Here are some recipes which I came across through the net, books, so on and few are my own experiments..

Sunday, 25 November 2012

ಕಡ್ಲೆಮಡ್ಡಿ | ಹಯಗ್ರೀವ | Kadlemaddi | Hayagreeva | Chana Dal Sweet

Click here for English version.

ಇತ್ತೀಚಿಗೆ ಅಮ್ಮನಿಂದ ಕಲಿತ ಅಡಿಗೆಗಳಲ್ಲಿ ಕಡ್ಲೆಮಡ್ಡಿಯೂ ಒಂದು. ಸ್ವಲ್ಪ ಮಟ್ಟಿಗೆ ಇದು ಕಡಲೆಬೇಳೆ ಹೋಳಿಗೆ ಅಥವಾ ಒಬ್ಬಟ್ಟಿಗೆ ತಯಾರಿಸುವ ಹೂರಣವನ್ನೇ ಹೋಲುತ್ತದೆ. ರವಾ ಕೇಸರಿಭಾತ್ ನಂತೆಯೇ ಇದೂ ಸಹ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂಥ ಸಿಹಿತಿಂಡಿ. ಕಡ್ಲೆಮಡ್ಡಿಯನ್ನು ಹಯಗ್ರೀವ ಎಂತಲೂ ಹೇಳುತ್ತಾರೆ. ತಯಾರಿಸಲು ಹೆಚ್ಚು ಕಷ್ಟವೇನಿಲ್ಲದ ಈ ಸಿಹಿತಿಂಡಿ ತಿನ್ನಲು ಬಹಳ ರುಚಿ!


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 3 ಕಪ್ 
ಬೆಲ್ಲ - 1 3/4 ಕಪ್ (ಸಿಹಿಗೆ ತಕ್ಕಂತೆ)
ಸಕ್ಕರೆ - 1/4 ಕಪ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
ಉಪ್ಪು - 1 1/2 ಚಮಚ
ತೆಂಗಿನತುರಿ - 1 1/2 ಕಪ್
ಲವಂಗ -2
ಏಲಕ್ಕಿ -2
ತುಪ್ಪ (ಬೇಕಿದ್ದರೆ) - 2 ಚಮಚ
ಗೋಡಂಬಿ (ಬೇಕಿದ್ದರೆ) - 10
ದ್ರಾಕ್ಷಿ (ಬೇಕಿದ್ದರೆ) - 15

ಮಾಡುವ ವಿಧಾನ:
ಕಡ್ಲೆಬೇಳೆಯನ್ನು ಅರ್ಧ ಘಂಟೆ ನೀರಿನಲ್ಲಿ ನೆನೆಸಿಟ್ಟು ನಂತರ ಬೇಕಾದಷ್ಟು ನೀರು ಸೇರಿಸಿ ಪ್ರೆಷರ್ ಕುಕ್ಕರ್ ನಲ್ಲಿ ಬೇಳೆ ಚೆನ್ನಾಗಿ ಮೆತ್ತಗಾಗುವವರೆಗೆ (1 ಅಥವಾ 2 ವಿಸಿಲ್ ಆಗುವವರೆಗೆ) ಬೇಯಿಸಿಕೊಳ್ಳಿ.
ಬೇಯಿಸಿದ ಬೇಳೆಯಿಂದ ನೀರನ್ನೆಲ್ಲ ಬಸಿದು ತೆಗೆದುಬಿಡಿ. ಬೆಂದ ಮಿಶ್ರಣವನ್ನು ಒಂದು ಸೌಟು ಅಥವಾ ಮ್ಯಾಶರ್ ಬಳಸಿ ಸ್ವಲ್ಪ ಹಿಸುಕಿ.
ಒಂದು ದಪ್ಪ ತಳದ ಪಾತ್ರೆಯಲ್ಲಿ ಹಿಸುಕಿದ ಕಡ್ಲೆಬೇಳೆ ಮಿಶ್ರಣವನ್ನು ಬಿಸಿಗಿಡಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಸಕ್ಕರೆ, ಉಪ್ಪು ಮತ್ತು ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕಡ್ಲೆಮಡ್ಡಿ ಮಿಶ್ರಣವನ್ನು ಹದವಾದ ಉರಿಯಲ್ಲಿ ಕೈಯಾಡಿಸುತ್ತಿದ್ದು, ಅದರಲ್ಲಿನ ನೀರಿನಂಶ ಕಡಿಮೆಯಾಗಿ ಮಿಶ್ರಣ ಸೌಟಿನಿಂದ ಕೆಳಗೆ ಬೀಳುವಂತಾದಾಗ ಅದಕ್ಕೆ ಏಲಕ್ಕಿ ಮತ್ತು ಲವಂಗದ ಪುಡಿ, ಗೋಡಂಬಿ ಚೂರುಗಳು ಹಾಗೂ ದ್ರಾಕ್ಷಿ ಸೇರಿಸಿ ಉರಿ ಆಫ್ ಮಾಡಿ.
ತಯಾರಾದ ಕಡ್ಲೆಮಡ್ಡಿಗೆ 2 - 3 ಚಮಚ ತುಪ್ಪ ಸೇರಿಸಿ ಕೈಯಾಡಿಸಿ ಮುಚ್ಚಳ ಮುಚ್ಚಿ 10 ನಿಮಿಷ ಸೆಟ್ ಆಗಲು ಬಿಡಿ.
ಕಡ್ಲೆಮಡ್ಡಿ ಸ್ವಲ್ಪ ಬಿಸಿ ಇರುವಾಗಲೇ ಸರ್ವಿಂಗ್ ಪ್ಲೇಟ್ ಗೆ ಹಾಕಿ, ಮೇಲಿನಿಂದ ಒಂದು ಚಮಚ ತುಪ್ಪ ಹಾಕಿಕೊಂಡು ಸವಿದುನೋಡಿ! ತುಪ್ಪ ಹಾಕಿಕೊಳ್ಳದೆ ಹಾಗೇ ತಿನ್ನಲೂ ಇದು ಚೆನ್ನಾಗಿರುತ್ತದೆ.


ಟಿಪ್ಸ್:
  • ಬೆಲ್ಲದ ಬದಲು ಬರೀ ಸಕ್ಕರೆ ಬಳಸಿಯೂ ಕಡ್ಲೆಮಡ್ಡಿ ತಯಾರಿಸಬಹುದು. ಆದರೆ ಬೆಲ್ಲ ಬಳಸುವುದರಿಂದ ಕಡ್ಲೆ ಮಡ್ಡಿಯ ರುಚಿ ಹೆಚ್ಚುತ್ತದೆ. 

Thursday, 15 November 2012

ಮರಿಗೆ ಗೊಜ್ಜು | Marige Gojju

Click here for English version.

ಇತ್ತೀಚೆಗೆ ಅಡಿಗೆಗಳನ್ನು ನಿಯಮಿತವಾಗಿ ಹಾಕಲು ಸಾಧ್ಯವಾಗದಿದ್ದರಿಂದ ಕ್ಲಿಕ್ಕಿಸಿದ ಅನೇಕ ಅಡಿಗೆಗಳ ಫೊಟೋಗಳು ಹಾಗೇ ಉಳಿದಿದ್ದವು. ಅವನ್ನೆಲ್ಲ ನೋಡುತ್ತಿದ್ದಂತೆ ಒಂದಾದರೂ ರೆಸಿಪಿ ಬರೆದು ಹಾಕೋಣವೆನ್ನಿಸಿ ಈ ಪೋಸ್ಟಿಂಗ್ ಶುರು ಮಾಡುತ್ತಿದ್ದೇನೆ :)
ಹವ್ಯಕರ ಸಾಂಪ್ರದಾಯಿಕ ಅಡಿಗೆಗಳಲ್ಲಿ ಮರಿಗೆ ಗೊಜ್ಜು ಕೂಡ ಒಂದು. ಈ ಗೊಜ್ಜನ್ನು ತಯಾರಿಸಲು ಹಿಂದಿನವರು 'ಮರಿಗೆ' ಎನ್ನುವ ಒಂದು ವಿಶೇಷ ಬಗೆಯ ಪಾತ್ರೆಯನ್ನು ಬಳಸುತ್ತಿದ್ದರಂತೆ. ಇದು ಮರದ ಪಾತ್ರೆಯಾಗಿದ್ದು ಗೊಜ್ಜನ್ನು ನುಣ್ಣಗೆ ಅರೆಯಲು ಚೆನ್ನಾಗಿರುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಇಂಥ ಪಾತ್ರೆ ಸಾಮಾನ್ಯವಾಗಿ ಕಂಡುಬರುತ್ತದೆ. ಇಂದಿನ ದಿನಗಳಲ್ಲಿ ಈ ಪಾತ್ರೆಯ ಬಳಕೆ ಬಹಳ ಕಡಿಮೆ. ಹಾಗೇ ಇಂಥ ಹಳೆಯ ಅಡಿಗೆಗಳೂ ನಿಧಾನವಾಗಿ ಮರೆಯಾಗುತ್ತಿವೆ. 
ಅಮ್ಮನಿಂದ ಕಲಿತ ಮರಿಗೆ ಗೊಜ್ಜಿನ ರೆಸಿಪಿ ಇಲ್ಲಿದೆ.. ಊಟಕ್ಕೆ ಒಳ್ಳೆಯ ರುಚಿ ಕೊಡುವ ಈ ಗೊಜ್ಜನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಎಣ್ಣೆ - 2 1/2 ಚಮಚ
ಉದ್ದಿನಬೇಳೆ - 1/4 ಚಮಚ 
5 - 6 ಒಣಮೆಣಸು 
ಎಳ್ಳು - 1/2 ಚಮಚ 
ಚಿಟಿಕೆ ಇಂಗು 
ಸಾಸಿವೆ - 1/4 ಚಮಚ 
ರುಚಿಗೆ ತಕ್ಕಷ್ಟು ಉಪ್ಪು     
ಗಟ್ಟಿ ಮೊಸರು - 1 ರಿಂದ 1 1/4 ಕಪ್ 

ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದ ನಂತರ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಎಳ್ಳು, ಇಂಗು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. 
ಒಗ್ಗರಣೆ ಮಿಶ್ರಣವನ್ನು ಉರಿಯಿಂದ ಇಳಿಸುವ ಮೊದಲು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮಿಶ್ರಣ ತಣ್ಣಗಾದ ನಂತರ ಒಂದು ಸೌಟನ್ನು ತೆಗೆದುಕೊಂಡು ಮಿಶ್ರಣವನ್ನು ಚೆನ್ನಾಗಿ ಅರೆಯಿರಿ. ಮಿಶ್ರಣ ನುಣ್ಣಗೆ ಪುಡಿಮಾಡಿದಷ್ಟೂ ಒಳ್ಳೆಯದು. ಮಿಶ್ರಣವನ್ನು ನುಣ್ಣಗೆ ಪುಡಿಮಾಡಲು ಚಿಕ್ಕ ರುಬ್ಬುವ ಕಲ್ಲನ್ನು ಬಳಸಿದರೂ ಆಗುತ್ತದೆ.
ಪುಡಿಮಾಡಿದ ಮಿಶ್ರಣಕ್ಕೆ 3 - 4 ಸೌಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಮರಿಗೆ ಗೊಜ್ಜು ಅನ್ನದೊಡನೆ ಸವಿಯಲು ಸಿದ್ಧ.    


ನಾನು ಮರಿಗೆ ಗೊಜ್ಜಿನ ಪಾಕ ವಿಧಾನವನ್ನು ಇಲ್ಲಿ ಬರೆಯುತ್ತಿರುವ ವಿಷಯವನ್ನು ನನ್ನ ಅಜ್ಜಿಗೆ ಹೇಳಿದಾಗ ಅವರು ಮರಿಗೆ ಗೊಜ್ಜಿಗೆ ಏನೇನು ಸಾಮಗ್ರಿಗಳನ್ನು ಬಳಸಿರುವೆಯೆಂದು ನನ್ನನ್ನು ಕೇಳಿದರು. ನಾನು ಇಲ್ಲಿ ಬಳಸಿರುವ ಸಾಮಗ್ರಿಗಳನ್ನು ಹೇಳಿದಾಗ ಅವರು ಈ ಗೊಜ್ಜಿನ ರುಚಿ ಹೆಚ್ಚಿಸಲು ಇನ್ನೊಂದು ಟಿಪ್ಸ್ ಕೊಟ್ಟರು! ಅದೇನೆಂದರೆ, 1/2 ಚಮಚದಷ್ಟು ಜಜ್ಜಿದ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಸೇರಿಸಿದರೆ ಈ ಗೊಜ್ಜಿನ ರುಚಿ ಇನ್ನೂ ಚೆನ್ನಾಗಿರುತ್ತದೆ. ನಿಮಗೆ ಬೆಳ್ಳುಳ್ಳಿ ಇಷ್ಟವಾದರೆ ಖಂಡಿತವಾಗಿಯೂ ಇದನ್ನು ಟ್ರೈ ಮಾಡಿ.

ಟಿಪ್ಸ್:
  • ಮರಿಗೆ ಗೊಜ್ಜನ್ನು ತಯಾರಿಸಲು ಸಾಮಗ್ರಿಗಳನ್ನು ಚೆನ್ನಾಗಿ ಅರೆಯುವುದರಿಂದ ಒಳ್ಳೆಯ ರುಚಿ ಬರುತ್ತದೆ. ಹೀಗಾಗಿ ಮಿಕ್ಸಿಯಲ್ಲಿ ಪುಡಿಮಾಡುವುದು ಸುಲಭದ ಕೆಲಸವಾದರೂ ಈ ಗೊಜ್ಜಿಗೆ ಅದು ಚೆನ್ನಾಗಿರುವುದಿಲ್ಲ.

Tuesday, 6 November 2012

ಬೇರು (ದೀವಿ) ಹಲಸಿನ ಚಕ್ಕೆ ಪಳದ್ಯ | Bread Fruit (Beru / Deevi Halasu) Chakke Paladya

Click here for English version.

ಬೇರು ಹಲಸು ಅಥವಾ ದೀವಿ ಹಲಸು ಮಲೆನಾಡ ಕಡೆ ಸಾಮಾನ್ಯವಾಗಿ ಸಿಗುವ ತರಕಾರಿಗಳಲ್ಲಿ ಒಂದು. ಈ ತರಕಾರಿಯಿಂದ ತಯಾರಿಸುವ ಸಾಂಬಾರ್ ಬಹಳ ರುಚಿ. ಮೇಲೋಗರಕ್ಕೊಂದೇ ಅಲ್ಲದೆ ಹಪ್ಪಳ, ಚಿಪ್ಸ್ ಇತ್ಯಾದಿಗಳ ತಯಾರಿಕೆಗೂ ಇದು ಚೆನ್ನಾಗಿರುತ್ತದೆ. ಬೇರು ಹಲಸಿನಿಂದ ತಯಾರಿಸುವ ಇತರ ಮೇಲೋಗರಗಳನ್ನು ಸವಿದಿದ್ದರೂ ಇದನ್ನು ಬಳಸಿ ಚಕ್ಕೆ ಪಳದ್ಯ ತಯಾರಿಸುವುದು ನನಗೆ ಗೊತ್ತಿರಲಿಲ್ಲ. ಅಮ್ಮನಿಂದ ಇತ್ತೀಚಿಗೆ ಕಲಿತ ಬೇರು ಹಲಸು ಅಥವಾ ದೀವಿ ಹಲಸಿನ ಚಕ್ಕೆ ಪಳದ್ಯದ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಬೇರು ಹಲಸು (ದೀವಿ ಹಲಸು) - ಒಂದು ಕಾಯಿಯ ಅರ್ಧ ಭಾಗ
ನಿಂಬೆ ಹಣ್ಣು - 1 1/2 ಅಥವಾ ರುಚಿಗೆ ತಕ್ಕಷ್ಟು
ಹಸಿಮೆಣಸು - 3 (ಖಾರಕ್ಕೆ ತಕ್ಕಂತೆ)
ನೀರು - 4ರಿಂದ 5 ಕಪ್
ಎಣ್ಣೆ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 3/4 ಚಮಚ, ಚಿಟಿಕೆ ಇಂಗು, 1 ಎಸಳು ಕರಿಬೇವು


ಮಾಡುವ ವಿಧಾನ:
ಬೇರು ಹಲಸಿನ ಕಾಯಿಯ ಸಿಪ್ಪೆ ಮತ್ತು ಒಳಗಿನ ತಿರುಳನ್ನು ತೆಗೆದು ಮಧ್ಯಮ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಸೀಳಿದ ಹಸಿಮೆಣಸು ಸೇರಿಸಿ ಒಂದು ಪಾತ್ರೆಯಲ್ಲಿ ಬಿಸಿಗಿಡಿ. ಇದಕ್ಕೆ ಹೆಚ್ಚಿದ ಬೇರು ಹಲಸಿನ ಹೋಳುಗಳನ್ನು ಸೇರಿಸಿ. ಹೋಳು ಮೆತ್ತಗಾಗುವವರೆಗೆ ಬೇಯಿಸಿ.
ಬೆಂದ ಹೋಳುಗಳಲ್ಲಿ ಒಂದು ಕಪ್ ನಷ್ಟನ್ನು ತಣಿಸಿಕೊಂಡು, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೋಳಿಗೆ ಸೇರಿಸಿ 5 ನಿಮಿಷ ಕುದಿಸಿ ಇಳಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಪಳದ್ಯಕ್ಕೆ ಸೇರಿಸಿ.            
ಈ ಪಳದ್ಯ ಅನ್ನದೊಡನೆ ಬಿಸಿಯಾಗಿ ಉಣ್ಣಲು ಚೆನ್ನಾಗಿರುತ್ತದೆ.

