Here are some recipes which I came across through the net, books, so on and few are my own experiments..

Friday, 29 July 2011

ಪೀನಟ್ ಬಟರ್ / Peanut Butter

Click here for English version.

ಅಂತೂ ಇಂತೂ ಈ ವರ್ಷದ ಚಳಿಗಾಲ ಮುಗಿಯಲು ಬಂತೆನಿಸುತ್ತದೆ. ಇದರ ಜೊತೆಗೆ ಕಳೆದ ಎರಡು ವಾರಗಳಿಂದ ಬರೀ ಮಳೆ ಸುರಿಯುತ್ತಿತ್ತು.. ಮಳೆ ಬರುತ್ತಿದ್ದುದರಿಂದ ಪಕ್ಷಿಗಳಿಗೆ ಆಹಾರ ಹುಡುಕುವುದು ಕಷ್ಟವಾಗಿದ್ದಿರಬೇಕು.. ಇಡೀ ದಿನ ನಮ್ಮ ಬಾಲ್ಕನಿಯಲ್ಲೇ ಅವುಗಳ ಠಿಕಾಣಿ! ಪಾರಿವಾಳ, ಗಿಳಿಗಳು ಎಲ್ಲರ ಗಲಾಟೆಯಲ್ಲಿ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ! ಈಗ ಆಕಾಶ ಪುನಃ ತಿಳಿಯಾಗುತ್ತಿದೆ. ಪಕ್ಷಿಗಳೂ ಅವರ ಕೆಲಸಕ್ಕೆ ಮರಳಿವೆ.. ನಾನೂ ನನ್ನ ಎಂದಿನ ದಿನಚರಿಗೆ ವಾಪಸ್!
ಇಂದಿನ ಅಡಿಗೆ ವಿಧಾನ ನನ್ನ ಅಕ್ಕನಿಂದ ಕಲಿತದ್ದು.. ಪೀನಟ್ ಬಟರ್ ಎಂದರೆ ಶೇಂಗಾ ಅಥವಾ ನೆಲಗಡಲೆ ಬಳಸಿ ತಯಾರಿಸುವ ಒಂದು ಬಗೆಯ ಜ್ಯಾಮ್ ