Here are some recipes which I came across through the net, books, so on and few are my own experiments..

Wednesday, 29 June 2011

ಚುಮು ಚುಮು ಚಳಿಗೆ ಬೆಚ್ಚಗಿನ ಪಲಾವ್ / Easy Pulav for Breezy Winter

Click here for English version.

ಹೆಚ್ಚು ಕಷ್ಟವಿಲ್ಲದೆ ತಯಾರಿಸಬಹುದಾದ ಪಲಾವ್ ಇದು. ನನ್ನ ಅಮ್ಮ ಪಲಾವ್ ಮಾಡುವಾಗ ಯಾವಾಗಲೂ ಗರಂ ಮಸಾಲಾ ಪೌಡರ್ ಬಳಸುವುದೇ ಇಲ್ಲ; ಅದರ ಬದಲು ಅವರೇ ತಯಾರಿಸುವ ಒಂದು ಬಗೆಯ ಮಸಾಲಾ ಪುಡಿಯನ್ನು ಬಳಸುತ್ತಾರೆ. ಅನ್ನ ಮೊದಲೇ ಮಾಡಿಕೊಂಡು ತರಕಾರಿಗಳನ್ನು ಕುಕ್ಕರ್ ನಲ್ಲಿ ಬೇಯಿಸಿಕೊಂಡು, ಒಗ್ಗರಣೆ ಹಾಕಿ ಎಲ್ಲವನ್ನೂ ಮಿಶ್ರ ಮಾಡಿಬಿಟ್ಟರೆ ಆಯಿತು, ಪಲಾವ್ ರೆಡಿ! ಆದರೆ ಬರೀ ಸಾರಿನ ಪುಡಿಯನ್ನು ಬಳಸಿಯೂ ಪಲಾವ್ ತಯಾರಿಸಬಹುದು. ಇಲ್ಲಿದೆ ಅದರ ವಿಧಾನ..


ತಯಾರಿಸಲು ಬೇಕಾಗುವ ಸಮಯ: 30 - 35 ನಿಮಿಷಗಳು 
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ


ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಒಂದೂವರೆ ಕಪ್
ನೀರು - 3 ಕಪ್ 
6 - 7 ಬೀನ್ಸ್ 
ಕ್ಯಾರೆಟ್ - 1 
ಹಸಿರು ಬಟಾಣಿ (ಬೇಕಿದ್ದರೆ) - ಸ್ವಲ್ಪ
ಲವಂಗ 3 - 4 
ಚಕ್ಕೆ - 2 ಚೂರು 
ಜೀರಿಗೆ - 1 / 2 ಚಮಚ 
ಸೋಂಪು (ಬೇಕಿದ್ದರೆ) - 1 / 4 ಚಮಚ 
ಸಾಸಿವೆ - 1 / 4 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ 
ಈರುಳ್ಳಿ - ದೊಡ್ಡದಾದರೆ ಅರ್ಧ ಸಾಕು 
ಸಾರಿನ ಪುಡಿ - ಒಂದೂವರೆ ಚಮಚ (ಖಾರಕ್ಕೆ ತಕ್ಕಂತೆ)
ಹಸಿಮೆಣಸು - 1 
ಸಕ್ಕರೆ - 1 / 4 ಚಮಚ 
ಉಪ್ಪು - ರುಚಿಗೆ ತಕ್ಕಷ್ಟು
ನಿಂಬೆರಸ - ಸ್ವಲ್ಪ 
ಎಣ್ಣೆ - 3 ಟೀ ಚಮಚ 
ತುಪ್ಪ - ಒಂದೂವರೆ ಚಮಚ 


ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರಿನಂತೆ ಒಟ್ಟೂ 3 ಲೋಟ ನೀರು ಹಾಕಿ ಉದುರಾಗಿ ಅನ್ನ ಮಾಡಿಕೊಳ್ಳಿ. ಇಲ್ಲಿ ಹೇಳಿದಷ್ಟೇ ನೀರು ಹಾಕಬೇಕೆಂದಿಲ್ಲ, ಮಾಮೂಲಿ ಮಾಡುವ ಅನ್ನಕ್ಕಿಂತ ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡರೆ ಆಯಿತು.
ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಕ್ಯಾರೆಟ್ ಮತ್ತು ಬೀನ್ಸ್ ಉದ್ದುದ್ದಕ್ಕೆ ಹೆಚ್ಚಿಕೊಂಡು, ಅದರೊಡನೆ ಹಸಿರು ಬಟಾಣಿಯನ್ನೂ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ ಒಂದು ವಿಸಿಲ್ ಬರುವತನಕ ಬೇಯಿಸಿ. ಸ್ವಲ್ಪ ತಣ್ಣಗಾದ ನಂತರ ನೀರನ್ನೆಲ್ಲ ಬಸಿದು ತೆಗೆದುಬಿಡಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದನಂತರ ಚಕ್ಕೆ, ಲವಂಗ, ಸಾಸಿವೆ ಹಾಕಿ ಸ್ವಲ್ಪ ಹುರಿದುಕೊಂಡು ಜೀರಿಗೆ, ಸೋಂಪು ಹಾಕಿ ಕೈಯಾಡಿಸಿ ನಂತರ ಹಸಿಮೆಣಸು, ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಹಸಿ ವಾಸನೆ ಹೋಗುವಷ್ಟು ಹುರಿದು, ಹೆಚ್ಚಿದ ಈರುಳ್ಳಿ ಸೇರಿಸಿ 3 - 4 ನಿಮಿಷ ಹುರಿಯಿರಿ.
ನಂತರ ಇದಕ್ಕೆ ಸಾರಿನ ಪುಡಿ, ಬೇಯಿಸಿದ ತರಕಾರಿಗಳನ್ನು ಸೇರಿಸಿ ಒಂದೆರಡು ನಿಮಿಷ ಬೇಯಿಸಿ. ನಂತರ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಕಾಲು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಕೊನೆಯಲ್ಲಿ ತುಪ್ಪ ಸೇರಿಸಿ ಬಾಣಲಿಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ನಾಲ್ಕೈದು ನಿಮಿಷ ಇಟ್ಟರೆ ಪಲಾವ್ ಸಿದ್ಧ.    
ಪಲಾವ್ ಬಿಸಿಯಿರುವಾಗಲೇ ರಾಯಿತಾದ ಜೊತೆ ಸವಿಯಿರಿ.
 

Tuesday, 28 June 2011

ಸಿಹಿ ಚಪಾತಿ / Sweet chapathi

Click here for English version.

ನಮ್ಮವರ ನೆಚ್ಚಿನ ಬೆಳಗಿನ ತಿಂಡಿ ಇದು. ಮೆತ್ತಗೆ ಪದರು ಪದರಾಗಿ ಸ್ವಲ್ಪ ಸಿಹಿಯಾದ ಈ ಚಪಾತಿ ತಿನ್ನಲು ಬಹಳ ರುಚಿ. ಆದರೆ ಚಪಾತಿ ಲಟ್ಟಿಸಲು ಹೆಚ್ಚು ಸಮಯ ಬೇಕಾಗುವುದರಿಂದ ಹಿಂದಿನ ದಿನವೇ ಬೇಕಿದ್ದರೂ ತಯಾರಿಸಿ ಇಟ್ಟುಕೊಳ್ಳಬಹುದು. ಮದ್ಯಾಹ್ನದ ಲಂಚ್ ಬಾಕ್ಸ್ ಗೆ ಮತ್ತು ಪ್ರವಾಸ, ಪಿಕ್ನಿಕ್ ಗಳಿಗೆ ಹೋಗುವಾಗ ಒಯ್ಯಲೂ ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: ಒಂದರಿಂದ ಒಂದೂಕಾಲು ಘಂಟೆ
ಈ ಅಳತೆಯಿಂದ ಸುಮಾರು 7 ಚಪಾತಿಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:
ನೀರು - ಒಂದೂವರೆ ಲೋಟ 
ಉಪ್ಪು - ರುಚಿಗೆ ತಕ್ಕಷ್ಟು 
ಸಕ್ಕರೆ - ಸ್ವಲ್ಪ 
ತೆಳ್ಳಗಿನ ತುಪ್ಪ - ಸ್ವಲ್ಪ 
ಎಣ್ಣೆ - 2 ಚಮಚ 
ಗೋಧಿಹಿಟ್ಟು  - ನೀರಿಗೆ ಹಿಡಿಸುವಷ್ಟು (ಸುಮಾರು 4 ಲೋಟದಷ್ಟು)