Tuesday, 2 October 2012

ಗೋರಿಕಾಯಿ ಪಲ್ಯ | Cluster Beans Palya (Dry Curry)

Click here for English version.

ಬೆಂಗಳೂರಿನಲ್ಲಿ ಎಲ್ಲ ಸೀಜನ್ ನಲ್ಲೂ ಸಿಗುವ ತರಕಾರಿಗಳಲ್ಲಿ ಗೋರಿಕಾಯಿಯೂ ಒಂದು. ಇದನ್ನು ಚವಳಿಕಾಯಿ ಎಂತಲೂ ಕರೆಯುತ್ತಾರೆ. ಪ್ರೋಟೀನ್ ಮತ್ತು ಫೈಬರ್ ಇದರಲ್ಲಿ ಹೇರಳವಾಗಿರುತ್ತದೆ. ಗೋರಿಕಾಯಿಯ ಬೀಜವನ್ನು ಒಣಗಿಸಿ ಪುಡಿಮಾಡಿ ಐಸ್ ಕ್ರೀಮ್, ಸಾಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. 
ನಮ್ಮ ಮನೆಯಲ್ಲಿ ಗೋರಿಕಾಯಿಯ ಬಳಕೆ ಕಡಿಮೆಯೇ ಎನ್ನಬಹುದು. ನನ್ನ ಅಕ್ಕ ಅವರ ಮನೆಯಲ್ಲಿ ಗೋರಿಕಾಯಿ ತಂದಾಗಲೆಲ್ಲ ಅದರ ಪಲ್ಯ ತಯಾರಿಸುತ್ತಾರೆ. ಅನ್ನ, ರೊಟ್ಟಿ, ಚಪಾತಿ ಎಲ್ಲಕ್ಕೂ ಈ ಪಲ್ಯ ಒಳ್ಳೆಯ ಕಾಂಬಿನೇಶನ್. ತಯಾರಿಸುವುದಕ್ಕೂ ಬಹಳ ಸುಲಭ! ಅಕ್ಕನಿಂದ ಕಲಿತ ಗೋರಿಕಾಯಿ ಪಲ್ಯದ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಗೋರಿಕಾಯಿ (ಚವಳಿಕಾಯಿ) - 25 ರಿಂದ 30
1 ಮೀಡಿಯಮ್ ಸೈಜ್ ಟೊಮೆಟೋ 
ಸಾಂಬಾರ್ ಪುಡಿ - 3/4 ಚಮಚ ಅಥವಾ ರುಚಿಗೆ ತಕ್ಕಷ್ಟು 
ತೆಂಗಿನತುರಿ (ಬೇಕಿದ್ದರೆ) - 1/2 ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 2ರಿಂದ 3 ಚಮಚ    
ಸಕ್ಕರೆ - 1/4 ಚಮಚ ಅಥವಾ ರುಚಿಗೆ ತಕ್ಕಷ್ಟು (ಬೆಲ್ಲವನ್ನೂ ಬಳಸಬಹುದು)
ರುಚಿಗೆ ತಕ್ಕಷ್ಟು ಉಪ್ಪು  
ಒಗ್ಗರಣೆಗೆ: ಎಣ್ಣೆ - 3ರಿಂದ 4 ಚಮಚ, ಉದ್ದಿನಬೇಳೆ - 1 ಚಮಚ, ಸಾಸಿವೆ - 1 ಚಮಚ, ಜೀರಿಗೆ - 1/2 ಚಮಚ, ಚಿಟಿಕೆ ಅರಿಚಿನ, 1 ಎಸಳು ಕರಿಬೇವು 


ಮಾಡುವ ವಿಧಾನ:
ಗೋರಿಕಾಯಿ ಮತ್ತು ಟೊಮೆಟೋವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮೀಡಿಯಂ ಸೈಜ್ ಗೆ ಹೆಚ್ಚಿಕೊಂಡರೂ ಆಗುತ್ತದೆ.
ಬಾಣಲೆಯಲ್ಲಿ 3 - 4 ಚಮಚ ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. ಸಾಸಿವೆ ಚಟಗುಟ್ಟಿದ ನಂತರ ಚಿಟಿಕೆ ಅರಿಶಿನ, ಕರಿಬೇವು, ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ 2 ನಿಮಿಷ ಕೈಯಾಡಿಸಿ, ಸಣ್ಣಗೆ ಹೆಚ್ಚಿದ ಗೋರಿಕಾಯಿ, 1 1/2 ಕಪ್ ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಬೇಯಿಸಿ.
ಪಲ್ಯದ ಮಿಶ್ರಣವನ್ನು ಒಂದೆರಡು ಬಾರಿ ಕೈಯಾಡಿಸಿ. ಗೋರಿಕಾಯಿ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ ಇನ್ನೂ 5 ನಿಮಿಷ ಬೇಯಿಸಿ. 
ಕೊನೆಯಲ್ಲಿ ತೆಂಗಿನತುರಿ (ಬೇಕಿದ್ದರೆ) ಸೇರಿಸಿ 2 ನಿಮಿಷ ಬಿಸಿಮಾಡಿ ಇಳಿಸಿ.
ರುಚಿಕರವಾದ ಗೋರಿಕಾಯಿ ಪಲ್ಯವನ್ನು ಅನ್ನ, ರೊಟ್ಟಿ ಅಥವಾ ಚಪಾತಿಯೊಡನೆ ಸವಿಯಿರಿ.

Sunday, 16 September 2012

ಹಲಸಿನ ಹಣ್ಣಿನ ಕಡುಬು (ಇಡ್ಲಿ) | Jack Fruit Kadubu (Idli)

Click here to read in English.


ಬೇಸಿಗೆ ಮುಗಿದು ಮಳೆಗಾಲ ಶುರುವಾಗುವ ಸಮಯ ಬಂದರೆ ಮಲೆನಾಡಿನಲ್ಲಿ ಹಲಸಿನ ಹಬ್ಬ. ಬೇಸಿಗೆಯಲ್ಲಿ ವರ್ಷಕ್ಕಾಗುವಷ್ಟು ಹಲಸಿನ ಕಾಯಿಯ ಚಿಪ್ಸ್, ಹಪ್ಪಳ ಇತ್ಯಾದಿಗಳನ್ನು ತಯಾರಿಸಿಟ್ಟುಕೊಳ್ಳುವ ಜನರು ಮಳೆಗಾಲದಲ್ಲಿ ಹಲಸಿನ ಹಣ್ಣಿನ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಕೆಲವರು  ಹಲಸಿನ ಪಲ್ಪ್ ನ್ನು ಶೇಖರಿಸಿ ಫ್ರಿಜ್ ನಲ್ಲಿಟ್ಟುಕೊಂಡು ತಮಗೆ ಬೇಕೆನಿಸಿದಾಗಲೆಲ್ಲ ಕಡುಬು, ಇತ್ಯಾದಿ ಖಾದ್ಯಗಳನ್ನು ತಯಾರಿಸುವುದೂ ಉಂಟು. ಮಳೆಗಾಲದ ಕೊನೆಯಲ್ಲಿ ಊರಿಗೆ ಬಂದು ನಾನು ಎರಡ್ಮೂರು ಕಡುಬಿನ ಸವಿ ನೋಡಿದ್ದಾಯಿತು.
ನಾನು ಬೆಂಗಳೂರಿನಲ್ಲಿ ಹಲಸಿನ ಕಡುಬು ಮಾಡಿದ್ದಾಗ ಬ್ಲಾಗ್ ನಲ್ಲಿ ಅದರ ರೆಸಿಪಿ ಹಾಕಬೇಕೆಂದು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದೆ. ಆದರೆ ಕಡುಬು ತಯಾರಾದ ನಂತರ ಕಾರಣಾಂತರಗಳಿಂದ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ. ಅಮ್ಮನ ಮನೆಯಲ್ಲಿ ಕಡುಬು ಮಾಡುವಾಗ ಈ ವಿಷಯ ಹೇಳಿದಾಗ ಅವರು ಇಲ್ಲಿ ಮಾಡುವ ಕಡುಬಿನ ಫೋಟೋ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಹೀಗಾಗಿ ಎರಡು ಬಾರಿ ಕಡುಬು ಮಾಡುವಾಗ ತೆಗೆದ ಫೋಟೋಗಳು ಇಲ್ಲಿ ಸೇರಿಕೊಂಡಿವೆ.
ಹಲಸಿನ ಕಡುಬನ್ನು ಇಡ್ಲಿಯಂತೆ ಹುಯಿದು ತಯಾರಿಸುವುದು ಈಗೆಲ್ಲ ಹೆಚ್ಚಾಗಿ ಬಳಕೆಯಲ್ಲಿರುವ ವಿಧಾನ. ಹಳ್ಳಿಗಳಲ್ಲಿ ಬಾಳೆ ಎಲೆಯ ಕೊಟ್ಟೆಗಳಲ್ಲಿ ಕಡುಬಿನ ಹಿಟ್ಟನ್ನು ತುಂಬಿ ಬಿಗಿಯಾಗಿ ಸೀಲ್ ಮಾಡಿ ದೊಡ್ಡ ಕಡಾಯಿಗಳಲ್ಲಿ ಬೇಯಿಸುತ್ತಾರೆ. ಇಡ್ಲಿಯಂತೆ ತಯಾರಿಸುವ ಕಡುಬಿಗಿಂತ ಬಾಳೆಯೆಲೆಯಲ್ಲಿ ಕಟ್ಟಿ ಬೇಯಿಸುವ ಕಡುಬು ಹೆಚ್ಚು ಹೆಚ್ಚು ರುಚಿ!
ಇನ್ನೊಂದು ವಿಷಯ, ನಾನು ಸದ್ಯಕ್ಕೆ ಅಮ್ಮನ ಮನೆಯಲ್ಲಿರುವುದರಿಂದ ಇಂಟರ್ನೆಟ್ ಬಳಕೆ ಮಾಡುವುದು ಕಡಿಮೆಯಾಗಿದೆ. ಹೀಗಾಗಿ ಇತರರ ಬ್ಲಾಗ್ ಗಳನ್ನು ವಿಸಿಟ್ ಮಾಡುವುದಕ್ಕಾಗಲೀ, ಕಾಮೆಂಟ್ ಹಾಕುವುದಕ್ಕಾಗಲೀ ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ತಿಂಗಳುಗಳ ಕಾಲ ಇದು ಹೀಗೇ ಮುಂದುವರೆಯಬಹುದೆನಿಸುತ್ತದೆ. ಆದರೆ ಸಾಧ್ಯವಾದಾಗಲೆಲ್ಲ ಹೊಸ ಅಡಿಗೆಗಳನ್ನು ಪೋಸ್ಟ್ ಮಾಡುತ್ತಿರುತ್ತೇನೆ. ಓದುಗರು ಸಹಕರಿಸಬೇಕಾಗಿ ವಿನಂತಿ. 
 
ಹಲಸಿನ ಹಣ್ಣಿನ ಕಡುಬು (ಇಡ್ಲಿ) ತಯಾರಿಸುವ ವಿಧಾನ ಇಂತಿದೆ:
 


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು  
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 
 

ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ಪಲ್ಪ್ - 1 1/2 ಕಪ್ 
ಅಕ್ಕಿ ಕಡಿ - 3/4 ಕಪ್ (ಟಿಪ್ಸ್ ನೋಡಿ)
ಗಟ್ಟಿ ಬೆಲ್ಲ - 1/2 ಕಪ್ 
ಸಕ್ಕರೆ - 2 ಚಮಚ 
ಉಪ್ಪು - 1/2 ಚಮಚ 
ಏಲಕ್ಕಿಪುಡಿ - ದೊಡ್ಡ ಚಿಟಿಕೆ 
ಎಣ್ಣೆ (ತೆಂಗಿನೆಣ್ಣೆ ಆದರೆ ಒಳ್ಳೆಯದು) - 1 ಚಮಚ    
 



ಮಾಡುವ ವಿಧಾನ:
ಹಲಸಿನ ಪಲ್ಪ್ ಗೆ ಬೆಲ್ಲ, ಸಕ್ಕರೆ, ಉಪ್ಪು ಸೇರಿಸಿ ಕದಡಿ.
ಬೆಲ್ಲ ಚೆನ್ನಾಗಿ ಕರಗಿದ ನಂತರ ಇದಕ್ಕೆ ನೀರಿನಲ್ಲಿ ತೊಳೆದ ಅಕ್ಕಿ ಕಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಎಣ್ಣೆ, ಏಲಕ್ಕಿಪುಡಿ ಸೇರಿಸಿ ಕದಡಿ.
ಮಿಶ್ರಣ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ತುಂಬಾ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ.
ಕಡುಬಿನ ಹಿಟ್ಟನ್ನು ಇಡ್ಲಿಯಂತೆ ಮಾಡಿಯೂ ಬೇಯಿಸಬಹುದು ಇಲ್ಲವೇ ಬಾಳೆಯೆಲೆಯ ಕೊಟ್ಟೆಯಲ್ಲಿ ಕಟ್ಟಿಯೂ ಬೇಯಿಸಬಹುದು. ಇಡ್ಲಿಯಂತೆ ಮಾಡಿ ಬೇಯಿಸುವುದಾದರೆ ಸುಮಾರು ಅರ್ಧ ಘಂಟೆ ಬೇಯಿಸಬೇಕು. ಬಾಳೆ ಕೊಟ್ಟೆಯಲ್ಲಿ ಮಾಡಿದರೆ ಕನಿಷ್ಠ ಒಂದು ಘಂಟೆಯಾದರೂ ಬೇಯಿಸಬೇಕು.
ಚೆನ್ನಾಗಿ ಬೆಂದ ಕಡುಬನ್ನು ಬಿಸಿ ಇರುವಾಗಲೇ ತುಪ್ಪ ಹಾಕಿಕೊಂಡು ತಿನ್ನಿ.
 


ಈ ಕಡುಬು 2 - 3 ದಿನಗಳವರೆಗೆ ಚೆನ್ನಾಗಿರುತ್ತದೆ. ಕಡುಬಿನ ರುಚಿ ಹೆಚ್ಚಿಸಲು ಇನ್ನೊಂದು ವಿಧಾನವಿದೆ..ತಣ್ಣಗಾದ ಕಡುಬನ್ನು ಕೈಯಲ್ಲಿ ಹಿಸುಕಿ ಚೆನ್ನಾಗಿ ಪುಡಿಮಾಡಿಕೊಂಡು ಅದಕ್ಕೆ 4 - 5 ಚಮಚ ತುಪ್ಪ, 1 - 2 ಚಮಚ ಸಕ್ಕರೆ, ಬೇಕಿದ್ದರೆ ಕೆಲವು ಕೇಸರಿ ದಳಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಕೈಯಾಡಿಸುತ್ತ ಬಿಸಿಮಾಡಿ ತಿಂದರೆ ಕಡುಬು ಇನ್ನೂ ರುಚಿ!


