Here are some recipes which I came across through the net, books, so on and few are my own experiments..

Sunday, 20 December 2015

ಪನೀರ್ । ಮನೆಯಲ್ಲೇ ಪನೀರ್ ತಯಾರಿಸುವುದು ಹೇಗೆ?

 
ಹೆಚ್ಚಿನ ಬಗೆಯ ನಾರ್ತ್ ಇಂಡಿಯನ್ ಶೈಲಿಯ ಸೈಡ್ ಡಿಶ್ ಗಳನ್ನು ತಯಾರಿಸಲು ಪನೀರ್ ಬೇಕೇ ಬೇಕು. ದಿಢೀರ್ ಆಗಿ ಪನೀರ್ ಬಳಸಿ ಏನಾದರೂ ತಯಾರಿಸಬೇಕೆಂದರೆ ಅಂಗಡಿಯಲ್ಲಿ ಸಿಗುವ ಪನೀರ್ ತರುವುದು ಅನುಕೂಲಕರ. ಸಮಯ ಇದೆ ಎಂದಾದರೆ ಮನೆಯಲ್ಲೇ ತಯಾರಿಸಬಹುದಾದ ಈ ಪನೀರ್ ಇನ್ನೂ ಒಳ್ಳೆಯದು!
ಪನೀರ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು 
ಮಿಶ್ರಣ ತೂಗುಹಾಕಲು ಹಾಗೂ ಸೆಟ್ ಆಗಲು ಬೇಕಾಗುವ ಸಮಯ: 2 ಘಂಟೆ 
ಸರ್ವಿಂಗ್ಸ್: ಈ ಅಳತೆಯಿಂದ 25 ಪನೀರ್ ಪೀಸ್ ಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು: 
 • ಹಾಲು (ಫುಲ್ ಕ್ರೀಮ್ ಮಿಲ್ಕ್) - 1 1/4 ಲೀಟರ್ 
 • ನಿಂಬೆಹಣ್ಣು - ಅರ್ಧಭಾಗ 
 • ಒಂದು ಮಸ್ಲಿನ್ ಬಟ್ಟೆ 


ತಯಾರಿಸುವ ವಿಧಾನ:
 • ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿಗಿಡಿ. 
 • ಹಾಲು ಬಿಸಿಯಾಗಿ ಕುದಿಯತೊಡಗಿದಾಗ ಇದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ಹಾಲು ಮೀಡಿಯಮ್ ಉರಿಯಲ್ಲಿ ಕುದಿಯುತ್ತಿರಲಿ. 
 • ಒಂದೆರಡು ನಿಮಿಷದ ನಂತರ ಹಾಲಿಗೆ ಪುನಃ ಒಂದು ಸ್ಪೂನ್ ನಿಂಬೆರಸ ಸೇರಿಸಿ. ಹಾಲು ನಿಧಾನವಾಗಿ ಒಡೆದು ಚಿಕ್ಕ ಮುದ್ದೆಗಳಂತೆ ಆಗುತ್ತ ಹೋಗುತ್ತದೆ. ಇನ್ನೂ ಸ್ವಲ್ಪ ನಿಂಬೆರಸ ಬೇಕಿದ್ದರೆ ಸೇರಿಸಬಹುದು. 
 • 15 - 20 ನಿಮಿಷ ಕುದಿದ ನಂತರ ಹಾಲಿನಲ್ಲಿರುವ ಕೊಬ್ಬಿನ ಅಂಶವೆಲ್ಲ ಬೇರ್ಪಟ್ಟು ಮುದ್ದೆಗಳಂತಾಗುತ್ತದೆ ಹಾಗೂ ಹಾಲಿನ ಬಿಳಿ ಬಣ್ಣ ಹೋಗಿ ತಿಳಿ ಹಸಿರು ಬಣ್ಣದ ನೀರಿನಂತಾಗುತ್ತದೆ. ಮಿಶ್ರಣ ಈ ಹಂತಕ್ಕೆ ಬಂದಾಗ ಉರಿ ಆಫ್ ಮಾಡಿ. 
 • ಮಸ್ಲಿನ್ ಬಟ್ಟೆಯನ್ನು ಒಂದು ದೊಡ್ಡ ಪಾತ್ರೆ ಅಥವಾ ಬೌಲ್ ನಲ್ಲಿ ಹರವಿಕೊಂಡು ಅದರೊಳಗೆ ಹಾಲಿನ ಮಿಶ್ರಣವನ್ನು ಸುರಿಯಿರಿ. ಸಾಧ್ಯವಾದರೆ ಬಟ್ಟೆಸಹಿತ ಪನೀರ್ ಮಿಶ್ರಣವನ್ನು ಒಮ್ಮೆ ನಲ್ಲಿನೀರಿನ ಕೆಳಗೆ ಒಡ್ಡಿ ತೆಗೆದುಬಿಡಿ. ಹೀಗೆ ಮಾಡುವುದರಿಂದ ಪನೀರ್ ನಲ್ಲಿರುವ ಹುಳಿ ಅಂಶವೆಲ್ಲ ಹೋಗುತ್ತದೆ. 
 • ಪನೀರ್ ಮಿಶ್ರಣವನ್ನು ಬಟ್ಟೆಯಲ್ಲಿ ಗಂಟುಹಾಕಿ ಟ್ಯಾಪ್ ಗೆ ಅಥವಾ ಯಾವುದಾದರೂ ಹುಕ್ ಗೆ ನೇತುಹಾಕಿ. ನೀರು ತೊಟ್ಟಿಕ್ಕಲು ಇದರ ಕೆಳಗಡೆ ಒಂದು ಪಾತ್ರೆ ಇಡಿ. ಇದನ್ನು ಒಂದೂವರೆ ಘಂಟೆಕಾಲ ಹಾಗೇ ಬಿಡಿ. 
 • ನಂತರ ಬಟ್ಟೆ ಗಂಟನ್ನು ಬಿಚ್ಚಿ ಪನೀರ್ ಮಿಶ್ರಣವನ್ನು ಶುದ್ಧಮಾಡಿದ ಅಡುಗೆಕಟ್ಟೆ ಅಥವಾ ಒಂದು ಅಗಲವಾದ ಪ್ಲೇಟ್ ನಲ್ಲಿ ಹಾಕಿಕೊಳ್ಳಿ. ಮಿಶ್ರಣವನ್ನು ಚೆನ್ನಾಗಿ ನಾದಿ ಗಂಟಿಲ್ಲದಂತೆ ಕಲಸಿ. ಇದನ್ನು ಒಂದು ಪುಟ್ಟ ಪ್ಲೇಟ್ ನಲ್ಲಿ ಒಂದು ಇಂಚು ದಪ್ಪಗೆ ಚೌಕ ಅಥವಾ ಆಯತಾಕಾರಕ್ಕೆ ನಾಜೂಕಾಗಿ ಒತ್ತಿ ಜೋಡಿಸಿ. ಇದನ್ನು ಅರ್ಧ ಘಂಟೆಕಾಲ ಫ್ರಿಜ್ ನಲ್ಲಿಡಿ. 
 • ಅರ್ಧ ಘಂಟೆಯ ನಂತರ ಪನೀರ್ ನ್ನು ಫ್ರಿಜ್ ನಿಂದ ಹೊರತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿ ಬಳಸಿ. 
 • ಪಾಲಕ್ ಪನೀರ್ ಇತ್ಯಾದಿ ಸೈಡ್ ಡಿಶ್ ಗಳಿಗೆ ಬಳಸುವಾಗ ಪನೀರ್ ಪೀಸ್ ಗಳನ್ನು ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿಕೊಂಡರೆ ಉತ್ತಮ. ಇದರಿಂದ ಪನೀರ್ ಪೀಸ್ ಗಳು ಆಕಾರ ಕೆಡದೆ ಚೆನ್ನಾಗಿರುತ್ತವೆ. 


ಟಿಪ್ಸ್:
 • ಪನೀರ್ ತಯಾರಿಸಿದಾಗ ಉಳಿಯುವ ನೀರನ್ನು ಹೊರಚೆಲ್ಲಬೇಡಿ. ಸೈಡ್ ಡಿಶ್ ತಯಾರಿಸುವಾಗ ನೀರಿನ ಬದಲು ಇದನ್ನೇ ಬಳಸಬಹುದು.

Thursday, 19 November 2015

ಹೆಸರುಬೇಳೆ ತೊವ್ವೆ । ಹೆಸರುಕಟ್ಟು


ಇತ್ತೀಚೆಗೆ ಬ್ಲಾಗ್ ನಲ್ಲಿ ರೆಸಿಪಿ ಬರೆಯಲು ಸಮಯ ಸಿಗುವುದೇ ಕಷ್ಟವಾಗಿಬಿಟ್ಟಿದೆ. ಚಿಕ್ಕಪುಟ್ಟ ಓಡಾಟ, ಪ್ರವಾಸ, ಜೊತೆಗೇ ಹಬ್ಬಗಳ ಸಾಲು..ಇವೆಲ್ಲದರ ನಡುವೆ ದಿನಗಳು ಕಳೆದದ್ದೇ ಗೊತ್ತಾಗುತ್ತಿಲ್ಲ. ಹೊಸ ಅಡುಗೆಗಳನ್ನು ಮಾಡಿದರೂ ಮಗಳ ತಂಟೆಯ ಕಾರಣ ಫೋಟೋ ಕ್ಲಿಕ್ಕಿಸುವುದೇ ದೊಡ್ಡ ಕೆಲಸ!
ಈ ವರ್ಷದ ದೀಪಾವಳಿ ಹಬ್ಬವನ್ನು ಬಹಳ ಚೆನ್ನಾಗಿ ಆಚರಿಸಿದೆವು. ಸಿಡ್ನಿಯಲ್ಲಿ ಇಂಡಿಯನ್ಸ್ ಜಾಸ್ತಿ. ನಾವಿರುವ ಏರಿಯಾದಲ್ಲಂತೂ ಹೆಚ್ಚಾಗಿ ಕಾಣುವವರೆಲ್ಲ ಭಾರತೀಯರೇ! ಹೀಗಾಗಿ ಮೂರ್ನಾಲ್ಕು ಕಡೆ ಹಬ್ಬದ ಆಚರಣೆಗಳಲ್ಲಿ ಪಾಲ್ಗೊಂಡೆವು. ಮನೆಯಲ್ಲೂ ಒಂದು ದಿನ ಹಬ್ಬವನ್ನಾಚರಿಸಿ ಸಂಭ್ರಮಪಟ್ಟಿದ್ದಾಯಿತು!
ಇಂದು ನಾನು ಬರೆಯುತ್ತಿರುವ ರೆಸಿಪಿ ಬಹಳ ಸಿಂಪಲ್ ಹಾಗೂ ಬೇಗ ತಯಾರಿಸಬಹುದಾದ ಒಂದು ಮೇಲೋಗರ. ಯಾವುದೇ ತರಕಾರಿ ಬಳಸದೆ ತಯಾರಿಸಬಹುದಾದ ಹೆಸರುಬೇಳೆ ತೊವೆ ಅಥವಾ ಹೆಸರುಕಟ್ಟು ಊಟಕ್ಕೆ ಬಹಳ ರುಚಿ! ಈ ತೊವ್ವೆಯನ್ನು ಬೇರೆ ಬೇರೆ ವಿಧಾನಗಳಲ್ಲಿ ತಯಾರಿಸುತ್ತಾರೆ. ನಾನು ಇದನ್ನು ನನ್ನ ಫ್ರೆಂಡ್ ಒಬ್ಬರಿಂದ ಕಲಿತದ್ದು.
ಹೆಸರುಬೇಳೆ ತೊವ್ವೆ / ಹೆಸರುಕಟ್ಟು ತಯಾರಿಸುವ ವಿಧಾನ ಇಂತಿದೆ:


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ
 
ಬೇಕಾಗುವ ಸಾಮಗ್ರಿಗಳು:
 • ಹೆಸರುಬೇಳೆ - 1/3 ಕಪ್ (1 ಕಪ್ = 70 ಗ್ರಾಂ ಅಂದಾಜು)
 • ನೀರು - 4 ಕಪ್
 • ಅರಿಶಿನ - ದೊಡ್ಡ ಚಿಟಿಕೆ
 • ಶುಂಟಿ (ಜಜ್ಜಿದ್ದು) - 1 1/2 ಇಂಚು 
 • ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
 • ಇಂಗು - ದೊಡ್ಡ ಚಿಟಿಕೆ 
 • ಉಪ್ಪು - ರುಚಿಗೆ ತಕ್ಕಷ್ಟು 
 • ಕೊತ್ತಂಬರಿ ಸೊಪ್ಪು (ಹೆಚ್ಚಿದ್ದು) - 2 ಟೇಬಲ್ ಸ್ಪೂನ್ 
 • ನಿಂಬೆಹಣ್ಣು - ಅರ್ಧಭಾಗ

ಒಗ್ಗರಣೆಗೆ: ತುಪ್ಪ - 1 1/2 ಟೀ ಸ್ಪೂನ್, ಜೀರಿಗೆ - 1 ಟೀ ಸ್ಪೂನ್, ಸಾಸಿವೆ - 1 ಟೀ ಸ್ಪೂನ್ 


ತಯಾರಿಸುವ ವಿಧಾನ:
 • ಹೆಸರುಬೇಳೆಯನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಂಡು 3 ಕಪ್ ನಷ್ಟು ನೀರು, ದೊಡ್ಡ ಚಿಟಿಕೆ ಅರಿಶಿನ ಹಾಗೂ 2 - 3 ಹನಿ ಎಣ್ಣೆ ಸೇರಿಸಿ, ಬೇಳೆ ಮುಕ್ಕಾಲುಭಾಗ ಬೇಯುವವರೆಗೆ ಬೇಯಿಸಿ. ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸುವುದಾದರೆ ಒಂದು ವಿಸಿಲ್ ಆದರೆ ಸಾಕು. ಅಥವಾ ಡೈರೆಕ್ಟ್ ಆಗಿ ಪಾತ್ರೆಯನ್ನು ಒಲೆಯಮೇಲಿಟ್ಟು ಬೇಳೆ ಬೇಯಿಸಿದರೂ ಆಗುತ್ತದೆ. 
 • ಬೇಳೆ ಮುಕ್ಕಾಲುಭಾಗ ಬೆಂದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಜಜ್ಜಿದ ಶುಂಟಿ, ದೊಡ್ಡ ಚಿಟಿಕೆ ಇಂಗು, ಹೆಚ್ಚಿದ ಹಸಿಮೆಣಸು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಐದು ನಿಮಿಷ ಕುದಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿಸೊಪ್ಪು ಸೇರಿಸಿ ಉರಿಯಿಂದ ಇಳಿಸಿ. 
 • ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ ಜೀರಿಗೆ, ಸಾಸಿವೆ ಸೇರಿಸಿ ಚಟಪಟ ಎಂದೊಡನೆ ಇದನ್ನು ತೊವ್ವೆ ಮಿಶ್ರಣಕ್ಕೆ ಸೇರಿಸಿ. 
 • ಬಿಸಿಬಿಸಿ ತೊವ್ವೆಯನ್ನು ಉಪ್ಪಿನಕಾಯಿ ಹಾಗೂ ಅನ್ನದೊಡನೆ ಸರ್ವ್ ಮಾಡಿ. 

ಟಿಪ್ಸ್:
 • ನಿಂಬೆರಸವನ್ನು ತೊವೆ ಮಿಶ್ರಣ ಕುದಿದ ನಂತರ ಬೇಕಿದ್ದರೂ ಸೇರಿಸಬಹುದು.

Thursday, 22 October 2015

ಮೈಸೂರ್ ಪಾಕ್


ಮೈಸೂರ್ ಪಾಕ್ ನ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ. ಶುಭ ಸಮಾರಂಭಗಳು, ಹಬ್ಬ, ಮದುವೆ, ಪಾರ್ಟಿಗಳಲ್ಲಿ ತಯಾರಿಸುವ ಸ್ಪೆಷಲ್ ಸ್ವೀಟ್ ಗಳಲ್ಲಿ ಮೈಸೂರ್ ಪಾಕ್ ಕೂಡ ಒಂದು. ಧಾರಾಳವಾಗಿ ತುಪ್ಪ ಬಳಸಿ ತಯಾರಿಸುವ ಈ ಸಿಹಿತಿಂಡಿಯ ರುಚಿಯಂತೂ ಅದ್ಭುತ! 
ನನ್ನ ಚಿಕ್ಕಮ್ಮ ಮೈಸೂರ್ ಪಾಕ್ ತಯಾರಿಸುವುದರಲ್ಲಿ ಎಕ್ಸ್ ಪರ್ಟ್. ಮನೆಯಲ್ಲೇ ತಯಾರಿಸುವ ತಾಜಾ ತುಪ್ಪವನ್ನು ಬಳಸಿ ಅವರು ತಯಾರಿಸುವ ಮೈಸೂರ್ ಪಾಕ್ ಮನೆಯವರೆಲ್ಲರಿಗೂ ಇಷ್ಟ. ನನಗೂ ಮೈಸೂರ್ ಪಾಕ್ ಎಂದರೆ ಬಹಳ ಪ್ರಿಯ, ಹೀಗಾಗಿ ನಾನು ತಯಾರಿಸಲು ಕಲಿತ ಮೊದಲ ಸಿಹಿತಿಂಡಿ ಇದು! ಮೈಸೂರ್ ಪಾಕ್ ತಯಾರಿಸುವುದು ತೀರಾ ಕಷ್ಟವೇನಿಲ್ಲ, ಆದರೆ ಮಿಶ್ರಣವನ್ನು ಕರೆಕ್ಟ್ ಟೈಮಿಗೆ ಉರಿಯಿಂದ ಕೆಳಗಿಳಿಸಬೇಕು. ಕೆಲವೊಮ್ಮೆ ಕಡ್ಲೆಹಿಟ್ಟು ಚೆನ್ನಾಗಿಲ್ಲದಿದ್ದರೆ ಅದು ಮೈಸೂರ್ ಪಾಕಿನ ಹದವನ್ನು ಕೆಡಿಸಿಬಿಡುತ್ತದೆ. ಆದಷ್ಟೂ ಫ್ರೆಶ್ ಆಗಿರುವ ಉತ್ತಮ ದರ್ಜೆಯ ಕಡಲೆಹಿಟ್ಟು ಮತ್ತು ತುಪ್ಪವನ್ನು ಬಳಸುವುದು ಉತ್ತಮ.
ಮೈಸೂರ್ ಪಾಕ್ ಗೆ ಕೆಲವರು ತುಪ್ಪದ ಬದಲು ಡಾಲ್ಡಾ ಹಾಗೂ ಇತರ ಬಗೆಯ ಎಣ್ಣೆಗಳನ್ನೂ ಬಳಸುತ್ತಾರೆ. ನಾನು ಸಾಮಾನ್ಯವಾಗಿ ತುಪ್ಪ ಹಾಗೂ ಸನ್ ಫ್ಲವರ್ ಆಯಿಲ್ ಎರಡನ್ನೂ ಸಮಪ್ರಮಾಣದಲ್ಲಿ ಬಳಸುತ್ತೇನೆ.
ಮೈಸೂರ್ ಪಾಕ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು
ಸರ್ವಿಂಗ್ಸ್: ಈ ಅಳತೆಯಿಂದ ಸುಮಾರು 45 ಚಿಕ್ಕ ಪೀಸ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಡಿಫಿಕಲ್ಟ್

ಬೇಕಾಗುವ ಸಾಮಗ್ರಿಗಳು:
 • ಕಡಲೆಹಿಟ್ಟು - 1 ಕಪ್ (1 ಕಪ್ = 100 ಗ್ರಾಂ ಅಂದಾಜು)
 • ಸಕ್ಕರೆ - 1 1/2 ಕಪ್
 • ತುಪ್ಪ - 1 ಕಪ್
 • ಸನ್ ಫ್ಲವರ್ ಆಯಿಲ್ - 1 ಕಪ್
 • ಉಪ್ಪು - ಚಿಟಿಕೆ
 • ಅಡುಗೆ ಸೋಡಾ - ಚಿಟಿಕೆ
 • ನೀರು - 3/4 ಕಪ್ + 3 ಟೇಬಲ್ ಸ್ಪೂನ್ತಯಾರಿಸುವ ವಿಧಾನ:
 • ಸಕ್ಕರೆಗೆ ನೀರು ಸೇರಿಸಿ ಬಿಸಿಗಿಡಿ. ಇದು ಕುದಿದು ಎರಡೆಳೆ ಪಾಕ ಬರುವಷ್ಟರಲ್ಲಿ ಹಿಟ್ಟನ್ನು ಹುರಿದುಕೊಳ್ಳಬೇಕು.
 • ಒಂದು ಬಾಣಲೆಯಲ್ಲಿ ಅರ್ಧ ಕಪ್ ನಷ್ಟು ತುಪ್ಪ ಹಾಕಿಕೊಂಡು ಇದಕ್ಕೆ ಕಡಲೆಹಿಟ್ಟು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ. ಮಿಶ್ರಣಕ್ಕೆ ಚಿಟಿಕೆ ಉಪ್ಪು ಸೇರಿಸಿ.
 • ತುಪ್ಪ ಹಾಗೂ ಎಣ್ಣೆಯನ್ನು ಬೇರೆಬೇರೆ ಪಾತ್ರೆಗಳಲ್ಲಿ ಹದವಾಗಿ ಬಿಸಿಮಾಡಿಕೊಳ್ಳಿ.
 • ಸಕ್ಕರೆ ಮಿಶ್ರಣ ಎರಡೆಳೆ ಪಾಕ ಬಂದಾಗ ಇದನ್ನು ಬಿಸಿಯಿರುವ ಕಡಲೆಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಮೀಡಿಯಮ್ ಉರಿಯಲ್ಲಿ ಬಿಡದೆ ಕೈಯಾಡಿಸುತ್ತಿರಿ.
 • ಕಡಲೆಹಿಟ್ಟಿನ ಮಿಶ್ರಣಕ್ಕೆ 2 - 3 ಟೇಬಲ್ ಸ್ಪೂನ್ ನಷ್ಟು ಬಿಸಿ ಎಣ್ಣೆಯನ್ನು ಆಗಾಗ್ಗೆ ಹಾಕುತ್ತ ಕೈಯಾಡಿಸಿ. ಎಣ್ಣೆ ಕಡಲೆಹಿಟ್ಟಿನ ಮಿಶ್ರಣದಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತಿದ್ದಂತೆ ಪುನಃ 2 - 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ. ಎಣ್ಣೆ ಪೂರ್ತಿ ಖಾಲಿಯಾದ ನಂತರ 2 - 3 ಟೇಬಲ್ ಸ್ಪೂನ್ ನಂತೆ ತುಪ್ಪವನ್ನು ಖಾಲಿಯಾಗುವವರೆಗೂ ಹಾಕಿ.
 • ಒಂದು ಹಂತದಲ್ಲಿ ಮಿಶ್ರಣ ತುಪ್ಪವನ್ನು ಹೊರಬಿಡಲು ಪ್ರಾರಂಭಿಸುತ್ತದೆ ಅಥವಾ ಮಿಶ್ರಣ ಗುಳ್ಳೆಗಳಾಗತೊಡಗಿ ಸೌಟು ಹಾಗೂ ಪಾತ್ರೆಯಿಂದ ಬಿಟ್ಟುಕೊಳ್ಳಲಾರಂಭಿಸುತ್ತದೆ.
 • ತಕ್ಷಣ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಉರಿಯನ್ನು ಆಫ್ ಮಾಡಿ.
 • ಮಿಶ್ರಣವನ್ನು ಅಗಲವಾದ ಪ್ಲೇಟ್ ಗೆ ಸುರಿದು ಸೆಟ್ ಆಗಲು ಬಿಡಿ. 3 - 4 ನಿಮಿಷದ ನಂತರ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಇದನ್ನು ಚಾಕುವಿನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ.
 • ಪೂರ್ತಿ ತಣ್ಣಗಾದ ನಂತರ ನಿಧಾನವಾಗಿ ಹಲ್ವಾ ಪೀಸ್ ಗಳನ್ನು ಪ್ಲೇಟ್ ನಿಂದ ತೆಗೆಯಿರಿ.
 • ರುಚಿಕರವಾದ ಮೈಸೂರ್ ಪಾಕ್ ಈಗ ಸವಿಯಲು ಸಿದ್ಧ!


ಟಿಪ್ಸ್:
 • ಮೈಸೂರ್ ಪಾಕ್ ಗೆ ಎಣ್ಣೆ ಬಳಸದೆ ಪೂರ್ತಿ ಎರಡು ಕಪ್ ನಷ್ಟು ತುಪ್ಪ ಬಳಸಿಯೂ ತಯಾರಿಸಬಹುದು. 
 • ಕಡಲೆಹಿಟ್ಟು ಚೆನ್ನಾಗಿಲ್ಲದಿದ್ದರೆ ಅಥವಾ ಹಳತಾಗಿದ್ದರೆ ಮೈಸೂರ್ ಒಮ್ಮೊಮ್ಮೆ ಚೆನ್ನಾಗಿ ಬರುವುದಿಲ್ಲ. 
 • ಮೈಸೂರ್ ಪಾಕ್ ಗೆ ಬಳಸುವ ಎಣ್ಣೆ ಹಾಗೂ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಬಳಸಿ. ಬಿಸಿ ಎಣ್ಣೆ / ತುಪ್ಪವನ್ನು ಸೇರಿಸಿದರೆ ಮೈಸೂರ್ ಪಾಕ್ ಗರಿಯಾಗಿ ಉಬ್ಬುಬ್ಬಿ ಬರುತ್ತದೆ.

Thursday, 1 October 2015

ಕಾರ್ನ್ ಫ್ಲೇಕ್ಸ್ ಮಿಕ್ಸ್ಚರ್ । ಕಾರ್ನ್ ಫ್ಲೇಕ್ಸ್ ಚುಡುವಾ


ನಮ್ಮ ಮನೆಯಲ್ಲಿ ಸ್ನ್ಯಾಕ್ಸ್ ಗೆ ಅಂಗಡಿಯಿಂದ ತಿಂಡಿಗಳನ್ನು ತರುವುದು ಬಹಳ ಅಪರೂಪ. ಮನೆಯಲ್ಲೇ ತಯಾರಿಸಿದ ಸ್ವೀಟ್, ಕುರುಕಲು, ಬಿಸ್ಕಿಟ್ ಹೀಗೆ ಏನಾದರೂ ಒಂದಿಷ್ಟು ತಿಂಡಿಗಳು ಯಾವಾಗಲೂ ಟೀ ಟೈಮ್ ಗೆ ಇದ್ದೇ ಇರುತ್ತವೆ. ಮನೆಯಲ್ಲಿ ಎಷ್ಟು ಬಗೆಯ ಬಿಸ್ಕಿಟ್ ಗಳನ್ನು ತಯಾರಿಸಿದರೂ ನನ್ನ ಮಗಳಿಗೆ ಅಂಗಡಿಯಿಂದ ತರುವ ಬಿಸ್ಕಿಟ್ ಗಳೇ ಹೆಚ್ಚು ಇಷ್ಟ. 'ಅಮ್ಮಾ, ನನಗೆ ತೂತು ಇರುವ ಬಿಸ್ಕಿಟ್ ಬೇಕು!' ಎಂದು ಕೇಳುತ್ತಾಳೆ. ಹೀಗಾಗಿ ಅವಳಿಗಾಗಿ ಒಂದಿಷ್ಟು ಬಿಸ್ಕಿಟ್ ಪೊಟ್ಟಣಗಳನ್ನು ಯಾವಾಗಲಾದರೊಮ್ಮೆ ತರುತ್ತಿರುತ್ತೇವೆ. 
ಕಾರ್ನ್ ಫ್ಲೇಕ್ಸ್ ಮಿಕ್ಸ್ಚರ್ - ಇದು ನಾನು ಸಾಮಾನ್ಯವಾಗಿ ತಯಾರಿಸುವ ಸ್ನ್ಯಾಕ್ಸ್ ಗಳಲ್ಲಿ ಒಂದು. ದಿಢೀರ್ ಆಗಿ ಬೆಳಗ್ಗಿನ ತಿಂಡಿ ತಯಾರಿಸಲು ಬೇಕೆಂದು ತರುವ ಕಾರ್ನ್ ಫ್ಲೇಕ್ಸ್ ನಮ್ಮ ಮನೆಯಲ್ಲಿ ಬೆಳಗಿನ ತಿಂಡಿಗಿಂತ ಹೆಚ್ಚಾಗಿ ಈ ಸ್ನ್ಯಾಕ್ಸ್ ಮಿಕ್ಸ್ಚರ್ ತಯಾರಿಸುವುದಕ್ಕೆ ಬಳಕೆಯಾಗುತ್ತದೆ. ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಮಿಕ್ಸ್ಚರ್ ನಿಮಗೆ ಇಷ್ಟವಾಗುವುದೋ ನೋಡಿ!


ತಯಾರಿಸಲು ಬೇಕಾಗುವ ಸಮಯ: 5 - 10 ನಿಮಿಷಗಳು 
ಸರ್ವಿಂಗ್ಸ್: 15 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • ಕಾರ್ನ್ ಫ್ಲೇಕ್ಸ್ (ಪ್ಲೇನ್, ಫ್ಲೇವರ್ ಇಲ್ಲದ್ದು) - 5 ಕಪ್ (ದೊಡ್ಡ ಕಪ್)
 • ಶೇಂಗಾ / ನೆಲಗಡಲೆ - 1/2 ಕಪ್ 
 • ಬಾದಾಮಿ - 3 ಟೇಬಲ್ ಸ್ಪೂನ್ 
 • ಗೋಡಂಬಿ ಚೂರುಗಳು - 1/8 ಕಪ್ ಅಥವಾ ಸ್ವಲ್ಪ ಜಾಸ್ತಿ 
 • ಒಣದ್ರಾಕ್ಷಿ - 20
 • ಪುಟಾಣಿಬೇಳೆ - 3 ಟೇಬಲ್ ಸ್ಪೂನ್ 
 • ಉದ್ದಿನಬೇಳೆ - 1 ಟೀ ಸ್ಪೂನ್ 
 • ಸಾಸಿವೆ - 1 ಟೀ ಸ್ಪೂನ್ 
 • ಅರಿಶಿನ - 1/4 ಟೀ ಸ್ಪೂನ್
 • ಮಸಾಲಾ ಪೌಡರ್ - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
 • ಕರಿಬೇವು - 1 ಎಸಳು
 • ಎಣ್ಣೆ - ಒಂದು ಸೌಟು ಅಥವಾ 10ರಿಂದ 11 ಟೇಬಲ್ ಸ್ಪೂನ್  
 • ಉಪ್ಪು - ರುಚಿಗೆ ತಕ್ಕಷ್ಟು 
 • ಸಕ್ಕರೆಪುಡಿ - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 

ತಯಾರಿಸುವ ವಿಧಾನ:
 • ಕಾರ್ನ್ ಫ್ಲೇಕ್ಸ್ ಗರಿಯಾಗಿದ್ದರೆ ಹಾಗೆಯೇ ಬಳಸಬಹುದು. ಇಲ್ಲದಿದ್ದರೆ ಕಾರ್ನ್ ಫ್ಲೇಕ್ಸ್ ನ್ನು ಓವನ್ ನಲ್ಲಿ ಬಿಸಿಮಾಡಿ ಅಥವಾ ಒಲೆಯಮೇಲೆ ಕಡಿಮೆ ಉರಿಯಲ್ಲಿ ಹುರಿದು ಗರಿಗರಿ ಮಾಡಿಕೊಳ್ಳಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಬಿಸಿಯಾದ ನಂತರ ಇದಕ್ಕೆ ಬಾದಾಮಿ, ಶೇಂಗಾ ಸೇರಿಸಿ 2 - 3 ನಿಮಿಷ ಹುರಿಯಿರಿ. 
 • ನಂತರ ಇದಕ್ಕೆ ಗೋಡಂಬಿ ಚೂರುಗಳನ್ನು ಸೇರಿಸಿ ಒಂದು ನಿಮಿಷ ಹುರಿದು ದ್ರಾಕ್ಷಿ, ಪುಟಾಣಿಬೇಳೆ, ಉದ್ದಿನಬೇಳೆ, ಸಾಸಿವೆ ಸೇರಿಸಿ ಸಾಸಿವೆ ಚಟಪಟ ಎನ್ನುವತನಕ ಹುರಿಯಿರಿ. ನಂತರ ಇದಕ್ಕೆ ಅರಿಶಿನ ಸೇರಿಸಿ, ದ್ರಾಕ್ಷಿ ಉಬ್ಬುವತನಕ ಹುರಿಯಿರಿ.
 • ಕೊನೆಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿ ಒಂದು ನಿಮಿಷ ಹುರಿದು, ಮಸಾಲಾ ಪೌಡರ್ ಸೇರಿಸಿ ಒಲೆಯಿಂದ ಇಳಿಸಿ. 
 • ಒಗ್ಗರಣೆ ಮಿಶ್ರಣಕ್ಕೆ ಪುಡಿ ಉಪ್ಪು, ಸಕ್ಕರೆಪುಡಿ ಸೇರಿಸಿ ಮಿಕ್ಸ್ ಮಾಡಿ. 
 • ಈಗ ಕಾರ್ನ್ ಫ್ಲೇಕ್ಸ್ ನ್ನು ಒಗ್ಗರಣೆಗೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಅಥವಾ ಸಕ್ಕರೆಪುಡಿ ಬೇಕಿದ್ದರೆ ಸೇರಿಸಿ. 
 • ತಯಾರಾದ ಕಾರ್ನ್ ಫ್ಲೇಕ್ಸ್ ಮಿಕ್ಸ್ಚರ್ ನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಬೇಕಾದಾಗ ಬಳಸಿ. ಟೀ ಅಥವಾ ಕಾಫಿಯೊಡನೆ ಇದು ಒಳ್ಳೆಯ ಸ್ನ್ಯಾಕ್ಸ್. ರವಾ ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿಯೊಡನೆ ಹಾಕಿಕೊಳ್ಳುವುದಕ್ಕೂ ಈ ಮಿಕ್ಸ್ಚರ್ ಚೆನ್ನಾಗಿರುತ್ತದೆ. 

Friday, 11 September 2015

ಶ್ರೀಖಂಡ


ಶ್ರೀಖಂಡ - ಇದು ಮೊಸರನ್ನು ಬಳಸಿ ತಯಾರಿಸುವ ಒಂದು ಸಿಹಿತಿಂಡಿ ಅಥವಾ ಡೆಸರ್ಟ್. ಸುಲಭದಲ್ಲಿ ಸಿಗುವ ಕೆಲವೇ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಸಿಹಿತಿಂಡಿ ಬಹಳ ರುಚಿಕರವೂ ಹೌದು. ನಮ್ಮೂರ ಕಡೆ ಶ್ರೀಖಂಡವನ್ನು ಬೆಳಗ್ಗಿನ ತಿಂಡಿಗೆ ತೆಳ್ಳೇವು, ದೋಸೆಯೊಡನೆ ನೆಂಜಿಕೊಳ್ಳುವ ವಾಡಿಕೆಯೂ ಇದೆ. ಶ್ರೀಖಂಡಕ್ಕೆ ಪಿಸ್ತಾ, ದ್ರಾಕ್ಷಿ ಇತ್ಯಾದಿಗಳನ್ನು ಸೇರಿಸಿದರೆ ಇನ್ನೂ ರುಚಿ. ಶ್ರೀಖಂಡಕ್ಕೆ ಮಾವಿನಹಣ್ಣನ್ನು ಸೇರಿಸಿ ತಯಾರಿಸಿದರೆ ಅದನ್ನು 'ಆಮ್ರಖಂಡ' ಎಂದು ಕರೆಯುತ್ತಾರೆ. 
ಶ್ರೀಖಂಡ ತಯಾರಿಸುವ ವಿಧಾನ ಈ ಕೆಳಗಿನಂತಿದೆ. ಸುಲಭದಲ್ಲಿ ತಯಾರಿಸಬಹುದಾದ ಈ ಡೆಸರ್ಟ್ ನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು 
ಮೊಸರನ್ನು ನೇತುಹಾಕಬೇಕಾದ ಸಮಯ: 7 - 8 ಘಂಟೆಗಳು 
ಸರ್ವಿಂಗ್ಸ್: 5 - 6 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
7 - 8 ಘಂಟೆ ಬಟ್ಟೆಯಲ್ಲಿ ನೇತುಹಾಕಿದ ಮೊಸರು (ಹಂಗ್ ಕರ್ಡ್) - 1 1/2 ಕಪ್ 
ಪುಡಿಮಾಡಿದ ಸಕ್ಕರೆ - 3/4 ಕಪ್ ಅಥವಾ ರುಚಿಗೆ ತಕ್ಕಷ್ಟು 
ಏಲಕ್ಕಿಪುಡಿ - 1/2 ಟೀ ಸ್ಪೂನ್ 
ಕೇಸರಿ ದಳಗಳು - 10 ರಿಂದ 12

ತಯಾರಿಸುವ ವಿಧಾನ:
ಮಸ್ಲಿನ್ ಬಟ್ಟೆಯಲ್ಲಿ 7 - 8 ಘಂಟೆ ನೇತುಹಾಕಿದ ಮೊಸರನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಗಂಟಿಲ್ಲದಂತೆ ಬೀಟ್ ಮಾಡಿ. 
ಇದಕ್ಕೆ ಸಕ್ಕರೆಪುಡಿ, ಕೇಸರಿ ದಳಗಳು ಹಾಗೂ ಏಲಕ್ಕಿಪುಡಿ ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೀಟ್ ಮಾಡಿ. 
ತಯಾರಾದ ಶ್ರೀಖಂಡವನ್ನು ಹಾಗೆಯೇ ಸರ್ವ್ ಮಾಡಿ ಅಥವಾ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಸರ್ವ್ ಮಾಡಿ. ಬೇಕಿದ್ದರೆ ಇದಕ್ಕೆ ಪಿಸ್ತಾ ಚೂರುಗಳನ್ನೂ ಸೇರಿಸಬಹುದು. 
ಸಿಹಿ ಇಷ್ಟಪಡುವವರಿಗೆ ಶ್ರೀಖಂಡ ದೋಸೆ, ತೆಳ್ಳೆವು, ಪೂರಿಯೊಡನೆ ಸೈಡ್ ಡಿಶ್ ನಂತೆ ಹಾಕಿಕೊಳ್ಳುವುದಕ್ಕೂ ಚೆನ್ನಾಗಿರುತ್ತದೆ.  


ಟಿಪ್ಸ್:
ಹಂಗ್ ಕರ್ಡ್ ಮಾಡುವ ವಿಧಾನ: ಗಟ್ಟಿ ಮೊಸರನ್ನು ಒಂದು ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಒಂದು ಹುಕ್ ಗೆ ನೇತುಹಾಕಿ. ಹೆಚ್ಚಿನ ನೀರು ಬೀಳುವುದಕ್ಕೆ ಕೆಳಗಡೆ ಒಂದು ಪಾತ್ರೆಯನ್ನಿಡಿ. ಇದನ್ನು ಹಾಗೆಯೇ 7 - 8 ಘಂಟೆಕಾಲ ಅಥವಾ ರಾತ್ರಿಯಿಡೀ ಇಡಿ. ನಂತರ ಉಳಿಯುವ ಗಟ್ಟಿ ಮೊಸರನ್ನು ಶ್ರೀಖಂಡ ತಯಾರಿಸಲು ಬಳಸಿ. 
ಕೇಸರಿ ದಳಗಳನ್ನು ಬಳಸದಿದ್ದರೆ 1/2 ಟೀ ಸ್ಪೂನ್ ನ ಬದಲು 3/4 ಟೀ ಸ್ಪೂನ್ ನಷ್ಟು ಏಲಕ್ಕಿಪುಡಿ ಸೇರಿಸಿ. 

Tuesday, 1 September 2015

ಎಗ್ ಲೆಸ್ ಬ್ಲೂಬೆರ್ರಿ ಮಫಿನ್ಸ್


ಬೇಕಿಂಗ್ ಗೆ ಸಾಮಾನ್ಯವಾಗಿ ಬಳಸುವ ಹಣ್ಣುಗಳಲ್ಲಿ ಬ್ಲೂಬೆರ್ರಿಯೂ ಒಂದು. ಅಚ್ಚು ನೀಲಿ ಬಣ್ಣದ ಈ ಹಣ್ಣು ಸ್ವಲ್ಪ ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿದ್ದು, ನೋಡಲು ಬಹಳ ಚೆನ್ನಾಗಿರುತ್ತದೆ. ನಾನು ಅನೇಕ ಬಾರಿ ಈ ಹಣ್ಣನ್ನು ತಿಂದಿದ್ದರೂ ಬೇಕಿಂಗ್ ಗೆ ಎಂದೂ ಬಳಸಿರಲಿಲ್ಲ. ಕೆಲದಿನಗಳ ಹಿಂದೆ ಸ್ಮೂಥಿ ತಯಾರಿಸಲೆಂದು ಫ್ರೋಜನ್ ಬ್ಲೂಬೆರ್ರಿ ಪ್ಯಾಕೆಟ್ ನ್ನು ಮನೆಗೆ ತಂದಿದ್ದೆವು. ನನ್ನ ಮಗಳಿಗೆ ಮಫಿನ್, ಕಪ್ ಕೇಕ್ ಗಳೆಂದರೆ ಇತ್ತೀಚೆಗೆ ತುಂಬಾ ಇಷ್ಟ. ಅವಳಿಗೆ ಇಷ್ಟವಾಗಬಹುದೆಂದು ಈ ಸಲ ಬ್ಲೂಬೆರ್ರಿ ಹಣ್ಣುಗಳನ್ನು ಬಳಸಿ ಮಫಿನ್ಸ್ ತಯಾರಿಸಿದ್ದೆ. 
ನಾವು ಮೊಟ್ಟೆ ಬಳಸದ ಕಾರಣ ಕೇಕ್, ಬಿಸ್ಕಿಟ್, ಮಫಿನ್ಸ್ ಏನೇ ತಯಾರಿಸುವುದಾದರೂ ಮೊಟ್ಟೆಗೆ ಒಂದು ಸಬ್ ಸ್ಟಿಟ್ಯೂಟ್ ಹುಡುಕಿಕೊಳ್ಳಲೇಬೇಕು. ನನ್ನ ಮೊದಲ ಪ್ರಯೋಗದಲ್ಲಿ ಬ್ಲೂಬೆರ್ರಿ ಮಫಿನ್ಸ್ ತಯಾರಿಸಲು ಮೊಟ್ಟೆಗೆ ಬದಲು ಹಾಲನ್ನು ಬಳಸಿದ್ದೆ. ಮಫಿನ್ ತಿನ್ನಲು ಚೆನ್ನಾಗಿದ್ದರೂ ಇನ್ನೂ ಸ್ವಲ್ಪ ಇಂಪ್ರೂವ್ ಮೆಂಟ್ ಮಾಡಬಹುದೆನ್ನಿಸಿತು. ಹೀಗಾಗಿ ಎರಡನೇ ಪ್ರಯೋಗದಲ್ಲಿ ಹಾಲಿನ ಬದಲು ಮೊಸರನ್ನು ಬಳಸಿದೆ. ಮಫಿನ್ ಗಳು ಈ ಬಾರಿ ನಿಜಕ್ಕೂ ಚೆನ್ನಾಗಿದ್ದವು!
ಐದಾರು ಬಾರಿ ಈ ಮಫಿನ್ ಗಳನ್ನು ತಯಾರಿಸಿಯಾದಮೇಲೆ ರೆಸಿಪಿಯನ್ನು ನಿಮ್ಮೊಡನೆ ಶೇರ್ ಮಾಡುತ್ತಿದ್ದೇನೆ. ಇಲ್ಲಿದೆ ನೋಡಿ ಎಗ್ ಲೆಸ್ ಬ್ಲೂಬೆರ್ರಿ ಮಫಿನ್ಸ್ ರೆಸಿಪಿ.. 


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು 
ಬೇಕಿಂಗ್ ಟೈಮ್: 23 - 25 ನಿಮಿಷಗಳು 
ಸರ್ವಿಂಗ್ಸ್: 6
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
 • ಮೈದಾಹಿಟ್ಟು - 2 1/2 ಕಪ್ (1 ಕಪ್ = 70 ಗ್ರಾಂ)
 • ಸಕ್ಕರೆ - 1 ಕಪ್ 
 • ಮೊಸರು - 1 ಕಪ್ 
 • ಬೇಕಿಂಗ್ ಪೌಡರ್ - 1 1/4 ಟೀ ಸ್ಪೂನ್ 
 • ಬೇಕಿಂಗ್ ಸೋಡಾ - 3/4 ಟೀ ಸ್ಪೂನ್ 
 • ಎಣ್ಣೆ - 1/2 ಕಪ್ 
 • ವೆನಿಲ್ಲಾ ಎಸೆನ್ಸ್ - 3/4 ಟೀ ಸ್ಪೂನ್ 
 • ಉಪ್ಪು - ಚಿಟಿಕೆ 
 • ಬ್ಲೂಬೆರ್ರಿ ಹಣ್ಣು - 1/2 ಕಪ್ 

ತಯಾರಿಸುವ ವಿಧಾನ:
 • ಓವನ್ ನ್ನು 200°C ಗೆ ಪ್ರಿ ಹೀಟ್ ಮಾಡಿಕೊಳ್ಳಿ. 
 • ಮೈದಾಹಿಟ್ಟನ್ನು 2 - 3 ಬಾರಿ ಜರಡಿಯಾಡಿಕೊಳ್ಳಿ. 
 • ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಮೊಸರು ಮತ್ತು ಸಕ್ಕರೆಯನ್ನು ಹಾಕಿ ಕದಡಿ.  
 • ಸಕ್ಕರೆ ಕರಗಿದ ನಂತರ ಇದಕ್ಕೆ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಇದನ್ನು 2 - 3 ನಿಮಿಷ ಹಾಗೆಯೇ ಇಡಿ, ಅಷ್ಟರಲ್ಲಿ ಮಿಶ್ರಣ ನೊರೆಯಂತಾಗಿ ಉಬ್ಬಿ ಬರುತ್ತದೆ. 
 • ಮೊಸರಿನ ಮಿಶ್ರಣಕ್ಕೆ ಎಣ್ಣೆ, ಚಿಟಿಕೆ ಉಪ್ಪು, ವೆನಿಲ್ಲಾ ಎಸೆನ್ಸ್ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. 
 • ಇದಕ್ಕೆ ಜರಡಿ ಹಿಡಿದ ಮೈದಾಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತ ಗಂಟಿಲ್ಲದಂತೆ ಮಿಕ್ಸ್ ಮಾಡಿ. ಮಿಶ್ರಣ ತುಂಬಾ ಗಟ್ಟಿ ಎನಿಸಿದರೆ 1 - 2 ಸ್ಪೂನ್ ಹಾಲು ಸೇರಿಸಬಹುದು. ನಾನು ಇಲ್ಲಿ ಹಾಲು ಸೇರಿಸಿಲ್ಲ. 
 • ತಯಾರಾದ ಹಿಟ್ಟಿಗೆ ಕೊನೆಯಲ್ಲಿ ಬ್ಲೂಬೆರ್ರಿ ಹಣ್ಣುಗಳನ್ನು ಸೇರಿಸಿ ಮಿಕ್ಸ್ ಮಾಡಿ. 
 • ಮಫಿನ್ ಮಿಶ್ರಣವನ್ನು ಲೈನ್ ಮಾಡಿದ ಮಫಿನ್ ಕಪ್ ಗಳಲ್ಲಿ ಮುಕ್ಕಾಲು ಭಾಗದವರೆಗೆ ಹಾಕಿ. ಮೀಡಿಯಮ್ ಸೈಜ್ ನ ಕಪ್ ಗಳಾದರೆ ಇಲ್ಲಿ ಹೇಳಿದ ಅಳತೆಯಿಂದ 6 ಮಫಿನ್ ಗಳನ್ನು ತಯಾರಿಸಬಹುದು. 
 • ಮಫಿನ್ ಟ್ರೇಯನ್ನು ಪ್ರಿ ಹೀಟ್ ಮಾಡಿದ ಓವನ್ ನಲ್ಲಿಟ್ಟು 23 - 25 ನಿಮಿಷ ಅಥವಾ ಪೂರ್ತಿ ಬೇಯುವವರೆಗೆ ಬೇಯಿಸಿ. 20 ನಿಮಿಷ ಬೇಯಿಸಿದ ನಂತರ ಮಫಿನ್ ಗೆ ಒಂದು ಚಾಕು ಅಥವಾ ಟೂತ್ ಪಿಕ್ ನಿಂದ ಚುಚ್ಚಿನೋಡಿ; ಹಿಟ್ಟು ಅಂಟಿಲ್ಲವಾದರೆ ಮಫಿನ್ ಬೆಂದಿದೆ ಎಂದರ್ಥ. 
 • ಬೆಂದ ಮಫಿನ್ ಗಳನ್ನು ಹೊರತೆಗೆದು ತಣ್ಣಗಾಗಲು ಬಿಡಿ. ನಂತರ ಸರ್ವ್ ಮಾಡಿ. ಸ್ನ್ಯಾಕ್ಸ್ ಟೈಮ್ ಗೆ ತಿನ್ನಲು ಈ ಮಫಿನ್ ಗಳು ಚೆನ್ನಾಗಿರುತ್ತವೆ. 


ಟಿಪ್ಸ್:
 • ಈ ಮಫಿನ್ ತಯಾರಿಸಲು ನಾನು ಫ್ರೋಜನ್ ಬ್ಲೂಬೆರ್ರಿ ಹಣ್ಣುಗಳನ್ನು ಬಳಸಿದ್ದೇನೆ. ಇದರ ಬದಲು ಫ್ರೆಶ್ ಬ್ಲೂಬೆರ್ರಿಯನ್ನೂ ಬಳಸಬಹುದು. 
 • ಈ ರೆಸಿಪಿಗೆ ಇಲ್ಲಿ ಹೇಳಿದಷ್ಟೇ, ಅಂದರೆ ಅರ್ಧ ಕಪ್ ನಷ್ಟು ಬ್ಲೂಬೆರ್ರಿ ಹಣ್ಣುಗಳನ್ನು ಸೇರಿಸಿದರೆ ಚೆನ್ನಾಗಿರುತ್ತದೆ. ನಾನು ಅರ್ಧ ಕಪ್ ನ ಬದಲು ಮುಕ್ಕಾಲು ಕಪ್ ನಷ್ಟು ಹಣ್ಣುಗಳನ್ನು ಸೇರಿಸಿದಾಗ ಮಫಿನ್ ಗಳು ಹೆಚ್ಚು ಮೆತ್ತಗಾಗಿಬಿಟ್ಟಿದ್ದವು. 

Sunday, 16 August 2015

ಕಾಶಿ ಹಲ್ವಾ। ದಮ್ ರೋಟ್। ಬೂದುಗುಂಬಳಕಾಯಿ ಹಲ್ವಾ


ವಿವಿಧ ಪೋಷಕಾಂಶಗಳ ಆಗರವಾಗಿರುವ ಬೂದುಗುಂಬಳಕಾಯಿ ವಿವಿಧ ಅಡುಗೆಗಳಲ್ಲಿ ಬಳಕೆಯಾಗುತ್ತದೆ. ಸಾಂಬಾರ್, ಮಜ್ಜಿಗೆಹುಳಿ, ಪಲ್ಯ ಇತ್ಯಾದಿ ನಿತ್ಯದ ಅಡುಗೆಗಳಲ್ಲದೆ ಪೇಠ, ಹಲ್ವಾ ಮುಂತಾದ ರುಚಿಕರ ಸಿಹಿತಿಂಡಿಗಳನ್ನು ತಯಾರಿಸುವುದಕ್ಕೂ ಬೂದುಗುಂಬಳಕಾಯಿ ಬೇಕು. ಬೂದುಗುಂಬಳದ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾನು ಆಗಾಗ್ಗೆ ಇಂಡಿಯನ್ ಸ್ಟೋರ್ ನಿಂದ ಈ ತರಕಾರಿಯನ್ನು ತಂದು ವಿವಿಧ ಅಡುಗೆಗಳನ್ನು ತಯಾರಿಸುತ್ತಿರುತ್ತೇನೆ. 
ಇತ್ತೀಚೆಗೆ ಬೂದುಗುಂಬಳಕಾಯಿ ತಂದಾಗ ಅದರ ಹಲ್ವಾ ತಯಾರಿಸಿದ್ದೆ. ಈ ಹಲ್ವಕ್ಕೆ ದಮ್ ರೋಟ್ ಅಥವಾ ಕಾಶಿ ಹಲ್ವಾ ಎಂತಲೂ ಹೇಳುತ್ತಾರೆ. ಸಾಂಪ್ರದಾಯಿಕವಾಗಿ ತಯಾರಿಸುವ ಹಲ್ವಕ್ಕೆ ನಾನು ರವಾ ಮತ್ತು ಖೋವ ಹಾಕಿ ತಯಾರಿಸಿದ್ದೆ. ಮನೆಯಲ್ಲಿ ಎಲ್ಲರಿಗೂ ಈ ಹಲ್ವಾ ತುಂಬಾ ಇಷ್ಟವಾಯಿತು. 
ರುಚಿಕರವಾದ ಕಾಶಿ ಹಲ್ವಾವನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು 
ಸರ್ವಿಂಗ್ಸ್: 6 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
 • ಬೂದುಗುಂಬಳದ ತುರಿ (ನೀರಿನಂಶವನ್ನು ಹಿಂಡಿ ತೆಗೆದದ್ದು) - 1 ದೊಡ್ಡ ಕಪ್ (1 ಕಪ್ = 300 ಗ್ರಾಂ ಅಂದಾಜು)
 • ಖೋವ - 1/2 ಲೀಟರ್ ಹಾಲಿನಿಂದ ತಯಾರಿಸಿದ್ದು (ಅಂದಾಜು 100 ಗ್ರಾಂ)
 • ಸಕ್ಕರೆ - 1 1/2 ಕಪ್ (ರುಚಿಗೆ ತಕ್ಕಷ್ಟು)
 • ತುಪ್ಪ - 1/4 ಕಪ್ 
 • ಚಿರೋಟಿ ರವೆ - 1/4 ಕಪ್ 
 • ಉಪ್ಪು - ಚಿಟಿಕೆ 
 • ಏಲಕ್ಕಿಪುಡಿ - 1 ಟೀ ಸ್ಪೂನ್ 
 • ಕೇಸರಿ ದಳಗಳು (ಬೇಕಿದ್ದರೆ) - 10 ರಿಂದ 12
 • ಗೋಡಂಬಿ ಚೂರುಗಳು - 3 ಟೇಬಲ್ ಸ್ಪೂನ್


ತಯಾರಿಸುವ ವಿಧಾನ:
 • ನೀರನ್ನು ಹಿಂಡಿ ತೆಗೆದ ಬೂದುಗುಂಬಳದ ತುರಿಯನ್ನು ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿಕೊಳ್ಳಿ.
 • ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಗಿಡಿ. ಇದಕ್ಕೆ ಚಿರೋಟಿ ರವೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
 • ಇದಕ್ಕೆ ಬೇಯಿಸಿದ ಬೂದುಗುಂಬಳದ ತುರಿ ಸೇರಿಸಿ ಎರಡು ನಿಮಿಷ ಕೈಯಾಡಿಸಿ.
 • ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ಚಿಟಿಕೆ ಉಪ್ಪು, ಕೇಸರಿ ದಳಗಳನ್ನು ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಆಗಾಗ್ಗೆ ಕೈಯಾಡಿಸುತ್ತ ಬೇಯಿಸಿ.
 • ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಹಲ್ವಾದ ಹದಕ್ಕೆ ಬಂದಾಗ ಇದಕ್ಕೆ ಖೋವ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ. ನಂತರ ಇದಕ್ಕೆ ಏಲಕ್ಕಿಪುಡಿ ಸೇರಿಸಿ.
 • ಒಂದು ಟೀ ಸ್ಪೂನ್ ನಷ್ಟು ತುಪ್ಪದಲ್ಲಿ ಗೋಡಂಬಿ ಚೂರುಗಳನ್ನು ಹೊಂಬಣ್ಣಕ್ಕೆ ಹುರಿದು ಇದನ್ನು ಹಲ್ವಾ ಮಿಶ್ರಣಕ್ಕೆ ಸೇರಿಸಿ.
 • ರುಚಿ ರುಚಿ ಹಲ್ವಾ ಈಗ ಸವಿಯಲು ಸಿದ್ಧ! 