ಮಾಡುವ ವಿಧಾನ:
ನೀರನ್ನು ಸ್ವಲ್ಪ ಬಿಸಿಮಾಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪು, ಹಿಡಿಸುವಷ್ಟು ಗೋಧಿಹಿಟ್ಟು ಸೇರಿಸಿ ಮೆತ್ತಗೆ ಕಲಸಿಕೊಳ್ಳಿ. ಕೊನೆಯಲ್ಲಿ 2 ಚಮಚ ಎಣ್ಣೆ ಸೇರಿಸಿ ನಾದಿ, ಒಂದು ಪಾತ್ರೆಯಲ್ಲಿ ಮುಚ್ಚಿಟ್ಟು 10 ನಿಮಿಷ ನೆನೆಯಲು ಬಿಡಿ.
ಕಲಸಿಕೊಂಡ ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ರೊಟ್ಟಿಯಂತೆ ಲಟ್ಟಿಸಿ, ಅದರಮೇಲೆ ತುಪ್ಪ ಸವರಿ. ನಂತರ ಇಡೀ ರೊಟ್ಟಿಯಮೇಲೆ ಸಕ್ಕರೆ ಉದುರಿಸಿ, ರೊಟ್ಟಿಯನ್ನು ಒಂದು ಮಡಿಕೆ ಮಡಿಚಿ.
ಅದರಮೇಲೆ ಪುನಃ ತುಪ್ಪ ಸವರಿ, ಸಕ್ಕರೆ ಉದುರಿಸಿಕೊಂಡು ಇನ್ನೊಂದು ಮಡಿಕೆ ಮಡಿಚಿ ರೊಟ್ಟಿಯನ್ನು ತ್ರಿಕೋನಾಕಾರಕ್ಕೆ ತನ್ನಿ.
ಇದನ್ನು ಒಣ ಹಿಟ್ಟಿನಲ್ಲಿ ಹೊರಳಿಸಿಕೊಂಡು ಪುನಃ ತೆಳ್ಳಗೆ ಲಟ್ಟಿಸಿಕೊಂಡು ಕಾದ ಕಾವಲಿಯಮೇಲೆ ಎರಡೂ ಕಡೆ ಬೇಯಿಸಿ ತೆಗೆಯಿರಿ. ನಿಮ್ಮಿಷ್ಟದ ಯಾವುದೇ ಸೈಡ್ ಡಿಷ್ ನೊಡನೆ ತಿನ್ನಿ.

Monday, 27 June 2011

ಪುದೀನಾ ರೈಸ್ / Pudina (Mint leaves) Rice

Click here for English version.

ನಾವು ಬೆಂಗಳೂರಿನಲ್ಲಿದ್ದಾಗ ಮನೆಯ ಬಾಲ್ಕನಿಯಲ್ಲಿ ಪಾಟ್ ನಲ್ಲಿ ಒಂದಿಷ್ಟು ಗಿಡಗಳನ್ನು ಬೆಳೆಸಿದ್ದೆವು. ನನಗೆ ಯಾರೋ ಹೇಳಿದ್ದರು, ಪುದೀನಾ ಗಿಡ ಪಾಟ್ ನಲ್ಲಿ ಹಾಕಿದರೂ ಚೆನ್ನಾಗಿ ಆಗುತ್ತದೆಂದು. ನಾನು ಬೆಳೆಸಿದ ಪುದೀನಾ ಗಿಡಗಳು ಇನ್ನೂ ಚಿಕ್ಕವಿರುವಾಗಲೇ ಅವನ್ನೆಲ್ಲ ಬಿಟ್ಟು ದೂರದ ಆಸ್ಟ್ರೇಲಿಯಾಗೆ ಬಂದದ್ದಾಯಿತು.. 
ಪುದೀನಾ ಎಲೆಗಳು ಫ್ರಿಜ್ ನಲ್ಲಿ ಇಟ್ಟರೂ ಹೇಗೋ ಬಹಳ ಬೇಗ ಕೊಳೆತುಹೋಗುತ್ತವೆ. ನಾನು ಪುದೀನಾ ಎಲೆಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಮಿಕ್ಸಿಯಲ್ಲಿ ಕಡಿಮೆ ನೀರು ಸೇರಿಸಿ ನುಣ್ಣಗೆ ರುಬ್ಬಿ, ಒಂದು ಗ್ಲಾಸ್ ಬಾಟಲಿಯಲ್ಲಿ ತುಂಬಿಸಿ ಫ್ರಿಜ್ ನಲ್ಲಿ ಇಟ್ಟುಕೊಂಡು ಚಟ್ನಿ, ಚಾಟ್ಸ್, ಪುದೀನಾ ರೈಸ್ - ಎಲ್ಲಕ್ಕೂ ಅದನ್ನೇ ಬಳಸುತ್ತೇನೆ. ಒಮ್ಮೆ ಈ ಪೇಸ್ಟ್ ತಯಾರಿಸಿಕೊಂಡರೆ ಸುಮಾರು ಒಂದೂವರೆ ತಿಂಗಳವರೆಗೂ ಇಟ್ಟುಕೊಳ್ಳಬಹುದು. ಹಿಂದಿನ ಸಲ ಪುದೀನಾ ಸೊಪ್ಪನ್ನು ತಂದಾಗ ಮತ್ತೆ ನೆನಪಾಯಿತು; ಇಲ್ಲೂ ಪಾಟ್ ನಲ್ಲಿ ಹಾಕಬಹುದೆಂದು. ಆದರೆ ನೆಟ್ಟ ಪುದೀನಾ ಗಿಡಗಳನ್ನೆಲ್ಲ ದಿನವೂ ಬರುವ ಪಾರಿವಾಳಗಳು ಹಾಳುಮಾಡಿಬಿಟ್ಟವು:(  ಈ ಸಲ ಸೊಪ್ಪನ್ನು ತಂದಾಗ ಇನ್ನೊಮ್ಮೆ ನೆಟ್ಟು, ಹೇಗಾದರೂ ಅವರಿಂದ ಕಾಯ್ದುಕೊಳ್ಳಬೇಕೆಂದಿದೆ, ಏನಾಗುವುದೋ ನೋಡಬೇಕು.. ಆ ಪಾರಿವಾಳಗಳಿಗೆ ನಮ್ಮೊಡನೆ ಎಷ್ಟು ಅಡ್ಜಸ್ಟ್ ಆಗಿಬಿಟ್ಟಿದೆಯೆಂದರೆ, ಒಂದು ದಿನ ಬೆಳಿಗ್ಗೆ ಏಳಲು ತಡವಾದರೆ ಸಾಕು, ಅಕ್ಕಿ ಹಾಕಿಲ್ಲವೆಂದು ಬಾಲ್ಕನಿಯಲ್ಲೆಲ್ಲ ಜೋರು ಗಲಾಟೆ! ಒಮ್ಮೊಮ್ಮೆ ಅವು ಬಾಲ್ಕನಿಯ ಬಾಗಿಲನ್ನು ಕುಟ್ಟಿ ನಮ್ಮನ್ನು ಕರೆಯಲು ನೋಡುತ್ತವೆ. ಅಕ್ಕಿ ಹಾಕಿಬಿಟ್ಟರೆ ಆಯಿತು, ಒಂದು ನಿಮಿಷದೊಳಗೆ ತಿಂದು ಮುಗಿಸಿ ಎಲ್ಲರೂ ಮಾಯ!


ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
 
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಒಂದೂವರೆ ಕಪ್
ಪುದೀನಾ ಸೊಪ್ಪು - 1 / 2 ಕಟ್ಟು 
ಹಸಿಮೆಣಸು - 3 
ಶುಂಠಿ - 1 ಇಂಚು 
ಬೆಳ್ಳುಳ್ಳಿ 3 - 4 ಎಸಳು 
ತೆಂಗಿನತುರಿ - 1 / 4 ಕಪ್
ಏಲಕ್ಕಿ - 2 
ಲವಂಗ - 4 
ಚಕ್ಕೆ ನಾಲ್ಕೈದು ಚಿಕ್ಕ ಚೂರುಗಳು 
ಈರುಳ್ಳಿ - ದೊಡ್ಡದಾದರೆ ಅರ್ಧ ಸಾಕು 
ಆಲೂಗಡ್ಡೆ - ಅರ್ಧ 
ನೀರು (ಅನ್ನ ಬೇಯಿಸಲು) - 3 ಲೋಟ
ಎಣ್ಣೆ - 3 ಟೇಬಲ್ ಚಮಚ 
ಅರ್ಧ ನಿಂಬೆಹಣ್ಣು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚಿಕ್ಕ ಹೋಳುಗಳಾಗಿ ಹೆಚ್ಚಿಕೊಂಡು, ಕಪ್ಪಾಗದಂತೆ ನೀರಿನಲ್ಲಿ ಮುಳುಗಿಸಿಟ್ಟಿರಿ.
ಈರುಳ್ಳಿಯನ್ನು ತೆಳ್ಳಗೆ ಹೆಚ್ಚಿಕೊಳ್ಳಿ. ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.


ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಸೇರಿಸಿ ಸ್ವಲ್ಪ ಹುರಿದುಕೊಂಡು, ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವತನಕ ಹುರಿಯಿರಿ. 
ನಂತರ ಇದಕ್ಕೆ ರುಬ್ಬಿಕೊಂಡ ಪೇಸ್ಟ್ ಮತ್ತು ಹೆಚ್ಚಿದ ಆಲೂಗಡ್ಡೆ ಸೇರಿಸಿ ಹಸಿ ವಾಸನೆ ಹೋಗುವಂತೆ 3 - 4 ನಿಮಿಷ ಹುರಿಯಿರಿ. ಇದಕ್ಕೆ ತೊಳೆದ ಅಕ್ಕಿ ಸೇರಿಸಿ ಒಂದೆರಡು ನಿಮಿಷ ಹುರಿದು, ಬೇಯಿಸಲು ಬೇಕಾದಷ್ಟು ನೀರು ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಸೇರಿಸಿ, ಕುಕ್ಕರ್ ನಲ್ಲಿ ಹಾಕಿ ಬೇಯಿಸಿ. 
ಪುದೀನಾ ರೈಸ್ ನ್ನು ನಿಮ್ಮಿಷ್ಟದ ರಾಯಿತಾ ಅಥವಾ ಬರೀ ಮೊಸರಿನೊಡನೆಯೂ ತಿನ್ನಬಹುದು.