ಟಿಪ್ಸ್:
  • ಅಕ್ಕಿ ಕಡಿ ಎಂದರೆ ಇಡ್ಲಿ ರವೆಯಂತೆ ತರಿಯಾಗಿ ಪುಡಿಮಾಡಿದ ಅಕ್ಕಿ. ಇದರ ಬದಲು ಇಡ್ಲಿ ರವೆಯನ್ನೂ ಬಳಸಬಹುದು. ಇಡ್ಲಿ ರವೆಯಾದರೆ 1 1/2 ಕಪ್ ಪಲ್ಪ್ ಗೆ 1 ರಿಂದ 1 1/4 ಕಪ್ ನಷ್ಟು ಬೇಕು. ಇಡ್ಲಿ ರವೆಯನ್ನು ಸ್ವಲ್ಪ ಹುರಿದು ಬಳಸಿ.
  • ಎಣ್ಣೆ ಸೇರಿಸುವುದರಿಂದ ಕಡುಬು ಹಗುರಾಗುತ್ತದೆ. ತಿಂದ ಕಡುಬು ಜೀರ್ಣವಾಗುವುದಕ್ಕೂ ಇದು ಸಹಕಾರಿ.

Thursday, 30 August 2012

ಮಾಡಹಾಗಲ (ಮೂಡಹಾಗಲ)ಕಾಯಿ ಹಶಿ | Madahagala (Moodahagala)kayi Hashi

Click here for English version.

ಹಾಗಲಕಾಯಿ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ ತರಕಾರಿ. ಆದರೆ ಮಾಡಹಾಗಲ (ಮೂಡಹಾಗಲ)ಕಾಯಿ ಎಂದರೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಇದು ಹಾಗಲಕಾಯಿ ವರ್ಗಕ್ಕೆ ಸೇರಿದ, ಆದರೆ ಕಹಿ ಇರದ ತರಕಾರಿ. ಡೇರೆ ಹೂವಿನ ಗಿಡದಂತೆಯೇ ಇದು ಗಡ್ಡೆಯಿಂದ ಬೆಳೆಯುವ ಬಳ್ಳಿಯಾಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರು ಸಿಕ್ಕಿದಾಗ ಬೆಳೆಯುತ್ತದೆ. ಈಗಲೂ ನನ್ನ ಅಮ್ಮನ ತೌರುಮನೆಯ ಬಳಿ ಮಳೆಗಾಲದಲ್ಲಿ ಕಾಡಿಗೆ ಹೋದರೆ ಅಲ್ಲಿ ನಿಸರ್ಗದತ್ತವಾಗಿ ಬೆಳೆದ ಮಾಡ ಹಾಗಲಕಾಯಿ ಹೇರಳವಾಗಿ ಸಿಗುತ್ತದೆ! ಹಳ್ಳಿಗಳಲ್ಲಿ ಕಾಡಿನಿಂದ ಇದರ ಗಡ್ಡೆಗಳನ್ನು ಕಿತ್ತು ತಂದು ಮನೆಯ ಹಿತ್ತಿಲಲ್ಲಿ ಬಳ್ಳಿಯನ್ನು ಬೆಳೆಸಿ, ಈ ತರಕಾರಿಯನ್ನು ಅಡಿಗೆಗೆ ಬಳಸುತ್ತಾರೆ.
ನಾವು ಈ ಅಪರೂಪದ ತರಕಾರಿಯನ್ನು ನೋಡದೆ 4 - 5 ವರ್ಷಗಳಾದರೂ ಆಗಿಬಿಟ್ಟಿತ್ತೇನೊ? ಕಳೆದ ವಾರ ಜಯನಗರಕ್ಕೆ ಶಾಪಿಂಗ್ ಗೆ ಹೋದಾಗ ಅಲ್ಲಿಯ ಅಂಗಡಿಯೊಂದರಲ್ಲಿ ಮಾಡಹಾಗಲಕಾಯಿ ಮಾರಾಟಕ್ಕಿತ್ತು. ಎಷ್ಟೋ ವರ್ಷಗಳ ನಂತರ ಈ ತರಕಾರಿಯನ್ನು ನೋಡಿ ಬಹಳ ಖುಷಿಯಾಯಿತು! ಅಲ್ಲಿಂದ ತಂದ ಮಾಡಹಾಗಲಕಾಯಿಯಿಂದ ನಾನು ತಯಾರಿಸಿದ 'ಹಶಿ' ಯ ರೆಸಿಪಿ ಇಲ್ಲಿದೆ:  


ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಮಾಡಹಾಗಲಕಾಯಿ - 1 1/2  ಅಥವಾ 2 
ತೆಂಗಿನತುರಿ - 3/4 ಕಪ್
ಗಟ್ಟಿ ಮೊಸರು - 3/4 ರಿಂದ 1 ಕಪ್ 
ಒಗ್ಗರಣೆಗೆ: ಎಣ್ಣೆ - 2 ಚಮಚ, ಒಣಮೆಣಸು - 1, ಉದ್ದಿನಬೇಳೆ - 1 ಚಮಚ, ಸಾಸಿವೆ - 1 ಚಮಚ, ಹಸಿಮೆಣಸು - 1 
ರುಚಿಗೆ ಉಪ್ಪು 


ಮಾಡುವ ವಿಧಾನ:
ಮಾಡಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಹಸಿಮೆಣಸಿನ ಚೂರುಗಳನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಸಣ್ಣಗೆ ಹೆಚ್ಚಿದ ಮಾಡಹಾಗಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ 20 ನಿಮಿಷ ಹುರಿಯಿರಿ.
ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸಿ ರುಬ್ಬಿ.
ಹುರಿದ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ರುಬ್ಬಿದ ತೆಂಗಿನತುರಿ, ಮೊಸರು ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ.
ತಯಾರಾದ ಹಶಿಯನ್ನು ಅನ್ನದೊಡನೆ ಹಾಕಿಕೊಂಡು ಸವಿಯಿರಿ.


Monday, 20 August 2012

ಅವರೆಕಾಳು ಹುಳಿ (ಸಾಂಬಾರ್) | Avarekalu (Hyacinth Beans) Sambar

Click here for English version.

ಈ ಸಾಂಬಾರ್ ನ್ನು ನಾನು ಕಲಿತದ್ದು ಇತ್ತೀಚೆಗೆ. ಅವರೆಕಾಳಿನ ಸಾಂಬಾರ್ ತುಂಬಾ ಚೆನ್ನಾಗಿರುವುದೆಂದು ಕೇಳಿದ್ದು ಬಿಟ್ಟರೆ ಎಂದೂ ರುಚಿ ನೋಡಿರಲಿಲ್ಲ. ಹಳೆಯ ಕನ್ನಡ ಮ್ಯಾಗಜಿನ್ ಒಂದರಲ್ಲಿ ಇದ್ದ ರೆಸಿಪಿಯನ್ನು ಓದುತ್ತಿದ್ದಾಗ ಟ್ರೈ ಮಾಡೋಣವೆನಿಸಿತು. ಹೇಗೂ ಮನೆಯಲ್ಲಿ ಅವರೆಕಾಳು ಇದ್ದುದರಿಂದ ತಯಾರಿಸುವುದಕ್ಕೆ ಕಷ್ಟವೇನೂ ಇರಲಿಲ್ಲ. ಸುಲಭದಲ್ಲಿ ತಯಾರಿಸಬಹುದಾದ ಈ ಸಾಂಬಾರ್ ಬಹಳ ರುಚಿಕಟ್ಟಾಗಿತ್ತು! ಅವರೇಕಾಳು ಸಾಂಬಾರ್ ತಯಾರಿಕಾ ವಿಧಾನವನ್ನು ನಿಮ್ಮೊಡನೆಯೂ ಹಂಚಿಕೊಳ್ಳುತ್ತಿದ್ದೇನೆ, ಟ್ರೈ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಅವರೆಕಾಳು - 1 1/4 ಕಪ್ (ಮೆತ್ತಗೆ ಬೇಯಿಸಿಕೊಳ್ಳಿ)
ಎಣ್ಣೆ - 5 ಚಮಚ
ಚಕ್ಕೆ - 1 ಚಿಕ್ಕ ಚೂರು
ಒಣಮೆಣಸು - 2 (ಖಾರಕ್ಕೆ ತಕ್ಕಂತೆ)
ಮೆಂತ್ಯ - 1/4 ಚಮಚ
ಕೊತ್ತಂಬರಿ - 1 1/2 ಚಮಚ
ಜೀರಿಗೆ - 1/2 ಚಮಚ
ಗಸಗಸೆ - 1 ಚಮಚ
1 ಮಧ್ಯಮ ಗಾತ್ರದ ಈರುಳ್ಳಿ  
2 ಎಸಳು ಬೆಳ್ಳುಳ್ಳಿ
ತೆಂಗಿನತುರಿ - 4 ಟೇಬಲ್ ಚಮಚ
ಹುಣಸೆಹಣ್ಣು - 1 ಟೇಬಲ್ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - 1 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ನೀರು - 2 ರಿಂದ 2 1/2 ಕಪ್ 


ಮಾಡುವ ವಿಧಾನ:
ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿಕೊಂಡು ಒಂದು ಭಾಗವನ್ನು ದೊಡ್ಡ ಹೋಳುಗಳಾಗಿ ಹೆಚ್ಚಿಕೊಳ್ಳಿ. ಇನ್ನೊಂದು ಭಾಗವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ಬಾಣಲಿಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಚಕ್ಕೆ, ಒಣಮೆಣಸು, ಕೊತ್ತಂಬರಿ, ಜೀರಿಗೆ, ಗಸಗಸೆ ಸೇರಿಸಿ ಹುರಿದುಕೊಳ್ಳಿ.
ಪುನಃ ಅದೇ ಬಾಣಲಿಯಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ ಬೆಳ್ಳುಳ್ಳಿ ಮತ್ತು ದೊಡ್ಡದಾಗಿ ಹೆಚ್ಚಿದ ಈರುಳ್ಳಿ ಹೋಳುಗಳನ್ನು ಸೇರಿಸಿ 3 - 4 ನಿಮಿಷ ಹುರಿಯಿರಿ.
ಹುರಿದ ಎಲ್ಲಾ ಸಾಮಗ್ರಿಗಳನ್ನು ತೆಂಗಿನತುರಿ, 1/4 ಕಪ್ ನಷ್ಟು ಬೇಯಿಸಿದ ಅವರೆಕಾಳು ಮತ್ತು ಹುಣಸೆಹಣ್ಣಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಬಾಣಲಿಯಲ್ಲಿ 3 ಚಮಚ ಎಣ್ಣೆ ಕಾಯಿಸಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಇದಕ್ಕೆ ಅವರೆಕಾಳು ಸೇರಿಸಿ 3 - 4 ನಿಮಿಷ ಹುರಿಯಿರಿ.
ರುಬ್ಬಿದ ಮಿಶ್ರಣವನ್ನು ಅವರೆಕಾಳಿಗೆ ಸೇರಿಸಿ 2 ನಿಮಿಷ ಅಥವಾ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಇದಕ್ಕೆ 2 ರಿಂದ 2 1/2 ಕಪ್ ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ 10 ನಿಮಿಷ ಕುದಿಸಿ ಇಳಿಸಿ.
ಈ ಸಾಂಬಾರ್ ಅನ್ನ, ರೊಟ್ಟಿ, ಚಪಾತಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ.

Wednesday, 15 August 2012

ಕಾಜ - ಆಂಧ್ರ ಸ್ಪೆಷಲ್ | Kaja - Andhra Special

Click here for English version.

ಕಳೆದ ತಿಂಗಳು ನಮ್ಮದೊಂದು ಫ್ಯಾಮಿಲಿ ಮೀಟ್ ಇತ್ತು. ಅವರೆಲ್ಲ ನನ್ನ ಕಸಿನ್ ಮನೆಗೆ ಬರುವವರಿದ್ದರಿಂದ ನಾನು ಅವರೆಲ್ಲರಿಗಾಗಿ  ಏನಾದರೂ ಸ್ವೀಟ್ ತಯಾರಿಸೋಣವೆಂದು ಯೋಚಿಸಿದೆ. ನನ್ನ ಆಂಧ್ರ ಫ್ರೆಂಡ್ ಒಬ್ಬಳು ಅವರ ಕಡೆ ತಯಾರಿಸುವ 'ಕಾಜ' ಎಂಬ ಸ್ವೀಟ್ ತುಂಬ ಚೆನ್ನಾಗಿರುವುದೆಂದು ಯಾವಾಗಲೂ ಹೇಳುತ್ತಿದ್ದಳು. ಈ ಹೊಸ ಸ್ವೀಟ್ ಎಲ್ಲರಿಗೂ ಇಷ್ಟವಾಗಬಹುದೆಂದು ಯೋಚಿಸಿ, ಕೊನೆಗೆ ಅದನ್ನೇ ತಯಾರಿಸಿದ್ದಾಯಿತು!
ಈ 'ಕಾಜ' ಸ್ವೀಟ್ ನಲ್ಲೂ ಎರಡ್ಮೂರು ಬಗೆಗಳಿವೆ. ನಾನು ತಯಾರಿಸಿದ್ದು ಕಾಕಿನಾಡ ಕಾಜ. ಇದು ರುಚಿಯಲ್ಲಿ ಸ್ವಲ್ಪಮಟ್ಟಿಗೆ ನಾವು ಕರ್ನಾಟಕದಲ್ಲಿ ತಯಾರಿಸುವ 'ಸಾಟೆ'ಯನ್ನು ಹೋಲುತ್ತದೆ.  'ಕಾಜ'ವನ್ನು ಸ್ವೀಟ್ ನಂತೆಯೂ ಬಳಸಬಹುದು ಇಲ್ಲವೇ ಟೀ ಯೊಡನೆ ಸ್ನ್ಯಾಕ್ಸ್ ನಂತೆಯೂ ಬಳಸಬಹುದು. ತಯಾರಿಸಿದ ಒಂದು ವಾರದವರೆಗೂ ಇದು ಫ್ರೆಶ್ ಆಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 1 ರಿಂದ 1 1/2 ಘಂಟೆ 
ಹಿಟ್ಟು ನೆನೆಯಲು ಬೇಕಾಗುವ ಸಮಯ: 1 ಘಂಟೆ 
ಈ ಅಳತೆಯಿಂದ ಸುಮಾರು 45 ಕಾಜಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - 400 ಗ್ರಾಂ 
ತುಪ್ಪ - 3ರಿಂದ 4 ಟೇಬಲ್ ಚಮಚ 
ಚಿಟಿಕೆ ಉಪ್ಪು  
ನೀರು (ಹಿಟ್ಟನ್ನು ಕಲಸಲು) - ಅಂದಾಜು 150 ml
ಸಕ್ಕರೆ - 400 ಗ್ರಾಂ 
ಏಲಕ್ಕಿಪುಡಿ - 1/4 ಚಮಚ
ಕರಿಯಲು ಎಣ್ಣೆ  