Wednesday, 5 August 2015

ನುಗ್ಗೆಸೊಪ್ಪಿನ ಪಲ್ಯ । ನುಗ್ಗೆಸೊಪ್ಪಿನ ಹುಡಿ ಪಲ್ಯ । ನುಗ್ಗೆಸೊಪ್ಪಿನ ಪೊರಿಯಲ್


ಹಳ್ಳಿಗಳ ಕಡೆ ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಿಲಲ್ಲೂ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ನಮ್ಮೂರಲ್ಲೂ ಅಷ್ಟೆ, ಅಡುಗೆಗೆ ಬೇಕಾಗುವ ಹೆಚ್ಚಿನ ಸೊಪ್ಪು - ತರಕಾರಿಗಳನ್ನು ಅವರೇ ಬೆಳೆಯುತ್ತಾರೆ. ನಾವೇ ಬೆಳೆದ ಸೊಪ್ಪು, ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಅವನ್ನು ತಿನ್ನುವುದರಲ್ಲಿ ಇರುವ ಖುಷಿಯೇ ಬೇರೆ! ಅಲ್ಲವೆ?
ನಾವು ಇಲ್ಲಿ ಮೆಂತ್ಯಸೊಪ್ಪು, ಟೊಮೆಟೋ ಇತ್ಯಾದಿ ತರಕಾರಿಗಳನ್ನು ನಮ್ಮ ಬಾಲ್ಕನಿ ಗಾರ್ಡನ್ ನಲ್ಲಿ ಬೆಳೆದುಕೊಳ್ಳುತ್ತೇವೆ. ಅಂಗಡಿಯಲ್ಲಿ ಸಿಗುವ ಥರಾವರಿ ಸೊಪ್ಪುಗಳನ್ನೂ ಧಾರಾಳವಾಗಿ ತರುತ್ತೇವೆ. ಕೆಲ ದಿನಗಳ ಹಿಂದೆ ಗ್ರಾಸರಿ ಸ್ಟೋರ್ ನಿಂದ ನುಗ್ಗೆಸೊಪ್ಪಿನ ದೊಡ್ಡ ಕಟ್ಟುಗಳನ್ನು ತಂದಿದ್ದೆವು. ತುಂಬಾ ನುಗ್ಗೆಸೊಪ್ಪು ಇದ್ದರಿಂದ ಅಮ್ಮ ತಯಾರಿಸುವ ನುಗ್ಗೆಸೊಪ್ಪಿನ ಪಲ್ಯ ತಯಾರಿಸೋಣವೆನಿಸಿತು. ಅಮ್ಮ ಹೇಳಿದಂತೆ ತಯಾರಿಸಿದ ಪಲ್ಯ ನಮಗೆ ತುಂಬಾ ಇಷ್ಟವಾಯಿತು. ಇನ್ನೊಮ್ಮೆ ನುಗ್ಗೆಸೊಪ್ಪು ತಂದು ಪಲ್ಯ ತಯಾರಿಸಿದ್ದೂ ಆಯಿತು! ನುಗ್ಗೆಸೊಪ್ಪಿನ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
 

ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
ಸರ್ವಿಂಗ್ಸ್: 6 - 7 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
 • ನುಗ್ಗೆಸೊಪ್ಪು - 1 ದೊಡ್ಡ ಕಟ್ಟು
 • ಆಮ್ ಚೂರ್ ಪೌಡರ್ - 3/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
 • ಸಕ್ಕರೆ - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
 • ಉಪ್ಪು - ರುಚಿಗೆ ತಕ್ಕಷ್ಟು

- ಮಸಾಲಾ ಪುಡಿಗೆ:
 • ಚಕ್ಕೆ - 1 ಇಂಚು
 • ಲವಂಗ - 3 ಅಥವಾ 4
 • ಒಣಮೆಣಸು - 7 (ಖಾರಕ್ಕೆ ತಕ್ಕಂತೆ)
 • ಕೊಬ್ಬರಿತುರಿ (ಅಥವಾ ತೆಂಗಿನತುರಿ) - 3/4 ಕಪ್
 • ಕಡಲೆಬೇಳೆ - 4 ಟೇಬಲ್ ಸ್ಪೂನ್
 • ಉದ್ದಿನಬೇಳೆ - 2 ಟೀ ಸ್ಪೂನ್
 • ಮೆಂತ್ಯ - 3/4 ಟೀ ಸ್ಪೂನ್
 • ಕೊತ್ತಂಬರಿ - 1 1/2 ಟೀ ಸ್ಪೂನ್
 • ಜೀರಿಗೆ - 3/4 ಟೀ ಸ್ಪೂನ್
 • ಸಾಸಿವೆ - 1/2 ಟೀ ಸ್ಪೂನ್
 • ಇಂಗು - ಚಿಟಿಕೆ
 • ಅರಿಶಿನ - 1/4 ಟೀ ಸ್ಪೂನ್
 • ಎಣ್ಣೆ - 1 1/2 ಟೀ ಸ್ಪೂನ್

- ಒಗ್ಗರಣೆಗೆ:
 • ಎಣ್ಣೆ - 3 ಟೇಬಲ್ ಸ್ಪೂನ್
 • ಉದ್ದಿನಬೇಳೆ - 1 ಟೀ ಸ್ಪೂನ್
 • ಸಾಸಿವೆ - 1 ಟೀ ಸ್ಪೂನ್
 • ಅರಿಶಿನ - ದೊಡ್ಡ ಚಿಟಿಕೆಯಷ್ಟು


ತಯಾರಿಸುವ ವಿಧಾನ:
 • ನುಗ್ಗೆಸೊಪ್ಪನ್ನು ದಂಟಿನಿಂದ ಬೇರ್ಪಡಿಸಿಕೊಂಡು ನೀರಿನಲ್ಲಿ ಸ್ವಚ್ಚವಾಗಿ ತೊಳೆದುಕೊಳ್ಳಿ.
 • ಕೊಬ್ಬರಿತುರಿ ಹೊರತಾಗಿ ಮಸಾಲಾ ಪುಡಿಗೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಎಣ್ಣೆಯಲ್ಲಿ ಹದವಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ಕೊನೆಯಲ್ಲಿ ಕೊಬ್ಬರಿತುರಿ ಸೇರಿಸಿ ಒಂದು ಸುತ್ತು ತಿರುವಿ ತೆಗೆಯಿರಿ. ಈ ಪಲ್ಯಕ್ಕೆ ಮಸಾಲಾ ಪುಡಿ ಸ್ವಲ್ಪ ತರಿಯಾಗಿದ್ದರೆ ಚೆನ್ನಾಗಿರುತ್ತದೆ. 
 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
 • ಇದಕ್ಕೆ ನುಗ್ಗೆಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ 8 - 10 ನಿಮಿಷ ಹುರಿಯಿರಿ. ಅಷ್ಟರಲ್ಲಿ ಸೊಪ್ಪು ಬೆಂದು ಮೆತ್ತಗಾಗಿರುತ್ತದೆ ಹಾಗೂ ಸೊಪ್ಪಿನ ಬಣ್ಣವೂ ಬದಲಾಗುತ್ತದೆ.
 • ಕೊನೆಯಲ್ಲಿ ಇದಕ್ಕೆ ಮಸಾಲಾ ಪುಡಿ, ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 • ಪಲ್ಯದ ಮಿಶ್ರಣವನ್ನು ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ.
 • ಅನ್ನ ಹಾಗೂ ಚಪಾತಿಯೊಡನೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಈ ಪಲ್ಯ ಚೆನ್ನಾಗಿರುತ್ತದೆ.ಟಿಪ್ಸ್:
 • ಈ ಪಲ್ಯಕ್ಕೆ ಈರುಳ್ಳಿ ಹಾಕಿದರೂ ಚೆನ್ನಾಗಿರುತ್ತದೆ. ಈರುಳ್ಳಿ ಸೇರಿಸುವುದಾದರೆ ಸಣ್ಣಗೆ ಹೆಚ್ಚಿಕೊಂಡು ಮಸಾಲಾ ಪುಡಿ ಸೇರಿಸುವ ಸಮಯದಲ್ಲಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಪಲ್ಯವನ್ನು ಬಿಸಿಮಾಡಿ ನಂತರ ಸರ್ವ್ ಮಾಡಿ. 
 • ಇದೇ ವಿಧಾನದಲ್ಲಿ ನುಗ್ಗೆಸೊಪ್ಪಿನ ಬದಲು ಕ್ಯಾಪ್ಸಿಕಂ / ಡೊಳ್ಳು ಮೆಣಸಿನಕಾಯಿ ಬಳಸಿಯೂ ಪಲ್ಯ ತಯಾರಿಸಬಹುದು.
 • ನಾನು ಈ ಪಲ್ಯಕ್ಕೆ ಕೊಬ್ಬರಿತುರಿ ಬಳಸಿದ್ದೇನೆ. ಇದರ ಬದಲು ತೆಂಗಿನತುರಿಯನ್ನು ಬೇಕಿದ್ದರೂ ಬಳಸಬಹುದು. 

Wednesday, 15 July 2015

ಪೈನಾಪಲ್ ಕೇಸರಿ । ಪೈನಾಪಲ್ ಶಿರಾ । ಅನಾನಸ್ ಶೀರ


ಕೇಸರಿ, ಶಿರಾ ಅಥವಾ ಶೀರ ಎಂತಲೂ ಕರೆಯಲ್ಪಡುವ ಈ ಸಿಹಿತಿಂಡಿ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ. ಮನೆಗೆ ದಿಢೀರ್ ಎಂದು ಯಾರಾದರೂ ಅತಿಥಿಗಳು ಬಂದರೆ ಏನು ತಯಾರಿಸಬೇಕೆಂದು ಯೋಚಿಸಿದಾಗ ಮೊದಲು ನೆನಪಾಗುವುದು ಕೇಸರಿ. ಮದುವೆ - ಮುಂಜಿ ಇತ್ಯಾದಿ ಸಮಾರಂಭಗಳಲ್ಲಿ ಕೇಸರಿಯನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ರವಾ ಕೇಸರಿ / ಶಿರಾ ರೆಸಿಪಿಯನ್ನು ಈ ಮೊದಲೇ ಬರೆದಿದ್ದೆ. ರವೆ ಬಳಸಿ ತಯಾರಿಸುವ ಈ ಸಿಹಿತಿಂಡಿಗೆ ಬೇರೆಬೇರೆ ಹಣ್ಣುಗಳನ್ನು ಸೇರಿಸಿ ತಯಾರಿಸಿದರೆ ಇನ್ನೂ ರುಚಿ!
ಕೆಲದಿನಗಳ ಹಿಂದೆ ಪೈನಾಪಲ್ ಜ್ಯಾಮ್ ತಯಾರಿಸಲೆಂದು ಪೈನಾಪಲ್ ಹಣ್ಣುಗಳನ್ನು ತಂದಿದ್ದೆವು. ಹಣ್ಣುಗಳು ತುಂಬ ದೊಡ್ಡದಾಗಿದ್ದರಿಂದ ಜ್ಯಾಮ್ ಮಾಡಲು ಕತ್ತರಿಸಿದ ನಂತರವೂ ಸ್ವಲ್ಪ ಉಳಿಯಿತು. ಅದನ್ನು ಬಳಸಿ ಪೈನಾಪಲ್ ಕೇಸರಿ / ಶಿರಾ ತಯಾರಿಸಿ ಅತಿಥಿಗಳೊಡನೆ ಸವಿದೆವು.
ಪೈನಾಪಲ್ ಕೇಸರಿ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಸರ್ವಿಂಗ್ಸ್: 8 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
ಸೂಜಿ ರವಾ - 1 ಕಪ್
ಸಕ್ಕರೆ - 2 ಕಪ್
ಉಪ್ಪು - ದೊಡ್ಡ ಚಿಟಿಕೆ
ತುಪ್ಪ - 2/3 ಕಪ್
ಬಿಸಿ ನೀರು - 2 1/2 ಕಪ್
ಪೈನಾಪಲ್ (ತುರಿದದ್ದು, ರಸವನ್ನೂ ಸೇರಿಸಿ) - 1/2 ಕಪ್
ಗೋಡಂಬಿ ಚೂರುಗಳು - 3 ರಿಂದ 4 ಟೇಬಲ್ ಸ್ಪೂನ್
ಒಣದ್ರಾಕ್ಷಿ - ಸ್ವಲ್ಪ
ಏಲಕ್ಕಿಪುಡಿ - 1 ಟೀ ಸ್ಪೂನ್


ತಯಾರಿಸುವ ವಿಧಾನ:
 ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪವನ್ನು ಬಿಸಿಗಿಡಿ. ಇದಕ್ಕೆ ಸೂಜಿ ರವೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ 8 - 10 ನಿಮಿಷ ಅಥವಾ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ.
ರವೆ ಹುರಿಯುವಷ್ಟರಲ್ಲಿ ನೀರು ಕುದಿಯುವಷ್ಟು ಬಿಸಿಯಾಗಿರಲಿ. 
ಹುರಿದ ರವೆಗೆ ದೊಡ್ಡ ಚಿಟಿಕೆಯಷ್ಟು ಉಪ್ಪು ಹಾಗೂ ಎರಡೂವರೆ ಕಪ್ ನಷ್ಟು ಬಿಸಿನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ಪ್ಲೇಟ್ ಮುಚ್ಚಿ 7 - 8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ.
ನೀರಿನಂಶ ಆರಿ ರವಾ ಮಿಶ್ರಣ ಬೆಂದ ನಂತರ ಇದಕ್ಕೆ ಎರಡು ಕಪ್ ನಷ್ಟು ಸಕ್ಕರೆ ಸೇರಿಸಿ ಕೈಯಾಡಿಸಿ. ಸಕ್ಕರೆ ಸೇರಿಸಿದಾಗ ಮಿಶ್ರಣ ನೀರೊಡೆದು ಪುನಃ ತೆಳ್ಳಗಾಗುತ್ತದೆ.
ಮುಚ್ಚಳವನ್ನು ಅರೆಬರೆ ಮುಚ್ಚಿ ಮಿಶ್ರಣವನ್ನು 8 - 10 ನಿಮಿಷ ಬೇಯಿಸಿ. ಆಗಾಗ್ಗೆ ಕೈಯಾಡಿಸಲು ಮರೆಯಬೇಡಿ.
ಗೋಡಂಬಿ ಚೂರುಗಳು ಹಾಗೂ ದ್ರಾಕ್ಷಿಯನ್ನು ಒಂದು ಚಮಚದಷ್ಟು ತುಪ್ಪದಲ್ಲಿ ಹುರಿದು ಕೇಸರಿಗೆ ಸೇರಿಸಿ.
ಕೊನೆಯಲ್ಲಿ ಇದಕ್ಕೆ ತುರಿದ ಪೈನಾಪಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಲೇಟ್ ನ್ನು ಅರ್ಧ ಮುಚ್ಚಿ ಇನ್ನೂ ಐದು ನಿಮಿಷ ಬೇಯಿಸಿ ಉರಿ ಆಫ್ ಮಾಡಿ.
ಬಿಸಿಬಿಸಿ ಪೈನಾಪಲ್ ಕೇಸರಿಯನ್ನು ಉಪ್ಪಿಟ್ಟು ಅಥವಾ ಏನಾದರೂ ಕುರುಕಲು ತಿಂಡಿಯೊಡನೆ ಸವಿಯಿರಿ!


ಟಿಪ್ಸ್:
ಪೈನಾಪಲ್ ನ್ನು ತುರಿಯುವಾಗ ಸಿಗುವ ಜ್ಯೂಸ್ ನ್ನೂ ಅಳತೆ ಮಾಡುವಾಗ ಸೇರಿಸಿ. ಕೆಲವರು ಪೈನಾಪಲ್ ನ್ನು ತುರಿಯುವ ಬದಲು ಹೆಚ್ಚಿಕೊಂಡು ಮಿಕ್ಸಿಯಲ್ಲಿ ತಿರುವಿಕೊಂಡು ಬಳಸುತ್ತಾರೆ. 