ಟಿಪ್ಸ್:
  • ಪುದೀನಾ ಸೊಪ್ಪನ್ನು ರುಬ್ಬುವಾಗ ಹೆಚ್ಚು ನೀರನ್ನು ಸೇರಿಸಿದ್ದರೆ, ಅನ್ನ ಬೇಯಿಸುವಾಗ ಸ್ವಲ್ಪ ಕಡಿಮೆ ನೀರು ಸೇರಿಸಿ. ನೀರು ಹೆಚ್ಚಾದರೆ ಅನ್ನ ಮುದ್ದೆಯಾಗಿಬಿಡುತ್ತದೆ. 
  • ಅಲಂಕಾರಕ್ಕೆ ಬೇಕಿದ್ದರೆ ಗೇರುಬೀಜದ ಚೂರುಗಳನ್ನು ಎಣ್ಣೆಯಲ್ಲಿ ಹುರಿದು ಪುದೀನಾ ರೈಸ್ ಗೆ ಸೇರಿಸಿ.

Friday, 24 June 2011

ಜಹಾಂಗೀರ್ / Jangir

Click here for English version.

ಭಾರತದಲ್ಲಿ ಹಬ್ಬ- ಹರಿದಿನಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿ ಇದು. ರುಚಿಯಲ್ಲಿ ಜಿಲೇಬಿಗೆ ಬಹಳ ಹತ್ತಿರ. ನಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಅಗಮನವಾಗಿದ್ದರಿಂದ ಏನಾದರೂ ಸಿಹಿ ಮಾಡೋಣವೆಂದು ಯೋಚಿಸಿದಾಗ ಜಹಾಂಗೀರ್ ನೆನಪಾಯಿತು. ಇದು ನನ್ನ ಮೊದಲ ಪ್ರಯೋಗ. ಆಕಾರ ಪಕ್ಕಾ ಜಹಾಂಗೀರ್ ನಂತೆ ಬರದಿದ್ದರೂ ತಿನ್ನಲೇನೂ ತೊಂದರೆಯಿಲ್ಲ!


ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಬೇಳೆ ನೆನೆಸಲು ಬೇಕಾಗುವ ಸಮಯ: 6 ಘಂಟೆ
ಹುದುಗುಬರಲು ಬೇಕಾಗುವ ಸಮಯ: 1 ಘಂಟೆ
ಈ ಅಳತೆಯಿಂದ ಸುಮಾರು 20 ಜಹಾಂಗೀರ್ ತಯಾರಿಸಬಹುದು  

ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ - 1 ಕಪ್ 
ಸಕ್ಕರೆ - 2 ಕಪ್ 
ನೀರು - 1 ಕಪ್ 
ಅರ್ಧ ನಿಂಬೆಹಣ್ಣು 
ಕರಿಯಲು ಎಣ್ಣೆ 
ಫುಡ್ ಕಲರ್(ಬೇಕಿದ್ದರೆ) - ಚಿಟಿಕೆ 
ಝಿಪ್ ಲಾಕ್ ಕವರ್ - 1

ಮಾಡುವ ವಿಧಾನ:
ಉದ್ದಿನಬೇಳೆಯನ್ನು ನೀರಿನಲ್ಲಿ ಐದಾರು ಘಂಟೆ ನೆನೆಸಿಕೊಂಡು, ಒಂದು ಘಂಟೆಕಾಲ ಫ್ರಿಜ್ ನಲ್ಲಿಡಿ. ಇದನ್ನು ಬಿಸಿಯಾಗದಂತೆ ರುಬ್ಬಬೇಕಿರುವುದರಿಂದ ಫ್ರಿಜ್ ನಲ್ಲಿಟ್ಟುಕೊಂಡರೆ ರುಬ್ಬುವಾಗ ಹಿಟ್ಟು ಬಿಸಿಯಾಗುವುದು ಕಡಿಮೆಯಾಗುತ್ತದೆ.
2 ಲೋಟ ಸಕ್ಕರೆಗೆ 1 ಲೋಟದಷ್ಟು ನೀರು ಸೇರಿಸಿ ಕಾಯಲಿಡಿ. ಸಕ್ಕರೆಯೆಲ್ಲ ಕರಗಿ, ಒಂದೆಳೆ ಪಾಕ ಬಂದಾಗ ಇದಕ್ಕೆ ನಿಂಬೆರಸ ಸೇರಿಸಿ ಕೆಳಗಿಳಿಸಿ ಒಂದು ಪ್ಲೇಟ್ ಮುಚ್ಚಿಡಿ.
ಫ್ರಿಜ್ ನಲ್ಲಿಟ್ಟ ಉದ್ದಿನಬೇಳೆಯನ್ನು ಹೊರತೆಗೆದು ನೀರನ್ನೆಲ್ಲ ಹೊರಚೆಲ್ಲಿ, ಬೇಳೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಬೆಣ್ಣೆಯಷ್ಟು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೋಡಿಕೊಂಡು ಅದಷ್ಟೂ ಕಡಿಮೆ ನೀರು ಸೇರಿಸಿ. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಿರಲಿ. ಹಿಟ್ಟು ಬಿಸಿಯಾಗದಂತೆ ಆಗಾಗ್ಗೆ ಮಿಕ್ಸಿ ಆಫ್ ಮಾಡಿಕೊಳ್ಳುತ್ತಿರಿ. 
ರುಬ್ಬಿದ ಹಿಟ್ಟಿಗೆ ಫುಡ್ ಕಲರ್ ಬೇಕಿದ್ದರೆ ಸೇರಿಸಿ ಕಲಸಿಟ್ಟಿರಿ. ನಾನು ಇಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಕಲಸಿಕೊಂಡಿದ್ದೇನೆ.
ಝಿಪ್ ಲಾಕ್ ಕವರ್ ಗೆ ಕಾಯಿಸಿದ ಮೊಳೆಯಿಂದ ಬೇಕಾದ ಗಾತ್ರಕ್ಕೆ ಒಂದು ಗೋಲಾಕಾರದ ತೂತು ಮಾಡಿಕೊಳ್ಳಿ. ನಂತರ ಕವರ್ ನೊಳಗೆ ಹಿಡಿಸುವಷ್ಟು ಹಿಟ್ಟನ್ನು ತುಂಬಿಕೊಂಡು ಹಿಟ್ಟು ಮೇಲಿನಿಂದ ಹೊರಬರದಂತೆ ಲಾಕ್ ಮಾಡಿಕೊಳ್ಳಿ. ಕವರ್ ಪ್ರೆಸ್ ಮಾಡುತ್ತ ಒಂದು ಪ್ಲೇಟ್ ನ ಮೇಲೆ ಹಿಟ್ಟನ್ನು ಜಹಾಂಗೀರ್ ನಂತೆ ಹಾಕಿ ಸರಿಯಾಗಿ ಬರುವುದೋ ಎಂದು ಪರೀಕ್ಷಿಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಹದವಾಗಿ ಕಾಯಿಸಿಕೊಂಡು ಕವರ್ ನಲ್ಲಿ ತುಂಬಿಕೊಂಡ ಹಿಟ್ಟನ್ನು ಜಹಾಂಗೀರ್ ಆಕಾರಕ್ಕೆ ಬಿಡುತ್ತ ಹೋಗಿ. ಗರಿಗರಿಯಾಗಿ ಕರಿದ ಜಹಾಂಗೀರ್ ನ್ನು ತೆಗೆದು ಸಕ್ಕರೆ ಪಾಕದೊಳಗೆ ಹಾಕಿ ಎರಡು ನಿಮಿಷ ನೆನೆಯಲು ಬಿಡಿ. 


ನಂತರ ಇದನ್ನು ಸಕ್ಕರೆ ಪಾಕದಿಂದ ಹೊರತೆಗೆದು ಒಂದು ಪ್ಲೇಟ್ ಮೇಲೆ ಹರವಿ. ಹೀಗೆ ಮಾಡುವುದರಿಂದ ಹೆಚ್ಚಿನ ಸಕ್ಕರೆ ಪಾಕವೆಲ್ಲ ಪ್ಲೇಟ್ ಮೇಲೆ ಬಸಿದುಹೋಗುತ್ತದೆ. ಸ್ವಲ್ಪ ಸಮಯದ ನಂತರ ಇವನ್ನು ತೆಗೆದು ಸ್ಟೋರೇಜ್ ಕಂಟೇನರ್ ಗೆ ವರ್ಗಾಯಿಸಿ.

ಜಹಾಂಗೀರ್ ನ್ನು ತಯಾರಿಸಿದ ತಕ್ಷಣವೇ ತಿಂದರೆ ಸ್ವಲ್ಪ ಉದ್ದಿನ ವಾಸನೆ ಇರುತ್ತದೆ. ಒಂದೆರಡು ಘಂಟೆಗಳ ಕಾಲ ಹಾಗೇ ಇಟ್ಟು, ನಂತರ ತಿಂದರೆ ರುಚಿ ಹೆಚ್ಚು.

Thursday, 23 June 2011

ತೆಂಗಿನತುರಿ ಚಟ್ನಿ / Coconut chutney

Click here for English version.

