Click here for English version
ಈಗ ಬೇಸಿಗೆ ಕಾಲವಾದ್ದರಿಂದ ಮನೆಯ ಹಿತ್ತಿಲಲ್ಲಿ ಬೆಳೆದ ತರಕಾರಿಗಳೇ ನಮ್ಮ ದಿನನಿತ್ಯದ ಅಡುಗೆಗೆ ಉಪಯೋಗವಾಗುತ್ತವೆ. ಹೆಚ್ಚು ವಿಧದ ತರಕಾರಿಗಳಿರುವಾಗ ಯಾವ ತರಕಾರಿಯಿಂದ ಯಾವ ಮೇಲೋಗರ ತಯಾರಿಸಬೇಕೆಂಬುದೇ ದೊಡ್ಡ ಸಮಸ್ಯೆಯಾಗಿಬಿಡುತ್ತದೆ! ಮನೆಯಲ್ಲಿ ಬೆಳೆದ ತರಕಾರಿಗಳನ್ನು ನಾವೂ ಬಳಸಿ, ಪರಿಚಯದವರಿಗೂ ಕೊಟ್ಟು, ಕೆಲವನ್ನು ಚಳಿಗಾಲಕ್ಕೆಂದು ಫ್ರೀಜರ್ ನಲ್ಲಿ ಸಂರಕ್ಷಿಸಿ ಇಡುತ್ತ ಬೇಸಿಗೆ ಹಿತ್ತಿಲಿನ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದೇವೆ ಎಂದರೆ ತಪ್ಪಿಲ್ಲ.
ಈ ವರ್ಷದ ನಾವು ಬಿತ್ತಿದ ಕೆಲವು ಮೂಲಂಗಿ ಗಿಡಕ್ಕೆ ಗಡ್ಡೆ ಬಿಡುವ ಬದಲು, ಗಿಡ ದೊಡ್ಡದಾಗಿ ಬೆಳೆದು ಗಿಡದ ತುಂಬೆಲ್ಲ ಮೂಲಂಗಿ ಬೀನ್ಸ್ ಬಿಟ್ಟಿದ್ದವು. ಈ ಬೀನ್ಸ್ ನ್ನು ಅಡುಗೆಗೆ ಬಳಸಬಹುದೆಂದು ಪರಿಚಯದವರೊಬ್ಬರು ಹೇಳಿದಾಗ ನಾವೂ ಟ್ರೈ ಮಾಡೋಣವೆಂದು ಮೂಲಂಗಿ ಬೀನ್ಸ್ ನಿಂದ ಎರಡ್ಮೂರು ಬಗೆಯ ಪಲ್ಯಗಳನ್ನು ತಯಾರಿಸಿದೆವು. ನಮಗೆ ಇಷ್ಟವಾದ ಮೂಲಂಗಿ ಬೀನ್ಸ್ ಪಲ್ಯದ ರೆಸಿಪಿಯನ್ನು ನಿಮ್ಮೊಡನೆ ಇಲ್ಲಿ ಶೇರ್ ಮಾಡುತ್ತಿದ್ದೇನೆ:
- ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
- ಡಿಫಿಕಲ್ಟಿ ಲೆವೆಲ್: ಮೀಡಿಯಂ
- ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ಮೂಲಂಗಿ ಬೀನ್ಸ್ - 3 ಕಪ್ ನಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ - 1 ಟೀ ಚಮಚ
- ಆಮ್ ಚೂರ್ ಪೌಡರ್ - 3/4 ಟೀ ಚಮಚ
- ಒಗ್ಗರಣೆಗೆ: ಎಣ್ಣೆ - 3 ಟೇಬಲ್ ಚಮಚ, ಉದ್ದಿನಬೇಳೆ - 1 ಟೀ ಚಮಚ, ಸಾಸಿವೆ - 1 ಟೀ ಚಮಚ, ಅರಿಶಿನ - ದೊಡ್ಡ ಚಿಟಿಕೆ
- ಮಸಾಲಾ ಪುಡಿಗೆ:
- ಎಣ್ಣೆ - 2 ಟೀ ಚಮಚ
- ಚಕ್ಕೆ - 1 ಚಿಕ್ಕ ಚೂರು
- ಲವಂಗ - 1
- ಒಣಮೆಣಸು - 3
- ಕಡ್ಲೆಬೇಳೆ: 3 ಟೇಬಲ್ ಚಮಚ
- ಉದ್ದಿನಬೇಳೆ - 1 ಟೀ ಚಮಚ
- ಮೆಂತ್ಯ - 1/4 ಟೀ ಚಮಚ
- ಕೊತ್ತಂಬರಿ ಬೀಜ - 1 1/2 ಟೀ ಚಮಚ
- ಜೀರಿಗೆ - 1/2 ಟೀ ಚಮಚ
- ಸಾಸಿವೆ - 1/2 ಟೀ ಚಮಚ
- ಇಂಗು - ಚಿಟಿಕೆ
- ಅರಿಶಿನ - 1/4 ಟೀ ಚಮಚ
- ಒಣ ಕೊಬ್ಬರಿ ತುರಿ - 3 ರಿಂದ 4 ಟೇಬಲ್ ಚಮಚ
ತಯಾರಿಸುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ 2 ಟೀ ಚಮಚದಷ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಇದಕ್ಕೆ ಚಕ್ಕೆ, ಕಡ್ಲೆಬೇಳೆ, ಒಣಮೆಣಸು ಸೇರಿಸಿ ಮೀಡಿಯಮ್ ಉರಿಯಲ್ಲಿ 1 - 2 ನಿಮಿಷ ಕೈಯಾಡಿಸಿ. ನಂತರ ಇದಕ್ಕೆ ಉದ್ದಿನಬೇಳೆ, ಮೆಂತ್ಯ, ಲವಂಗ ಸೇರಿಸಿ ಅರ್ಧ ನಿಮಿಷ ಕೈಯಾಡಿಸಿ. ನಂತರ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ಚಿಟಿಕೆ ಇಂಗು ಸೇರಿಸಿ, ಸಾಸಿವೆ ಚಟಪಟ ಎನ್ನುವವರೆಗೆ ಹುರಿಯಿರಿ. ಕೊನೆಯಲ್ಲಿ 1/4 ಟೀ ಚಮಚ ಅರಿಶಿನ ಸೇರಿಸಿ ಉರಿ ಆಫ್ ಮಾಡಿ.