Friday, 3 July 2015

ನುಗ್ಗೆಸೊಪ್ಪು - ಟೊಮೆಟೋ ಸಾರು । ನುಗ್ಗೆಸೊಪ್ಪಿನ ಸಾಂಬಾರ್


ಕಳೆದ ವಾರ ತರಕಾರಿ ಕೊಳ್ಳಲು ಹೋದಾಗ ಅಪರೂಪಕ್ಕೆ ನುಗ್ಗೆಸೊಪ್ಪು ಸಿಕ್ಕಿತು. ನುಗ್ಗೆಸೊಪ್ಪಿನ ಅಡುಗೆ ಮಾಡದೆ ತುಂಬಾ ದಿನವಾಗಿಬಿಟ್ಟಿತ್ತು. ನುಗ್ಗೆಸೊಪ್ಪು ಊಟಕ್ಕೆ ರುಚಿಕರ, ಜೊತೆಗೇ ವಿವಿಧ ಪೋಷಕಾಂಶಗಳ ಆಗರವೂ ಹೌದು. ವಿಟಾಮಿನ್ ಎ, ವಿಟಾಮಿನ್ ಸಿ, ಕ್ಯಾಲ್ಸಿಯಂ ಇತ್ಯಾದಿ ಅಂಶಗಳನ್ನು ಹೇರಳವಾಗಿ ಹೊಂದಿರುವ ನುಗ್ಗೆಸೊಪ್ಪು ಕಣ್ಣು, ಹೃದಯ, ನರಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಸಹಾಯಕಾರಿ. 
ನಮ್ಮ ಮನೆಯಲ್ಲಿ ನುಗ್ಗೆಸೊಪ್ಪನ್ನು ಬಳಸಿ ರುಚಿಕರವಾದ ಸಾಂಬಾರ್, ಪಲ್ಯ, ತೊವ್ವೆ, ತಂಬ್ಳಿ ಇತ್ಯಾದಿ ಅಡುಗೆಗಳನ್ನು ತಯಾರಿಸುತ್ತೇವೆ. ನುಗ್ಗೆಸೊಪ್ಪು ಹಾಗೂ ಟೊಮೆಟೋ ಬಳಸಿ ತಯಾರಿಸುವ ಸಾರು ಅಥವಾ ಸಾಂಬಾರ್ ರೆಸಿಪಿ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
 • ತೊಗರಿಬೇಳೆ - 1/2 ಕಪ್ (1 ಕಪ್ = 50 ಗ್ರಾಂ)
 • ಹೆಸರುಬೇಳೆ - 2 ಟೇಬಲ್ ಸ್ಪೂನ್
 • ನುಗ್ಗೆಸೊಪ್ಪು - 1 ಕಪ್ 
 • ಟೊಮೆಟೋ - 1
 • ಉಪ್ಪು - ರುಚಿಗೆ ತಕ್ಕಷ್ಟು 
 • ಸಕ್ಕರೆ / ಬೆಲ್ಲ (ಬೇಕಿದ್ದರೆ) - 1/4 ಟೀ ಸ್ಪೂನ್ 
 • ಹುಣಸೆಹಣ್ಣು - 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
 • ಈರುಳ್ಳಿ (ಬೇಕಿದ್ದರೆ) - 1 ಚಿಕ್ಕದು 
 • ನೀರು - 5 ಕಪ್ (ಅಂದಾಜು)
ಮಸಾಲೆಗೆ: 
 • ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
 • ಮೆಂತ್ಯ - 3/4 ಟೀ ಸ್ಪೂನ್ 
 • ಕೊತ್ತಂಬರಿ - 2 ಟೀ ಸ್ಪೂನ್ 
 • ಜೀರಿಗೆ - 3/4 ಟೀ ಸ್ಪೂನ್ 
 • ಸಾಸಿವೆ - 3/4 ಟೀ ಸ್ಪೂನ್ 
 • ಇಂಗು - ದೊಡ್ಡ ಚಿಟಿಕೆ 
 • ಅರಿಶಿನ - 1/4 ಟೀ ಸ್ಪೂನ್
 • ಎಣ್ಣೆ - 1 1/2 ಟೀ ಸ್ಪೂನ್
 • ತೆಂಗಿನತುರಿ ಅಥವಾ ಕೊಬ್ಬರಿತುರಿ - 3 ಟೇಬಲ್ ಸ್ಪೂನ್
 
ತಯಾರಿಸುವ ವಿಧಾನ:
 • ಟೊಮೇಟೊ ಹಣ್ಣನ್ನು ತೊಳೆದು ಮೀಡಿಯಂ ಸೈಜಿನ ಹೋಳುಗಳಾಗಿ ಹೆಚ್ಚಿಕೊಳ್ಳಿ. 
 • ತೊಗರಿಬೇಳೆ ಮತ್ತು ಹೆಸರುಬೇಳೆಯನ್ನು ತೊಳೆದು 4 ಕಪ್ ನಷ್ಟು ನೀರು, ಚಿಟಿಕೆ ಅರಿಶಿನ, ಎರಡು ಹನಿ ಎಣ್ಣೆ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸುವುದಾದರೆ 3 ವಿಸಿಲ್ ಆಗುವವರೆಗೆ ಬೇಯಿಸಿದರೆ ಸಾಕು. 
 • ತೆಂಗಿನತುರಿ ಹೊರತಾಗಿ ಮಸಾಲೆಗೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನತುರಿ ಹಾಗೂ ಹುಣಸೆಹಣ್ಣು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಅಗತ್ಯವಿರುವಷ್ಟು ನೀರು ಸೇರಿಸಿ. 
 • ಬೇಯಿಸಿದ ಬೇಳೆಗೆ ನುಗ್ಗೆಸೊಪ್ಪು ಹಾಗೂ ಹೆಚ್ಚಿದ ಟೊಮೆಟೋ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ 5 ನಿಮಿಷ ಕುದಿಸಿ. 
 • ನಂತರ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ಅಗತ್ಯವಿರುವಷ್ಟು ನೀರು ಸೇರಿಸಿ 8 - 10 ನಿಮಿಷ ಕುದಿಸಿ. ಉರಿ ಆಫ್ ಮಾಡಲು 2 - 3 ನಿಮಿಷ ಮೊದಲು ಹೆಚ್ಚಿದ ಈರುಳ್ಳಿ ಸೇರಿಸಿ. 
 • ರುಚಿಕಟ್ಟಾದ ಸಾಂಬಾರ್ ನ್ನು ಬಿಸಿಬಿಸಿ ಅನ್ನದೊಡನೆ ಹಾಕಿಕೊಂಡು ಊಟ ಮಾಡಿ. 

Wednesday, 17 June 2015

ಓಟ್ಸ್ - ಕೊಬ್ಬರಿತುರಿ ಬಿಸ್ಕಿಟ್ । ಅನ್ಜಾಕ್ ಬಿಸ್ಕಿಟ್


ಸಾಮಾನ್ಯವಾಗಿ ಮಕ್ಕಳಿರುವ ಮನೆಗಳಲ್ಲಿ ಸ್ನ್ಯಾಕ್ಸ್ ಗೆ ಎಷ್ಟು ಬಗೆಯ ತಿಂಡಿಗಳನ್ನು ಮಾಡಿಟ್ಟರೂ ಬೇಗ ಖಾಲಿಯಾಗಿಬಿಡುತ್ತದೆ. ನಮ್ಮ ಮನೆಯಲ್ಲಂತೂ ಎಲ್ಲರೂ ಸ್ನ್ಯಾಕ್ಸ್ ಪ್ರಿಯರು! ಅದರಲ್ಲೂ ಕರಿದ ತಿಂಡಿಗಳಿಗಿಂತ ಓವನ್ ನಲ್ಲಿ ಬೇಕ್ ಮಾಡಿದ ತಿಂಡಿಗಳು ನಮಗೆಲ್ಲ ಇಷ್ಟ. 
ಕೆಲ ದಿನಗಳ ಹಿಂದೆ ಇಲ್ಲಿನ ಸೂಪರ್ ಮಾರ್ಕೆಟ್ ಒಂದರ ಮ್ಯಾಗಜಿನ್ ನೋಡುತ್ತಿದ್ದಾಗ ಓಟ್ಸ್ ಮತ್ತು ಕೊಬ್ಬರಿತುರಿ ಬಳಸಿ ತಯಾರಿಸುವ ಬಿಸ್ಕಿಟ್ ರೆಸಿಪಿ ಕಂಡಿತು. ಸುಲಭದಲ್ಲಿ ತಯಾರಿಸಬಹುದಾದ ಈ ಗರಿಮುರಿ ಬಿಸ್ಕಿಟ್ ಗಳು ನಮಗೆ ಬಹಳ ಇಷ್ಟವಾದವು. ಈ ಬಿಸ್ಕಿಟ್ ನ ಒರಿಜಿನಲ್ ಹೆಸರು 'ಅನ್ಜಾಕ್ ಬಿಸ್ಕಿಟ್'. ನಾನು ವಿಕಿಪೀಡಿಯದಲ್ಲಿ ಓದಿದಂತೆ, ಈ ಬಿಸ್ಕಿಟ್ ನ ಹೆಸರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ ಸೈನ್ಯದ ಹೆಸರಿನಿಂದ ಬಂದಿರುವುದಂತೆ. ಮೊದಲನೇ ವರ್ಲ್ಡ್ ವಾರ್ ನಡೆಯುತ್ತಿದ್ದಾಗ ಸೈನಿಕರ ಮಡದಿಯರು ಇಲ್ಲಿಂದ ಅವರ ಗಂಡಂದಿರಿಗೆಂದು ಪುಡಿಮಾಡಿದ ಓಟ್ಸ್, ಮೈದಾಹಿಟ್ಟು, ಸಕ್ಕರೆ, ಕೊಬ್ಬರಿತುರಿ ಇವನ್ನೆಲ್ಲ ಬಳಸಿ ಹೆಚ್ಚು ದಿನ ಇಡಬಹುದಾದ ಬಿಸ್ಕಿಟ್ ಗಳನ್ನು ತಯಾರಿಸಿ ಕಳಿಸುತ್ತಿದ್ದರಂತೆ. ಅನ್ಜಾಕ್ ಬಿಸ್ಕಿಟ್ ನ್ನು ಅನೇಕ ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಆಸ್ಟ್ರೇಲಿಯಾದ 'ಅನ್ಜಾಕ್ ಡೇ' ಯ ಸಮಯದಲ್ಲಿ ಇಲ್ಲಿನ ಮ್ಯಾಗಜಿನ್ ಒಂದರಲ್ಲಿ ಅನ್ಜಾಕ್ ಬಿಸ್ಕಿಟ್ ನ ರೆಸಿಪಿ ಹಾಕಿದ್ದರು. ಅದನ್ನೇ ನಾನು ಟ್ರೈ ಮಾಡಿದ್ದು!
ರೆಸಿಪಿ ಕೃಪೆ: ಕೋಲ್ಸ್ ಮ್ಯಾಗಜಿನ್


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು
ಬೇಕಿಂಗ್ ಟೈಮ್: 15 ನಿಮಿಷಗಳು
ಈ ಅಳತೆಯಿಂದ 25 - 30 ಬಿಸ್ಕಿಟ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಮೀಡಿಯಮ್

ಬೇಕಾಗುವ ಸಾಮಗ್ರಿಗಳು:
 • ಮೈದಾಹಿಟ್ಟು - 1 ಕಪ್ (1 ಕಪ್ = 150 ಗ್ರಾಂ)
 • ತರಿಯಾಗಿ ಪುಡಿಮಾಡಿದ ಒಟ್ಸ್ - 1 ಕಪ್
 • ಡೆಸಿಕೇಟೆಡ್ ಕೊಕೋನಟ್ / ತರಿಯಾಗಿ ಪುಡಿಮಾಡಿದ ಕೊಬ್ಬರಿತುರಿ - 1 ಕಪ್
 • ಬೆಣ್ಣೆ - 125 ಗ್ರಾಂ
 • ಬ್ರೌನ್ ಶುಗರ್ - 55 ಗ್ರಾಂ
 • ಸಕ್ಕರೆಪುಡಿ - 110 ಗ್ರಾಂ
 • ಜೇನುತುಪ್ಪ / ಗೋಲ್ಡನ್ ಸಿರಪ್ - 2 ಟೇಬಲ್ ಸ್ಪೂನ್
 • ಬೈ ಕಾರ್ಬೋನೇಟ್ ಸೋಡಾ / ಬೇಕಿಂಗ್ ಸೋಡಾ - 1/2 ಟೀ ಸ್ಪೂನ್
 • ಬಿಸಿನೀರು - 1 1/2 ಟೇಬಲ್ ಸ್ಪೂನ್


ತಯಾರಿಸುವ ವಿಧಾನ:
 • ಓವನ್ ನ್ನು 180°C ಗೆ ಪ್ರಿಹೀಟ್ ಮಾಡಿಕೊಳ್ಳಿ.
 • ಮೈದಾಹಿಟ್ಟು, ಪುಡಿಮಾಡಿದ ಓಟ್ಸ್ ಮತ್ತು ಕೊಬ್ಬರಿತುರಿ, ಬ್ರೌನ್ ಶುಗರ್ ಮತ್ತು ಸಕ್ಕರೆಪುಡಿ ಇಷ್ಟನ್ನೂ ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
 • ಬೆಣ್ಣೆ ಹಾಗೂ ಜೇನುತುಪ್ಪ (ಅಥವಾ ಗೋಲ್ಡನ್ ಸಿರಪ್)ನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿ. ಆಗಾಗ್ಗೆ ಕೈಯಾಡಿಸುತ್ತಿದ್ದು ಬೆಣ್ಣೆ ಪೂರ್ತಿ ಕರಗಿದ ನಂತರ ಉರಿಯಿಂದ ಇಳಿಸಿ ತಣಿಯಲು ಬಿಡಿ.
 • ಅರ್ಧ ಟೀ ಸ್ಪೂನ್ ನಷ್ಟು ಬೈ ಕಾರ್ಬೋನೇಟ್ ಸೋಡಾ / ಬೇಕಿಂಗ್ ಸೋಡಾವನ್ನು 1 1/2 ಟೇಬಲ್ ಸ್ಪೂನ್ ಬಿಸಿನೀರಿನಲ್ಲಿ ಮಿಕ್ಸ್ ಮಾಡಿ. ಇದನ್ನು ಕರಗಿಸಿದ ಬೆಣ್ಣೆಗೆ ಸೇರಿಸಿ.
 • ನಂತರ ಮೈದಾ - ಓಟ್ಸ್ ಮಿಶ್ರಣವನ್ನು ಕರಗಿಸಿದ ಬೆಣ್ಣೆಗೆ ಸೇರಿಸಿ ಚೆನ್ನಾಗಿ ಕಲಸಿ.
 • ಒಂದೊಂದೇ ಟೇಬಲ್ ಸ್ಪೂನ್ ನಷ್ಟು ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ಉಂಡೆಮಾಡಿ. ಉಂಡೆಯನ್ನು ಅಂಗೈಯಲ್ಲಿಟ್ಟು ಪ್ರೆಸ್ ಮಾಡಿ ಸ್ವಲ್ಪ ಚಪ್ಪಟೆ ಮಾಡಿ.
 • ಬಿಸ್ಕಿಟ್ ಗಳನ್ನು ಬೇಕಿಂಗ್ ಶೀಟ್ ನ ಮೇಲೆ ಹಿಗ್ಗಲು ಸ್ವಲ್ಪ ಅಂತರ ಬಿಟ್ಟು ಜೋಡಿಸಿ.
 • ಪ್ರಿ ಹೀಟ್ ಮಾಡಿದ ಓವನ್ ನಲ್ಲಿ ಬಿಸ್ಕಿಟ್ ಗಳನ್ನು 15 ನಿಮಿಷ ಬೇಯಿಸಿ ಹೊರತೆಗೆದು ತಣ್ಣಗಾಗಲು ಬಿಡಿ.
 • ಓವನ್ ನಿಂದ ಹೊರತೆಗೆಯುವಾಗ ಮೆತ್ತಗಿರುವ ಬಿಸ್ಕಿಟ್ ಗಳು ತಣ್ಣಗಾದ ನಂತರ ಗರಿಯಾಗುತ್ತವೆ.  