ಚಟ್ನಿ ಎಂದರೇ ಸಿಂಪಲ್, ಅದರಲ್ಲೂ ಈ ಚಟ್ನಿ ತಯಾರಿಸುವುದು ಇನ್ನೂ ಸಿಂಪಲ್. ಆದರೆ ಗಮನಿಸಲೇಬೇಕಾದ ಮುಖ್ಯ ಅಂಶವೆಂದರೆ ಇದಕ್ಕೆ ಬರೀ ಖಾರವಿರುವ ಹಸಿಮೆಣಸನ್ನು ಬಳಸಿದರೆ ಚೆನ್ನಾಗಿರುವುದಿಲ್ಲ. ಖಾರ ಕಡಿಮೆ ಇರುವ ಮೆಣಸನ್ನೂ ಜೊತೆಗೆ ಸೇರಿಸಿದರೆ ಹಸಿಮೆಣಸಿನ ವಿಶೇಷ ಪರಿಮಳ ಚಟ್ನಿಯ ರುಚಿಯನ್ನು ಹೆಚ್ಚಿಸುತ್ತದೆ.
 

ತಯಾರಿಸಲು ಬೇಕಾಗುವ ಸಮಯ: 10 ನಿಮಿಷ
ಸರ್ವಿಂಗ್ಸ್: 2

ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ - ಮುಕ್ಕಾಲು ಕಪ್
ಉದ್ದಿನಬೇಳೆ - 1 ಚಮಚ
ಎಳ್ಳು - ಕಾಲು ಅಥವಾ ಅರ್ಧ ಚಮಚ
ಸಾಸಿವೆ - ಕಾಲು ಚಮಚ 
ಎಣ್ಣೆ - ಒಂದೂವರೆ ಚಮಚ 
ಹಸಿಮೆಣಸು (ಖಾರಕ್ಕೆ ತಕ್ಕಂತೆ) - 3
ಮಾಡುವ ವಿಧಾನ:
ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಎಳ್ಳು ಹಾಕಿ ಸಾಸಿವೆ ಚಟಗುಟ್ಟಿದ ನಂತರ ಅದಕ್ಕೆ ಹೆಚ್ಚಿದ ಹಸಿಮೆಣಸು ಸೇರಿಸಿ 2 - 3 ನಿಮಿಷ ಹುರಿದು ಉರಿಯಿಂದ ಇಳಿಸಿ.
ನಂತರ ಇದನ್ನು ತೆಂಗಿನತುರಿಯೊಡನೆ ಸೇರಿಸಿ ಮಿಕ್ಸಿಯಲ್ಲಿ ತರಿಯಾಗಿ ರುಬ್ಬಿಕೊಳ್ಳಿ.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಯಲ್ಲಿ ಸಾಸಿವೆಯ ಒಗ್ಗರಣೆ ಕೊಡಿ.

Saturday, 18 June 2011

ಭೇಲ್ ಪುರಿ / Bhel Puri

Click here for English version.

ಭೇಲ್ ಪುರಿಯನ್ನು ಮಾಡಿದಾಗಲೆಲ್ಲ ನನಗೆ ಬೆಂಗಳೂರಿನ ನೆನಪಾಗುತ್ತದೆ. ಬೆಂಗಳೂರಿನಲ್ಲಿ ನಾವಿದ್ದ ಮನೆಯ ಹತ್ತಿರ ಒಂದು ಚಾಟ್ ಶಾಪ್ ನಲ್ಲಿ ಭೇಲ್ ಪುರಿಯನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದರು. ನಾವಂತೂ ಅವರ ಖಾಯಂ ಕಸ್ಟಮರ್ಸ್! ಎಷ್ಟೇ ರಷ್ ಇದ್ದರೂ ಆ ಅಂಗಡಿಯವನು ನಮಗೆ ಮಾತ್ರ ಬೇಗ ಬೇಗ ಪಾರ್ಸೆಲ್ ರೆಡಿ ಮಾಡಿ ಕೊಟ್ಟುಬಿಡುತ್ತಿದ್ದ. ಅವರ ಅಂಗಡಿಯ ಭೇಲ್ ಪುರಿಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ.ನಾನು ಮಾಡುವ ಭೇಲ್ ಪುರಿ ಅವರ ಅಂಗಡಿಯ ಭೇಲ್ ಪುರಿಯಷ್ಟು ಚೆನ್ನಾಗಿಲ್ಲದಿದ್ದರೂ, ತಕ್ಕ ಮಟ್ಟಿಗೆ ಚೆನ್ನಾಗಿಯೇ ಬರುತ್ತದೆ :)


ತಯಾರಿಸಲು ಬೇಕಾಗುವ ಸಮಯ: 15 - 20 ನಿಮಿಷ
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
 
ಬೇಕಾಗುವ ಸಾಮಗ್ರಿಗಳು:
ಕಡಲೆಪುರಿ - 1 ಬಟ್ಟಲು
ಟೊಮೇಟೊ - ದೊಡ್ಡ ಹಣ್ಣಾದರೆ ಅರ್ಧ ಸಾಕು
ಮಧ್ಯಮಗಾತ್ರದ ಈರುಳ್ಳಿ - 1 
ಕ್ಯಾರೆಟ್ - ಅರ್ಧ 
ಕೊತ್ತಂಬರಿ ಸೊಪ್ಪು - 1 / 4 ಕಟ್ಟು
ಮೆಣಸಿನಪುಡಿ - ಅರ್ಧ ಚಮಚ (ಖಾರಕ್ಕೆ ತಕ್ಕಂತೆ)
ಚಾಟ್ ಮಸಾಲಾ - ಮುಕ್ಕಾಲು ಚಮಚ (ರುಚಿಗೆ ತಕ್ಕಂತೆ)
ಉಪ್ಪು - ರುಚಿಗೆ ತಕ್ಕಷ್ಟು 
ಹುರಿದ/ಕರಿದ ನೆಲಗಡಲೆ - ಕಾಲು ಕಪ್ 
ಸೇವ್ - ಸ್ವಲ್ಪ
ಪಾಪ್ರಿ - 2 ಅಥವಾ 3 

ಮಾಡುವ ವಿಧಾನ:
ಕಡ್ಲೆಪುರಿಯನ್ನು ಬಿಸಿಲಿನಲ್ಲಿಟ್ಟು ಇಲ್ಲವೇ ಒಂದು ಬಾಣಲೆಯಲ್ಲಿ ಹಾಕಿ ಆಗಾಗ್ಗೆ ಕೈಯಾಡಿಸುತ್ತ ಬಿಸಿಮಾಡಿ ಗರಿಗರಿಯಾಗಿ ಮಾಡಿಕೊಳ್ಳಿ. 
ಟೊಮೇಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು ಇಷ್ಟನ್ನೂ ಸಣ್ಣದಾಗಿ ಹೆಚ್ಚಿಕೊಳ್ಳಿ. ಕ್ಯಾರೆಟ್ ನ್ನು ತುರಿದುಕೊಳ್ಳಿ. ಈ ಸಾಮಗ್ರಿಗಳನ್ನು ಆಗಿಂದಾಗ್ಗೆ ಫ್ರೆಶ್ ಆಗಿ ಹೆಚ್ಚಿಕೊಂಡು ಬಳಸಿದರೆ ಚೆನ್ನಾಗಿರುತ್ತದೆ.
ಒಂದು ಪಾತ್ರೆಯಲ್ಲಿ ಕಡ್ಲೆಪುರಿಯನ್ನು ಹಾಕಿಕೊಂಡು ಕೈಯಿಂದ ಪ್ರೆಸ್ ಮಾಡಿ, ಅರೆಬರೆ ಪುಡಿಮಾಡಿಕೊಳ್ಳಿ.
ಇದಕ್ಕೆ ಉಪ್ಪು, ಮೆಣಸಿನಪುಡಿ, ಚಾಟ್ ಮಸಾಲಾ, ಕ್ಯಾರೆಟ್ ತುರಿ, ಹೆಚ್ಚಿದ ಟೊಮೇಟೊ, ಈರುಳ್ಳಿ, ಕೊತ್ತಂಬರಿಸೊಪ್ಪು ಇಷ್ಟನ್ನೂ ಸೇರಿಸಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಒಮ್ಮೆ ರುಚಿ ನೋಡಿಕೊಂಡು ಉಪ್ಪು, ಖಾರ, ಹುಳಿ ಏನಾದರೂ ಕಡಿಮೆ ಇದ್ದರೆ ಸೇರಿಸಿಕೊಳ್ಳಿ.
ನಂತರ ಇದಕ್ಕೆ ನೆಲಗಡಲೆ, ಚೂರು ಮಾಡಿದ ಪಾಪ್ರಿ ಸೇರಿಸಿ ಕಲಸಿ, ಪ್ಲೇಟ್ ನಲ್ಲಿ ಹಾಕಿ, ಮೇಲಿನಿಂದ ಸೇವ್ ಉದುರಿಸಿದರೆ ರುಚಿಯಾದ ಭೇಲ್ ಪುರಿ ತಿನ್ನಲು ಸಿದ್ಧ.


ಪಾಪ್ರಿ / Papri

Click here for English version.