ಮಾಡುವ ವಿಧಾನ:
ಮೈದಾಹಿಟ್ಟಿಗೆ ತುಪ್ಪ ಹಾಕಿ ಚೆನ್ನಾಗಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಚಿಟಿಕೆ ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಹಿಟ್ಟನ್ನು ಒಂದು ಘಂಟೆಕಾಲ ಹಾಗೇ ಮುಚ್ಚಿಟ್ಟು ಸೆಟ್ ಆಗಲು ಬಿಡಿ.
ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಂದೆಳೆ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿಪುಡಿ ಸೇರಿಸಿ ಮುಚ್ಚಿಡಿ.
ತಯಾರಿಸಿದ ಹಿಟ್ಟನ್ನು ಲಟ್ಟಣಿಗೆ ಉಪಯೋಗಿಸಿ ಚಪಾತಿಯಷ್ಟು ತೆಳ್ಳಗೆ, ದೊಡ್ಡದಾಗಿ ಆಯತಾಕಾರಕ್ಕೆ ಲಟ್ಟಿಸಿ. ಲಟ್ಟಿಸುವಾಗ ಒಣ ಹಿಟ್ಟನ್ನು ಧಾರಾಳವಾಗಿ ಬಳಸಿ. 
ಲಟ್ಟಿಸಿದ ರೊಟ್ಟಿಯ ಅಂಚುಗಳನ್ನು ಕಟ್ ಮಾಡಿ, ಸರಿಯಾದ ಆಕಾರಕ್ಕೆ ತನ್ನಿ. ನಂತರ ರೊಟ್ಟಿಯನ್ನು (ಚಿತ್ರದಲ್ಲಿ ತೋರಿಸಿದಂತೆ) ಆದಷ್ಟು ಬಿಗಿಯಾಗಿ ಸುರುಳಿ ಮಾಡಿ. 
ರೊಟ್ಟಿ ಸುರುಳಿಯನ್ನು ಸುಮಾರು 1 1/2 cm ಅಗಲದ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಕಟ್ ಮಾಡಿದ ಚೂರುಗಳನ್ನು ಲಟ್ಟಣಿಗೆಯಿಂದ ಸ್ವಲ್ಪ ಫ್ಲಾಟ್ ಮಾಡಿಕೊಳ್ಳಿ.
ಈ ಚೂರುಗಳನ್ನು ಕಡಿಮೆ ಉರಿಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಇವು ಚೆನ್ನಾಗಿ ಗರಿಯಾಗಲು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತದೆ. 
ಕರಿದ 'ಕಾಜ'ಗಳನ್ನು ಟಿಶ್ಯೂ ಪೇಪರ್ ಮೇಲೆ ಒಂದು ನಿಮಿಷ ಹರವಿ. ನಂತರ ಇವನ್ನು ಸಕ್ಕರೆ ಪಾಕದಲ್ಲಿ 5 ನಿಮಿಷ ನೆನೆಸಿ ತೆಗೆದು ಆರಲು ಬಿಡಿ.
ಆರಿದ ಕಾಜಗಳನ್ನು ಗಾಳಿಯಾಡದ ಕಂಟೇನರ್ ನಲ್ಲಿ ಹಾಕಿಟ್ಟು ಬಳಸಿ. ಇವು ಒಂದು ವಾರದವರೆಗೆ ಕೆಡದೆ ಚೆನ್ನಾಗಿರುತ್ತವೆ.

Monday, 6 August 2012

ಹಾಲುಗುಂಬಳಕಾಯಿ (ಸೋರೆಕಾಯಿ) ಪಲ್ಯ | Bottle Gourd Palya (Spiced Bottlegourd)

Click here for English version.

ತರಕಾರಿ ಕೊಳ್ಳಲು ರಿಲೈಯನ್ಸ್ ಫ್ರೆಶ್ ಗೆ ಹೋದಾಗ ನಾನು ಸಾಮಾನ್ಯವಾಗಿ ಹಾಲುಗುಂಬಳ (ಸೋರೆ)ಕಾಯಿಯನ್ನು ತರುತ್ತಿರುತ್ತೇನೆ. ನಾವೆಲ್ಲ ಚಿಕ್ಕವರಿದ್ದಾಗ ವರ್ಷದ ಯಾವುದೋ ಒಂದು ಸೀಜನ್ ನಲ್ಲಿ ಮನೆಯ ಹಿತ್ತಿಲಲ್ಲಿ ಹಾಲುಗುಂಬಳವನ್ನು ಬೆಳೆಯುತ್ತಿದ್ದರು ಮತ್ತು ಆ ಸೀಜನ್ ನಲ್ಲಿ ಮಾತ್ರ ಹಾಲುಗುಂಬಳದ ಅಡಿಗೆ! ಆದರೆ ಈಗ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ಹಾಲುಗುಂಬಳಕಾಯಿ ಸಿಗುವುದರಿಂದ ಯಾವಾಗ ಬೇಕಿದ್ದರೂ ಹಾಲುಗುಂಬಳದ ಅಡಿಗೆಗಳನ್ನು ಸವಿಯಬಹುದು.
ಫ್ರಿಜ್ ನಲ್ಲಿ ಕಳೆದ ವಾರ ತಂದಿದ್ದ ಹಾಲುಗುಂಬಳಕಾಯಿ ಅರ್ಧ ಭಾಗ ಹಾಗೇ ಉಳಿದಿತ್ತು. ಅಮ್ಮನ ಬಳಿ ಏನು ಅಡಿಗೆ ಮಾಡಬಹುದೆಂದು ಕೇಳಿದಾಗ ಅವರು ಪಲ್ಯ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಸ್ವಲ್ಪ ಖಾರ, ಸ್ವಲ್ಪ ಸಿಹಿಯಾಗಿರುವ ಈ ಪಲ್ಯ ಅನ್ನ, ರೊಟ್ಟಿ, ಚಪಾತಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಅರ್ಧ ಹಾಲುಗುಂಬಳಕಾಯಿ (ಸೋರೆಕಾಯಿ)
ಎಣ್ಣೆ 4 - 5 ಚಮಚ
ಉದ್ದಿನಬೇಳೆ - 1 ಚಮಚ
ಸಾಸಿವೆ - 1 ಚಮಚ
ಇಂಗು - ಚಿಟಿಕೆ
ಅರಿಶಿನ - ಚಿಟಿಕೆ
ಕರಿಬೇವು - 1 ಎಸಳು 
ಸಾಂಬಾರ್ ಪುಡಿ - 1 1/4 ಚಮಚ
ಆಮ್ ಚೂರ್ ಪೌಡರ್ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ಸಕ್ಕರೆ - 1 1/2 ಚಮಚ ಅಥವಾ ರುಚಿಗೆ ತಕ್ಕಷ್ಟು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಹಾಲುಗುಂಬಳಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಇಂಗು, ಅರಿಶಿನ ಹಾಕಿ ಒಗ್ಗರಣೆ ಮಾಡಿ ಕರಿಬೇವಿನ ಸೊಪ್ಪು, ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ.
ಇದಕ್ಕೆ ಹೆಚ್ಚಿದ ಹಾಲುಗುಂಬಳಕಾಯಿ ಹೋಳುಗಳನ್ನು ಸೇರಿಸಿ ಮಿಕ್ಸ್ ಮಾಡಿ, 3 ಕಪ್ ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ಹೋಳುಗಳು ಮೆತ್ತಗಾಗುವವರೆಗೆ ಬೇಯಿಸಿ.
ಪಲ್ಯದ ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಬೇಕಿದ್ದರೆ ಇನ್ನೂ ಸ್ವಲ್ಪ ನೀರು ಸೇರಿಸಿ.
ಹೋಳುಗಳು ಬೆಂದು ಮೆತ್ತಗಾದಾಗ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಸಕ್ಕರೆ ಸೇರಿಸಿ ಕೈಯಾಡಿಸಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ ಇಳಿಸಿ.
ರುಚಿಕರವಾದ ಪಲ್ಯವನ್ನು ಅನ್ನ, ಚಪಾತಿ ಅಥವಾ ರೊಟ್ಟಿಯೊಡನೆ ಸರ್ವ್ ಮಾಡಿ.


ಟಿಪ್ಸ್:
  • ಪಲ್ಯಕ್ಕೆ ತೆಂಗಿನತುರಿ ಬೇಕಿದ್ದರೆ ಸೇರಿಸಬಹುದು. ತೆಂಗಿನತುರಿ ಸೇರಿಸುವುದಾದರೆ ಕೊನೆಯಲ್ಲಿ ಸೇರಿಸಿ 2 ನಿಮಿಷ ಬಿಸಿಮಾಡಿ ಉರಿ ಆಫ್ ಮಾಡಿ.
  • ನಾನು ಈ ಪಲ್ಯಕ್ಕೆ ಮನೆಯಲ್ಲೇ ತಯಾರಿಸಿದ ಸಾಂಬಾರ್ ಪೌಡರ್ ನ್ನು ಬಳಸಿದ್ದೇನೆ. ಇದರ ಬದಲು ನಿಮ್ಮಿಷ್ಟದ ಇತರ ಯಾವುದೇ ಸಾಂಬಾರ್ ಪುಡಿಯನ್ನು ಬಳಸಬಹುದು.

Tuesday, 31 July 2012

ಅವರೆಕಾಳು ರೊಟ್ಟಿ (ತಾಲಿಪಿಟ್ಟು) | Avarekaalu Rotti (Talipittu)

Click here for English version.

ಬೆಂಗಳೂರಿನಲ್ಲಿ ಸೀಜನ್ ಅಲ್ಲದ ಟೈಮ್ ನಲ್ಲಿ ಅವರೆಕಾಳು ಸಿಕ್ಕಿಬಿಟ್ಟಿತ್ತು ಈ ವರ್ಷ! ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಎಲ್ಲ ಕಡೆ ಅವರೆಕಾಳು ಸಿಗುತ್ತದೆ. ಆದರೆ ಈ ವರ್ಷ ಅದು ಹೇಗೋ ಗೊತ್ತಿಲ್ಲ, ಜುಲೈ ತಿಂಗಳಿನಲ್ಲೂ ಅವರೆಕಾಳು ಕೆಲವು ಕಡೆಗಳಲ್ಲಿ ದೊರೆಯುತ್ತಿದೆ! ಕಳೆದ ವಾರ ನನ್ನ ತಂಗಿ ಅವರ ಮನೆಯ ಬಳಿ ಅವರೆಕಾಳು ಮಾರುತ್ತಿದ್ದನ್ನು ಕಂಡು, ಒಂದಿಷ್ಟು ಕೊಂಡಳಂತೆ. ನಂತರ ನನಗೂ ಸ್ವಲ್ಪ ಅವರೆಕಾಳು ತಂದುಕೊಟ್ಟಿದ್ದಳು. ನಮ್ಮ ಮನೆಯಲ್ಲಿ ಅವರೆಕಾಳು ತಂದರೆ ಹೆಚ್ಚಾಗಿ ತಯಾರಿಸುವ ತಿಂಡಿ ಎಂದರೆ ಅವರೆಕಾಳು ರೊಟ್ಟಿ. ನಮಗಿಬ್ಬರಿಗೂ ಈ ರೊಟ್ಟಿ ಎಂದರೆ ಬಹಳ ಇಷ್ಟ. ಹೀಗಾಗಿ ಅಪರೂಪಕ್ಕೆ ಅವರೆಕಾಳಿನ ರೊಟ್ಟಿ ತಯಾರಿಸಿ ಸವಿದೆವು!


ತಯಾರಿಸಲು ಬೇಕಾಗುವ ಸಮಯ: 30 - 40 ನಿಮಿಷಗಳು 
ಈ ಅಳತೆಯಿಂದ 6 ರೊಟ್ಟಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು: 
ಮೆತ್ತಗೆ ಬೇಯಿಸಿದ ಅವರೆಕಾಳು - 1 ಕಪ್
ಮೀಡಿಯಂ ಸೈಜ್ ಕ್ಯಾರೆಟ್ - 1
ಮೆಂತ್ಯ ಸೊಪ್ಪು ಅಥವಾ ಸಬ್ಬಸಿಗೆ ಸೊಪ್ಪು - 1 ಕಟ್ಟು 
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ತೆಂಗಿನತುರಿ - 1 ಕಪ್ 
ಈರುಳ್ಳಿ - 2 
ಅಕ್ಕಿಹಿಟ್ಟು - 1 3/4 ಕಪ್ ಅಂದಾಜು 
ರುಚಿಗೆ ತಕ್ಕಷ್ಟು ಉಪ್ಪು 


ಮಾಡುವ ವಿಧಾನ:
ಅವರೆಕಾಳನ್ನು ಮೆತ್ತಗೆ ಬೇಯಿಸಿ, ನೀರನ್ನೆಲ್ಲ ಬಸಿದುಬಿಡಿ. ಕುಕ್ಕರ್ ನಲ್ಲಿ 3 ವಿಸಿಲ್ ಆಗುವತನಕ ಬೇಯಿಸಿದರೆ ಕಾಳು ಮೆತ್ತಗೆ ಬೆಂದಿರುತ್ತದೆ.
ಕ್ಯಾರೆಟ್ ತುರಿದುಕೊಳ್ಳಿ. ಹಸಿಮೆಣಸನ್ನು ಜಜ್ಜಿಕೊಳ್ಳಿ. ಸೊಪ್ಪು ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ತುರಿದ ಕ್ಯಾರೆಟ್, ಜಜ್ಜಿದ ಹಸಿಮೆಣಸು, ತೆಂಗಿನತುರಿ, ಹೆಚ್ಚಿದ ಸೊಪ್ಪು ಮತ್ತು ಈರುಳ್ಳಿಯನ್ನು ಉಪ್ಪು ಸೇರಿಸಿ ಕಲಸಿ 10 ನಿಮಿಷ ಇಡಿ. ಅಷ್ಟರಲ್ಲಿ ತರಕಾರಿಗಳು ನೀರು ಬಿಟ್ಟುಕೊಂಡು, ಹಿಟ್ಟು ಕಲಸಲು ಸುಲಭವಾಗುತ್ತದೆ.
ಬೇಯಿಸಿದ ಅವರೆಕಾಳನ್ನು ಸ್ವಲ್ಪ ಹಿಸುಕಿಕೊಂಡು, ಮಿಶ್ರಣಕ್ಕೆ ಸೇರಿಸಿ ಕಲಸಿ. 
ಇದಕ್ಕೆ ಹಿಡಿಸುವಷ್ಟು ಅಕ್ಕಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ಉದುರಾಗಿದ್ದರೆ ಒಂದೆರಡು ಚಮಚ ನೀರು ಸೇರಿಸಬಹುದು.
ಕಲಸಿದ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಆದಷ್ಟು ತೆಳ್ಳಗೆ ರೊಟ್ಟಿಯಂತೆ ತಟ್ಟಿ, ಮಧ್ಯೆ ಒಂದು ತೂತು ಮಾಡಿ.
ಈ ರೊಟ್ಟಿಯನ್ನು ಕಾದ ಬಾಣಲಿಯಮೇಲೆ ಎಣ್ಣೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಸ್ವಲ್ಪ ಕಡಿಮೆ ಉರಿಯಲ್ಲಿ ಬೇಯಿಸಿದರೆ ರೊಟ್ಟಿ ಗರಿಯಾಗಿ ತಿನ್ನಲು ಚೆನ್ನಾಗಿರುತ್ತದೆ.
ತಯಾರಾದ ರೊಟ್ಟಿಯನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ. ಈ ರೊಟ್ಟಿಯನ್ನು ಯಾವುದೇ ಸೈಡ್ ಡಿಶ್ ಇಲ್ಲದೆ ಹಾಗೆಯೇ ತಿನ್ನಬಹುದು.


ಟಿಪ್ಸ್:
  • ನಾನು ಈ ರೊಟ್ಟಿಗೆ ಸಬ್ಬಸಿಗೆ ಸೊಪ್ಪನ್ನು ಬಳಸಿದ್ದೇನೆ. ಸಬ್ಬಸಿಗೆಯ ಬದಲು ಮೆಂತ್ಯ ಸೊಪ್ಪನ್ನು ಬಳಸಿದರೂ ಚೆನ್ನಾಗಿರುತ್ತದೆ.

Wednesday, 25 July 2012

ಚಕ್ಕೆ ಪಳದ್ಯ | Chakke Paladya

Click here for English version.