Sunday, 7 June 2015

ಬೀಟ್ ರೂಟ್ ಪಲ್ಯ । ಬೀಟ್ರೂಟ್ ಪಲ್ಯ


ಬೀಟ್ ರೂಟ್ - ಇದು ನೈಸರ್ಗಿಕವಾಗಿ ಸಿಹಿ ಅಂಶವನ್ನು ಹೊಂದಿರುವ ತರಕಾರಿ. ವಿವಿಧ ಪೋಷಕಾಂಶಗಳನ್ನು ಹೊಂದಿರುವ ಈ ತರಕಾರಿ ಸಾಂಬಾರ್, ಪಲ್ಯ, ಸಲಾಡ್, ಸ್ವೀಟ್ಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಬೀಟ್ರೂಟ್ ನ ಪಲ್ಯ ಹಾಗೂ ಸಾಂಬಾರ್ ನಮ್ಮ ಫೇವರಿಟ್ ಅಡುಗೆಗಳು. ಅದರಲ್ಲೂ ಬೀಟ್ರೂಟ್ ಪಲ್ಯವಂತೂ ಅನ್ನ, ಚಪಾತಿ, ಪೂರಿ ಎಲ್ಲದರೊಡನೆಯೂ ಚೆನ್ನಾಗಿರುತ್ತದೆ. ಬೀಟ್ ರೂಟ್ ಪಲ್ಯ ತಯಾರಿಸುವ ವಿಧಾನ ಈ ಕೆಳಗಿನಂತಿದೆ:

ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು 
ಸರ್ವಿಂಗ್ಸ್: 5 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
 • ಬೀಟ್ ರೂಟ್ -1 1/2 ಗಡ್ಡೆ
 • ಒಣಮೆಣಸು - 1
 • ಉದ್ದಿನಬೇಳೆ - 1 ಟೀ ಸ್ಪೂನ್
 • ಸಾಸಿವೆ - 1 ಟೀ ಸ್ಪೂನ್
 • ಇಂಗು - ದೊಡ್ಡ ಚಿಟಿಕೆ
 • ಅರಿಶಿನ - 1/4 ಟೀ ಸ್ಪೂನ್
 • ಹಸಿಮೆಣಸು - 1 (ಖಾರಕ್ಕೆ ತಕ್ಕಂತೆ)
 • ಕರಿಬೇವು - 4 ಎಲೆಗಳು
 • ಎಣ್ಣೆ - 3 ಟೇಬಲ್ ಸ್ಪೂನ್
 • ತೆಂಗಿನತುರಿ - 1/2 ಕಪ್
 • ಇರುಳ್ಳಿ - ಮೀಡಿಯಂ ಸೈಜಿನ ಈರುಳ್ಳಿಯ ಅರ್ಧಭಾಗ
 • ಉಪ್ಪು - ರುಚಿಗೆ ತಕ್ಕಷ್ಟು
 • ಆಮ್ ಚೂರ್ ಪೌಡರ್ - ರುಚಿಗೆ ತಕ್ಕಷ್ಟು
 • ಸಕ್ಕರೆ - 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
 • ನೀರು - 1 1/4 ಕಪ್ (ಬೇಯಲು ಬೇಕಾಗುವಷ್ಟು)


ತಯಾರಿಸುವ ವಿಧಾನ:
 • ಬೀಟ್ ರೂಟ್ ನ್ನು ತೊಳೆದು, ಸಿಪ್ಪೆ ತೆಗೆಯಿರಿ. ನಂತರ ಇದನ್ನು ಸಣ್ಣಗೆ ಹೆಚ್ಚಿಕೊಳ್ಳಿ. 
 • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಇದಕ್ಕೆ ಒಣಮೆಣಸಿನ ಚೂರುಗಳು, ಉದ್ದಿನಬೇಳೆ, ಇಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಸಾಸಿವೆ ಚಟಪಟ ಎಂದ ನಂತರ ಅರಿಶಿನ, ಹೆಚ್ಚಿದ ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಕೈಯಾಡಿಸಿ. 
 • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಬೀಟ್ರೂಟ್ ಚೂರುಗಳನ್ನು ಸೇರಿಸಿ ಕೈಯಾಡಿಸಿ. 
 • ಪಲ್ಯದ ಮಿಶ್ರಣಕ್ಕೆ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 18 - 20 ನಿಮಿಷ ಬೇಯಿಸಿ. ಪಲ್ಯವನ್ನು ಆಗಾಗ್ಗೆ ಕೈಯಾಡಿಸುತ್ತಿರಿ. ಮಿಶ್ರಣ ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ನೀರು ಸೇರಿಸಿ. 
 • ಪಲ್ಯದ ಮಿಶ್ರಣ ಮುಕ್ಕಾಲುಭಾಗ ಬೆಂದು ನೀರಿನಂಶ ಖಾಲಿಯಾಗುತ್ತ ಬಂದಾಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಸಕ್ಕರೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
 • ಈ ಮಿಶ್ರಣ 8 - 10 ನಿಮಿಷ ಬೆಂದ ನಂತರ ಉರಿಯನ್ನು ಆಫ್ ಮಾಡಿ. 
 • ರುಚಿಕಟ್ಟಾದ ಪಲ್ಯವನ್ನು ಅನ್ನ, ಚಪಾತಿ ರೊಟ್ಟಿ ಅಥವಾ ಪೂರಿಯೊಡನೆ ಹಾಕಿಕೊಂಡು ತಿನ್ನಿ. 


ಟಿಪ್ಸ್:
 • ಬೀಟ್ ರೂಟ್ ಗಡ್ಡೆಗಳು ತುಂಬಾ ಗಟ್ಟಿ ಇರುವುದರಿಂದ ಸಣ್ಣಗೆ ಹೆಚ್ಚಲು ಕಷ್ಟವೆನಿಸಿದರೆ ಇಲ್ಲೊಂದು ಸಲಹೆ: ಬೀಟ್ ರೂಟ್ ಗಡ್ಡೆಯನ್ನು 2 ಭಾಗಗಳಾಗಿ ಸೀಳಿಕೊಂಡು ಅವು ಮುಳುಗುವಷ್ಟು ನೀರು ಸೇರಿಸಿ ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಸಣ್ಣಗೆ ಹೆಚ್ಚಿಕೊಂಡು ಮೇಲೆ ಹೇಳಿದಂತೆ ಒಗ್ಗರಣೆ ಹಾಕಿ. ಗಡ್ಡೆಗಳನ್ನು ಬೇಯಿಸಿಕೊಂಡು ಹೆಚ್ಚುವುದಾದರೆ ಪಲ್ಯಕ್ಕೆ ನೀರು ಸೇರಿಸಿ ಬೇಯಿಸುವ ಅಗತ್ಯವಿಲ್ಲ. 

Thursday, 21 May 2015

ಗೋಧಿ ಹಿಟ್ಟಿನ ಲಾಡು । ಗೋಧಿ ಹಿಟ್ಟಿನ ಉಂಡೆ


ಮನೆಗೆ ಯಾರಾದರೂ ಅತಿಥಿಗಳು ಬರುವರೆಂದಾದರೆ ತಕ್ಷಣ ತಯಾರಿಸಬಹುದಾದ ಸಿಹಿ ತಿಂಡಿಗಳಲ್ಲಿ ಇದೂ ಒಂದು. ಗೋಧಿಹಿಟ್ಟು, ಸಕ್ಕರೆ, ತುಪ್ಪ ಇತ್ಯಾದಿ ಒಳ್ಳೆಯ ಪದಾರ್ಥಗಳನ್ನು ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ನನ್ನ ಮಗಳಂತೂ ಈ ಲಾಡು ಕಂಡರೆ ಸಾಕು, 'ಟುಣ್ ಟುಣ್ ಲಾಡು' ಎಂದು ಹೇಳುತ್ತ ಒಂದು ಲಾಡನ್ನು ಖಾಲಿ ಮಾಡುತ್ತಾಳೆ.  'ತುಪ್ಪ ' ಎಂದ ತಕ್ಷಣ ಕ್ಯಾಲೋರಿಗಳ ಬಗ್ಗೆ ಯೋಚನೆ ಮಾಡಬೇಡಿ, ಏಕೆಂದರೆ ಈ ಲಾಡು ತಯಾರಿಸಲು ಬಹಳ ಕಡಿಮೆ ತುಪ್ಪ ಸಾಕು!
ನನ್ನ ಚಿಕ್ಕಂದಿನ ದಿನಗಳಿಂದಲೂ ಈ ಲಾಡು ನನಗೆ ಪ್ರಿಯ. ಗೋಧಿ ಹಿಟ್ಟಿನಲ್ಲಿ ಇನ್ನೊಂದು ಬಗೆಯಲ್ಲೂ ಲಾಡು ತಯಾರಿಸಬಹುದು. ಸಕ್ಕರೆ ಪಾಕ ಹಾಕಿ ತಯಾರಿಸುವ ಆ ಲಾಡು ಬೇರೆಯದೇ ರುಚಿ.
ಸುಲಭದಲ್ಲಿ ತಯಾರಿಸಬಹುದಾದ ಗೋಧಿ ಹಿಟ್ಟಿನ ಲಾಡನ್ನು ನೀವೂ ತಯಾರಿಸಿ ನೋಡಿ!


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು 
ಈ ಅಳತೆಯಿಂದ 12 ಲಾಡುಗಳನ್ನು ತಯಾರಿಸಬಹುದು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 

ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 1 ಕಪ್ (1 ಕಪ್ = 200 ಗ್ರಾಂ)
ತುಪ್ಪ - 1/2 ಕಪ್
ಸಕ್ಕರೆ ಪುಡಿ - 3/4 ಕಪ್ 
ಗೋಡಂಬಿ - 4 
ಒಣದ್ರಾಕ್ಷಿ - 15 ರಿಂದ 20
ಏಲಕ್ಕಿ - 2
ಲವಂಗ - 1


ತಯಾರಿಸುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ. 
ತುಪ್ಪ ಕರಗಿದ ನಂತರ ಇದಕ್ಕೆ ಗೋಧಿಹಿಟ್ಟು, ಗೋಡಂಬಿ ಚೂರುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಪರಿಮಳ ಬರುವಂತೆ ಹುರಿಯಿರಿ. 
ಹುರಿದ ಮಿಶ್ರಣವನ್ನು ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ. 
ಏಲಕ್ಕಿ, ಲವಂಗವನ್ನು ಪುಡಿಮಾಡಿಕೊಳ್ಳಿ. ಬೇಕಿದ್ದರೆ ಸಕ್ಕರೆ ಪುಡಿಮಾಡುವಾಗಲೇ ಇವನ್ನೂ ಸೇರಿಸಿ ಪುಡಿಮಾಡಬಹುದು .
ಹುರಿದ ಗೋಧಿಹಿಟ್ಟು ತಣ್ಣಗಾದ ನಂತರ ಇದಕ್ಕೆ ಸಕ್ಕರೆ, ಒಣದ್ರಾಕ್ಷಿ, ಏಲಕ್ಕಿ - ಲವಂಗದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ. 
ತಯಾರಾದ ಲಾಡುಗಳನ್ನು ಗಾಳಿಯಾಡದಂತೆ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಬಳಸಿ. 


ಟಿಪ್ಸ್:
ಮಿಶ್ರಣ ತುಂಬಾ ಪುಡಿಪುಡಿಯಾಗಿ ಲಾಡು ಕಟ್ಟಲು ಬರದಿದ್ದರೆ ಒಂದೆರಡು ಚಮಚದಷ್ಟು ತುಪ್ಪವನ್ನು ಬಿಸಿಮಾಡಿ ಹಿಟ್ಟಿನೊಡನೆ ಮಿಕ್ಸ್ ಮಾಡಿ. 

Sunday, 10 May 2015

ಫ್ರೂಟ್ ಬಿಸ್ಕಿಟ್ । ಕರಾಚಿ ಬೇಕರಿ ಫ್ರೂಟ್ ಬಿಸ್ಕಿಟ್ । ಟೂಟಿ ಫ್ರೂಟಿ ಬಿಸ್ಕಿಟ್


ಹೈದರಾಬಾದ್ ನ ಕರಾಚಿ ಬೇಕರಿಯ ಫ್ರೂಟ್ ಬಿಸ್ಕಿಟ್ ಅಥವಾ ಟೂಟಿ ಫ್ರೂಟಿ ಬಿಸ್ಕಿಟ್ ಎಂದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ. ಟೂಟಿ ಫ್ರೂಟಿ ಚೂರುಗಳನ್ನು ಒಳಗೆ ಹುದುಗಿಸಿಕೊಂಡು ಗರಿಗರಿಯಾಗಿ ಸುವಾಸಿತವಾಗಿರುವ ಈ ಬಿಸ್ಕಿಟ್ ಗಳು ತಿನ್ನಲು ಬಹಳ ರುಚಿ. ನಾನು ಮನೆಯಲ್ಲಿ ಬಿಸ್ಕಿಟ್ ತಯಾರಿಸಲು ಕಲಿತ ಹೊಸದರಲ್ಲಿ ಇಂಥ ಬಿಸ್ಕಿಟ್ ಗಳನ್ನು ತಯಾರಿಸಲು ಬಹಳ ಉತ್ಸಾಹಿತಳಾಗಿದ್ದೆ. ಬಿಸ್ಕಿಟ್ ಗೆ ಹಳದಿ ಮಿಶ್ರಿತ ಹೊಂಬಣ್ಣ ಬರಲು ಏನನ್ನು ಬಳಸಿರಬಹುದು? ಎನ್ನುವುದೇ ನನಗೆ ದೊಡ್ಡ ಸಮಸ್ಯೆಯಾಗಿತ್ತು. ಅನೇಕ ಪ್ರಯೋಗಗಳನ್ನು ಮಾಡಿದ ನಂತರ ಕರಾಚಿ ಬೇಕರಿಯ ರುಚಿಯನ್ನೇ ಹೋಲುವ ಬಿಸ್ಕಿಟ್ ಗಳನ್ನು ಮನೆಯಲ್ಲೇ ತಯಾರಿಸಿ ಸವಿಯುವಂತಾಗಿದೆ. ತಿನ್ನುತ್ತಿದ್ದರೆ ಇನ್ನೂ ಬೇಕೆನಿಸುವ ಈ ಬಿಸ್ಕಿಟ್ ನಮ್ಮ ಟೀ ಟೈಮ್ ಫೇವರಿಟ್!
ಫ್ರೂಟ್ ಬಿಸ್ಕಿಟ್ ಅಥವಾ ಟೂಟಿ ಫ್ರೂಟಿ ಬಿಸ್ಕಿಟ್ ರೆಸಿಪಿ ಈ ಕೆಳಗಿನಂತಿದೆ..


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷಗಳು
ಹಿಟ್ಟನ್ನು ಫ್ರಿಜ್ ನಲ್ಲಿಡಬೇಕಾದ ಸಮಯ: 30 ನಿಮಿಷಗಳು
ಬೇಕಿಂಗ್ ಟೈಮ್: 20 - 25 ನಿಮಿಷಗಳು
ಈ ಅಳತೆಯಿಂದ ಸುಮಾರು 40 - 45 ಬಿಸ್ಕಿಟ್ ಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:
 • ಮೈದಾಹಿಟ್ಟು - 5 ಕಪ್ (1 ಕಪ್ = 70 ಗ್ರಾಂ ಅಂದಾಜು)
 • ಬೆಣ್ಣೆ (ರೂಮ್ ಟೆಂಪರೇಚರ್ ನಲ್ಲಿ) - 185 ಗ್ರಾಂ
 • ಸಕ್ಕರೆ - 1 ಕಪ್ (110 ಗ್ರಾಂ )
 • ಮಿಲ್ಕ್ ಪೌಡರ್ - 1/2 ಕಪ್ (25 ಗ್ರಾಂ)
 • ಕಸ್ಟರ್ಡ್ ಪೌಡರ್ - 1/4 ಕಪ್ (13 ಗ್ರಾಂ)
 • ವೆನಿಲ್ಲಾ ಎಸೆನ್ಸ್ - 1 ಟೀ ಸ್ಪೂನ್
 • ರೋಸ್ ವಾಟರ್ - 3 ಟೀ ಸ್ಪೂನ್
 • ಟೂಟಿ ಫ್ರೂಟಿ - 100 ಗ್ರಾಂ


ತಯಾರಿಸುವ ವಿಧಾನ:
 • ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. ಮನೆಯಲ್ಲಿ ಸಕ್ಕರೆಯನ್ನು ಪುಡಿಮಾಡಿಕೊಳ್ಳುವ ಬದಲು ಅಂಗಡಿಯಲ್ಲಿ ಸಿಗುವ ಐಸಿಂಗ್ ಶುಗರ್ ಬೇಕಿದ್ದರೂ ಬಳಸಬಹುದು.
 • ಬೆಣ್ಣೆಯನ್ನು ಒಂದು ದೊಡ್ಡ ಬೌಲ್ ನಲ್ಲಿ ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿ. ಎಲೆಕ್ಟ್ರಿಕ್ ಬೀಟರ್ ಬಳಸಿದರೆ ಈ ಕೆಲಸ ಸುಲಭವಾಗುತ್ತದೆ. 
 • ಬೀಟ್ ಮಾಡಿದ ಬೆಣ್ಣೆಗೆ ಸ್ವಲ್ಪ ಸ್ವಲ್ಪವಾಗಿ ಸಕ್ಕರೆ ಪುಡಿ ಸೇರಿಸುತ್ತ ಕ್ರೀಮ್ ನಂತೆ ಆಗುವವರೆಗೆ ಬೀಟ್ ಮಾಡಿ. 
 • ಬೀಟ್ ಮಾಡಿದ ಮಿಶ್ರಣಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ.
 • ನಂತರ ಇದಕ್ಕೆ ಕಸ್ಟರ್ಡ್ ಪೌಡರ್ ಮತ್ತು ಮಿಲ್ಕ್ ಪೌಡರ್ ಸೇರಿಸಿ.
 • ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಮೈದಾ ಹಿಟ್ಟನ್ನು ಸೇರಿಸುತ್ತ ಕೈಗೆ ಅಂಟದ ಮೆತ್ತಗಿನ ಹಿಟ್ಟನ್ನು (ಚಪಾತಿ ಹಿಟ್ಟಿನಂತೆ) ತಯಾರಿಸಿಕೊಳ್ಳಿ. ಇಲ್ಲಿ ಹೇಳಿದ ಅಳತೆಗಿಂತ ಸ್ವಲ್ಪ ಹೆಚ್ಚು ಹಿಟ್ಟನ್ನು ಬಳಸಿದರೂ ಪರವಾಗಿಲ್ಲ, ಬಿಸ್ಕಿಟ್ ಚೆನ್ನಾಗಿಯೇ ಬರುತ್ತದೆ.
 • ಕೊನೆಯಲ್ಲಿ ಹಿಟ್ಟಿಗೆ ಟೂಟಿ ಫ್ರೂಟಿ ಸೇರಿಸಿ ಮಿಕ್ಸ್ ಮಾಡಿ. 
 • ತಯಾರಿಸಿದ ಹಿಟ್ಟನ್ನು ಎರಡು ಸಮಭಾಗಗಳಾಗಿ ಮಾಡಿಕೊಳ್ಳಿ. ಪ್ರತಿಯೊಂದು ಭಾಗವನ್ನೂ ಉದ್ದಕ್ಕೆ ದಪ್ಪವಾಗಿ ಆಯತಾಕಾರಕ್ಕೆ  ಹೊಸೆದುಕೊಳ್ಳಿ. ಇದನ್ನು ಹಾಗೆಯೇ ಬೇಕಿಂಗ್ ಪೇಪರ್ ನಲ್ಲಿ ಸುತ್ತಿ ಅರ್ಧ ಘಂಟೆಕಾಲ ಫ್ರಿಜ್ ನಲ್ಲಿಡಿ.
 • ಅರ್ಧ ಘಂಟೆಯ ನಂತರ ಹಿಟ್ಟನ್ನು ಫ್ರಿಜ್ ನಿಂದ ಹೊರತೆಗೆದು 1 ಸೆಂಟಿಮೀಟರ್ ಅಗಲದ ಸ್ಲೈಸ್ ಗಳಾಗಿ ಕತ್ತರಿಸಿಕೊಳ್ಳಿ.
 • ಓವನ್ ನ್ನು 175 °C ಗೆ ಪ್ರಿ ಹೀಟ್ ಮಾಡಿಕೊಳ್ಳಿ.
 • ಬೇಕಿಂಗ್ ಟ್ರೇ ಯಲ್ಲಿ ಬಟರ್ ಪೇಪರ್ ಹಾಸಿಕೊಂಡು ಕತ್ತರಿಸಿದ ಬಿಸ್ಕಿಟ್ ಸ್ಲೈಸ್ ಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿಕೊಳ್ಳಿ. ಬಿಸ್ಕಿಟ್ ಸ್ವಲ್ಪ ಉಬ್ಬಿ ದೊಡ್ದದಾಗುವುದರಿಂದ ತೀರಾ ಹತ್ತಿರ ಜೋಡಿಸಬೇಡಿ.
 • ಬಿಸ್ಕಿಟ್ ಗಳನ್ನು ಪ್ರಿ ಹೀಟ್ ಮಾಡಿದ ಓವನ್ ನಲ್ಲಿಟ್ಟು 20 ನಿಮಿಷ ಅಥವಾ ಬೇಯುವವರೆಗೆ ಬೇಯಿಸಿ.
 • ಬೆಂದ ಬಿಸ್ಕಿಟ್ ಗಳನ್ನು ಪೂರ್ತಿ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಬೇಕಾದಾಗ ಬಳಸಿ.  

