ಎಗ್ ಲೆಸ್ ಆರೆಂಜ್ ಕೇಕ್ । ಮೊಟ್ಟೆ ಬಳಸದ ಕಿತ್ತಳೆ ಹಣ್ಣಿನ ಕೇಕ್ । ಐಯಂಗಾರ್ ಬೇಕರಿ ಸ್ಟೈಲ್ ಎಗ್ ಲೆಸ್ ಕೇಕ್

ಚಿಕ್ಕವರಿದ್ದಾಗ ನಮಗೆಲ್ಲ ಕೇಕ್ ಎಂದರೆ ಬಹಳ ಅಪರೂಪದ ತಿನಿಸು ಆಗಿತ್ತು. ಎಲ್ಲೋ ಒಮ್ಮೆ ಬೇಕರಿಯಿಂದ ತರುತ್ತಿದ್ದ ಈ ತಿನಿಸು ಮನೆಯಲ್ಲಿ ತಯಾರಿಸುವ ಎಲ್ಲ ತಿಂಡಿಗಳಿಗಿಂತ ರುಚಿ ಎನ್ನಿಸಿಬಿಡುತ್ತಿತ್ತು! ಈಗ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಓವನ್ ಇರುವುದರಿಂದ ಬೇಕರಿ ತಿಂಡಿಗಳಾದ ಕೇಕ್, ಬಿಸ್ಕಿಟ್ ಇವೆಲ್ಲವನ್ನೂ ಬೇಕೆನಿಸಿದಾಗಲೆಲ್ಲ ತಯಾರಿಸಬಹುದು. 
ನಮ್ಮ ಮನೆಯಲ್ಲಿ ವಿವಿಧ ಬಗೆಯ ಎಗ್ ಲೆಸ್ ಕೇಕ್ ಗಳನ್ನು ತಯಾರಿಸುತ್ತಿರುತ್ತೇವೆ. ಮಕ್ಕಳಿರುವಾಗ ಎಷ್ಟು ಬಗೆಯ ತಿಂಡಿಗಳನ್ನು ತಯಾರಿಸಿದರೂ ಬೇಗ ಬೇಗ ಖಾಲಿಯಾಗಿಬಿಡುತ್ತದೆ. ಮೊದಲೆಲ್ಲ ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್ ತಯಾರಿಸಲು ಹೇಳುತ್ತಿದ್ದ ನನ್ನ ಮಗಳು ಇತ್ತೀಚೆಗೆ ಯಾವಾಗಲೂ ಎಗ್ ಲೆಸ್ ಆರೆಂಜ್ ಕೇಕ್ ತಯಾರಿಸೋಣ ಎನ್ನುತ್ತಾಳೆ. ಈಗ ಟ್ರೆಂಡ್ ನಲ್ಲಿರುವ ಹಾಟ್ ಮಿಲ್ಕ್ ಕೇಕ್ ತಯಾರಿಸಿದ ನಂತರ ಅದೇ ಟೆಕ್ನಿಕ್ ಬಳಸಿ ಆರೆಂಜ್ ಕೇಕ್ ತಯಾರಿಸಿದಾಗ ಬಹಳ ಚೆನ್ನಾಗಿ ಬಂತು. ಐಯಂಗಾರ್ ಬೇಕರಿಗಳಲ್ಲಿ ಸಿಗುವ ಪ್ಲೇನ್ ಕೇಕ್ ನ ರುಚಿಯನ್ನೇ ಹೋಲುತ್ತದೆ ಈ ಕೇಕ್. ಎಗ್ ಲೆಸ್ ಆರೆಂಜ್ ಕೇಕ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಬೇಕಿಂಗ್ ಟೈಮ್: 25 - 30 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 
ಸರ್ವಿಂಗ್ಸ್: ಈ ಅಳತೆಯಿಂದ ಒಂದು ಲೋಫ್ ಕೇಕ್ ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
  • ಮೈದಾ ಹಿಟ್ಟು (ಅಥವಾ ಅರ್ಧ ಮೈದಾ, ಅರ್ಧ ಗೋಧಿಹಿಟ್ಟು) - 1 1/2 ಕಪ್ 
  • ಬೇಕಿಂಗ್ ಪೌಡರ್ - 1 1/2 ಟೀ ಚಮಚ 
  • ಬೇಕಿಂಗ್ ಸೋಡಾ - 1/8 ಟೀ ಚಮಚ 
  • ಉಪ್ಪು - ಚಿಟಿಕೆ 
  • ಫ್ರೆಶ್ ಆರೆಂಜ್ ಜ್ಯೂಸ್ (ಕಿತ್ತಳೆ ರಸ) - 1/4 ಕಪ್ 
  • ಸಕ್ಕರೆ - 1/3 ಕಪ್ 
  • ಆರೆಂಜ್ ಝೆಸ್ಟ್ (ಕಿತ್ತಳೆ ಸಿಪ್ಪೆ ತುರಿದದ್ದು) - 1 1/2 ಟೇಬಲ್ ಚಮಚ 
  • ಹಾಲು - 1/2 ಕಪ್ 
  • ಮೊಸರು - 1/4 ಕಪ್ 
  • ಎಣ್ಣೆ - 1/2 ಕಪ್ 