ಚಕ್ಕೆ ಪಳದ್ಯ ಎನ್ನುವುದು ಮಲೆನಾಡ ಕಡೆ ತಯಾರಿಸುವ ಒಂದು ಬಗೆಯ ಮೇಲೋಗರ. ಹಲಸಿನಕಾಯಿಯಿಂದ ತಯಾರಿಸುವುದರಿಂದ ಇದನ್ನು ಹಲಸಿನ ಸೀಜನ್ ನಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಊಟಕ್ಕೆ ಬಹಳ ರುಚಿ ಕೊಡುವ ಈ ಪಳದ್ಯವನ್ನು ತಯಾರಿಸುವುದು ತೀರಾ ಸುಲಭ! 
ಬೆಂಗಳೂರಿನಲ್ಲಿ ಹಲಸಿನಕಾಯಿ ಸಿಗುವುದು ಕಷ್ಟವಾದ್ದರಿಂದ ಊರಿನಿಂದ ನಮಗಾಗಿ ಹಲಸಿನ ತೊಳೆಗಳನ್ನು ಬಿಡಿಸಿ ಕಳಿಸಿದ್ದರು. ಅದನ್ನು ಫ್ರೀಜರ್ ನಲ್ಲಿ ಇಟ್ಟುಕೊಂಡು ನಾವು ತಿಂಗಳುಗಟ್ಟಲೆ ಬಳಸಿದೆವು. ಹಲಸಿನಕಾಯಿ ಸಾಂಬಾರ್, ಪಲ್ಯ, ಚಕ್ಕೆ ಪಳದ್ಯ, ಹೀಗೆ ಅನೇಕ ವೆರೈಟಿಗಳನ್ನು ತಯಾರಿಸಿದ್ದಾಯಿತು. ರುಚಿಕರವಾದ ಹಾಗೂ ಸುಲಭದಲ್ಲಿ ತಯಾರಿಸಬಹುದಾದ ಚಕ್ಕೆ ಪಳದ್ಯದ ರೆಸಿಪಿ ಇಲ್ಲಿದೆ, ಟ್ರೈ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಬೆಳೆದ ಹಲಸಿನ ಕಾಯಿಯ ತೊಳೆಗಳು 10 - 12 
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ನಿಂಬೆಹಣ್ಣು - 1 
ಎಣ್ಣೆ 3 - 4 ಹನಿ 
ನೀರು - 3 ಕಪ್ 
ರುಚಿಗೆ ತಕ್ಕಷ್ಟು ಉಪ್ಪು 
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 1/2 ಚಮಚ, ಚಿಟಿಕೆ ಇಂಗು, ಕರಿಬೇವು 

ಮಾಡುವ ವಿಧಾನ:
ಹಲಸಿನ ಬೀಜ ತೆಗೆದು, ತೊಳೆಗಳನ್ನು ಉದ್ದುದ್ದವಾಗಿ ಮಧ್ಯಮಗಾತ್ರದ ಹೋಳುಗಳಾಗಿ ಮಾಡಿಕೊಳ್ಳಿ.
ಕುಕ್ಕರ್ ನಲ್ಲಿ 2 1/2 ಕಪ್ ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, 3 - 4 ಹನಿ ಎಣ್ಣೆ ಸೇರಿಸಿ ಬಿಸಿಗಿಡಿ. ಇದಕ್ಕೆ ಉದ್ದಕ್ಕೆ ಸೀಳಿದ ಹಸಿಮೆಣಸು ಮತ್ತು ಹೆಚ್ಚಿದ ಹಲಸಿನ ತೊಳೆಗಳನ್ನು ಸೇರಿಸಿ 3 ವಿಸಿಲ್ ಆಗುವವರೆಗೆ ಬೇಯಿಸಿ.
ಬೆಂದ ಮಿಶ್ರಣ ಸ್ವಲ್ಪ ತಣ್ಣಗಾದಾಗ ಹಲಸಿನ ತೊಳೆಯ ಅರ್ಧದಷ್ಟನ್ನು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. 
ರುಬ್ಬಿದ ಪೇಸ್ಟ್ ನ್ನು ಹಲಸಿನ ತೊಳೆ ಮಿಶ್ರಣಕ್ಕೆ ಸೇರಿಸಿ 3 - 4 ನಿಮಿಷ ಕುದಿಸಿ ಇಳಿಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಕುದಿಸಿದ ಪಳದ್ಯಕ್ಕೆ ಸೇರಿಸಿ.
ರುಚಿಕಟ್ಟಾದ ಬಿಸಿಬಿಸಿ ಪಳದ್ಯವನ್ನು ಅನ್ನದೊಡನೆ ಸರ್ವ್ ಮಾಡಿ.


ಟಿಪ್ಸ್:
  • ಹಲಸಿನ ತೊಳೆಗಳನ್ನು ಕುಕ್ಕರ್ ನ ಬದಲು ಹಾಗೇ ಪಾತ್ರೆಯಲ್ಲೂ ಬೇಯಿಸಬಹುದು. ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕು ಅಷ್ಟೆ!
  • ಈ ಪಳದ್ಯಕ್ಕೆ ಬೇಯಿಸಿದ ಹಲಸಿನ ತೊಳೆಗಳಲ್ಲಿ ಸ್ವಲ್ಪ ಭಾಗವನ್ನು ರುಬ್ಬಿ ಸೇರಿಸುವುದರಿಂದ ಪಳದ್ಯ ತೀರಾ ನೀರಾಗಿರದೆ, ಸ್ವಲ್ಪ ದಪ್ಪಗಾಗುತ್ತದೆ.

Thursday, 19 July 2012

ಫ್ಲಾಕ್ಸ್ ಸೀಡ್ಸ್ ಪುಡಿ | Flax Seeds Powder (Podi)

Click here for English version.

ನಾನು ಎಗ್ ಲೆಸ್ ಕೇಕ್ ತಯಾರಿಸುವುದಕ್ಕೆ ಫ್ಲಾಕ್ಸ್ ಸೀಡ್ಸ್ ಬಳಸಬಹುದೆಂದು ಅನೇಕ ಕಡೆ ಓದಿದ್ದೆ. ಆದರೆ ಫ್ಲಾಕ್ಸ್ ಸೀಡ್ಸ್ ಕೊಳ್ಳಲು ಹೋದರೆ ಇಲ್ಲಿ ಎಲ್ಲೂ ಸಿಕ್ಕಿರಲಿಲ್ಲ. ನಮ್ಮೂರು ಶಿರಸಿಗೆ ಹೋದಾಗ ಅಲ್ಲಿ ಒಂದು ಅಂಗಡಿಯಲ್ಲಿ ಫ್ಲಾಕ್ಸ್ ಸೀಡ್ಸ್ ಕೊಂಡೆವು. ಕೊನೆಗೆ ಕೇಳಿದರೆ, ಅಲ್ಲೆಲ್ಲಾ ಫ್ಲಾಕ್ಸ್ ಸೀಡ್ಸ್ ಆರಾಮಾಗಿ ಸಿಗುವುದಂತೆ! ಫ್ಲಾಕ್ಸ್ ಸೀಡ್ಸ್ ಗೆ ಕನ್ನಡದಲ್ಲಿ ಅಗಸೆ ಬೀಜವೆಂದು ಹೇಳುತ್ತಾರೆ. ಸಸ್ಯಾಹಾರಿಗಳಿಗೆ ಆಹಾರದಲ್ಲಿ ದೊರೆಯದ, ಆದರೆ ನಮ್ಮ ದೇಹಕ್ಕೆ ಅತ್ಯವಶ್ಯವಾದ ಒಮೆಗಾ - 3 ಫ್ಯಾಟಿ ಆಸಿಡ್ಸ್ ಇದರಲ್ಲಿ ಹೇರಳವಾಗಿರುತ್ತದೆ. ಅಲ್ಲದೆ ಫ್ಲಾಕ್ಸ್ ಸೀಡ್ಸ್ ಕೊಲೆಸ್ಟರಾಲ್ ನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಇದರ ಸೇವನೆ ಅತ್ಯವಶ್ಯ.
ನಾವು ಫ್ಲಾಕ್ಸ್ ಸೀಡ್ಸ್ ನ ಪುಡಿ ಮಾಡಿಟ್ಟುಕೊಂಡು ದಿನವೂ ಊಟದೊಡನೆ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಫ್ಲಾಕ್ಸ್ ಸೀಡ್ಸ್ ನ್ನು ಹುರಿದುಕೊಂಡು ಅದಕ್ಕೆ ಉಪ್ಪು, ಖಾರ ಇತ್ಯಾದಿ ಸೇರಿಸಿ ಪುಡಿಮಾಡಿಕೊಂಡರೆ ನಾಲಿಗೆಗೂ ರುಚಿ ಎನ್ನಿಸುತ್ತದೆ. ಅಲ್ಲದೆ ಈ ಪುಡಿಯನ್ನು ಮೊಸರಿನೊಡನೆ ಮಿಕ್ಸ್ ಮಾಡಿಕೊಂಡು ರೊಟ್ಟಿ, ಚಪಾತಿಯೊಡನೆ ಸೈಡ್ ಡಿಶ್ ಆಗಿಯೂ ಬಳಸಬಹುದು..


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು  
ಈ ಅಳತೆಯಿಂದ ಸುಮಾರು 1 1/4 ಕಪ್ ನಷ್ಟು ಪುಡಿ ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ) - 3/4 ಕಪ್ 
ಒಣಮೆಣಸು 1 - 2 (ಖಾರಕ್ಕೆ ತಕ್ಕಂತೆ)
ಬೆಳ್ಳುಳ್ಳಿ - 1 ಅಥವಾ 2
ರುಚಿಗೆ ತಕ್ಕಷ್ಟು ಉಪ್ಪು 


ಮಾಡುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ಫ್ಲಾಕ್ಸ್ ಸೀಡ್ಸ್, ಬೆಳ್ಳುಳ್ಳಿ ಮತ್ತು ಒಣಮೆಣಸನ್ನು ಒಟ್ಟಿಗೆ ಹುರಿಯಲಿಡಿ.
ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತ ಫ್ಲಾಕ್ಸ್ ಸೀಡ್ಸ್ ಚಟಪಟ ಎಂದು ಸಿಡಿಯುವವರೆಗೆ ಹುರಿಯಿರಿ.
ತಣ್ಣಗಾದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ.
ತಯಾರಾದ ಫ್ಲಾಕ್ಸ್ ಸೀಡ್ಸ್ ಪುಡಿಯನ್ನು ಗಾಳಿಯಾಡದಂತೆ ಶೇಖರಿಸಿಟ್ಟು ಬಳಸಿ.
1 ಚಮಚದಷ್ಟು ಫ್ಲಾಕ್ಸ್ ಸೀಡ್ಸ್ ಪುಡಿಯನ್ನು ಊಟಕ್ಕೆ ಹಾಕಿಕೊಂಡು ಅನ್ನದೊಡನೆ ಮಿಕ್ಸ್ ಮಾಡಿ ತಿನ್ನಬಹುದು. ಅಥವಾ ಸ್ವಲ್ಪ ಮೊಸರಿನೊಡನೆ ಮಿಕ್ಸ್ ಮಾಡಿಕೊಂಡು ರೊಟ್ಟಿ, ಚಪಾತಿಯೊಡನೆ ಸೈಡ್ ಡಿಶ್ ನಂತೆ ಬಳಸಬಹುದು.


Thursday, 12 July 2012

ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ | Spinach Masala Roti

Click here for English version.

ನಮ್ಮ ಮನೆಯ ಹತ್ತಿರ ಒಂದು ತರಕಾರಿ ಅಂಗಡಿಯಿದೆ. ತರಕಾರಿಗಳು ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಬಗೆಬಗೆಯ ಸೊಪ್ಪುಗಳು ಬಹಳ ಫ್ರೆಶ್ ಆಗಿ ಸಿಗುತ್ತವೆ. ಸಂಜೆಯ ವೇಳೆಯಲ್ಲಿ ಹೋದರಂತೂ ಆಗ ತಾನೇ ಕಿತ್ತು ತಂದ ಸೊಪ್ಪಿನ ಕಟ್ಟುಗಳು ಮಾರಾಟಕ್ಕೆ ಸಿದ್ಧವಾಗಿರುತ್ತವೆ. ನಮ್ಮ ಮನೆಯಲ್ಲಿ ಇತ್ತೀಚಿಗೆ ವಾರಕ್ಕೆ 3 - 4 ದಿನ ಅಲ್ಲಿಂದ ಸೊಪ್ಪು ತರುವುದು ಅಭ್ಯಾಸವಾಗಿದೆ. ಅದರಲ್ಲೂ ನಮ್ಮವರು ಹೆಚ್ಚಾಗಿ ತರುವುದು ಪಾಲಕ್ ಸೊಪ್ಪು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಅದನ್ನು ವಾರದಲ್ಲಿ 3 ದಿನವಾದರೂ ತಿನ್ನಲೇಬೇಕೆಂಬುದು ಅವರ ನಿಯಮ. ಪಾಲಕ್ ಸೊಪ್ಪಿನ ಗ್ರೇವಿ, ಪಲ್ಯಗಳನ್ನು ತಿಂದು ಬೇಜಾರಾಗಿ ಬೇರೆ ಅಡಿಗೆಗಳನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಈ ರೊಟ್ಟಿಯ ರೆಸಿಪಿ! 
ಈ ರೊಟ್ಟಿಯನ್ನು ನಾನು ಹಳೆಯ ಕನ್ನಡ ಮ್ಯಾಗಜಿನ್ ಒಂದರಿಂದ ಕಲಿತದ್ದು. ನಮ್ಮ ಮನೆಯಲ್ಲಿ ಆಗಲೇ ಸುಮಾರು ಬಾರಿ ಈ ರೊಟ್ಟಿ ತಯಾರಿಸಿ ಸೈ ಅನ್ನಿಸಿಕೊಂಡಾಗಿದೆ :) ಈ ರೊಟ್ಟಿಗೆ ಪಾಲಕ್ ಸೊಪ್ಪಿನ ಬದಲು ಮೆಂತ್ಯ ಅಥವಾ ಸಬ್ಬಸಿಗೆ ಸೊಪ್ಪನ್ನು ಬಳಸಿದರೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು 
ಹಿಟ್ಟು ನೆನೆಯಲು ಬೇಕಾಗುವ ಸಮಯ: 30 ನಿಮಿಷಗಳು 
ಈ ಅಳತೆಯಿಂದ 8 ರೊಟ್ಟಿಗಳನ್ನು ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಪಾಲಕ್, ಮೆಂತ್ಯ ಅಥವಾ ಸಬ್ಬಸಿಗೆ ಸೊಪ್ಪು - 1 1/2 ಕಟ್ಟು 
ಗೋಧಿಹಿಟ್ಟು - 2 ಕಪ್ 
ಅಕ್ಕಿಹಿಟ್ಟು - 1/2 ಕಪ್ 
ಕಡಲೆಹಿಟ್ಟು - 1 ಕಪ್ 
ಬೇಕಿಂಗ್ ಪೌಡರ್ - 1 ಚಿಟಿಕೆ 
ಅರಿಶಿನ ಪುಡಿ - 1/4 ಚಮಚ 
ಹಸಿಮೆಣಸು ಶುಂಠಿ ಪೇಸ್ಟ್ - 1 ಚಮಚ 
ರುಚಿಗೆ ತಕ್ಕಷ್ಟು ಉಪ್ಪು 
ಎಣ್ಣೆ - ಸ್ವಲ್ಪ 


ಮಾಡುವ ವಿಧಾನ:
ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
ಗೋಧಿಹಿಟ್ಟು, ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಬೇಕಿಂಗ್ ಪೌಡರ್, ಅರಿಶಿನ ಪುಡಿ ಇಷ್ಟನ್ನೂ ಮಿಕ್ಸ್ ಮಾಡಿಕೊಂಡು 2 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ.
ಹಿಟ್ಟಿನ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಸಿಮೆಣಸು - ಶುಂಠಿ ಪೇಸ್ಟ್ ಸೇರಿಸಿ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.   
ಕಲಸಿದ ಹಿಟ್ಟನ್ನು ಮುಚ್ಚಿಟ್ಟು ಅರ್ಧ ಘಂಟೆ ನೆನೆಯಲು ಬಿಡಿ. ನಂತರ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ತೆಳ್ಳಗೆ ರೊಟ್ಟಿಯಂತೆ ಲಟ್ಟಿಸಿ. ಲಟ್ಟಿಸುವಾಗ ಸ್ವಲ್ಪ ಗೋಧಿಹಿಟ್ಟನ್ನು ಬಳಸಬಹುದು.
ಲಟ್ಟಿಸಿದ ರೊಟ್ಟಿಗಳನ್ನು ಕಾದ ತವಾದ ಮೇಲೆ ಎಣ್ಣೆ ಸವರಿ ಎರಡೂ ಕಡೆ ಬೇಯಿಸಿ. 
ಬಿಸಿಬಿಸಿ ರೊಟ್ಟಿಯನ್ನು ನಿಮ್ಮಿಷ್ಟದ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ.
ಈ ರೊಟ್ಟಿ ತಣ್ಣಗಾದಮೇಲೆಯೂ ಮೆತ್ತಗಿರುವುದರಿಂದ ಟಿಫನ್ ಬಾಕ್ಸ್ ಗೆ ಒಯ್ಯಲೂ ಚೆನ್ನಾಗಿರುತ್ತದೆ.