ಟಿಪ್ಸ್:
 • ಬಿಸ್ಕಿಟ್ ತಯಾರಿಸುವ ಹಿಟ್ಟನ್ನು 30 ನಿಮಿಷಗಳಿಗಿಂತ ಜಾಸ್ತಿ ಸಮಯ ಫ್ರಿಜ್ ನಲ್ಲಿಟ್ಟರೂ ಆಗುತ್ತದೆ. ಫ್ರಿಜ್ ನಲ್ಲಿ ಹೆಚ್ಚು ಸಮಯ ಹಿಟ್ಟನ್ನು ಇಟ್ಟರೆ ಬಿಸ್ಕಿಟ್ ಬೇಯಲು ಸುಮಾರು 5 ನಿಮಿಷ ಜಾಸ್ತಿ ಬೇಕು. 

Tuesday, 28 April 2015

ಬಾಳೆಹಣ್ಣಿನ ಲೋಫ್ ಕೇಕ್ । ಎಗ್ ಲೆಸ್ ಬನಾನಾ ಬ್ರೆಡ್


ಬಾಳೆಹಣ್ಣು ವಿವಿಧ ಪೋಷಕಾಂಶಗಳ ಆಗರ. ಈ ಹಣ್ಣನ್ನು ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ ಅಥವಾ ಇದನ್ನು ಬಳಸಿ ವಿವಿಧ ಸಿಹಿತಿಂಡಿ, ಐಸ್ ಕ್ರೀಮ್, ಕೇಕ್ ಗಳನ್ನು ತಯಾರಿಸಿಯೂ ತಿನ್ನಬಹುದು. ಮೊಟ್ಟೆ ಬಳಸದೆ ತಯಾರಿಸಬಹುದಾದ ಬನಾನಾ ಕೇಕ್ ಹಾಗೂ ಬನಾನಾ ಬ್ರೆಡ್ ನಮ್ಮ ಇಷ್ಟದ ತಿಂಡಿಗಳಲ್ಲಿ ಒಂದು. 
ಚೆನ್ನಾಗಿ ಕಳಿತು ಸಿಪ್ಪೆ ಕಪ್ಪಾದ ಬಾಳೆಹಣ್ಣು ತಿನ್ನಲು ಅಷ್ಟು ಚೆನ್ನಾಗಿರುವುದಿಲ್ಲ. ಅಂಥ ಹಣ್ಣು ಕೇಕ್ ಮತ್ತು ಬ್ರೆಡ್ ತಯಾರಿಸಲು ಸೂಕ್ತವಾದುದು. ಬಾಳೆಹಣ್ಣಿನ ಕಪ್ ಕೇಕ್ / ಮಫಿನ್ಸ್ ರೆಸಿಪಿಯನ್ನು ಈ ಮೊದಲೇ ಬರೆದಿದ್ದೆ. ಬಾಳೆಹಣ್ಣಿನ ಬ್ರೆಡ್ ರೆಸಿಪಿ ಈ ಕೆಳಗಿನಂತಿದೆ.. 


ತಯಾರಿಸಲು ಬೇಕಾಗುವ ಸಮಯ: 10 - 15 ನಿಮಿಷ 
ಬೇಕಿಂಗ್ ಟೈಮ್ - 45 ನಿಮಿಷಗಳು 
ಸರ್ವಿಂಗ್ಸ್: 4 - 5 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಂ 

ಬೇಕಾಗುವ ಸಾಮಗ್ರಿಗಳು:
ಕಳಿತ ಬಾಳೆಹಣ್ಣು (ದೊಡ್ಡದು) - 1 (ಅಥವಾ 2 ಕಪ್ ಪ್ಯೂರಿ)
ಮೈದಾಹಿಟ್ಟು - 175 ಗ್ರಾಂ (2 1/2 ಕಪ್)
ಉಪ್ಪು - ಚಿಟಿಕೆ 
ಸಕ್ಕರೆ - 1 1/2 ಕಪ್ 
ಮೊಸರು - 1/2 ಕಪ್ 
ಬೆಣ್ಣೆ - 1/2 ಕಪ್ 
ಬೇಕಿಂಗ್ ಪೌಡರ್ - 2 ಟೀ ಸ್ಪೂನ್ 
ಬೇಕಿಂಗ್ ಸೋಡಾ - 1 ಟೀ ಸ್ಪೂನ್ 
ವೆನಿಲ್ಲಾ ಎಸೆನ್ಸ್ - 1 ಟೀ ಸ್ಪೂನ್

ತಯಾರಿಸುವ ವಿಧಾನ:
ಓವನ್ ನ್ನು 175°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ.  
ಬಾಳೆಹಣ್ಣನ್ನು ಹೆಚ್ಚಿಕೊಂಡು ಮಿಕ್ಸಿಯಲ್ಲಿ ಸಕ್ಕರೆಯ ಜೊತೆ ನುಣ್ಣಗೆ ತಿರುವಿ ಪ್ಯೂರಿ ತಯಾರಿಸಿಕೊಳ್ಳಿ. ರುಬ್ಬುವಾಗ ನೀರು ಸೇರಿಸಬೇಡಿ.
ಬೆಣ್ಣೆಯನ್ನು ಕರಗಿಸಿ ಆರಲು ಬಿಡಿ.
ಮೈದಾಹಿಟ್ಟು, ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ಜರಡಿಯಾಡಿಕೊಳ್ಳಿ. 
ಬಾಳೆಹಣ್ಣಿನ ಪ್ಯೂರಿಗೆ ಮೊಸರು, ಬೆಣ್ಣೆ, ಬೇಕಿಂಗ್ ಪೌಡರ್, ವೆನಿಲ್ಲಾ ಎಸೆನ್ಸ್ ಇಷ್ಟನ್ನೂ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
ಪ್ಯೂರಿ ಮಿಶ್ರಣಕ್ಕೆ ಜರಡಿ ಹಿಡಿದ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಜಿಡ್ಡು ಸವರಿದ ಲೋಫ್ ಪ್ಯಾನ್ ಗೆ ಹಾಕಿ ಒಂದೇ ಸಮನಾಗಿ ಹರವಿ. ಪ್ರಿ - ಹೀಟ್ ಮಾಡಿದ ಓವನ್ ನಲ್ಲಿ 45 ನಿಮಿಷ ಅಥವಾ ಬ್ರೆಡ್ ಬೇಯುವವರೆಗೆ ಬೇಯಿಸಿ.
ಬೇಯಿಸಿದ ಬ್ರೆಡ್ ಸ್ವಲ್ಪ ತಣ್ಣಗಾದ ನಂತರ ಅದನ್ನು ಬೇಕಿಂಗ್ ಪಾತ್ರೆಯಿಂದ ಹೊರತೆಗೆದು ತಣ್ಣಗಾಗಲು ಬಿಡಿ.
ಬ್ರೆಡ್ ಪೂರ್ತಿ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ.


ಟಿಪ್ಸ್:
ಈ ಬ್ರೆಡ್ ನ್ನು ಬೆಣ್ಣೆಯ ಬದಲು ಎಣ್ಣೆ ಬಳಸಿಯೂ ತಯಾರಿಸಬಹುದು.

Monday, 13 April 2015

ದಾಸವಾಳ ಹೂವಿನ ಜ್ಯೂಸ್


ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದಾದ ಮತ್ತು ಬಹಳ ಕಾಲದವರೆಗೆ ಉಳಿಯುವ ಗಿಡಗಳಲ್ಲಿ ದಾಸವಾಳವೂ ಒಂದು. ದಾಸವಾಳದಲ್ಲೂ ವಿವಿಧ ಬಗೆಗಳು; ವಿವಿಧ ಬಣ್ಣದ ಹೂಗಳನ್ನು ಬಿಡುವ ಈ ಗಿಡ ಗಾರ್ಡನ್ ಗೆ ಶೋಭೆಯೂ ಹೌದು.ಹಾಗೆಯೇ ಈ ಗಿಡದ ಉಪಯೋಗಗಳೂ ಅನೇಕ. ಸಾಮಾನ್ಯವಾಗಿ ದಾಸವಾಳ ಹೂಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ದಾಸವಾಳ ಗಿಡದ ಎಲೆ ತಲೆಕೂದಲಿನ ಬೆಳವಣಿಗೆಗೆ ಬಹಳ ಒಳ್ಳೆಯದು. ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಣಾಮಕಾರಿ ಜೊತೆಗೆ ತಲೆಯನ್ನು ತಂಪಾಗಿಡುತ್ತದೆ. ದಾಸವಾಳ ಹೂವಿನಿಂದ ತಯಾರಿಸುವ ಜ್ಯೂಸ್ ಮತ್ತು ಟೀ ಆರೋಗ್ಯಕ್ಕೆ ಒಳ್ಳೆಯದು. 
ನಮ್ಮ ಮನೆಯ ಹಿತ್ತಲಲ್ಲಿ ಒಂದು ಕೆಂಪು ದಾಸವಾಳದ ಗಿಡವಿದೆ. ನಾವು ದೇವರಿಗೆ ಇಡುವುದಕ್ಕೆಂದು ದಿನವೂ ದಾಸವಾಳ ಹೂಗಳನ್ನು ಕೊಯ್ಯುತ್ತೇವೆ. ನನ್ನ ಮಗಳು ಆಟ ಆಡಲೆಂದು ಒಂದಿಷ್ಟು ಹೂಗಳನ್ನು ಕೀಳುತ್ತಾಳೆ. ಎಷ್ಟೇ ಹೂಗಳನ್ನು ಕಿತ್ತರೂ ಆ ಗಿಡದಲ್ಲಿ ಇನ್ನೂ ತುಂಬಾ ಹೂಗಳು ಉಳಿದಿರುತ್ತವೆ. ಇತ್ತೀಚೆಗೆ ನಾವು ಕೆಂಪು ದಾಸವಾಳ ಹೂಗಳನ್ನು ಬಳಸಿ ಜ್ಯೂಸ್ ತಯಾರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಸುಲಭದಲ್ಲಿ ತಯಾರಿಸಬಹುದಾದ ಈ ಜ್ಯೂಸ್ ನೋಡಲೂ ಚೆಂದ, ಕುಡಿಯಲೂ ರುಚಿ!
ದಾಸವಾಳ ಹೂವಿನ ಜ್ಯೂಸ್ ತಯಾರಿಸುವ ವಿಧಾನ ಇಂತಿದೆ:


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • ಕೆಂಪು ದಾಸವಾಳ ಹೂ - 3
 • ಶುಂಟಿ - 2 ಇಂಚು
 • ಸಕ್ಕರೆ - 4 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
 • ನೀರು - 1 1/2 ಕಪ್ (1 ಕಪ್ = 400 ml)
 • ನಿಂಬೆಹಣ್ಣು - ಒಂದು ನಿಂಬೆಯ ಅರ್ಧಭಾಗ ಅಥವಾ ರುಚಿಗೆ ತಕ್ಕಷ್ಟು 


ತಯಾರಿಸುವ ವಿಧಾನ:
 • ಒಂದು ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಅದಕ್ಕೆ ಶುಂಟಿ ಸ್ಲೈಸ್ ಹಾಗೂ ದಾಸವಾಳ ದಳಗಳನ್ನು ಸೇರಿಸಿ 8 - 10 ನಿಮಿಷ ಕುದಿಸಿ. 
 • ಇದನ್ನು ಸೋಸಿ ರುಚಿಗೆ ತಕ್ಕಷ್ಟು ಸಕ್ಕರೆ, ನಿಂಬೆರಸ ಸೇರಿಸಿ. ನಿಂಬೆರಸ ಸೇರಿಸಿದ ತಕ್ಷಣ ಜ್ಯೂಸ್ ಒಳ್ಳೆಯ ಕೆಂಬಣ್ಣಕ್ಕೆ ತಿರುಗುತ್ತದೆ. 
 • ಜ್ಯೂಸ್ ತಣ್ಣಗಾದ ನಂತರ ಕುಡಿಯಿರಿ. ಬೇಕಿದ್ದರೆ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಟ್ಟು ಅಥವಾ ಐಸ್ ಪೀಸ್ ಗಳನ್ನು ಸೇರಿಸಿ ಕುಡಿಯಬಹುದು.

Sunday, 5 April 2015

ಕಾಗೆ ಸೊಪ್ಪಿನ ಚಟ್ನಿ । ಗಣಿಕೆ ಸೊಪ್ಪಿನ ಚಟ್ನಿ


ಗಣಿಕೆ ಸೊಪ್ಪು, ಕಾಗೆ ಸೊಪ್ಪು, ಕಾಪಿಟ್ಲೆ ಇತ್ಯಾದಿ ವಿವಿಧ ಹೆಸರಿನಿಂದ ಕರೆಯಲ್ಪಡುವ ಈ ಸೊಪ್ಪಿನ ಬಗ್ಗೆ ನೀವು ಕೇಳಿರಬಹುದು. ಕಳೆ ಗಿಡಗಳಂತೆಯೇ ಎಲ್ಲಿ ಬೇಕೆಂದರಲ್ಲಿ ಬೆಳೆಯುವ ಈ ಸೊಪ್ಪು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೊಟ್ಟೆಯ ತೊಂದರೆಗಳು, ನೆಗಡಿ, ಕಫ ಇವಕ್ಕೆಲ್ಲ ಗಣಿಕೆ / ಕಾಗೆ ಸೊಪ್ಪಿನ ಬಳಕೆ ಪರಿಣಾಮಕಾರಿ. ಪುಟ್ಟ ಮಕ್ಕಳಂತೂ ಈ ಗಿಡದ ಪುಟ್ಟ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ!
ನಾನು ಔಷಧಕ್ಕೆಂದು ಪಾಟ್ ನಲ್ಲಿ ಗಣಿಕೆ ಸೊಪ್ಪಿನ ಗಿಡಗಳನ್ನು ಬೆಳೆಸಿದ್ದೇನೆ. ಈ ಗಿಡದಲ್ಲಿ ಬಿಡುವ ಕಪ್ಪಾದ ಪುಟ್ಟ ಪುಟ್ಟ ಹಣ್ಣುಗಳೆಂದರೆ ನನ್ನ ಮಗಳಿಗೆ ಇಷ್ಟ. ಅವಳಿಗೆ ನೆಗಡಿಯಾದರೆ ನಾನು ಎರಡು ಸ್ಪೂನ್ ನಷ್ಟು ಗಣಿಕೆ ಸೊಪ್ಪಿನ ರಸಕ್ಕೆ ಸಕ್ಕರೆ / ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಸುತ್ತೇನೆ. ಇದರಿಂದ ನೆಗಡಿ, ಕಫ ಎರಡೂ ಬೇಗ ಕಡಿಮೆಯಾಗುತ್ತದೆ.
ಕೆಲ ದಿನಗಳ ಹಿಂದೆ ನನ್ನ ಅಮ್ಮನಿಗೆ ಫೋನಾಯಿಸಿದ್ದಾಗ ಅವರು ಗಣಿಕೆ ಸೊಪ್ಪಿನ ಚಟ್ನಿ ಮಾಡಬಹುದೆಂದು ಹೇಳಿದ್ದರು. ಅವರು ಹೇಳಿದಂತೆ ತಯಾರಿಸಿದ ಚಟ್ನಿ ನಮಗೆ ಬಹಳ ಇಷ್ಟವಾಯಿತು. ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಚಟ್ನಿ ಊಟಕ್ಕೆ ರುಚಿ, ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು.
ಗಣಿಕೆ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನ ಇಂತಿದೆ..


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 6 - 7 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ

ಬೇಕಾಗುವ ಸಾಮಗ್ರಿಗಳು:
 • ಗಣಿಕೆ / ಕಾಗೆ ಸೊಪ್ಪು - ಒಂದು ಮುಷ್ಟಿ (ನಾನು 30 - 32 ಎಲೆಗಳನ್ನು ಬಳಸಿದ್ದೇನೆ)
 • ತೆಂಗಿನತುರಿ - 1 1/4 ಕಪ್ 
 • ಒಗ್ಗರಣೆಗೆ: 
          ಎಣ್ಣೆ - 3 ಟೀ ಸ್ಪೂನ್
          ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
          ಜೀರಿಗೆ - 1 1/4 ಟೀ ಸ್ಪೂನ್
          ಎಳ್ಳು - 1 1/4 ಟೀ ಸ್ಪೂನ್ 
          ಸಾಸಿವೆ - 1 ಟೀ ಸ್ಪೂನ್
 • ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು 
 • ಉಪ್ಪು - ರುಚಿಗೆ ತಕ್ಕಷ್ಟು 
 • ನೀರು - ಸ್ವಲ್ಪ

ತಯಾರಿಸುವ ವಿಧಾನ:
 • ಒಂದು ದಪ್ಪ ತಳದ ಬಾಣಲೆಯಲ್ಲಿ 1 1/2 ಟೀ ಸ್ಪೂನ್ ನಷ್ಟು ಎಣ್ಣೆ ಬಿಸಿಮಾಡಿ ಎಳ್ಳು, ಜೀರಿಗೆ ಹಾಕಿ ಪರಿಮಳ ಬರುವಂತೆ ಹುರಿದುಕೊಳ್ಳಿ. ಇದಕ್ಕೆ ಗಣಿಕೆ ಸೊಪ್ಪು ಸೇರಿಸಿ ಬಾಡಿಸಿ (ಒಂದೆರಡು ನಿಮಿಷ ಹುರಿದು) ಉರಿ ಆಫ್ ಮಾಡಿ.
 • ಹುರಿದ ಮಿಶ್ರಣಕ್ಕೆ ತೆಂಗಿನತುರಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
 • ಬಾಣಲೆಯಲ್ಲಿ 1 1/2 ಚಮಚದಷ್ಟು ಎಣ್ಣೆ ಕಾಯಿಸಿ ಸಾಸಿವೆ ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣಕ್ಕೆ ಸೇರಿಸಿ.
 • ರುಚಿಕರವಾದ ಚಟ್ನಿಯನ್ನು ಅನ್ನದೊಡನೆ ಸವಿದುನೋಡಿ.


