ಗೆಣಸಿನ ಚಿಪ್ಸ್ / Sweet Potato Chips

Click here for English version.
 
ನಮ್ಮ ಮನೆಯಲ್ಲಿ ಗೆಣಸನ್ನು ತರುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ತಂದರೂ ಅದನ್ನು ಅಡಿಗೆಗೆ ಬಳಸುವುದಕ್ಕಿಂತ ಹೆಚ್ಚಾಗಿ ಹಾಗೇ ಬೇಯಿಸಿಕೊಂಡು ತಿನ್ನುವುದೇ ಜಾಸ್ತಿ. ಗೆಣಸನ್ನು 2 - 3 ಪೀಸ್ ಗಳಾಗಿ ಕಟ್ ಮಾಡಿಕೊಂಡು ಕುಕ್ಕರ್ ನಲ್ಲಿ ನೀರು, ಒಂದೆರಡು ಚಮಚ ಸಕ್ಕರೆ ಹಾಕಿ ಬೇಯಿಸಿದರೆ ಮೆತ್ತಗೆ, ಸಿಹಿಯಾದ ಗೆಣಸು ತಿನ್ನಲು ಬಹಳ ರುಚಿ. ಅಥವಾ ನೀರು ಸೇರಿಸದೆ, ಮೈಕ್ರೋವೇವ್ ಓವನ್ ನಲ್ಲಿ 3 - 4 ನಿಮಿಷ ಬೇಯಿಸಿಕೊಂಡರೂ ಆಯಿತು. ನಾವು ಇಷ್ಟಪಡುವ ಇನ್ನೊಂದು ವೆರೈಟಿ ಎಂದರೆ ಗೆಣಸಿನ ಚಿಪ್ಸ್. ಗೆಣಸಿನ ಚಿಪ್ಸ್ ಅಂತೂ ತಿನ್ನಲು ತುಂಬ ರುಚಿ. ತಯಾರಿಸುವುದು ಕಷ್ಟವೇನಿಲ್ಲ, ಆದರೆ ಎಷ್ಟು ಚಿಪ್ಸ್ ಮಾಡಿಟ್ಟರೂ ಬೇಗ ಬೇಗ ಖಾಲಿ ಆಗುವುದಂತೂ ನಿಜ!


ತಯಾರಿಸಲು ಬೇಕಾಗುವ ಸಮಯ: 1 ಘಂಟೆ

ಬೇಕಾಗುವ ಸಾಮಗ್ರಿಗಳು:
2 ಮೀಡಿಯಂ ಸೈಜ್ ಗೆಣಸು
ಕರಿಯಲು ಎಣ್ಣೆ 

ಮಾಡುವ ವಿಧಾನ:
ಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು, ತೆಳ್ಳಗಿನ ಸ್ಲೈಸ್ ಗಳಾಗಿ ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಗೆಣಸಿನ ಸ್ಲೈಸ್ ಗಳನ್ನು ಹದವಾದ ಉರಿಯಲ್ಲಿ ಗರಿಯಾಗುವತನಕ ಕರಿಯಿರಿ.
ಕರಿದ ಚಿಪ್ಸ್ ನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹರವಿ ತಣ್ಣಗಾಗಲು ಬಿಡಿ.
ನಂತರ ಇದಕ್ಕೆ ರುಚಿಗೆ ತಕ್ಕಷ್ಟು (1 - 2 ಚಮಚ) ಮಸಾಲಾ ಪುಡಿ ಸೇರಿಸಿ ಮಿಕ್ಸ್ ಮಾಡಿದರೆ ಚಿಪ್ಸ್ ತಿನ್ನಲು ಸಿದ್ಧ.
ಮಸಾಲಾ ಪುಡಿಗೆ ಉಪ್ಪು ಸೇರಿಸಿರುವುದರಿಂದ ಚಿಪ್ಸ್ ಗೆ ಪುನಃ ಉಪ್ಪು ಸೇರಿಸುವ ಅಗತ್ಯವಿಲ್ಲ.



ಟಿಪ್ಸ್: 
  • ಚಿಪ್ಸ್ ನ್ನು ಗರಿಗರಿಯಾಗಿ ಮಾಡಲು ಒಂದು ಟಿಪ್: ಚಿಪ್ಸ್ ನ್ನು ಮುಕ್ಕಾಲು ಭಾಗ ಬೇಯಿಸಿ, ಎಣ್ಣೆಯಿಂದ ತೆಗೆದು ಆರಲು ಬಿಡಿ. ತಣ್ಣಗಾದ ನಂತರ ಅದನ್ನು ಪುನಃ ಎಣ್ಣೆಯಲ್ಲಿ ಹಾಕಿ 3 - 4 ನಿಮಿಷ ಕರಿದರೆ ಚಿಪ್ಸ್ ಗರಿಯಾಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)