ಹುರಿದ ಮಸಾಲೆ ಮಿಶ್ರಣವನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ತೀರಾ ನುಣ್ಣಗೆ ಪುಡಿ ಮಾಡುವ ಬದಲು ರವೆಯಷ್ಟು ತರಿಯಾಗಿ ಮಾಡಿಕೊಂಡರೆ ಉತ್ತಮ. ಕೊನೆಯಲ್ಲಿ ಇದಕ್ಕೆ ಒಣ ಕೊಬ್ಬರಿ ತುರಿಯನ್ನು ಸೇರಿಸಿ ತರಿಯಾಗಿ ಪುಡಿಮಾಡಿಕೊಳ್ಳಿ.
ದಪ್ಪ ತಳದ ಬಾಣಲೆಯಲ್ಲಿ ಪುನಃ ಒಗ್ಗರಣೆಗಿಟ್ಟು 3 ಟೇಬಲ್ ಚಮಚದಷ್ಟು ಎಣ್ಣೆ ಬಿಸಿಮಾಡಿಕೊಳ್ಳಿ. ಇದಕ್ಕೆ ಉದ್ದಿನಬೇಳೆ, ಸಾಸಿವೆ ಸೇರಿಸಿ ಸಾಸಿವೆ ಚಟಪಟ ಎಂದ ನಂತರ ಚಿಟಿಕೆ ಅರಿಶಿನ, ಮೂಲಂಗಿ ಬೀನ್ಸ್ ಚೂರುಗಳನ್ನು ಸೇರಿಸಿ ಎರಡು ನಿಮಿಷ ಕೈಯಾಡಿಸಿ. ನಂತರ ಬಾಣಲೆಗೆ ಮುಚ್ಚಳ ಮುಚ್ಚಿ ಮೀಡಿಯಮ್ ಉರಿಯಲ್ಲಿ ಬೇಯಿಸಿ.
ಪಲ್ಯದ ಮಿಶ್ರಣ ಅರ್ಧ ಬೆಂದಾಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1 ಟೀ ಚಮಚ ಸಕ್ಕರೆ ಹಾಗೂ ಮುಕ್ಕಾಲು ಟೀ ಚಮಚದಷ್ಟು ಆಮಚೂರ್ ಪುಡಿ ಸೇರಿಸಿ ಕೈಯಾಡಿಸಿ, ಪುನಃ ಮುಚ್ಚಳ ಮುಚ್ಚಿ ಬೇಯಿಸಿ. ಮಿಶ್ರಣವನ್ನು ಆಗಾಗ ಕೈಯಾಡಿಸುತ್ತಿರಿ. ಬೀನ್ಸ್ ನಲ್ಲಿರುವ ನೀರಿನಂಶವೇ ಸಾಕಾಗುವುದರಿಂದ ಬೇಯಿಸಲು ನೀರು ಸೇರಿಸಬೇಕಿಲ್ಲ.
ಸಾಮಾನ್ಯವಾಗಿ 12 - 15 ನಿಮಿಷಕ್ಕೆ ಪಲ್ಯದ ಮಿಶ್ರಣ ಬೆಂದಿರುತ್ತದೆ. ಮಿಶ್ರಣ ಬೆಂದ ನಂತರ ಇದಕ್ಕೆ ಮಸಾಲೆ ಪುಡಿ ಸೇರಿಸಿ 2 - 3 ನಿಮಿಷ ಬಿಸಿಮಾಡಿ ನಂತರ ಉರಿ ಆಫ್ ಮಾಡಿ.
ರುಚಿಯಾದ ಪಲ್ಯವನ್ನು ಅನ್ನ ಅಥವಾ ಚಪಾತಿಯೊಡನೆ ಸವಿಯಿರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)