ಟಿಪ್ಸ್:
 • ಈ ಚಟ್ನಿಗೆ ಹಸಿಮೆಣಸನ್ನು ಕಡಿಮೆ ಬಳಸುವುದಾದರೆ 2 ಒಣಮೆಣಸು ಹಾಗೂ 1 ಹಸಿಮೆಣಸು ಹಾಕಬಹುದು.
 • ಚಟ್ನಿಯನ್ನು ಫ್ರಿಜ್ ನಲ್ಲಿ ಇಡದೆ ಬಳಸಬೇಕಿದ್ದಲ್ಲಿ ಬಿಸಿ ಮಾಡಿಟ್ಟು ಬಳಸಬಹುದು.

Thursday, 26 March 2015

ಕ್ಯಾರೆಟ್ ಹಲ್ವಾ


ಭಾರತದಲ್ಲಿ ಹಬ್ಬ, ಮದುವೆ, ಇತ್ಯಾದಿ ವಿಶೇಷ ಸಮಾರಂಭಗಳಲ್ಲಿ ತಯಾರಿಸುವ ವಿಶೇಷ ಸಿಹಿ ತಿನಿಸುಗಳಲ್ಲಿ ಕ್ಯಾರೆಟ್ ಹಲ್ವಾ ಕೂಡ ಒಂದು. ಕ್ಯಾರೆಟ್, ಹಾಲು, ತುಪ್ಪ, ಸಕ್ಕರೆ, ಖೋವ, ಒಣ ಹಣ್ಣುಗಳು, ಇತ್ಯಾದಿ ಉತ್ತಮ ದರ್ಜೆಯ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಹಲ್ವಾ ತಿನ್ನಲು ಬಹಳ ರುಚಿ. ಸಿಹಿ ತಿಂಡಿಗಳನ್ನು ಹೆಚ್ಚಾಗಿ ಇಷ್ಟಪಡದ ನನ್ನ ಮಗಳಿಗೆ ಕ್ಯಾರೆಟ್ ಹಲ್ವ ಎಂದರೆ ತುಂಬಾ ಇಷ್ಟ!
ತಯಾರಿಸಲು ಸುಲಭವಾದ ಈ ಹಲ್ವಾ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಖೋವ ಬಳಸಿದರೆ ಕ್ಯಾರೆಟ್ ಹಲ್ವಾ ಹೆಚ್ಚು ರುಚಿ. ಆದರೆ ಖೋವ ಇಲ್ಲದೆಯೂ ಈ ಹಲ್ವಾ ತಯಾರಿಸಬಹುದು. ಮನೆಯಲ್ಲಿ ಸ್ವಲ್ಪವೇ ಖೋವಾ ಇದ್ದಾಗ ನಾನು ಅದರೊಡನೆ ಸ್ವಲ್ಪ ಪನೀರ್ ಸೇರಿಸಿಯೂ ಕ್ಯಾರೆಟ್ ಹಲ್ವಾ ತಯಾರಿಸಿದ್ದಿದೆ! ಒಟ್ಟಿನಲ್ಲಿ ಹೇಗೆ ತಯಾರಿಸಿದರೂ ಈ ಹಲ್ವಾ ಚೆನ್ನಾಗಿಯೇ ಇರುತ್ತದೆ. 
ಕ್ಯಾರೆಟ್ ಹಲ್ವಾ ತಯಾರಿಸುವ ವಿಧಾನ ಈ ಕೆಳಗಿನಂತಿದೆ:


ತಯಾರಿಸಲು ಬೇಕಾಗುವ ಸಮಯ: 1 1/2 ಘಂಟೆ 
ಸರ್ವಿಂಗ್ಸ್: 10 - 12
ಡಿಫಿಕಲ್ಟಿ ಲೆವೆಲ್: ಕಷ್ಟಕರ 

ಬೇಕಾಗುವ ಸಾಮಗ್ರಿಗಳು:
 • ಕ್ಯಾರೆಟ್ - 1 ಕೆಜಿ 
 • ಸಕ್ಕರೆ - 800 ಗ್ರಾಂ (ರುಚಿಗೆ ತಕ್ಕಷ್ಟು)
 • ಉಪ್ಪು - ದೊಡ್ಡ ಚಿಟಿಕೆ 
 • ಹಾಲು - 1/2 ಲೀಟರ್ 
 • ತುಪ್ಪ - 6 ಟೇಬಲ್ ಸ್ಪೂನ್ 
 • ಖೋವಾ - 1 ಲೀಟರ್ ಹಾಲಿನದು (ಅಥವಾ 200 ಗ್ರಾಂ)
 • ಏಲಕ್ಕಿಪುಡಿ - 1 1/2 ಟೀ ಸ್ಪೂನ್ 
 • ಒಣದ್ರಾಕ್ಷಿ - ಸ್ವಲ್ಪ 
 • ಬಾದಾಮಿ, ಪಿಸ್ತಾ - ಸ್ವಲ್ಪ 

ತಯಾರಿಸುವ ವಿಧಾನ:
 • ಕ್ಯಾರೆಟ್ ನ್ನು ಸ್ವಚ್ಛವಾಗಿ ತೊಳೆದು, ತುರಿದುಕೊಳ್ಳಿ. 
 • ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿಗಿಟ್ಟು ಅದಕ್ಕೆ ಕ್ಯಾರೆಟ್ ತುರಿ ಸೇರಿಸಿ 5 ನಿಮಿಷ ಅಥವಾ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ.
 • ಇದಕ್ಕೆ ಅರ್ಧ ಲೀಟರ್ ನಷ್ಟು ಹಾಲು ಸೇರಿಸಿ ಮುಚ್ಚಳ ಅರೆಬರೆ ಮುಚ್ಚಿ ಬೇಯಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ.
 • ಕ್ಯಾರೆಟ್ ತುರಿ ಮೆತ್ತಗೆ ಬೆಂದು, ಹಾಲು ಭಾಗಶಃ ಆರಿದ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ದೊಡ್ಡ ಚಿಟಿಕೆ ಉಪ್ಪು ಸೇರಿಸಿ ಕೈಯಾಡಿಸಿ. 
 • ಸಕ್ಕರೆ ಸೇರಿಸಿದಾಗ ಹಲ್ವಾ ಮಿಶ್ರಣ ಸ್ವಲ್ಪ ತೆಳ್ಳಗಾಗುತ್ತದೆ. ಆಗಾಗ್ಗೆ ಕೈಯಾಡಿಸುತ್ತ ಸ್ವಲ್ಪ ಸಮಯ ಬೇಯಿಸಿದರೆ ಮಂದವಾಗುತ್ತದೆ. 
 • ಮಿಶ್ರಣ ಮಂದವಾದ ನಂತರ ಇದಕ್ಕೆ ಖೋವ ಸೇರಿಸಿ ಇನ್ನೂ 10 - 12 ನಿಮಿಷ ಕೈಯಾಡಿಸಿ. 
 • ಕೊನೆಯಲ್ಲಿ ಏಲಕ್ಕಿಪುಡಿ, ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಿ. 
 • ಕ್ಯಾರೆಟ್ ಹಲ್ವಾವನ್ನು ಬಿಸಿಯಾಗಿಯೂ ತಿನ್ನಬಹುದು ಇಲ್ಲವೇ ತಣ್ಣಗೆ ಮಾಡಿಯೂ ತಿನ್ನಬಹುದು. 

Friday, 20 March 2015

ಖೋವಾ ತಯಾರಿಸುವ ವಿಧಾನ | ಮನೆಯಲ್ಲೇ ಖೋಯಾ ತಯಾರಿಸುವುದು ಹೇಗೆ?


ಖೋವಾ - ಇದು ಹಾಲಿನ ಪ್ರಮುಖ ಉಪೋತ್ಪನ್ನಗಳಲ್ಲಿ ಒಂದು. ನೀರು ಸೇರಿಸದ ಗಟ್ಟಿ ಹಾಲನ್ನು ಒಲೆಯಮೇಲಿಟ್ಟು ನೀರಿನಂಶವೆಲ್ಲ ಆರಿಹೋಗುವವರೆಗೂ ಕಾಯಿಸಿ, ಖೋವವನ್ನು ತಯಾರಿಸುತ್ತಾರೆ. ಹಲ್ವಾ, ಬರ್ಫಿ, ಪೇಡ, ಗುಲಾಬ್ ಜಾಮೂನ್ ಇತ್ಯಾದಿ ಸಿಹಿ ತಿಂಡಿಗಳಿಗೆ ಇದು ವಿಶೇಷವಾದ ರುಚಿ ಕೊಡುತ್ತದೆ.
ಭಾರತದಲ್ಲಿದ್ದಾಗ ನನಗೆ ಎಂದೂ ಮನೆಯಲ್ಲಿ ಖೋವ ತಯಾರಿಸುವ ಸಂದರ್ಭವೇ ಬಂದಿರಲಿಲ್ಲ. ಖೋವ ಬೇಕೆಂದಾಗಲೆಲ್ಲ ಅಂಗಡಿಗೆ ಹೋಗಿ ತರುವುದು ಅಭ್ಯಾಸವಾಗಿತ್ತು. ಇಲ್ಲಿ ರೆಡಿಮೇಡ್ ಖೋವ ಸಿಗದ ಕಾರಣ ಈಗ ಮನೆಯಲ್ಲೇ ಖೋವ ತಯಾರಿಸಿಕೊಳ್ಳುತ್ತೇನೆ. ತಯಾರಿಸಲು ಹೆಚ್ಚು ಸಮಯ ಬೇಕೆನ್ನುವುದನ್ನು ಬಿಟ್ಟರೆ ಮನೆಯಲ್ಲೇ ಖೋವ ತಯಾರಿಸುವುದು ಕಷ್ಟವೇನಿಲ್ಲ.
ಮನೆಯಲ್ಲೇ ಖೋವಾ ತಯಾರಿಸುವ ವಿಧಾನ ಇಂತಿದೆ:


ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
ನೀರು ಸೇರಿಸದ ಗಟ್ಟಿ ಹಾಲು - 1 ಲೀಟರ್ 

ತಯಾರಿಸುವ ವಿಧಾನ:
ಒಂದು ದಪ್ಪ ತಳದ, ಅಗಲವಾದ ಬಾಣಲೆಯಲ್ಲಿ ಹಾಲು ಹಾಕಿ ಮೀಡಿಯಮ್ ಉರಿಯಲ್ಲಿ ಬಿಸಿಗಿಡಿ. ನಾನ್ ಸ್ಟಿಕ್ ಬಾಣಲೆ ಬಳಸಿದರೆ ಹೆಚ್ಚು ಅನುಕೂಲ; ಹಾಲು ಬಾಣಲೆಯ ತಳಕ್ಕೆ ಅಂಟುವುದಿಲ್ಲ. 
ಹಾಲು ತಳ ಹಿಡಿಯದಂತೆ ಆಗಾಗ್ಗೆ ಕೈಯಾಡಿಸುತ್ತಿರಿ. 
ಕ್ರಮೇಣ ನೀರಿನಂಶ ಕಡಿಮೆಯಾಗಿ ಹಾಲು ದಪ್ಪಗಾಗುತ್ತ ಬರುತ್ತದೆ. 
ಮಿಶ್ರಣ ಪಾತ್ರೆಯ ತಳ ಬಿಟ್ಟು ಮುದ್ದೆಯಂತೆ ಆಗತೊಡಗಿದಾಗ ಉರಿ ಆಫ್ ಮಾಡಿ. 
ಖೋವ ತಣ್ಣಗಾದ ನಂತರ ಒಮ್ಮೆ ಚೆನ್ನಾಗಿ ನಾದಿ, ಒಂದು ಬಾಕ್ಸ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಬೇಕಾದಾಗ ಬಳಸಿ. 
ಹಲ್ವಾ, ಬರ್ಫಿ, ಜಾಮೂನ್ ಇತ್ಯಾದಿ ತಿಂಡಿಗಳಿಗೆ ಖೋವ ಬಳಸಿದರೆ ಹೆಚ್ಚು ರುಚಿ!

Monday, 2 March 2015

ಮ್ಯಾಂಗೋ ಮಿಲ್ಕ್ ಶೇಕ್ । ಮಾವಿನಹಣ್ಣಿನ ಮಿಲ್ಕ್ ಶೇಕ್


ಬೇಸಿಗೆ ಕಾಲದಲ್ಲಿ ಮಿಲ್ಕ್ ಶೇಕ್, ಜ್ಯೂಸ್, ಸ್ಮೂಥಿ, ಪಾನಕ, ಲಸ್ಸಿ ಇತ್ಯಾದಿ ತಂಪು ಪಾನೀಯಗಳು ಕುಡಿಯಲು ಹಿತವಾಗಿರುತ್ತವೆ. ನಾನು ಸಾಮಾನ್ಯವಾಗಿ ಆಯಾ ಸೀಜನ್ ನಲ್ಲಿ ಸಿಗುವ ಫ್ರೆಶ್ ಹಣ್ಣುಗಳನ್ನು ಬಳಸಿ ಜ್ಯೂಸ್, ಸ್ಮೂಥಿ ಇತ್ಯಾದಿಗಳನ್ನು ಮನೆಯಲ್ಲಿ ತಯಾರಿಸುತ್ತಿರುತ್ತೇನೆ. ಈಗ ಮಾವಿನಹಣ್ಣಿನ ಸೀಜನ್ ನಡೆಯುತ್ತಿರುವುದರಿಂದ ತಾಜಾ ಮಾವಿನಹಣ್ಣಿನ ಮಿಲ್ಕ್ ಷೇಕ್, ಜ್ಯೂಸ್, ಇತ್ಯಾದಿಗಳನ್ನು ತಯಾರಿಸುವುದು ಸಾಮಾನ್ಯವಾಗಿದೆ. 
ಮಾವಿನ ಪ್ರಿಯರಿಗೆ ಮಾವಿನ ಹಣ್ಣಿನಿಂದ ಏನನ್ನೇ ತಯಾರಿಸಿದರೂ ಅದು ರುಚಿಯಾಗೇ ಇರುತ್ತದೆ. ನನ್ನ ಮಗಳಂತೂ ಮಾವಿನ ಮಿಲ್ಕ್ ಶೇಕ್ ತಯಾರಿಸುವುದನ್ನೇ ಕಾಯುತ್ತಿರುತ್ತಾಳೆ. ಸುಲಭದಲ್ಲಿ ತಯಾರಿಸಬಹುದಾದ ಈ ಮಿಲ್ಕ್ ಶೇಕ್ ಬಹಳ ರುಚಿ ಕೂಡ!


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಜ್ಯೂಸ್ ತಣ್ಣಗಾಗಲು ಬೇಕಾಗುವ ಸಮಯ: 1 ಘಂಟೆ
ಸರ್ವಿಂಗ್ಸ್: 3 
ಡಿಫಿಕಲ್ಟಿ ಲೆವೆಲ್: ಸುಲಭ 

ಬೇಕಾಗುವ ಸಾಮಗ್ರಿಗಳು:
 • 2 ಮೀಡಿಯಮ್ ಸೈಜಿನ ಮಾವಿನಹಣ್ಣು 
 • ಸಕ್ಕರೆ - 5 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
 • ಹಾಲು - 300 ml (ಟಿಪ್ಸ್ ನೋಡಿ)
 • ನೀರು - 100 ml 
 • ಉಪ್ಪು - ಒಂದು ದೊಡ್ಡ ಚಿಟಿಕೆ 

ತಯಾರಿಸುವ ವಿಧಾನ:
 • ಮಾವಿನಹಣ್ಣಿನ ಸಿಪ್ಪೆ ತೆಗೆದು ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ. 
 • ಹೆಚ್ಚಿದ ಮಾವಿನ ಹೋಳುಗಳನ್ನು ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಚಿಟಿಕೆ ಉಪ್ಪು ಸೇರಿಸಿ ಮಿಕ್ಸಿ ಅಥವಾ ಬ್ಲೆಂಡರ್ ನಲ್ಲಿ ನುಣ್ಣಗೆ ತಿರುವಿ. ರುಬ್ಬುವಾಗ ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ. 
 • ಮಿಶ್ರಣ ನುಣ್ಣಗಾದ ನಂತರ ಅದಕ್ಕೆ ಹಾಲು, ಸ್ವಲ್ಪ ನೀರು ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವಂತೆ ಮಿಕ್ಸಿಯಲ್ಲಿ ಒಂದು ನಿಮಿಷ ತಿರುವಿ. 
 • ಮಿಲ್ಕ್ ಶೇಕ್ ನ ರುಚಿ ನೋಡಿ, ಏನಾದರೂ ಬೇಕಿದ್ದರೆ ಸೇರಿಸಿ. 
 • ತಯಾರಾದ ಮಿಲ್ಕ್ ಶೇಕ್ ನ್ನು ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಕುಡಿಯಿರಿ.


ಟಿಪ್ಸ್:
 • ಹಾಲು ಸ್ವಲ್ಪ ಕಡಿಮೆ ಬಳಸುವುದಾದರೆ ಇಲ್ಲಿ ಹೇಳಿದ್ದಕಿಂತ ಹೆಚ್ಚು ನೀರು ಬಳಸಿ. 
 • ಮಿಲ್ಕ್ ಶೇಕ್ ನ್ನು ತಕ್ಷಣವೇ ಸರ್ವ್ ಮಾಡಬೇಕೆಂದಾದರೆ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿದ ಹಾಲನ್ನು ಬಳಸಿ ತಯಾರಿಸಿ.
Related Posts Plugin for WordPress, Blogger...