Friday, 6 July 2012

ಬೂದುಗುಂಬಳಕಾಯಿ ಮಜ್ಜಿಗೆ ಹುಳಿ (ಪಳದ್ಯ) | Ash Gourd Majjige Huli (Yogurt Based Curry)

Click here for English version.

ಬೂದುಗುಂಬಳಕಾಯಿ ಭಾರತೀಯ ಅಡಿಗೆ ಮನೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ತರಕಾರಿಗಳಲ್ಲಿ ಒಂದು. ಹಿಂದಿನ ಕಾಲದಲ್ಲಿ ಸಸ್ಯಾಹಾರಿಗಳಿಗೆ ಬೂದುಗುಂಬಳಕಾಯಿ ನಿಷಿದ್ಧ ಎಂಬ ನಂಬಿಕೆಯಿತ್ತು. ಹೀಗಾಗಿ ಸಂಪ್ರದಾಯಸ್ಥರ ಮನೆಗಳಲ್ಲಿ ಇಂದಿಗೂ ಬೂದುಗುಂಬಳಕಾಯಿಯನ್ನು ಹಿಂದಿನ ಬಾಗಿಲಿನಿಂದ ಮನೆಯೊಳಗೆ ಒಯ್ಯುವ ಪದ್ಧತಿಯಿದೆ! ಇಂಥ ನಂಬಿಕೆ ಏಕಿತ್ತೋ ಗೊತ್ತಿಲ್ಲ. ಆದರೆ ಈ ತರಕಾರಿಯಲ್ಲಿರುವ ಜೀವಸತ್ವಗಳನ್ನು ನೋಡಿದರೆ ಯಾರೂ ತಿನ್ನದೇ ಇರುವಂತಿಲ್ಲ. ಪ್ರೊಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಕಬ್ಬಿಣಾಂಶಗಳ ಆಗರವಾಗಿರುವ ಬೂದುಗುಂಬಳ ಊಟಕ್ಕೂ ತುಂಬ ರುಚಿ.
ಸಾಂಬಾರ್, ಮಜ್ಜಿಗೆ ಹುಳಿ ಇತ್ಯಾದಿ ಮೇಲೋಗರಗಳಿಗೆ ಕುಂಬಳಕಾಯಿ ಬಳಸಿದರೆ ರುಚಿ ಹೆಚ್ಚು. ಕುಂಬಳಕಾಯಿ ಬಳಸಿ ತಯಾರಿಸುವ ಮಜ್ಜಿಗೆ ಹುಳಿಯ ರೆಸಿಪಿ ಇಲ್ಲಿದೆ. ಈ ಮಜ್ಜಿಗೆ ಹುಳಿಗೆ ಕುಂಬಳಕಾಯಿಯ ಬದಲು ಸೀಮೆಬದನೆ, ಬದನೆಕಾಯಿ ಅಥವಾ ಸೌತೆಕಾಯಿಯನ್ನೂ ಬಳಸಬಹುದು. 


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಬೂದುಗುಂಬಳಕಾಯಿ - 1/2 kg
ತೆಂಗಿನತುರಿ - 1 1/4 ಕಪ್ 
ಕಡಲೆಬೇಳೆ - 1 ಚಮಚ (1/2 ಘಂಟೆ ನೆನೆಸಿಡಿ)
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ಹೆಚ್ಚಿದ ಕೊತ್ತಂಬರಿಸೊಪ್ಪು - 3 ಚಮಚ 
ಜೀರಿಗೆ - 3/4 ಚಮಚ
ಅರಿಶಿನ - 1/4 ಚಮಚ
ಶುಂಠಿ - 1/2 ಇಂಚು
ಮಜ್ಜಿಗೆ - 1 ರಿಂದ 1 1/2 ಕಪ್ 
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 2 ಚಮಚ, ಸಾಸಿವೆ - 1 ಚಮಚ, ಕರಿಬೇವು - 1 ಎಸಳು

ಮಾಡುವ ವಿಧಾನ:
ಬೂದುಗುಂಬಳಕಾಯಿಯ ಸಿಪ್ಪೆ ಮತ್ತು ತಿರುಳನ್ನು ತೆಗೆದು, ಮಧ್ಯಮಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಹೋಳಿಗೆ ಬೇಯಲು ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.
ತೆಂಗಿನತುರಿ, ಶುಂಠಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಜೀರಿಗೆ, ಅರಿಶಿನ ಹಾಗೂ ನೆನೆಸಿದ ಕಡಲೇಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ.
ಬೇಯಿಸಿದ ಕುಂಬಳಕಾಯಿ ಹೋಳಿಗೆ ರುಬ್ಬಿದ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 - 4 ನಿಮಿಷ ಕುದಿಸಿ, ಉರಿಯನ್ನು ಆಫ್ ಮಾಡಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಮಜ್ಜಿಗೆ ಹುಳಿಗೆ ಸೇರಿಸಿ.
ಮಜ್ಜಿಗೆ ಹುಳಿ ಸ್ವಲ್ಪ ಬಿಸಿಯಿರುವಾಗಲೇ ಅದಕ್ಕೆ ಮಜ್ಜಿಗೆ ಸೇರಿಸಿ ಮಿಕ್ಸ್ ಮಾಡಿಕೊಂಡು ಅನ್ನದೊಡನೆ ಸರ್ವ್ ಮಾಡಿ.


ಟಿಪ್ಸ್:
  • ಸಂಜೆಗೆ ಅಥವಾ ಮರುದಿನಕ್ಕೆ ಇಟ್ಟು ಬಳಸುವುದಾದರೆ ಬೇಕಾದಷ್ಟೇ ಮಿಶ್ರಣಕ್ಕೆ ಮಜ್ಜಿಗೆ ಸೇರಿಸಿಕೊಂಡು ಬಳಸಿ. ಉಳಿದ ಮಜ್ಜಿಗೆ ಹುಳಿಯನ್ನು ಬೇಕಾದಾಗ ಬಿಸಿಮಾಡಿಕೊಂಡು ಮಜ್ಜಿಗೆ ಸೇರಿಸಿಕೊಳ್ಳಬಹುದು.
  • ಕುಂಬಳಕಾಯಿಯ ಬದಲು ಸೀಮೆಬದನೆ, ಬದನೆಕಾಯಿ ಅಥವಾ ಸೌತೆಕಾಯಿಯನ್ನೂ ಬಳಸಬಹುದು.
  • ನೆನೆಸಿದ ಕಡಲೆಯನ್ನು ರುಬ್ಬುವಾಗ ಸೇರಿಸುವುದರಿಂದ ಮಜ್ಜಿಗೆಹುಳಿ ದಪ್ಪಗಾಗುತ್ತದೆ. ಕಡ್ಲೆಬೇಳೆಯ ಬದಲು ಪುಟಾಣಿ ಬೇಳೆಯನ್ನೂ ಬಳಸಬಹುದು.

Monday, 2 July 2012

ಬೆಲ್ಲದ ಪಾನಕ | Jaggery Juice (Jaggery Cool Drink)

Click here for English version.

ಬೇಸಿಗೆಯಲ್ಲಿ ನಾನು ತಯಾರಿಸುವ ತಂಪು ಪಾನೀಯಗಳಲ್ಲಿ ಬೆಲ್ಲದ ಪಾನಕವೂ ಒಂದು. ಬೆಲ್ಲಕ್ಕೆ ಆರೋಗ್ಯದ ದೃಷ್ಟಿಯಿಂದ ತುಂಬ ಮಹತ್ವವಿದೆ. ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಇದು ನಮ್ಮ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಿತ್ತ, ಅಜೀರ್ಣದಂತಹ ತೊಂದರೆಗಳಿಗಂತೂ ಬೆಲ್ಲ ಬಹಳ ಒಳ್ಳೆಯ ಔಷಧ. ಅಜೀರ್ಣ ಹಾಗೂ ಹಸಿವಿನ ತೊಂದರೆ ಇರುವವರು ಊಟಕ್ಕೆ ಅರ್ಧ ಘಂಟೆ ಮೊದಲು ಒಂದು ಲೋಟದಷ್ಟು ನೀರಿಗೆ ಒಂದು ಚಮಚ ಬೆಲ್ಲ ಸೇರಿಸಿ ಕದಡಿ ಕುಡಿದರೆ ಚೆನ್ನಾಗಿ ಹಸಿವಾಗುತ್ತದೆ.
ಆರೋಗ್ಯಕರವಾದ ಬೆಲ್ಲದ ಪಾನಕ ಕುಡಿಯಲೂ ತುಂಬ ರುಚಿ. ಮನೆಯಲ್ಲಿ ಸುಲಭದಲ್ಲಿ ಸಿಗುವ ಸಾಮಗ್ರಿಗಳಿಂದ ತಯಾರಿಸಬಹುದಾದ ಬೆಲ್ಲದ ಪಾನಕವನ್ನು ನೀವೂ ಮಾಡಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ತಣ್ಣನೆಯ ನೀರು - 2 ಗ್ಲಾಸ್ ನಷ್ಟು  
ಬೆಲ್ಲ - 4 ಚಮಚ (ಸಿಹಿಯಾಗುವಷ್ಟು)  
ನಿಂಬೆರಸ - 1 ಚಮಚ 
ಕಾಳುಮೆಣಸಿನ ಪುಡಿ - ಚಿಟಿಕೆ 
ಐಸ್ ಕ್ಯೂಬ್ಸ್ - ಬೇಕಿದ್ದರೆ 


ಮಾಡುವ ವಿಧಾನ:
ನೀರಿಗೆ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಕದಡಿ.
ಇದಕ್ಕೆ ನಿಂಬೆರಸ, ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ.
ರುಚಿ ನೋಡಿಕೊಂಡು ಸಿಹಿ ಅಥವಾ ಹುಳಿ ಬೇಕಿದ್ದರೆ ಸೇರಿಸಿ.
ತಯಾರಾದ ಪಾನಕವನ್ನು ಸರ್ವಿಂಗ್ ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ. ಬೇಕಿದ್ದರೆ ಐಸ್ ಕ್ಯೂಬ್ಸ್ ಸೇರಿಸಬಹುದು.

Wednesday, 27 June 2012

ಅನ್ನದ ಕೇಸರಿಬಾತ್ / Rice Kesaribath

Click here for English version.

ನಮ್ಮೂರ ಕಡೆ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿ ಇದು. ಅನ್ನಕ್ಕೆ ತುಪ್ಪ, ಸಕ್ಕರೆ, ಕೇಸರಿ ದಳಗಳು ಮುಂತಾದ ಸಾಮಗ್ರಿಗಳನ್ನು ಸೇರಿಸಿ ತಯಾರಿಸುವ ಈ ಕೇಸರಿ ಬಾತ್ ಬಹಳ ರುಚಿ! ದೊಡ್ಡ ಪ್ರಮಾಣದಲ್ಲಿ ಕೇಸರಿ ತಯಾರಿಸಲು ನುರಿತ ಜನರಿಂದ ಮಾತ್ರ ಸಾಧ್ಯ. ಆದರೆ ಸಣ್ಣ ಪ್ರಮಾಣದಲ್ಲಿ ತಯಾರಿಸುವುದಾದರೆ ಆರಾಮಾಗಿ ಯಾರು ಬೇಕಿದ್ದರೂ ತಯಾರಿಸಬಹುದು!
ಅಕ್ಕ ಮಾಡಿದ ಕೇಸರಿಬಾತ್ ನ್ನು ಅನೇಕ ಬಾರಿ ಸವಿದಿದ್ದರೂ ನಾನೆಂದೂ ಕೇಸರಿ ತಯಾರಿಸುವ ಸಾಹಸಕ್ಕೆ ಹೋಗಿರಲಿಲ್ಲ! ಊರಿಂದ ತಂದ ಫ್ರೆಶ್ ತುಪ್ಪ ಹಾಗೇ ಇತ್ತು, ಜೊತೆಗೆ ಕೇಸರಿ ದಳದ ಪ್ಯಾಕೆಟ್ ಕೂಡ ಮನೆಯಲ್ಲಿತ್ತು. ನಮ್ಮವರಿಗೆ ಕೇಸರಿಬಾತ್ ಎಂದರೆ ಬಹಳ ಇಷ್ಟ! ಹೀಗಾಗಿ ಅಮ್ಮನ ಮುಂದಾಳುತ್ವದಲ್ಲಿ ಕೇಸರಿಬಾತ್ ತಯಾರಿಸಿದೆವು. ಅಮ್ಮನಿಗೆ ಅನೇಕ ಬಾರಿ ಕೇಸರಿಬಾತ್ ತಯಾರಿಸಿ ಅಭ್ಯಾಸವಿರುವುದರಿಂದ ನಮ್ಮ ಪ್ರಯೋಗ ಫೇಲ್ ಆಗುವುದಿಲ್ಲವೆಂಬ ನಂಬಿಕೆಯಿತ್ತು. ನಾವಂದುಕೊಂಡಂತೆ ಕೇಸರಿಬಾತ್ ಬಹಳ ಚೆನ್ನಾಗಿಯೇ ಬಂತು.
ಕೇಸರಿ ಅಥವಾ ಕೇಸರಿಬಾತ್ ತಯಾರಿಸಲು ಸುವಾಸಿತ ಅಕ್ಕಿಯೇ ಬೇಕು. 'ಸಣ್ಣಕ್ಕಿ' ಅಥವಾ 'ಜೀರಾ ರೈಸ್'ನ್ನು ಬಳಸಿದರೆ ಉತ್ತಮ, ಅದು ಸಿಗದಿದ್ದರೆ ಬಾಸ್ಮತಿ ಅಕ್ಕಿಯನ್ನು ಬಳಸಬಹುದು. ಕೇಸರಿಬಾತ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಜೀರಾ ರೈಸ್ (ಅಥವಾ ಬಾಸ್ಮತಿ ರೈಸ್) - 250 ಗ್ರಾಂ
ಕೇಸರಿ ದಳ - 3/4 ಗ್ರಾಂ  
ಸಕ್ಕರೆ - 375 ಗ್ರಾಂ
ಶುದ್ಧ ತುಪ್ಪ - 250 ಗ್ರಾಂ (ಸ್ವಲ್ಪ ಕಡಿಮೆ ಬಳಸಿದರೂ ಆಗುತ್ತದೆ)
ಲವಂಗ - 2
ಹಾಲು 5 - 6 ಚಮಚ
ನಿಂಬೆರಸ - 4 1/2 ಚಮಚ
ಉಪ್ಪು - 1 ಚಮಚ 
ಗೋಡಂಬಿ - 10
ಒಣದ್ರಾಕ್ಷಿ 25 - 30


