿಟ್ಟನ್ನು ಸೇರಿಸುತ್ತ ಮಿಕ್ಸ್ ಮಾಡಿ. ಮಿಶ್ರಣ ಮೆತ್ತಗೆ, ಚಪಾತಿ ಹಿಟ್ಟಿನ ಹದಕ್ಕಿರಲಿ.  
 • ಈಗ, ನಿಂಬೆಗಾತ್ರದಷ್ಟು ಹಿಟ್ಟನ್ನು ತೆಗೆದುಕೊಂಡು ಎಣ್ಣೆ ಹಚ್ಚಿದ ಬಾಳೆಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಇಟ್ಟುಕೊಂಡು ಕೈಯಲ್ಲಿ ತಟ್ಟಿ ತೆಳ್ಳಗೆ ರೊಟ್ಟಿಯಂತೆ ಮಾಡಿ. ಬೇಕಿದ್ದರೆ ರೊಟ್ಟಿಯ ಮಧ್ಯೆ ತೂತು ಮಾಡಿ (ಟಿಪ್ಸ್ ನೋಡಿ). 
 • ತೆಳ್ಳಗೆ ತಟ್ಟಿದ ರೊಟ್ಟಿಯನ್ನು ಹದವಾಗಿ ಕಾದ ಕಾವಲಿಗೆ ವರ್ಗಾಯಿಸಿ, ಮೇಲಿನಿಂದ ಒಂದೆರಡು ಚಮಚದಷ್ಟು ಎಣ್ಣೆ / ಬೆಣ್ಣೆ ಹಾಕಿ. ಎಣ್ಣೆ ಧಾರಾಳವಾಗಿ ಬಳಸಿದಷ್ಟೂ ರುಚಿ ಹೆಚ್ಚು!
 • ಈ ರೊಟ್ಟಿಯನ್ನು ಸಣ್ಣ ಅಥವಾ ಮೀಡಿಯಮ್ ಉರಿಯಲ್ಲಿ ಎರಡೂ ಕಡೆ ಬೇಯಿಸಿ. ರೊಟ್ಟಿ ಗರಿಯಾಗಬೇಕೆಂದರೆ ಸಣ್ಣ ಉರಿಯಲ್ಲಿ ಹೆಚ್ಚು ಸಮಯ ಬೇಯಿಸಿ. 
 • ಬಿಸಿಬಿಸಿ ರೊಟ್ಟಿಯನ್ನು ಬೆಣ್ಣೆ ಅಥವಾ ಚಟ್ನಿಯೊಡನೆ ಸರ್ವ್ ಮಾಡಿ. 

ಟಿಪ್ಸ್:

 • ಹಸಿಮೆಣಸಿನ ಬದಲು ಅಚ್ಚಮೆಣಸಿನ ಪುಡಿಯನ್ನೂ ಬಳಸಬಹುದು.  
 • ಬಾಳೆಎಲೆ ಅಥವಾ ನಾನ್ ಸ್ಟಿಕ್ ಶೀಟ್ ಬಳಸುವ ಬದಲು, ರೊಟ್ಟಿ ಬೇಯಿಸುವ ಕಾವಲಿ ತಣ್ಣಗಿದ್ದಾಗಲೇ ಅದಕ್ಕೆ ಎಣ್ಣೆ ಸವರಿಕೊಂಡು ಡೈರೆಕ್ಟ್ ಆಗಿ ಕಾವಲಿಯ ಮೇಲೆಯೇ ರೊಟ್ಟಿ ತಟ್ಟಲೂಬಹುದು. 

ಕಾಮೆಂಟ್‌ಗಳು