ಪಾಪ್ರಿ ಎನ್ನುವುದು ಚಾಟ್ ತಿಂಡಿಗಳಲ್ಲಿ ಬಳಸುವ ಒಂದು ಬಗೆಯ ಚಪ್ಪಟೆ ಪೂರಿ. ಪಾಪ್ರಿ ಚಾಟ್ ನ ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ಭೇಲ್ ಪುರಿ ತಯಾರಿಸುವಾಗ ಈ ಪಾಪ್ರಿಯನ್ನು ಚಿಕ್ಕ ಚೂರುಗಳಾಗಿ ಮುರಿದು ಸೇರಿಸಿದರೆ ತಿನ್ನಲು ಬಹಳ ಚೆನ್ನಾಗಿರುತ್ತದೆ. ಕೆಲವರು ಈ ಪಾಪ್ರಿಯ ಬದಲು ಗೋಲ್ ಗಪ್ಪಾ ವನ್ನೇ ಚೂರುಮಾಡಿ ಸೇರಿಸುತ್ತಾರೆ. ಇದು ವಾಹ್ ಚೆಫ್ ರಿಂದ ಕಲಿತ ರೆಸಿಪಿ.


ತಯಾರಿಸಲು ಬೇಕಾಗುವ ಸಮಯ: 1 ಘಂಟೆ

ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - 1 ಕಪ್ 
ಅಜವಾನ - 1 ಟೇಬಲ್ ಸ್ಪೂನ್ 
ತುಪ್ಪ ಅಥವಾ ಎಣ್ಣೆ - 1 1/2 ಟೇಬಲ್ ಸ್ಪೂನ್ 
ಉಪ್ಪು - ರುಚಿಗೆ ತಕ್ಕಷ್ಟು 
ನೀರು - ಸ್ವಲ್ಪ (ಹಿಟ್ಟನ್ನು ಕಲಸಲು)
ಕರಿಯಲು ಎಣ್ಣೆ 

ಮಾಡುವ ವಿಧಾನ:
ಮೊದಲು ಮೈದಾಹಿಟ್ಟಿಗೆ ಅಜವಾನ, ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಬ್ರೆಡ್ ಪುಡಿಯಂತೆ ಆಗುತ್ತದೆ. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ, ಅದನ್ನು ಎರಡು ಮಡಿಕೆ (ತ್ರಿಭುಜಾಕಾರಕ್ಕೆ) ಮಡಿಚಿ, ಪುನಃ ಚಪಾತಿಯಂತೆ ಲಟ್ಟಿಸಿ. ಇದೇ ರೀತಿ ನಾಲ್ಕೈದು ಬಾರಿ ಮಾಡಿದರೆ ಪಾಪ್ರಿ ಚೆನ್ನಾಗಿ ಪದರುಗಳಾಗಿ ಬರುತ್ತದೆ. ನಂತರ ಇದನ್ನು ಚಪಾತಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಿಕೊಂಡು ಬೇಕಾದ ಆಕಾರಕ್ಕೆ ಕತ್ತರಿಸಿ.
ಇಲ್ಲದಿದ್ದರೆ ಕಲಸಿಕೊಂಡ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿಕೊಂಡು, ಚಿಕ್ಕ ಪೂರಿಯಂತೆ ಲಟ್ಟಿಸಿ. ಅದರಮೇಲೆ ಎಣ್ಣೆ ಸವರಿ, ಸ್ವಲ್ಪ ಒಣ ಹಿಟ್ಟನ್ನು ಉದುರಿಸಿ, ಮಡಿಕೆ ಮಾಡಿ ತ್ರಿಕೋನದಂತೆ ಮಾಡಿ. ಹಿಟ್ಟು ಮುಗಿಯುವವರೆಗೂ ಈ ಸ್ಟೆಪ್ ಗಳನ್ನು ಮುಂದುವರೆಸಿ.
ಲಟ್ಟಿಸಿದ ಪಾಪ್ರಿಗಳನ್ನು ಉಬ್ಬದಂತೆ ಮಾಡಲು ಒಂದು ಫೋರ್ಕ್ ನಿಂದ ಚುಚ್ಚಿಕೊಳ್ಳಿ. ನಂತರ ಇವನ್ನು ಕಡಿಮೆ ಉರಿಯಲ್ಲಿ ಹೊಂಬಣ್ಣ ಬರುವತನಕ ಕರಿದು ತೆಗೆದು ಟಿಶ್ಯೂ ಪೇಪರ್ ಮೇಲೆ ಹರವಿ. ತಣ್ಣಗಾದ ನಂತರ ಎತ್ತಿಟ್ಟುಕೊಂಡು ಬೇಕಾದಾಗ ಬಳಸಿ.
 

Thursday, 16 June 2011

ಕಡಲೆಬೇಳೆ ಸ್ನ್ಯಾಕ್ಸ್ / Chana Dal Snacks

Click here for English version.

ಆಸ್ಟ್ರೇಲಿಯಾದಲ್ಲಿ ಈಗ ಸಖತ್ ಚಳಿಗಾಲದ ವಾತಾವರಣ. ಹಿಮ ಬೀಳದಿದ್ದರೂ ಸುಮಾರು 3 ರಿಂದ 10 - 12 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನ, ಜೊತೆಗೆ ಈ ವಾರವೆಲ್ಲ ಜಿಟಿ ಜಿಟಿ ಮಳೆಗಾಲ. ಹೀಗಾಗಿ ಹೊರಗಡೆ ಎಲ್ಲೋ ಹೋಗದೆ ಬರೀ ಮನೆಯಲ್ಲೇ ಕಾಲ ಕಳೆಯುವುದಾಗಿದೆ. ನೆನ್ನೆ ಸಾಯಂಕಾಲದ ಟೀಯೊಡನೆ ಏನಾದರೂ ತಿಂಡಿ ಮಾಡೋಣವೆಂದುಕೊಂಡಾಗ ಅಕ್ಕ ಯಾವಾಗಲಾದರೂ ತಯಾರಿಸುತ್ತಿದ್ದ ಕಡಲೆಬೇಳೆ ಸ್ನ್ಯಾಕ್ಸ್ ನೆನಪಾಯಿತು. ಬಹಳ ಸುಲಭದಲ್ಲಿ ತಯಾರಿಸಬಹುದಾದ ಮತ್ತು ನಾಲಿಗೆಗೆ ಹಿತ ನೀಡುವ ತಿಂಡಿ ಇದು. ಯಾವಾಗಲೂ ಸ್ವೀಟ್ ಕಾರ್ನ್ ನಿಂದ ಸ್ನ್ಯಾಕ್ಸ್ ತಯಾರಿಸುವವರಿಗೆ ಇದು ಒಂದು ಛೇಂಜ್! 


ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - ಒಂದೂವರೆ ಲೋಟ
ಹೆಚ್ಚಿದ ಹಸಿಮೆಣಸು - 2
ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಟೇಬಲ್ ಚಮಚ 
ಸಾಸಿವೆ - 1 / 2 ಚಮಚ 
ಇಂಗು - ಸ್ವಲ್ಪ 
ಎಣ್ಣೆ - 1 ಚಮಚ
ನಿಂಬೆರಸ, ಉಪ್ಪು - ರುಚಿಗೆ ತಕ್ಕಷ್ಟು 

ಮಾಡುವ ವಿಧಾನ:
ಕಡಲೇಬೇಳೆಯನ್ನು ಒಂದು ಘಂಟೆ ಮೊದಲೇ ನೀರಿನಲ್ಲಿ ನೆನೆಸಿಟ್ಟುಕೊಂಡಿರಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಕಾದನಂತರ ಅದಕ್ಕೆ ಸಾಸಿವೆ ಹಾಕಿ ಚಟಗುಡಿಸಿ, ಹಸಿಮೆಣಸು ಹಾಕಿ 1 ನಿಮಿಷ ಬಾಡಿಸಿ. ನೆನೆಸಿಟ್ಟ ಕಡ್ಲೆಬೇಳೆಯಿಂದ ನೀರನ್ನೆಲ್ಲ ಹೊರಚೆಲ್ಲಿ, ಕಡಲೇಬೇಳೆಯನ್ನು ಒಗ್ಗರಣೆಗೆ ಸೇರಿಸಿ. ಇದಕ್ಕೆ ಮೇಲಿನಿಂದ ಸ್ವಲ್ಪ ಪುಡಿ ಇಂಗನ್ನು ಉದುರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಲು ಲೋಟದಷ್ಟು ನೀರನ್ನು ಸೇರಿಸಿ ಕೈಯಾಡಿಸಿ, ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ (ಮಧ್ಯೆ ಒಂದೆರಡು ಬಾರಿ ಮಿಶ್ರಣವನ್ನು ಕೈಯಾಡಿಸುತ್ತಿರಿ). ಅಷ್ಟರಲ್ಲಿ ನೀರಿನಂಶವೆಲ್ಲ ಆರಿ, ಕಡಲೆಬೇಳೆ ಮುಕ್ಕಾಲುಭಾಗ ಬೆಂದಿರುತ್ತದೆ. ಇದನ್ನು ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಕೈಯಾಡಿಸಿ, ಬಿಸಿಯಿರುವಾಗಲೇ ಸರ್ವ್ ಮಾಡಿ.

 ಟಿಪ್ಸ್:
  • ಇದಕ್ಕೆ ಕಡಲೆಬೇಳೆ ತುಂಬಾ ಮೆತ್ತಗೆ ಬೆಂದರೆ ಚೆನ್ನಾಗಿರುವುದಿಲ್ಲ. ಹೀಗಾಗಿ ಕಡಿಮೆ ನೀರು ಹಾಕಿ ಬೇಯಿಸಿ.

