ಸವತೆಕಾಯಿ ಹಶಿ । ಸೌತೆಕಾಯಿ ಸಾಸಿವೆ

Click here for English version

ನಮ್ಮೂರ ಕಡೆ ಹವ್ಯಕರ ಮನೆಗಳಲ್ಲಿ ಊಟಕ್ಕೆ ಅನ್ನದ ಜೊತೆ ಹಾಕಿಕೊಳ್ಳುವ ಮೇಲೋಗರಗಳಲ್ಲಿ ಹಶಿ / ಸಾಸಿವೆಯೂ ಒಂದು. ವಿವಿಧ ಬಗೆಯ ತರಕಾರಿ ಹಾಗೂ ಸೊಪ್ಪುಗಳನ್ನು ಬಳಸಿ ಈ ಮೇಲೋಗರವನ್ನು ತಯಾರಿಸಬಹುದು. ತರಕಾರಿ ಅಥವಾ ಸೊಪ್ಪಿನ ಜೊತೆಗೆ ರುಬ್ಬಿದ ತೆಂಗಿನತುರಿ ಹಾಗೂ ಮೊಸರು ಹಾಕಿ ತಯಾರಿಸುವ ಹಶಿ ಊಟಕ್ಕೆ ಬಹಳ ರುಚಿ. 

ನಾನು ಈಗ ಹೇಳ ಹೊರಟಿರುವುದು ಸವತೇಕಾಯಿ ಹಶಿಯ ಬಗ್ಗೆ. ಎಳೆಯ ಸವತೆಕಾಯಿಯನ್ನು ಸಣ್ಣಗೆ ಹೆಚ್ಚಿದರೆ ಬರುವ ಪರಿಮಳ ನನಗಂತೂ ಬಹಳ ಇಷ್ಟ. ನಾವೆಲ್ಲ ಚಿಕ್ಕವರಿದ್ದಾಗ ಶಾಲೆಗೆ ರಜಾ ಇದ್ದ ದಿನಗಳಲ್ಲಿ ಅಮ್ಮ, ಅಜ್ಜಿ, ದೊಡ್ಡಮ್ಮಂದಿರು ಈಳಿಗೆ ಮಣೆಯಲ್ಲಿ ಸವತೆಕಾಯಿ ಹೆಚ್ಚುವಾಗ ಅವರ ಎದುರು ಕೂತು, ಹೆಚ್ಚುವುದು ಮುಗಿಯುವುದನ್ನೇ ಕಾಯುತ್ತಿದ್ದೆವು. ಕೊನೆಯಲ್ಲಿ ಉಳಿಯುವ ಸವತೆಕಾಯಿಯನ್ನು ಅವರು ಮಕ್ಕಳಿಗೆ ಕಟ್ ಮಾಡಿಕೊಟ್ಟರೆ ನಮಗೆಲ್ಲ ಖುಷಿಯೋ ಖುಷಿ! 

ಸವತೆಕಾಯಿ ಹಶಿ ತಯಾರಿಸುವ ವಿಧಾನ ಈ ಕೆಳಗಿನಂತಿದೆ:

 • ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
 • ಸರ್ವಿಂಗ್ಸ್: ಈ ಅಳತೆಯಿಂದ 4ರಿಂದ 5 ಜನರಿಗೆ ಆಗುವಷ್ಟು ಹಶಿ ತಯಾರಿಸಬಹುದು 
 • ಡಿಫಿಕಲ್ಟಿ ಲೆವೆಲ್: ಮೀಡಿಯಂ 


ಬೇಕಾಗುವ ಸಾಮಗ್ರಿಗಳು:

 • ಸಣ್ಣಗೆ ಹೆಚ್ಚಿದ ಎಳೆ ಸೌತೆಕಾಯಿ - 1 ಕಪ್ ನಷ್ಟು  (ಟಿಪ್ಸ್ ನೋಡಿ)
 • ತೆಂಗಿನತುರಿ - 1ರಿಂದ 1 1/4 ಕಪ್ 
 • ಮೊಸರು - 1 1/2 ಕಪ್ 
 • ಉಪ್ಪು - ರುಚಿಗೆ ತಕ್ಕಷ್ಟು 
 • ಸಕ್ಕರೆ - 1/2 ಟೀ ಚಮಚ 
 • ನೀರು - 1 ಕಪ್ ನಷ್ಟು (ಅಂದಾಜು) 

ಒಗ್ಗರಣೆಗೆ: ಎಣ್ಣೆ - 2 1/2 ಟೀ ಚಮಚ, ಒಣಮೆಣಸು - 2 ಚಿಕ್ಕ ಚೂರುಗಳು, ಉದ್ದಿನಬೇಳೆ - 1 ಟೀ ಚಮಚ, ಎಳ್ಳು - 1 ಟೀ ಚಮಚ, ಸಾಸಿವೆ - 1 ಟೀ ಚಮಚ, ಇಂಗು - ಚಿಟಿಕೆ, ಹಸಿಮೆಣಸು - 1 (ಖಾರಕ್ಕೆ ತಕ್ಕಷ್ಟು)