ತಯಾರಿಸುವ ವಿಧಾನ: 
  • ಓವನ್ ನ್ನು 175C ಗೆ ಪ್ರೀ-ಹೀಟ್ ಮಾಡಿಕೊಳ್ಳಿ. 
  • ಬೇಕಿಂಗ್ ಪಾತ್ರೆಯ ಒಳಭಾಗಕ್ಕೆ ಎಣ್ಣೆ ಸವರಿ ಅದರಮೇಲೆ ಒಣ ಹಿಟ್ಟು ಉದುರಿಸಿ. ಬೇಕಿಂಗ್ ಪೇಪರ್ ನ್ನು ಬೇಕಿಂಗ್ ಪಾತ್ರೆಯ ತಳಭಾಗದ ಅಳತೆಗೆ ಕಟ್ ಮಾಡಿ ಹಾಕಿ. 
  • ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ - ಇಷ್ಟನ್ನೂ 2 - 3 ಬಾರಿ ಜರಡಿಯಾಡಿಕೊಳ್ಳಿ. 
  • ಸಕ್ಕರೆ, ಮೊಸರು ಮತ್ತು ಉಪ್ಪನ್ನು ಒಂದು ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿ. 
  • ಸಕ್ಕರೆ ಕರಗಿದ ನಂತರ ಇದಕ್ಕೆ ಆರೆಂಜ್ ಜ್ಯೂಸ್, ಝೆಸ್ಟ್ ಮತ್ತು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. 
  • ಮಿಶ್ರಣಕ್ಕೆ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ನಿಧಾನವಾಗಿ ಮಿಕ್ಸ್ ಮಾಡಿ. 
  • ಈ ಮಿಶ್ರಣಕ್ಕೆ ಬಿಸಿ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  • ತಯಾರಾದ ಹಿಟ್ಟನ್ನು ಬೇಕಿಂಗ್ ಪಾತ್ರೆಯಲ್ಲಿ ಹಾಕಿ ಪ್ರೀ-ಹೀಟ್ ಮಾಡಿದ ಓವನ್ ನಲ್ಲಿಟ್ಟು 25 - 30 ನಿಮಿಷ ಬೇಯಿಸಿ. ಕೇಕ್ ಬೆಂದಿದೆಯೇ ಎಂದು ನೋಡಲು ಒಂದು ಟೂತ್ ಪಿಕ್ ನ್ನು ಕೇಕ್ ನ ಒಳಭಾಗದವರೆಗೆ ಚುಚ್ಚಿ ನೋಡಿ; ಹಿಟ್ಟು ಅಂಟಿಲ್ಲವೆಂದರೆ ಕೇಕ್ ಬೆಂದಿದೆ ಎಂದರ್ಥ. ನಾನು ತಯಾರಿಸಿದ ಕೇಕ್ ಸರಿಯಾಗಿ 25 ನಿಮಿಷಕ್ಕೆ ಬೆಂದಿದೆ. 
  • ಕೇಕ್ ನ್ನು ಓವನ್ ನಿಂದ ಹೊರತೆಗೆದು ತಣ್ಣಗಾಗಲು ಬಿಡಿ. ಕೇಕ್ ಸ್ವಲ್ಪ ತಣ್ಣಗಾದ ನಂತರ ಅದನ್ನು ಬೇಕಿಂಗ್ ಪಾತ್ರೆಯಿಂದ ಹೊರತೆಗೆದು ಪೂರ್ತಿ ತಣ್ಣಗಾಗುವತನಕ ಕೂಲಿಂಗ್ ರ್ಯಾಕ್ ಮೇಲಿಡಿ. 
  • ತಣ್ಣಗಾದ ಕೇಕ್ ನ್ನು ಕತ್ತರಿಸಿ ತಿನ್ನಿ. ಬೇಕಿದ್ದರೆ ಐಸಿಂಗ್ ಹಾಕಿಕೊಳ್ಳಬಹುದು. 

ಟಿಪ್ಸ್:
  • ಈ ಕೇಕ್ ಗೆ ಟೂಟಿ ಫ್ರುಟಿ ಬೇಕಿದ್ದರೆ ಸೇರಿಸಬಹುದು. ಇದರಿಂದ ರುಚಿಯೂ ಹೆಚ್ಚು, ನೋಡುವುದಕ್ಕೂ ಚೆಂದ. 


ಕಾಮೆಂಟ್‌ಗಳು