Thursday, 9 June 2011

ಬಾಕರ್ ವಡಿ / Bakarwadi

Click here for English version.

ಮಹಾರಾಷ್ಟ್ರದ ಸುಪ್ರಸಿದ್ಧ ಸ್ನ್ಯಾಕ್ಸ್ ಐಟಂ ಈ ಬಾಕರ್ ವಡಿ. ಸಿಹಿ ಮತ್ತು ಖಾರ ಮಿಶ್ರಿತವಾದ ಗರಿಗರಿಯಾದ ಬಾಕರ್ ವಡಿ ಯಾರಿಗಾದರೂ ಇಷ್ಟವಾಗುವಂಥ ಕುರುಕಲು ತಿಂಡಿ. ಬಾಕರ್ ವಡಿಯನ್ನು ತಯಾರಿಸಲು ನಾನು ಈವರೆಗೆ ಅನೇಕ ಪ್ರಯೋಗಗಳನ್ನು ಮಾಡಿ, ಇತ್ತೀಚಿನ ದಿನಗಳಲ್ಲಿ ಯಶಸ್ಸನ್ನು ಕಂಡಿದ್ದೇನೆ :)


ತಯಾರಿಸಲು ಬೇಕಾಗುವ ಸಮಯ: ಒಂದೂವರೆಯಿಂದ ಎರಡು ಘಂಟೆ
 
ಬೇಕಾಗುವ ಸಾಮಗ್ರಿಗಳು:
1 ) ಕಣಕ ತಯಾರಿಸಲು:
     ಮೈದಾಹಿಟ್ಟು  - 1 ಕಪ್ 
     ಕಡಲೆಹಿಟ್ಟು - 2 ಟೇಬಲ್ ಸ್ಪೂನ್ 
     ಉಪ್ಪು - ರುಚಿಗೆ ತಕ್ಕಷ್ಟು 
     ಮೆಣಸಿನಪುಡಿ - 1 / 2 ಚಮಚ 
     ನೀರು - 1 / 4 ಲೋಟಕ್ಕಿಂತ ಸ್ವಲ್ಪ ಜಾಸ್ತಿ 
     ಎಣ್ಣೆ - 1 ಚಮಚ 

2 ) ಹೂರಣ ತಯಾರಿಸಲು: 
     ಒಣಕೊಬ್ಬರಿ ತುರಿ - 3 ಟೇಬಲ್ ಸ್ಪೂನ್ 
     ಗಸಗಸೆ - 1 ಟೇಬಲ್ ಸ್ಪೂನ್
     ಕೆಂಪುಮೆಣಸಿನ ಪುಡಿ -  2 ಚಮಚ (ಖಾರಕ್ಕೆ ತಕ್ಕಷ್ಟು)
     ಸಕ್ಕರೆ - 2 ಚಮಚ 
     ಉಪ್ಪು - ರುಚಿಗೆ ತಕ್ಕಷ್ಟು 
     ಆಮ್ ಚೂರ್ ಪುಡಿ - 1 / 2 ಚಮಚ 
     ಲವಂಗ - 1 
     1 / 2 ಚಮಚದಷ್ಟು ಕೊತ್ತಂಬರಿ - ಜೀರಿಗೆ ಪುಡಿ  
     ಸೋಂಪು - 1 ಚಮಚ 

3 ) ಇತರ ಸಾಮಗ್ರಿಗಳು:
     ಚಿಕ್ಕ ಗೋಲಿಗಾತ್ರದಷ್ಟು ಹುಣಸೆಹಣ್ಣು (ಸ್ವಲ್ಪ ನೀರು ಸೇರಿಸಿ ನೆನೆಸಿಡಿ) 
     ಕರಿಯಲು ಎಣ್ಣೆ
     1 ಚಮಚದಷ್ಟು ಮೈದಾಹಿಟ್ಟು, ಸ್ವಲ್ಪ ನೀರು

ಮಾಡುವ ವಿಧಾನ:
ಮೊದಲು ಕಣಕ ತಯಾರಿಸಿಕೊಂಡು ಸ್ವಲ್ಪ ಸಮಯ ನೆನೆಯಲು ಬಿಡಬೇಕು. ಮೈದಾಹಿಟ್ಟು, ಕಡಲೆಹಿಟ್ಟು, ಉಪ್ಪು, ಮೆಣಸಿನಪುಡಿ ಇಷ್ಟನ್ನೂ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ.
ನಂತರ ಈ ಮಿಶ್ರಣಕ್ಕೆ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಕಲಸಿ ಮುದ್ದೆಯಂತೆ ಮಾಡಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿರಲಿ. ನೀರಿನಂಶ ಕಡಿಮೆ ಇದ್ದಷ್ಟೂ ಒಳ್ಳೆಯದು.
ಈ ಹಿಟ್ಟನ್ನು ಒಮ್ಮೆ ಚೆನ್ನಾಗಿ ನಾದಿ, ಹಿಟ್ಟಿನ ಮುದ್ದೆಗೆ ಸ್ವಲ್ಪ ಎಣ್ಣೆ ಸವರಿ ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ 20 ನಿಮಿಷ ನೆನೆಯಲು ಬಿಡಿ. 


ಹೂರಣಕ್ಕೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಒಟ್ಟಿಗೆ ಸೇರಿಸಿ ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ಒಮ್ಮೆ ರುಚಿ ನೋಡಿಕೊಂಡು ಏನಾದರೂ ಬೇಕಿದ್ದರೆ ಸೇರಿಸಿಕೊಳ್ಳಿ.


ಕಲಸಿಟ್ಟ ಹಿಟ್ಟಿನಿಂದ ಚಿಕ್ಕ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಅದಷ್ಟೂ ತೆಳ್ಳಗೆ ರೊಟ್ಟಿಯಂತೆ ಲಟ್ಟಿಸಿ. ಲಟ್ಟಿಸುವಾಗ ಒಣಹಿಟ್ಟು ಬೇಕಿದ್ದರೆ ಸ್ವಲ್ಪ ಮೈದಾಹಿಟ್ಟು ಸವರಿಕೊಳ್ಳಿ.
ಇದರಮೇಲೆ ಹುಣಸೆಹಣ್ಣಿನ ರಸವನ್ನು ಸವರಿಕೊಂಡು, ಮೇಲಿನಿಂದ ಪುಡಿಮಾಡಿಕೊಂಡ ಹೂರಣವನ್ನು ಉದುರಿಸಿಕೊಂಡು ರೊಟ್ಟಿಯಮೇಲೆ ಒಂದೇ ಸಮನಾಗಿ ಹರಡಿ, ಮಿಶ್ರಣ ಚೆನ್ನಾಗಿ ಸೆಟ್ ಆಗುವಂತೆ ಕೈಬೆರಳಿನಿಂದ ಸ್ವಲ್ಪ ಪ್ರೆಸ್ ಮಾಡಿ. ಹೂರಣವನ್ನು ತೀರಾ ಅಂಚಿನವರೆಗೆ ಹಾಕಲು ಹೋಗಬೇಡಿ. 


ರೊಟ್ಟಿಯ ಅಂಚುಗಳಿಗೆ ಪುನಃ ಹುಣಸೆ ರಸವನ್ನು ಸವರಿಕೊಂಡು, ರೊಟ್ಟಿಯನ್ನು ಕಣಕದ ಮಿಶ್ರಣ ಒಳಭಾಗಕ್ಕೆ ಬರುವಂತೆ ನಾಜೂಕಾಗಿ ಸುರುಳಿ ಸುತ್ತಿ. ಹೀಗೆ ಸುತ್ತುವಾಗ ಅದಷ್ಟೂ ಬಿಗಿಯಾಗಿ ಸುತ್ತಬೇಕು; ಇಲ್ಲದಿದ್ದರೆ ಕರಿಯುವಾಗ ಕಣಕವೆಲ್ಲ ಹೊರಗೆ ಬಂದುಬಿಡುತ್ತದೆ. 
ರೊಟ್ಟಿಯ ಸುರುಳಿಯನ್ನು ಕೈಯಿಂದ ಪ್ರೆಸ್ ಮಾಡಿ, ಸ್ವಲ್ಪ ಆಚೀಚೆ ಹೊರಳಿಸಿ, ಕಣಕದ ಮಿಶ್ರಣ ಚೆನ್ನಾಗಿ ಹಿಡಿದುಕೊಳ್ಳುವಂತೆ ಮಾಡಿ. ನಂತರ ಚಾಕುವಿನಿಂದ ರೊಟ್ಟಿಯ ಸುರುಳಿಯನ್ನು ನಿಧಾನವಾಗಿ 1 ಸೆಂ.ಮೀ.ನಷ್ಟು ಅಳತೆಯ ಚೂರುಗಳಾಗಿ ಕತ್ತರಿಸಿಕೊಳ್ಳಿ.