ಮಾಡುವ ವಿಧಾನ:
ಉದುರಾಗಿ ಅನ್ನ ಮಾಡಿಕೊಳ್ಳಿ. ಅಕ್ಕಿ ಬೇಯಿಸುವಾಗ 1 ಚಮಚ ತುಪ್ಪ ಸೇರಿಸಿ ಬೇಯಿಸಿ. ಅನ್ನದ ಅಗುಳು ಚೆನ್ನಾಗಿ ಬೆಂದಿರಬೇಕು, ಆದರೆ ಅನ್ನ ಮುದ್ದೆಯಾಗಂತೆ ಎಚ್ಚರವಹಿಸಿ.
ಬೇಯಿಸಿದ ಅನ್ನದಲ್ಲಿ ಹೆಚ್ಚಿನ ನೀರು ಏನಾದರೂ ಉಳಿದಿದ್ದರೆ ನೀರನ್ನು ತೆಗೆದುಬಿಡಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ 5 ನಿಮಿಷ ಆರಲು ಬಿಡಿ.
ಹಾಲನ್ನು ಚೆನ್ನಾಗಿ ಕಾಯಿಸಿಕೊಂಡು ಅದರಲ್ಲಿ ಕೇಸರಿ ದಳಗಳನ್ನು ನೆನೆಸಿ 10 ನಿಮಿಷ ಇಡಿ.
ಲವಂಗವನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಗೋಡಂಬಿಯನ್ನು ಚೂರುಮಾಡಿಕೊಳ್ಳಿ.
ನಿಂಬೆರಸ ಮತ್ತು ಉಪ್ಪನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.
ಒಂದು ಹರವಾದ ಪಾತ್ರೆಯಲ್ಲಿ ಅನ್ನ, ಸಕ್ಕರೆ, ತುಪ್ಪ ಇಷ್ಟನ್ನೂ ಹಾಕಿಕೊಂಡು ಸ್ವಲ್ಪ ದೊಡ್ಡ ಉರಿಯಲ್ಲಿ ತಳಹತ್ತದಂತೆ ಕೈಯಾಡಿಸುತ್ತಿರಿ.
ಮಿಶ್ರಣ ಕುದಿಯತೊಡಗಿದಾಗ ಹಾಲಿನಲ್ಲಿ ನೆನೆಸಿದ ಕೇಸರಿ, ಉಪ್ಪು, ನಿಂಬೆರಸ ಸೇರಿಸಿ ಬಿಡದೆ ಕೈಯಾಡಿಸಿ.
ಮಿಶ್ರಣ ತುಪ್ಪವನ್ನೆಲ್ಲ ಹೀರಿಕೊಳ್ಳತೊಡಗಿದಾಗ ಉರಿಯನ್ನು ಕಡಿಮೆಮಾಡಿ ಮೀಡಿಯಮ್ ಗೆ ತನ್ನಿ.
ಈಗ ಕೇಸರಿ ಮಿಶ್ರಣಕ್ಕೆ ದ್ರಾಕ್ಷಿ, ಪುಡಿಮಾಡಿದ ಲವಂಗ ಸೇರಿಸಿ ಕೈಯಾಡಿಸಿ.
ಮಿಶ್ರಣ ತುಪ್ಪವನ್ನು ಉಗುಳತೊಡಗಿದಾಗ ಉರಿ ಆಫ್ ಮಾಡಿ ಗೇರುಬೀಜದ ಚೂರುಗಳನ್ನು ಸೇರಿಸಿ ಕೈಯಾಡಿಸಿ, ಮುಚ್ಚಿಡಿ.
10 ನಿಮಿಷ ಸೆಟ್ ಆಗಲು ಬಿಟ್ಟು, ಬಿಸಿ ಬಿಸಿ ಕೇಸರಿಯನ್ನು ಸವಿದುನೋಡಿ!


ಟಿಪ್ಸ್:
  • ಕೇಸರಿಬಾತ್ ತಯಾರಿಸಲು ಕೇಸರಿ ದಳವನ್ನೇ ಬಳಸಿ. ಕೃತಕ ಬಣ್ಣಗಳನ್ನು ಬಳಸಿದರೆ ನಿಜವಾದ ಕೇಸರಿಬಾತ್ ನ ರುಚಿ ಬರುವುದಿಲ್ಲ. ಕೇಸರಿ ದಳಗಳನ್ನು ಸೇರಿಸುವುದರಿಂದ ಇದಕ್ಕೆ ಬಣ್ಣದ ಜೊತೆಗೆ ಒಂದು ವಿಶೇಷ ಪರಿಮಳವೂ ಬರುತ್ತದೆ.
  • ಕೇಸರಿಬಾತ್ ಗೆ ಫ್ರೆಶ್ ಹಾಗೂ ಶುದ್ಧ ತುಪ್ಪವನ್ನೇ ಬಳಸಿ. ತುಪ್ಪ ಸ್ವಲ್ಪ ವಾಸನೆ ಇದ್ದರೂ ಇದರ ರುಚಿ ಕೆಟ್ಟುಹೋಗುತ್ತದೆ.
  • ಕೇಸರಿಬಾತ್ ಮಿಶ್ರಣ ಕುದಿಯತೊಡಗುವವರೆಗೆ ದೊಡ್ಡ ಉರಿಯಲ್ಲಿ ಬಿಸಿಮಾಡುವುದು ಅತ್ಯವಶ್ಯ. ಕಡಿಮೆ ಉರಿಯಲ್ಲಿ ಬಿಸಿಮಾಡಿದರೆ ಕೇಸರಿಬಾತ್ ಮೇಣದಂತಾಗುತ್ತದೆ.

Friday, 22 June 2012

ಹೀರೆಕಾಯಿ ತಂಬ್ಳಿ / Ridge Gourd Tambli

Click here for English version.

ನಮ್ಮ ಮನೆಯಲ್ಲಿ ತಯಾರಿಸುವ ತಂಬ್ಳಿಗಳಲ್ಲಿ ಇದೂ ಒಂದು. ಹೀರೆಕಾಯಿ ಸಾಮಾನ್ಯವಾಗಿ ಎಲ್ಲಾ ಸೀಜನ್ ನಲ್ಲೂ ದೊರೆಯುವ ತರಕಾರಿ. ಇದನ್ನು ಬಳಸಿ ಸಿಹಿ ತಂಬ್ಳಿ ಮತ್ತು ಸಪ್ಪೆ ತಂಬ್ಳಿ ಎರಡನ್ನೂ ತಯಾರಿಸಬಹುದು. ನಾನು ಸಿಹಿ ಪ್ರಿಯಳಾದ್ದರಿಂದ ಹೆಚ್ಚಾಗಿ ತಯಾರಿಸುವುದು ಸಿಹಿ ತಂಬ್ಳಿಯನ್ನೇ!
ಅಮ್ಮನಿಂದ ಕಲಿತ ಹೀರೆಕಾಯಿ ಸಪ್ಪೆ ತಂಬ್ಳಿ ರೆಸಿಪಿ ಇಲ್ಲಿದೆ. ಸಿಹಿ ತಂಬ್ಳಿ ತಯಾರಿಸುವ ವಿಧಾನವನ್ನು ಇನ್ಯಾವಾಗಲಾದರೂ ನೋಡೋಣ!


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ - ಮೀಡಿಯಂ ಹೀರೆಕಾಯಿಯ ಅರ್ಧ ಭಾಗ
ಹಸಿಮೆಣಸು - ಒಂದು ಚಿಕ್ಕ ಚೂರು
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ
ತೆಂಗಿನತುರಿ - 1 ಕಪ್
ಮಜ್ಜಿಗೆ - 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಸಕ್ಕರೆ - 1/2 ಚಮಚ
ನೀರು - 2 ಕಪ್
ಒಗ್ಗರಣೆಗೆ: ಎಣ್ಣೆ - 1 ಚಮಚ, ಸಾಸಿವೆ - 1 ಚಮಚ

ಮಾಡುವ ವಿಧಾನ:
ಹೀರೆಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಿ. ಇದಕ್ಕೆ 1 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ 10 ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
ಬೇಯಿಸಿಕೊಂಡ ಹೀರೆ ಹೋಳುಗಳನ್ನು ನೀರಿನಿಂದ ಬೇರ್ಪಡಿಸಿ. ಆ ನೀರನ್ನು ಹಾಗೇ ಇಟ್ಟುಕೊಂಡು ರುಬ್ಬುವಾಗ ಬಳಸಿ.
ಒಗ್ಗರಣೆ ಸೌಟಿನಲ್ಲಿ ಅರ್ಧ ಚಮಚ ಎಣ್ಣೆ ಕಾಯಿಸಿ, ಎಳ್ಳು ಮತ್ತು ಜೀರಿಗೆ ಮತ್ತು ಹಸಿಮೆಣಸನ್ನು ಹುರಿದುಕೊಳ್ಳಿ.
ಹುರಿದ ಸಾಮಗ್ರಿಗಳನ್ನು ಬೇಯಿಸಿದ ಹೀರೆ ಮತ್ತು ತೆಂಗಿನತುರಿಯೊಡನೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಹೀರೆಕಾಯಿ ಬೇಯಿಸಿದ ನೀರನ್ನು ಬಳಸಿ.
ರುಬ್ಬಿದ ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ಹಾಕಿ ಮಜ್ಜಿಗೆ ಸೇರಿಸಿ ಹದಮಾಡಿ. ತಂಬ್ಳಿ ದಪ್ಪಗೆನಿಸಿದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ.
ತಯಾರಾದ ತಂಬ್ಳಿಗೆ ಎಣ್ಣೆ, ಸಾಸಿವೆಯ ಒಗ್ಗರಣೆ ಮಾಡಿ ಅನ್ನದೊಡನೆ ಸರ್ವ್ ಮಾಡಿ.

Monday, 18 June 2012

ಮಾವಿನಹಣ್ಣಿನ ಸ್ಮೂತಿ / Mango Smoothie

Click here for English version.

ಮಾವು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಣ್ಣು. ಈ ವರ್ಷವಂತೂ ನಾವು ಮಾವಿನ ಸೀಜನ್ ನ ಸಂಪೂರ್ಣ ಉಪಯೋಗ ಪಡೆದುಕೊಳ್ಳುತ್ತಿದ್ದೇವೆಂದರೆ ಉತ್ಪ್ರೇಕ್ಷೆಯೇನಿಲ್ಲ! ಮನೆಯ ಬಳಿ ಅಂಗಡಿ, ಸುಪರ್ ಮಾರ್ಕೆಟ್ ಗಳಲ್ಲಿ ಸಿಗುವ ಹಣ್ಣುಗಳಷ್ಟೇ ಅಲ್ಲದೆ, ನಮ್ಮವರು ಮಾವು ಮೇಳಕ್ಕೆ ಹೋಗಿ, ಅಲ್ಲಿಂದ ಅನೇಕ ಬಗೆಯ ಮಾವಿನಹಣ್ಣುಗಳನ್ನು ತಂದಿದ್ದರು. ಹೀಗಾಗಿ ದಿನವೂ ಮನೆಯಲ್ಲಿ ಮಾವಿನ ಸೀಕರಣೆ, ಜ್ಯೂಸ್, ಮಿಲ್ಕ್ ಶೇಕ್, ಇತ್ಯಾದಿಗಳನ್ನು ತಯಾರಿಸಿ ಸವಿದೆವು.
ಕೆಲದಿನಗಳ ಹಿಂದೆ ಟಿವಿ ಅಡಿಗೆ ಷೋ ಒಂದರಲ್ಲಿ ಮಾವಿನಹಣ್ಣಿನ ಸ್ಮೂತಿ ತಯಾರಿಸುವುದನ್ನು ನೋಡಿದ್ದೆ. ಅದರಿಂದ ಪ್ರೇರಿತಳಾಗಿ ನಾನು ತಯಾರಿಸಿದ ಸ್ಮೂತಿ ರೆಸಿಪಿ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 10 - 15 ನಿಮಿಷಗಳು 
ಸ್ಮೂತಿ ತಣ್ಣಗಾಗಲು ಬೇಕಾಗುವ ಸಮಯ: 1 ಘಂಟೆ 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಚೆನ್ನಾಗಿ ಕಳಿತ 1 ದೊಡ್ಡ ಮಾವಿನಹಣ್ಣು 
ಗಟ್ಟಿ ಮೊಸರು - 200 ml
ಹಾಲು - 50 ml (ಟಿಪ್ಸ್ ನೋಡಿ)
ನೀರು - 50ರಿಂದ 100 ml
ಸಕ್ಕರೆ - 8ರಿಂದ 10 ಚಮಚ (ರುಚಿಗೆ ತಕ್ಕಷ್ಟು)
ಚಿಟಿಕೆ ಉಪ್ಪು 

ಮಾಡುವ ವಿಧಾನ:
ಮಾವಿನಹಣ್ಣನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಹೆಚ್ಚಿದ ಹಣ್ಣಿನ ಕಾಲುಭಾಗದಷ್ಟನ್ನು ಅಲಂಕಾರಕ್ಕೆ ತೆಗೆದಿಟ್ಟುಕೊಳ್ಳಿ.
ಉಳಿದ ಮುಕ್ಕಾಲುಭಾಗ ಮಾವಿನ ಹೋಳುಗಳನ್ನು ಮೊಸರು, ಸಕ್ಕರೆಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ.
ಇದಕ್ಕೆ ಹಾಲು, ಚಿಟಿಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಇನ್ನೊಂದು ಕಾಲು ನಿಮಿಷ ತಿರುವಿ, ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ. ರುಚಿ ನೋಡಿಕೊಂಡು ಸಿಹಿ ಬೇಕಿದ್ದರೆ ಹಾಕಿಕೊಳ್ಳಿ. 
ತಯಾರಾದ ಸ್ಮೂತಿಯನ್ನು ಫ್ರಿಜ್ ನಲ್ಲಿ 1 ಘಂಟೆ ಇಟ್ಟು ತಣ್ಣಗಾಗಲು ಬಿಡಿ.
ಸರ್ವಿಂಗ್ ಗ್ಲಾಸ್ ನ ತಳದಲ್ಲಿ ಸ್ವಲ್ಪ ಮಾವಿನ ಹೋಳುಗಳನ್ನು ಹರಡಿಕೊಂಡು, ಮೇಲಿನಿಂದ ನಿಧಾನವಾಗಿ ಸ್ಮೂತಿ ಮಿಶ್ರಣವನ್ನು ಗ್ಲಾಸ್ ನ ಮುಕ್ಕಾಲು ಭಾಗದವರೆಗೆ ಸುರಿಯಿರಿ.
ಮೇಲಿನಿಂದ ಒಂದು ಪದರು ಹೆಚ್ಚಿದ ಮಾವಿನ ಚೂರುಗಳನ್ನು ಸೇರಿಸಿ ಅಲಂಕರಿಸಿ ಸವಿಯಲು ಕೊಡಿ.


ಟಿಪ್ಸ್:
  • ಈ ಸ್ಮೂತಿಗೆ ಹಾಲು ಸೇರಿಸದೆಯೂ ಮಾಡಬಹುದು. ಮೊಸರು ಸ್ವಲ್ಪ ಹುಳಿ ಇದ್ದರೆ ಹಾಲು ಸೇರಿಸಿ ಮಾಡುವುದರಿಂದ ಹುಳಿ ಅಂಶ ಕಡಿಮೆಯಾಗುತ್ತದೆ.
  • ಸ್ಮೂತಿ ತಯಾರಿಸಲು ಮೊದಲೇ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿದ ಮಾವಿನಹಣ್ಣು ಮತ್ತು ಮೊಸರನ್ನು ಬಳಸಿದರೆ, ತಯಾರಿಸಿದ ತಕ್ಷಣ ಸವಿಯಬಹುದು.

Friday, 15 June 2012

Event Announcement: Love Lock With Juices & Milkshakes

Dear all, 
I'm happy to announce the first Event @ my space! The event is scheduled at English version of this blog.


Friends, hurry up, prepare any kind of juice or milkshake, post it in your space and link it to the event. For all the details, rules and regulations, visit my English blog Recipe World (http://vanilohith.blogspot.in/).

Cheers!
Vani

Saturday, 9 June 2012

ಕೊಬ್ಬರಿ ಚಟ್ನಿಪುಡಿ / Dry Coconut Chutney Powder (Pudi, Podi)

Click here for English version.

