ನಮ್ಮ ಊರ ಕಡೆ ಹಿತ್ತಿಲಲ್ಲಿ ಬೆಳೆಯುವ ಹೆಚ್ಚಿನ ಎಲ್ಲ ಬಗೆಯ ತರಕಾರಿ, ಸೊಪ್ಪು ಮತ್ತು ಹಣ್ಣುಗಳಿಂದಲೂ ಒಂದಿಲ್ಲೊಂದು ಬಗೆಯ ಮೇಲೋಗರ ತಯಾರಿಸುತ್ತಾರೆ. ಜೂನ್ - ಜುಲೈ ತಿಂಗಳು ಧಾರಾಕಾರವಾಗಿ ಮಳೆ ಸುರಿಯುವಾಗ ಮಾವು, ಹಲಸು, ಪೈನಾಪಲ್ ಇತ್ಯಾದಿ ಹಣ್ಣುಗಳ ಅಬ್ಬರವೂ ಜೋರು. ಇವನ್ನು ಬಳಸಿ ಕಡುಬು, ಜ್ಯಾಮ್, ಹಲ್ವಾ, ಪಾಯಸ, ನೀರ್ಗೊಜ್ಜು, ಸಾಸಿವೆ, ಹೀಗೆ ಎಷ್ಟೊಂದು ಬಗೆಯ ಮೇಲೋಗರ, ಸಿಹಿತಿಂಡಿ ಗಳನ್ನು ತಯಾರಿಸಬಹುದು. ಇವುಗಳಲ್ಲಿ ಹಲವು ರೆಸಿಪಿ ಗಳನ್ನು ಈಗಾಗಲೇ ಬ್ಲಾಗ್ ನಲ್ಲಿ ಹಾಕಿದ್ದಾಗಿದೆ. ಲಿಂಕ್ ಗಾಗಿ ಈ ಕೆಳಗಿನ ರೆಸಿಪಿ ಹೆಸರುಗಳನ್ನು ಕ್ಲಿಕ್ ಮಾಡಿ.
ಪೈನಾಪಲ್ ಬಳಸಿ ಜ್ಯಾಮ್, ಕೇಕ್, ಕೇಸರಿ ಇತ್ಯಾದಿ ಸಿಹಿ ತಿಂಡಿಗಳನ್ನು ತಯಾರಿಸುವುದು ಎಲ್ಲರಿಗೂ ಗೊತ್ತೇ ಇದೆ. ನಮ್ಮ ಮನೆಯಲ್ಲಿ ಪೈನಾಪಲ್ ಸಾಸಿವೆಯನ್ನು ತಯಾರಿಸುತ್ತಾರೆ. ಪೈನಾಪಲ್ ಪರಿಮಳದ ಈ ಮೇಲೋಗರವನ್ನು ಅನ್ನದೊಡನೆ ಹಾಕಿಕೊಳ್ಳಲು ಬಹಳ ಚೆನ್ನಾಗಿರುತ್ತದೆ.
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 4 - 5
ಡಿಫಿಕಲ್ಟಿ ಲೆವೆಲ್: ಮೀಡಿಯಂ
ಬೇಕಾಗುವ ಸಾಮಗ್ರಿಗಳು:
- ಸಿಪ್ಪೆ ತೆಗೆದು ಹೆಚ್ಚಿದ ಪೈನಾಪಲ್ - 1 1/4 ಕಪ್
- ತೆಂಗಿನತುರಿ - 1/2 ಕಪ್
- ಎಳ್ಳು - 1 1/4 ಟೀ ಸ್ಪೂನ್
- ಸಾಸಿವೆ - 3/4 ಟೀ ಸ್ಪೂನ್
- ಒಣಮೆಣಸು ಅಥವಾ ಹಸಿಮೆಣಸು - ಒಂದು ಚಿಕ್ಕ ಚೂರು
- ಅರಿಶಿನ - 1/4 ಟೀ ಸ್ಪೂನ್
- ಉಪ್ಪು - 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಬೆಲ್ಲ / ಸಕ್ಕರೆ - 4 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ನೀರು - ಅರ್ಧ ಕಪ್
- ಮೊಸರು - ಅರ್ಧ ಕಪ್
ತಯಾರಿಸುವ ವಿಧಾನ:
- ಪೈನಾಪಲ್ ಚೂರುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು, ಬೆಲ್ಲ, ಅರ್ಧ ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. 5 ನಿಮಿಷ ಕುದಿಸಿ ಉರಿ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ.
- ಪೈನಾಪಲ್ ಬೇಯಿಸಿದ ನೀರನ್ನು ಪ್ರತ್ಯೇಕವಾಗಿ ತೆಗೆದಿಡಿ.
- ತಣ್ಣಗಾದ ಪೈನಾಪಲ್ ಚೂರುಗಳನ್ನು ತೆಂಗಿನತುರಿ, ಎಳ್ಳು, ಸಾಸಿವೆ, ಮೆಣಸು, ಅರಿಶಿನದೊಡನೆ ನುಣ್ಣಗೆ ರುಬ್ಬಿ. ಪೈನಾಪಲ್ ಬೇಯಿಸಿದ ನೀರನ್ನೇ ರುಬ್ಬುವಾಗ ಬಳಸಿ.
- ರುಬ್ಬಿದ ಮಿಶ್ರಣಕ್ಕೆ ಅರ್ಧ ಕಪ್ ನಷ್ಟು ಮೊಸರು ಸೇರಿಸಿ, ರುಚಿ ನೋಡಿ ಉಪ್ಪು ಅಥವಾ ಸಿಹಿ ಬೇಕಿದ್ದರೆ ಸೇರಿಸಿ. ಮಿಶ್ರಣ ತುಂಬಾ ದಪ್ಪವೆನಿಸಿದರೆ ಸ್ವಲ್ಪ ನೀರು ಸೇರಿಸಿ. ಆದರೆ ತುಂಬಾ ತೆಳ್ಳಗಾದರೆ ಚೆನ್ನಾಗಿರುವುದಿಲ್ಲ.
- ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಹಾಕಿ ಚಟಪಟ ಎಂದಾಗ ಅದನ್ನು ಸಾಸಿವೆ ರುಬ್ಬಿದ ಮಿಶ್ರಣಕ್ಕೆ ಸೇರಿಸಿದರೆ ರುಚಿಯಾದ ಪೈನಾಪಲ್ ಸಾಸಿವೆ ಅನ್ನದೊಡನೆ ಸವಿಯಲು ಸಿದ್ಧ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)