ಒಂದು ಚಮಚದಷ್ಟು ಮೈದಾಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಕಲಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆಯನ್ನು ಹದವಾಗಿ ಕಾಯಿಸಿಕೊಂಡು, ಬಾಕರ್ ವಡಿಯ ಕತ್ತರಿಸಿದ ಎರಡೂ ಅಂಚುಗಳನ್ನು ಕಲಸಿಟ್ಟ ಮೈದಾಹಿಟ್ಟಿನಲ್ಲಿ ಒಮ್ಮೆ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ. ಹೀಗೆ ಮಾಡುವುದರಿಂದ ಒಳಗಿನ ಹೂರಣ ಕರಿಯುವಾಗ ಹೊರಬರುವುದನ್ನು ತಪ್ಪಿಸಬಹುದು.
ಜಾಮೂನ್ ಕರಿಯುವಂತೆಯೇ ಇದನ್ನೂ ಸಣ್ಣ ಉರಿಯಲ್ಲಿ ಸುಮಾರು 10 ರಿಂದ 15 ನಿಮಿಷ ಕರಿಯಬೇಕು. ಉರಿ ತುಂಬಾ ಜೋರಾಗಿದ್ದರೆ ಬಾಕರ್ ವಡಿ ಬೇಗ ಕೆಂಪಾಗಿಬಿಡುತ್ತದೆ. ಚೆನ್ನಾಗಿ ಬೆಂದನಂತರ ಉರಿಯಿಂದ ಇಳಿಸುವುದಕ್ಕೆ 3 - 4 ನಿಮಿಷ ಮೊದಲು ಉರಿಯನ್ನು ಸ್ವಲ್ಪ ಹೆಚ್ಚು ಮಾಡಿ ಕರಿದರೆ ಒಳ್ಳೆಯ ಹೊಂಬಣ್ಣ ಬರುತ್ತದೆ.


ಹೊಂಬಣ್ಣಕ್ಕೆ ಕರಿದ ಬಾಕರ್ ವಡಿಯನ್ನು  ಒಂದು ಟಿಶ್ಯೂ ಪೇಪರ್ ಮೇಲೆ ಹರವಿ, ತಣ್ಣಗಾದಮೇಲೆ ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಟೀ ಅಥವಾ ಕಾಫಿಯೊಡನೆ ತಿನ್ನಿ. 
ಬಾಕರ್ ವಡಿ ಎಷ್ಟು ದಿನಗಳವರೆಗೆ ಚೆನ್ನಾಗಿರುವುದೋ ಗೊತ್ತಿಲ್ಲ...ಏಕೆಂದರೆ ನಮ್ಮ ಮನೆಯಲ್ಲಂತೂ ಇದು ಮಾಡಿಟ್ಟ ಎರಡು ದಿನದೊಳಗೇ ಖರ್ಚಾಗಿಬಿಡುತ್ತದೆ!

Tuesday, 7 June 2011

ನಿಂಬೆಹಣ್ಣಿನ ಉಪ್ಪಿನಕಾಯಿ / Lime Pickle

Click here for English version.

ಯಾವಾಗಲೂ ಮಾಡುವ ಉಪ್ಪಿನಕಾಯಿಗಿಂತ ಇದು ಸ್ವಲ್ಪ ಸ್ಪೆಷಲ್. ಸುಲಭದಲ್ಲಿ ತಯಾರಿಸಿ, ತಕ್ಷಣವೇ ಬೇಕಿದ್ದರೂ ಬಳಸಬಹುದು! ನನ್ನ ಚಿಕ್ಕಮ್ಮ ಈ ಉಪ್ಪಿನಕಾಯಿಯನ್ನು ಬಹಳ ಚೆನ್ನಾಗಿ ತಯಾರಿಸುತ್ತಾರೆ. ನಾನು ಹಾಸ್ಟೆಲ್ ನಲ್ಲಿದ್ದಾಗ ಯಾವಾಗಲೂ ಅವರು ತಯಾರಿಸಿದ ಉಪ್ಪಿನಕಾಯಿ ನನ್ನ ಬಳಿ ಇದ್ದೇ ಇರುತ್ತಿತ್ತು. ಮೊಸರನ್ನದೊಡನೆ ಈ ಉಪ್ಪಿನಕಾಯಿಯನ್ನು ಹಾಕಿಕೊಂಡು ತಿಂದರೆ ಅದರ ರುಚಿಯನ್ನು ಯಾರೂ ಮರೆಯಲಾರರು..  


ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
ಮಧ್ಯಮಗಾತ್ರದ ನಿಂಬೆಹಣ್ಣು 4 - 5
ಪುಡಿ ಉಪ್ಪು - ರುಚಿಗೆ ತಕ್ಕಷ್ಟು 
ಮೆಣಸಿನ ಪುಡಿ 5 - 6 ಚಮಚ ಅಥವಾ ಖಾರಕ್ಕೆ ತಕ್ಕಷ್ಟು
ಅರಿಶಿನ - 1 / 2 ಚಮಚ 
ಸಕ್ಕರೆ - 2 ಚಮಚ
ನೀರು - 2 ಲೋಟದಷ್ಟು 
ಸಾಂಬಾರಕ್ಕೆ : ಸಾಸಿವೆ - 2 ಚಮಚ, ಜೀರಿಗೆ - 1 / 2 ಚಮಚ, ಲವಂಗ - 4 , ಇಂಗು - ಸ್ವಲ್ಪ, ಮೆಂತ್ಯ - 1 / 4 ಚಮಚ
ಒಗ್ಗರಣೆಗೆ: ಎಣ್ಣೆ - 6 ಚಮಚ, ಮೆಂತ್ಯ - 1 / 4 ಚಮಚ, ಸಾಸಿವೆ - 1 / 2 ಚಮಚ, ಇಂಗು - ಸ್ವಲ್ಪ, ಅರಿಶಿನ - ಚಿಟಿಕೆ 

ಮಾಡುವ ವಿಧಾನ:
ನಿಂಬೆ ಹಣ್ಣನ್ನು ಬೀಜ ತೆಗೆದು, ಹದವಾದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಉಪ್ಪಿನಕಾಯಿ ಕಹಿಯಾಗದಂತೆ ನಿಂಬೆಹಣ್ಣನ್ನು ಹೆಚ್ಚುವಾಗ ಹೋಳುಗಳಮೇಲೆ ಸ್ವಲ್ಪ ಉಪ್ಪನ್ನು ಮಧ್ಯೆ ಮಧ್ಯೆ ಉದುರಿಸುತ್ತಿರಿ. 


ಎರಡು ಲೋಟದಷ್ಟು ನೀರಿಗೆ ಉಪ್ಪಿನಕಾಯಿಗೆ ಬೇಕಾಗುವಷ್ಟು ಉಪ್ಪನ್ನು (ಅಂದಾಜಿಗೆ ಹಾಕಿಕೊಳ್ಳಿ, ಉಪ್ಪು ಕಡಿಮೆಯಾದರೆ ನಂತರ ಸೇರಿಸಬಹುದು) ಸೇರಿಸಿ ಚೆನ್ನಾಗಿ ಕುದಿಸಿ.
ನೀರು ಇಂಗಿ, ಒಂದು ಲೋಟ ಅಥವಾ ಒಂದೂಕಾಲು ಲೋಟದಷ್ಟಾದಾಗ ಅದಕ್ಕೆ ಹೆಚ್ಚಿಟ್ಟ ನಿಂಬೆ ಹೋಳುಗಳು, 2 ಚಮಚದಷ್ಟು ಸಕ್ಕರೆ ಮತ್ತು ಅರ್ಧ ಚಮಚದಷ್ಟು ಅರಿಶಿನ ಸೇರಿಸಿ ಒಮ್ಮೆ ಕೈಯಾಡಿಸಿ ಉರಿಯಿಂದ ಕೆಳಗಿಳಿಸಿ, ಪಾತ್ರೆಗೆ ಒಂದು ಮುಚ್ಚಳವನ್ನು ಮುಚ್ಚಿ, ಹಾಗೇ ತಣ್ಣಗಾಗಲು ಬಿಡಿ. ಹೀಗೆ ಮಾಡುವುದರಿಂದ ನಿಂಬೆ ಹೋಳುಗಳು ಬೆಂದಂತಾಗಿ, ಮೆತ್ತಗಾಗುತ್ತವೆ. ಇದರಿಂದ ನಿಂಬೆ ಹೋಳುಗಳನ್ನು ಉಪ್ಪಿನೊಂದಿಗೆ ಸೇರಿಸಿ, ಜಾಡಿಯಲ್ಲಿ ವಾರಗಟ್ಟಲೆ ಇಟ್ಟು ಮೆತ್ತಗಾಗುವಂತೆ ಮಾಡುವ ಶ್ರಮ ತಪ್ಪುತ್ತದೆ.
ಮೆಂತ್ಯ ಹೊರತಾಗಿ ಉಳಿದೆಲ್ಲ ಸಾಂಬಾರ ಸಾಮಗ್ರಿಗಳನ್ನು ಒಟ್ಟಿಗೆ ಹುರಿದುಕೊಳ್ಳಿ. ಮೆಂತ್ಯವನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. ಇವನ್ನು ಹುರಿಯುವಾಗ ಎಣ್ಣೆ ಸೇರಿಸುವುದು ಬೇಡ.
ಮೆಣಸಿನಪುಡಿಯನ್ನು 3 - 4 ಹನಿಯಷ್ಟು ಎಣ್ಣೆ ಸೇರಿಸಿ ಖಾರದ ಘಾಟು ವಾಸನೆ ಹೋಗುವಂತೆ ಸ್ವಲ್ಪ ಹುರಿದಿಟ್ಟುಕೊಳ್ಳಿ.
ಉಪ್ಪು ನೀರು, ನಿಂಬೆ ಹಣ್ಣಿನ ಮಿಶ್ರಣ ತಣ್ಣಗಾದನಂತರ ಅದಕ್ಕೆ ಮಸಾಲಾ ಪುಡಿ ಮತ್ತು ಮೆಣಸಿನಪುಡಿ ಸೇರಿಸಿ ಸೌಟಿನಿಂದ ಚೆನ್ನಾಗಿ ಮಿಕ್ಸ್ ಮಾಡಿ. ಈಗ ರುಚಿ ನೋಡಿಕೊಂಡು ಉಪ್ಪು ಅಥವಾ ಖಾರ ಬೇಕಿದ್ದರೆ ಸೇರಿಸಿಕೊಳ್ಳಿ. ಉಪ್ಪಿನಕಾಯಿ ಮಿಶ್ರಣವನ್ನು ಒಂದು ಜಾಡಿಯಲ್ಲಿ ಹಾಕಿಕೊಳ್ಳಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಎಣ್ಣೆ, ಮೆಂತ್ಯ, ಸಾಸಿವೆ, ಇಂಗು, ಅರಿಶಿನ ಸೇರಿಸಿ ಚಟಪಟ ಎಂದನಂತರ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಪೂರ್ತಿ ತಣ್ಣಗಾದನಂತರ ಇದನ್ನು ಉಪ್ಪಿನಕಾಯಿ ಮಿಶ್ರಣದಮೇಲೆ ಸುರುವಿ, ಗಾಳಿಯಾಡದಂತೆ ಮುಚ್ಚಳ ಹಾಕಿಡಿ. ಉಪ್ಪಿನಕಾಯಿಯನ್ನು ಬಳಸುವಾಗ ಸ್ಪೂನ್ ನಿಂದ ಒಮ್ಮೆ ಚೆನ್ನಾಗಿ ಕಲಸಿಕೊಂಡು ಬಳಸಿ.
ಈ ಉಪ್ಪಿನಕಾಯಿಯನ್ನು ತಯಾರಿಸಿದ ದಿನವೇ ಬೇಕಿದ್ದರೂ ಬಳಸಬಹುದು. ಒಂದೆರಡು ದಿನ ಹಾಗೇ ಇಟ್ಟು ಬಳಸಿದರೆ ಇನ್ನೂ ಚೆನ್ನಾಗಿರುತ್ತದೆ.