ಬೆಳಗ್ಗಿನ ತಿಂಡಿಯ ನೆನಪಾದರೆ ಸಾಕು, ಒಮ್ಮೊಮ್ಮೆ ತಿಂಡಿಗಿಂತ ಅದಕ್ಕೆ ಏನು ಸೈಡ್ ಡಿಶ್ ಮಾಡಬೇಕು ಎನ್ನುವುದೇ ಸಮಸ್ಯೆಯಾಗಿಬಿಡುತ್ತದೆ! ಚಟ್ನಿ ಪುಡಿ, ಖಾರದ ಪುಡಿ ಇತ್ಯಾದಿ ಯಾವುದಾದರೂ ಪುಡಿ ಮಾಡಿಟ್ಟುಕೊಂಡರೆ ಚಟ್ನಿ ಅಥವಾ ಬೇರೆ ಸೈಡ್ ಡಿಶ್ ತಯಾರಿಸಲು ಬೇಜಾರಾದಾಗ ಉಪಯೋಗಿಸಲು ಚೆನ್ನಾಗಿರುತ್ತದೆ. 
ಮನೆಯಲ್ಲಿ ಕೊಬ್ಬರಿ ಗಿಟುಕು ಇದ್ದರೆ ಸುಲಭದಲ್ಲಿ ತಯಾರಿಸಬಹುದಾದ ಚಟ್ನಿಪುಡಿಯ ರೆಸಿಪಿ ಇಲ್ಲಿದೆ. ನನ್ನ ಅಮ್ಮನಿಂದ ಕಲಿತ ಈ ಚಟ್ನಿಪುಡಿ ದೋಸೆ, ಚಪಾತಿ, ಇಡ್ಲಿ ಎಲ್ಲಕ್ಕೂ ಒಳ್ಳೆಯ ಕಾಂಬಿನೇಶನ್!


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಈ ಅಳತೆಯಿಂದ ಸುಮಾರು 3 ಕಪ್ ನಷ್ಟು ಚಟ್ನಿಪುಡಿ ತಯಾರಿಸಬಹುದು 

ಬೇಕಾಗುವ ಸಾಮಗ್ರಿಗಳು:
ಕೊಬ್ಬರಿ - 1 ಗಿಟುಕಿನ ಅರ್ಧಭಾಗ (ಅಂಗಡಿಗಳಲ್ಲಿ ಸಿಗುವ ತುರಿದ ಒಣಕೊಬ್ಬರಿಯನ್ನೂ ಬಳಸಬಹುದು)
ಕಡಲೆಬೇಳೆ - 5ರಿಂದ 6 ಚಮಚ 
ಉದ್ದಿನಬೇಳೆ - 1/2 ಚಮಚ 
ಒಣಮೆಣಸು - 15ರಿಂದ 16
ಮೆಂತ್ಯ - 3/4 ಚಮಚ
ಜೀರಿಗೆ - 1/2 ಚಮಚ 
ಎಳ್ಳು - 1 ಚಮಚ 
ಕೊತ್ತಂಬರಿ - 3ರಿಂದ 4 ಚಮಚ    
ಲವಂಗ - 8
ಸಾಸಿವೆ - 1 ಚಮಚ 
ಒಂದು ದೊಡ್ಡ ಚಿಟಿಕೆ ಇಂಗು 
ಕರಿಬೇವು - 2 ಎಸಳು 
ಅರಿಶಿನ - 1/4 ಚಮಚ 
ಎಣ್ಣೆ - 2 ಚಮಚ
ಆಮ್ ಚೂರ್ ಪೌಡರ್ - 1/2 ಚಮಚ ಅಥವಾ ರುಚಿಗೆ ತಕ್ಕಷ್ಟು 
ಸಕ್ಕರೆ - 6 ಚಮಚ ಅಥವಾ ರುಚಿಗೆ ತಕ್ಕಷ್ಟು 
ರುಚಿಗೆ ತಕ್ಕಷ್ಟು ಉಪ್ಪು  


ಮಾಡುವ ವಿಧಾನ:
ಮೊದಲು ಕೊಬ್ಬರಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಕೊಳ್ಳಿ. 
ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಕಡಲೇಬೇಳೆಯನ್ನು 1 ನಿಮಿಷ ಹುರಿಯಿರಿ. ನಂತರ ಉದ್ದಿನಬೇಳೆ, ಮೆಂತ್ಯ, ಒಣಮೆಣಸು ಸೇರಿಸಿ ಸ್ವಲ್ಪ ಪರಿಮಳ ಬರುವವರೆಗೆ ಹುರಿಯಿರಿ.
ನಂತರ ಇದಕ್ಕೆ ಕೊತ್ತಂಬರಿ, ಜೀರಿಗೆ ಸೇರಿಸಿ ಸ್ವಲ್ಪ ಹುರಿದು, ಸಾಸಿವೆ ಮತ್ತು ಎಳ್ಳು ಸೇರಿಸಿ ಚಟಪಟ ಎನ್ನುವಂತೆ ಹುರಿಯಿರಿ. ನಂತರ ಲವಂಗ, ಒಂದು ದೊಡ್ಡ ಚಿಟಿಕೆ ಇಂಗು ಸೇರಿಸಿ ಒಮ್ಮೆ ಕೈಯಾಡಿಸಿ, ಅರಿಶಿನ ಸೇರಿಸಿ.
ಕೊನೆಯಲ್ಲಿ ಕರಿಬೇವಿನ ಎಸಳುಗಳನ್ನು ಸೇರಿಸಿ 2 - 3 ನಿಮಿಷ ಹುರಿದು ಉರಿಯನ್ನು ಆಫ್ ಮಾಡಿ.
ಹುರಿದ ಸಾಮಗ್ರಿಗಳು ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿಕೊಂಡು ಮಿಕ್ಸಿಯಲ್ಲಿ ಸ್ವಲ್ಪ ತರಿಯಾಗಿ ಪುಡಿಮಾಡಿ.
ತಯಾರಾದ ಚಟ್ನಿಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಬಳಸಿ. 


ಟಿಪ್ಸ್:
  • ಈ ಚಟ್ನಿಪುಡಿ 15 - 20 ದಿನಗಳವರೆಗೆ ಕೆಡದೆ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿಟ್ಟರೆ ತಿಂಗಳಾನುಗಟ್ಟಲೆ ಇಟ್ಟುಕೊಂಡು ಬಳಸಬಹುದು.

Wednesday, 30 May 2012

ಸಾಂಬಾರ್ ಸೌತೆ ಪಲ್ಯ (ಕೊಚ್ಚುಳಿ) / Madras Cucumber Palya (Kochchuli)

Click here for English version.

ಮಲೆನಾಡಿನ ಕಡೆ ತಯಾರಿಸುವ ವಿವಿಧ ಪಲ್ಯಗಳಲ್ಲಿ ಇದೂ ಒಂದು. ಮಾಡರ್ನ್ ಅಡಿಗೆಗಳ ನಡುವೆ ಮರೆತೇ ಹೋಗುತ್ತಿರುವ ಈ ಪಲ್ಯದ ಸಾಂಪ್ರದಾಯಿಕ ಹೆಸರು 'ಕೊಚ್ಚುಳಿ'. ನನ್ನ ಅಮ್ಮನ ತವರುಮನೆಯಲ್ಲಿ ಇಂಥ ಹಲವು ಹಳೆಯ ಅಡಿಗೆಗಳು ಇನ್ನೂ ಚಾಲ್ತಿಯಲ್ಲಿವೆ. ಅಮ್ಮ ಈ ಬಾರಿ ನಮ್ಮ ಮನೆಗೆ ಬಂದಾಗ ಈ ಪಲ್ಯ ತಯಾರಿಸಿದ್ದರು. ರುಚಿ ನೋಡಿದ ತಕ್ಷಣವೇ ಅದರ ಫೊಟೋ ಕ್ಲಿಕ್ಕಿಸಿಕೊಂಡೆ ನಾನು! ಹಾಗೂ ಪಲ್ಯ ತಯಾರಿಸುವ ವಿಧಾನವನ್ನು ನೋಟ್ ಮಾಡಿಕೊಂಡೆ.
ಈ ಪಲ್ಯಕ್ಕೆ ಸಾಂಬಾರ್ ಸೌತೆಕಾಯಿಯ ಬದಲು ಸಾದಾ ಸೌತೆಕಾಯಿಯನ್ನೂ ಬಳಸಬಹುದು. ಸೌತೆಕಾಯಿ ತುಂಬಾ ಎಳಸಾಗಿದ್ದರೆ ಈ ಪಲ್ಯಕ್ಕೆ ಚೆನ್ನಾಗಿರುವುದಿಲ್ಲ. ಹಳ್ಳಿಗಳ ಕಡೆ ಸಿಗುವ ಮೊಗೆಕಾಯಿ (ಮಗೆಕಾಯಿ) ಹಾಗೂ ಚೆನ್ನಾಗಿ ಬಲಿತ ಉದ್ದದ ಸೌತೆಕಾಯಿ ಈ ಪಲ್ಯ ತಯಾರಿಸಲು ಬಹಳ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ:  15 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ಸಾಂಬಾರ್ ಸೌತೆ ಅಥವಾ ಮದ್ರಾಸ್ ಸೌತೆ - ಮೀಡಿಯಂ ಗಾತ್ರದ ಸೌತೆಕಾಯಿಯ ಅರ್ಧಭಾಗ 
ಒಣ ಮೆಣಸು - 1
ಹಸಿಮೆಣಸು - 2 
ನಿಂಬೆಹಣ್ಣು - ಅರ್ಧಭಾಗ 
ರುಚಿಗೆ ತಕ್ಕಷ್ಟು ಉಪ್ಪು 
ಒಗ್ಗರಣೆಗೆ: ಎಣ್ಣೆ - 3 ಚಮಚ, ಉದ್ದಿನಬೇಳೆ - 1/2 ಚಮಚ, ಸಾಸಿವೆ - 1/2 ಚಮಚ, ಒಂದು ದೊಡ್ಡ ಚಿಟಿಕೆ ಇಂಗು, ಕರಿಬೇವು - 1 ಎಸಳು 

ಮಾಡುವ ವಿಧಾನ:   
ಸೌತೆಕಾಯಿಯ ಬೀಜ ಮತ್ತು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಚಟಪಟ ಎಂದಮೇಲೆ ಹಸಿಮೆಣಸು, ಕರಿಬೇವು ಸೇರಿಸಿ ಕೈಯಾಡಿಸಿ.
ನಂತರ ಇದಕ್ಕೆ ಹೆಚ್ಚಿದ ಸೌತೆಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸ ಸೇರಿಸಿ ಕೈಯಾಡಿಸಿ 3 - 4 ನಿಮಿಷ ಮುಚ್ಚಳ ಮುಚ್ಚದೆ ಬೇಯಿಸಿ, ಉರಿಯನ್ನು ಆಫ್ ಮಾಡಿ.
ಊಟಕ್ಕೆ ಈ ಪಲ್ಯ ಒಳ್ಳೆಯ ಕಾಂಬಿನೇಶನ್. ಅನ್ನದೊಡನೆ ಕಲಸಿಕೊಳ್ಳಬಹುದು ಅಥವಾ ಹಾಗೇ ತಿನ್ನಬಹುದು.


Wednesday, 23 May 2012

ರಾಗಿ ರೊಟ್ಟಿ / Finger Millet (Ragi) Rotti

Click here for English version.

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿರಿಸಲು ಎಷ್ಟು ನೀರು ಕುಡಿದರೂ ಸಾಲದು. ಎಳನೀರು, ಜ್ಯೂಸ್ ಇತ್ಯಾದಿಗಳಂತೆಯೇ ರಾಗಿ ಮಾಲ್ಟ್ ನಂತಹ ಬಿಸಿ ಪೇಯಗಳೂ ಕೂಡ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ರಾಗಿಗೆ ತನ್ನದೇ ಆದ ರುಚಿ ಅಥವಾ ಪರಿಮಳ ಇಲ್ಲ. ಹೀಗಾಗಿ ರಾಗಿ ಬಹಳ ಜನರಿಗೆ ಇಷ್ಟವಾಗುವುದೇ ಇಲ್ಲ! 
ಒಮ್ಮೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಹೋಟೆಲ್ ಒಂದರಲ್ಲಿ ರಾಗಿ ರೊಟ್ಟಿಯನ್ನು ತಿಂದಿದ್ದೆ. ಅಂದಿನಿಂದ ನಾನು ರಾಗಿ ರೊಟ್ಟಿಯ ಪಕ್ಕಾ ಅಭಿಮಾನಿಯಾಗಿಬಿಟ್ಟಿ ದ್ದೇನೆ! ಆ ರೊಟ್ಟಿಯ ನೆನಪಿನಲ್ಲಿ ನಾನು ತಯಾರಿಸಿದ ರೊಟ್ಟಿಯೂ ಚೆನ್ನಾಗಿಯೇ ಬಂತು. ರುಚಿಕರವಾದ ಅಂತೆಯೇ ಆರೋಗ್ಯಕ್ಕೆ ಹಿತಕರವಾದ ರಾಗಿ ರೊಟ್ಟಿಯ ರೆಸಿಪಿ ಇಲ್ಲಿದೆ, ನೀವೂ ಟ್ರೈ ಮಾಡಿ ನೋಡಿ!
ಈ ರೊಟ್ಟಿಗೆ ಮೆಂತ್ಯ ಸೊಪ್ಪಿನ ಬದಲು ಸಬ್ಬಸಿಗೆ ಸೊಪ್ಪನ್ನೂ ಬಳಸಬಹುದು. 


ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು - 1 3/4 ಕಪ್ 
ತುರಿದ ಕ್ಯಾರೆಟ್ - 1 
ತೆಂಗಿನತುರಿ - 1 ಕಪ್ 
1 ಮೀಡಿಯಂ ಸೈಜ್ ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 
ಸಣ್ಣಗೆ ಹೆಚ್ಚಿದ ಹಸಿಮೆಣಸು 2 - 3
ಮೆಂತ್ಯ ಸೊಪ್ಪು - 1 ಕಟ್ಟು 
ರುಚಿಗೆ ತಕ್ಕಷ್ಟು ಉಪ್ಪು 
ಬೇಯಿಸಲು ಎಣ್ಣೆ 
ಬಿಸಿ ನೀರು - 1/2 ಅಥವಾ 3/4 ಕಪ್ 

ಮಾಡುವ ವಿಧಾನ:
ಮೆಂತ್ಯ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
ರಾಗಿ ಹಿಟ್ಟನ್ನು ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಂಡು ಅದಕ್ಕೆ ಎಣ್ಣೆ, ಬಿಸಿನೀರು ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಣ ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಬಿಸಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನಂತೆ ಉಂಡೆ ಕಟ್ಟುವ ಹದಕ್ಕೆ ಕಲಸಿ.
ಹಿಟ್ಟನ್ನು 10 - 15 ನಿಮಿಷ ನೆನೆಯಲು ಬಿಟ್ಟು ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
ಹಿಟ್ಟಿನ ಉಂಡೆಯನ್ನು ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯಮೇಲೆ ತೆಳ್ಳಗೆ ತಟ್ಟಿ, ಮಧ್ಯೆ ಒಂದು ತೂತು ಮಾಡಿ.
ಕಾದ ಬಾಣಲಿಯಮೇಲೆ ಈ ರೊಟ್ಟಿಯನ್ನು ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿ.
ಬಿಸಿಬಿಸಿ ರೊಟ್ಟಿಯನ್ನು ಬೆಣ್ಣೆ ಅಥವಾ ನಿಮ್ಮಿಷ್ಟದ ಸೈಡ್ ಡಿಷ್ ನೊಡನೆ ಸರ್ವ್ ಮಾಡಿ.


ಟಿಪ್ಸ್:
  • ಈ ರೊಟ್ಟಿಗೆ ಮೆಂತ್ಯ ಸೊಪ್ಪಿನ ಬದಲು ಸಬ್ಬಸಿಗೆ ಸೊಪ್ಪನ್ನು ಕೂಡ ಬಳಸಬಹುದು. 
Related Posts Plugin for WordPress, Blogger...