ತಯಾರಿಸುವ ವಿಧಾನ:

 • ತೆಂಗಿನತುರಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಅಗತ್ಯವಿರುವಷ್ಟು ನೀರು ಸೇರಿಸಿ - ಮಿಶ್ರಣ ಚಟ್ನಿಯಂತೆ ದಪ್ಪ ಪೇಸ್ಟ್ ನ ಹದಕ್ಕಿರಲಿ. ಇದನ್ನು ಒಂದು ಬೌಲ್ ನಲ್ಲಿ ಹಾಕಿಟ್ಟುಕೊಳ್ಳಿ. 
 • ಹಸಿಮೆಣಸನ್ನು ಕತ್ತರಿಸಿ 2 - 3 ಚೂರುಗಳಾಗಿ ಮಾಡಿಕೊಳ್ಳಿ. 
 • ಒಗ್ಗರಣೆಗೆ ಒಂದು ದಪ್ಪ ತಳದ ಬಾಣಲೆಯನ್ನು ಬಿಸಿಗಿಡಿ. ಇದಕ್ಕೆ ಎರಡೂವರೆ ಟೀ ಚಮಚದಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಇದಕ್ಕೆ ಒಣಮೆಣಸಿನ ಚೂರುಗಳು, ಉದ್ದಿನಬೇಳೆ ಹಾಕಿ ಕೈಯಾಡಿಸಿ. ನಂತರ ಎಳ್ಳು, ಸಾಸಿವೆ, ಚಿಟಿಕೆ ಇಂಗು ಸೇರಿಸಿ. ಸಾಸಿವೆ ಚಟಪಟ ಎಂದಾಗ ಹಸಿಮೆಣಸಿನ ಚೂರುಗಳನ್ನು ಸೇರಿಸಿ 1 - 2 ನಿಮಿಷ ಕೈಯಾಡಿಸಿ ಉರಿ ಆಫ್ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಸವತೆಯನ್ನು ಸೇರಿಸಿ ಒಮ್ಮೆ ಕೈಯಾಡಿಸಿ ತೆಂಗಿನತುರಿ ಪೇಸ್ಟ್ ನೊಡನೆ ಮಿಕ್ಸ್ ಮಾಡಿ. 
 • ಹಶಿ ಮಿಶ್ರಣಕ್ಕೆ ಒಂದೂವರೆ ಕಪ್ ನಷ್ಟು ಮೊಸರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚದಷ್ಟು ಸಕ್ಕರೆ ಸೇರಿಸಿ. ಮೆಣಸಿನ ಚೂರುಗಳನ್ನು ಕೈಬೆರಳು ಅಥವಾ ಸೌಟಿನ ಸಹಾಯದಿಂದ ಕ್ರಶ್ ಮಾಡಿ. 
 • ಹಶಿ ಮಿಶ್ರಣವನ್ನು ಒಮ್ಮೆ ಮಿಕ್ಸ್ ಮಾಡಿ ಉಪ್ಪು ಬೇಕಿದ್ದರೆ ಸೇರಿಸಿ. 
 • ರುಚಿಯಾದ ಸೌತೆಕಾಯಿ ಹಶಿಯನ್ನು ಅನ್ನದೊಡನೆ ಸರ್ವ್ ಮಾಡಿ. ಟಿಪ್ಸ್: 

 • ಸವತೇಕಾಯಿ ತುಂಬಾ ಎಳಸಾಗಿದ್ದರೆ ಹೆಚ್ಚುವಾಗ ಸಿಪ್ಪೆ ತೆಗೆಯಬೇಕಿಲ್ಲ. ಸ್ವಲ್ಪ ಬೆಳೆದದ್ದಾದರೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. 
 • ಬೀಜ ಬಲಿತ ಸವತೆಕಾಯಿ ಈ ಮೇಲೋಗರಕ್ಕೆ ಉತ್ತಮವಲ್ಲ.  
 • ನಿಮ್ಮ ಬಳಿ ಪುಲ್ ಚಾಪರ್ (Pull Chopper) ಇದ್ದರೆ ಅದನ್ನು ಬಳಸಿ ಸವತೆಕಾಯಿ ಹೆಚ್ಚಿಕೊಳ್ಳಬಹುದು. 
 • ಸವತೆಕಾಯಿ ಒಮ್ಮೊಮ್ಮೆ ಕಹಿ ಬರುವುದರಿಂದ ಹೆಚ್ಚುವ ಮೊದಲು ರುಚಿ ನೋಡಿಕೊಳ್ಳಿ. 
 • ಒಗ್ಗರಣೆಗೆ ಕೊಬ್ಬರಿ ಎಣ್ಣೆ ಬಳಸಿದರೆ ರುಚಿ ಹೆಚ್ಚು. 

ಕಾಮೆಂಟ್‌ಗಳು