ಬಸಳೆ ಸೊಪ್ಪಿನ ಕರಕಲಿ / Malabar Spinach Curry (Karakali)

Click here for English version.

ಇದೊಂದು ಹವ್ಯಕರ ಸಾಂಪ್ರದಾಯಿಕ ಅಡುಗೆ. ಕರಕಲಿ ಎಂದರೆ ಒಂದು ಬಗೆಯ ಗೊಜ್ಜು. ಅನ್ನದೊಡನೆ ಕಲಸಿಕೊಳ್ಳಲು, ಅದರಲ್ಲೂ ಖಾರ ಪ್ರಿಯರಿಗೆ ಬಹಳ ಇಷ್ಟವಾಗುತ್ತದೆ. ಮಳೆಗಾಲದ ದಿನಗಳಲ್ಲಿ ಇಂತಹ ಅಡಿಗೆ ಪದಾರ್ಥಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ.
ಹೇಳಲು ಮರೆತೆ, ಈ ಬಸಳೆ ಸೊಪ್ಪು ನಮ್ಮ ಬಾಲ್ಕನಿಯಲ್ಲೇ ಬೆಳೆದದ್ದು.. :) ವಿಟಾಮಿನ್ 'ಎ' ಮತ್ತು 'ಸಿ'ಗಳ ಆಗರವಾಗಿರುವ ಈ ಸೊಪ್ಪು ಆರೋಗ್ಯಕ್ಕೆ ತುಂಬ ಒಳ್ಳೆಯದು. ಬಸಳೆ ಸೊಪ್ಪಿನ ಸಾಂಬಾರ್ ಕೂಡ ಬಹಳ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 45 - 50 ನಿಮಿಷಗಳು 

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 1 ಕಟ್ಟು 
ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
ನೀರು - 1 / 2 ಲೋಟ
ಒಗ್ಗರಣೆಗೆ: ಎಣ್ಣೆ - 2 ಚಮಚ, ಉದ್ದಿನಬೇಳೆ - 1 / 2 ಚಮಚ, ಸಾಸಿವೆ - 1 / 4 ಚಮಚ, ಇಂಗು, ಚಿಟಿಕೆ ಅರಿಶಿನ 
ಉಪ್ಪು - ರುಚಿಗೆ ತಕ್ಕಷ್ಟು 
ಆಮ್ ಚೂರ್ ಪೌಡರ್ - 1 / 2 ಚಮಚ
ಜಜ್ಜಿದ ಬೆಳ್ಳುಳ್ಳಿ - 1 ಚಮಚ

ಮಾಡುವ ವಿಧಾನ:
ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು, ಸಣ್ಣಗೆ ಹೆಚ್ಚಿಕೊಳ್ಳಿ.


ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು, ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಂಡು, ಸಣ್ಣಗೆ ಹೆಚ್ಚಿದ ಬಸಳೆ ಸೊಪ್ಪನ್ನು ಸೇರಿಸಿ.
ಇದಕ್ಕೆ ಅರ್ಧ ಲೋಟದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್ ಸೇರಿಸಿ ಒಂದು ಪ್ಲೇಟ್ ಮುಚ್ಚಿ ಬೇಯಿಸಿ.
ಆಗಾಗ್ಗೆ ಮುಚ್ಚಳ ತೆರೆದು ಕೈಯಾಡಿಸುತ್ತಿರಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ.
ಸುಮಾರು 25 - 30 ನಿಮಿಷ ಬೇಯಿಸುವಷ್ಟರಲ್ಲಿ ಸೊಪ್ಪು ಬೆಂದು ಚೆನ್ನಾಗಿ ಕರಗಿರುತ್ತದೆ. ಕರಗಿಲ್ಲವಾದರೆ ಮಿಶ್ರಣವನ್ನು ಮಿಕ್ಸಿಯಲ್ಲಿ ಒಮ್ಮೆ ರುಬ್ಬಿಕೊಳ್ಳಿ.
ಕೊನೆಯಲ್ಲಿ ಇದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಮಾಡಿ. ಬಿಸಿ ಅನ್ನದೊಡನೆ ಹಾಕಿಕೊಂಡು ಊಟ ಮಾಡಿ.
ಈ ಕರಕಲಿಯನ್ನು 2 ದಿನ ಇಟ್ಟುಕೊಂಡು ಬಳಸಬಹುದು. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)