ಟಿಪ್ಸ್:
  •  ಉಪ್ಪಿನಕಾಯಿಯನ್ನು ತಯಾರಿಸಿಟ್ಟು ತುಂಬ ದಿನಗಳ ನಂತರ ಅದನ್ನು ಪುನಃ ತಾಜಾ ಉಪ್ಪಿನಕಾಯಿಯಂತೆ ಮಾಡಲು ನನ್ನ ಅಮ್ಮ ನೀಡಿದ ಸಲಹೆ : 2 - 3 ಚಮಚ ಎಣ್ಣೆ ಕಾಯಿಸಿ ಮೆಂತ್ಯ, ಸಾಸಿವೆ, ಇಂಗು, ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಮಾಡಿ, ತಣ್ಣಗಾದ ನಂತರ ಉಪ್ಪಿನಕಾಯಿಗೆ ಸೇರಿಸಿದರೆ ಹೊಸ ಉಪ್ಪಿನಕಾಯಿಯಂತೆಯೇ ಎನ್ನಿಸುತ್ತದೆ.
  •  ಉಪ್ಪಿನಕಾಯಿಯ ದೊಡ್ಡ ಜಾಡಿಯಿಂದ ಸ್ವಲ್ಪ ಸ್ವಲ್ಪವೇ ಉಪ್ಪಿನಕಾಯಿಯನ್ನು ಒಂದು ಚಿಕ್ಕ ಬಾಟಲ್ ನಲ್ಲಿ ತೆಗೆದಿಟ್ಟುಕೊಂಡು ಬಳಸಿ. ಇದರಿಂದ ಉಪ್ಪಿನಕಾಯಿಯನ್ನು ದಿನವೂ ಗಾಳಿಗೆ ತೆರೆದಿಡುವುದು ತಪ್ಪುತ್ತದೆ. ಜೊತೆಗೆ ಬೇಗ ಹಾಳಾಗುವುದನ್ನೂ ತಪ್ಪಿಸಬಹುದು.

Saturday, 4 June 2011

ಮಸಾಲಾ ಸೇವ್ / Masala Sev

Click here for English version.

ಹೆಚ್ಚಿನ ಚಾಟ್ ತಿನಿಸುಗಳ ತಯಾರಿಕೆಯಲ್ಲಿ ಸೇವ್ ಅಥವಾ ಸೇವು ಪ್ರಮುಖ ಸಾಮಗ್ರಿ. ಸೇವ್ ಸೇರಿಸದಿದ್ದರೆ ಚಾಟ್ ಐಟಂ ಎಷ್ಟೇ ಚೆನ್ನಾಗಿದ್ದರೂ ಏನೋ ಒಂಥರಾ ಇನ್ ಕಂಪ್ಲೀಟ್ ಅನ್ನಿಸಿಬಿಡುತ್ತದೆ. ಸೇವ್ ಜೊತೆಗೆ ಕರಿದ ನೆಲಗಡಲೆ ಹಾಗೂ ಕರಿದ ಕರಿಬೇವನ್ನು ಸೇರಿಸಿ ಮಿಕ್ಸ್ ಮಾಡಿಟ್ಟರೆ ಅದು ಟೀ ಅಥವಾ ಕಾಫಿಯೊಡನೆ ತಿನ್ನಲು ಚೆನ್ನಾಗಿರುತ್ತದೆ. ನಾನು ಸಾಮಾನ್ಯವಾಗಿ ಚಾಟ್ ತಿಂಡಿಗಳನ್ನು ತಯಾರಿಸಲು ಮನೆಯಲ್ಲಿ ಮಾಡಿದ ಸೇವ್ ನ್ನೇ ಉಪಯೋಗಿಸುತ್ತೇನೆ. ಈ ಸೇವ್ ತಯಾರಿಸುವ ವಿಧಾನ ನನ್ನ ಅಮ್ಮನ ರೆಸಿಪಿ ಕಲೆಕ್ಷನ್ ನಿಂದ..  


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು 

ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು - 4 ಕಪ್ ನಷ್ಟು 
ಕಾಳುಮೆಣಸು - 1 ಚಮಚ 
ಜೀರಿಗೆ - 1 / 2 ಚಮಚ 
ಅಜವಾನ - 1 / 2 ಚಮಚ
ಹಸಿಮೆಣಸು - 3 
ಶುಂಠಿ - 1 ಇಂಚು
ಇಂಗು - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು  
ನೀರು - ಸ್ವಲ್ಪ
ಕರಿಯಲು ಎಣ್ಣೆ  

ಮಾಡುವ ವಿಧಾನ:
ಮಸಾಲೆ ಸಾಮಗ್ರಿಗಳೆಲ್ಲವನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಸ್ವಲ್ಪ ನೀರು ಸೇರಿಸಿ ಸೋಸಿಕೊಳ್ಳಿ. 
ಅರ್ಧ ಸೌಟಿನಷ್ಟು ಎಣ್ಣೆಯನ್ನು ಚೆನ್ನಾಗಿ ಬಿಸಿಮಾಡಿಕೊಂಡು, ಕಡಲೆಹಿಟ್ಟಿನ ಮೇಲೆ ಸುರಿದು, ಸೌಟಿನಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಕಡಲೆಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಸೋಸಿಕೊಂಡ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದರಲ್ಲಿ ನಾವು ಕಡಲೆಹಿಟ್ಟನ್ನು ಬಳಸುವುದರಿಂದ ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಜಿಗುಟಾಗಿರುತ್ತದೆ. 
ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಕಲಸಿದ ಹಿಟ್ಟನ್ನು ಎಣ್ಣೆ ಸವರಿದ ಸೇವ್ ಮಣೆಯೊಳಗೆ ತುಂಬಿಕೊಂಡು, ಕಾದ ಎಣ್ಣೆಯಲ್ಲಿ ಹಿಟ್ಟನ್ನು ಪ್ರೆಸ್ ಮಾಡಿ ಸುತ್ತಲೂ ಬರುವಂತೆ ಹಾಕಿ. ತೆಳ್ಳಗಿರುವುದರಿಂದ 2 - 3 ನಿಮಿಷಗಳಲ್ಲಿ ಸೇವ್ ಬೆಂದುಬಿಡುತ್ತದೆ. ಎರಡೂ ಮೇಲ್ಮೈಗಳನ್ನು ಬೇಯಿಸಿ ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹರವಿ ತಣ್ಣಗಾಗಲು ಬಿಡಿ. ಹಿಟ್ಟು ಮುಗಿಯುವವರೆಗೂ ಈ ಸ್ಟೆಪ್ ಗಳನ್ನು ಅನುಸರಿಸಿ. 
ತಣ್ಣಗಾದ ನಂತರ ಕರಿದ ಸೇವ್ ನ್ನು ಒಮ್ಮೆ ಕೈಯಿಂದ ಪ್ರೆಸ್ ಮಾಡಿ, ಚಿಕ್ಕ ಚೂರುಗಳಾಗಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಇದನ್ನು ಟೀ ಯೊಡನೆ ತಿನ್ನಲು ಅಥವಾ ಚಾಟ್ ತಿಂಡಿಗಳ ತಯಾರಿಕೆಯಲ್ಲಿ ಬಳಸಬಹುದು.
Related Posts Plugin for WordPress, Blogger...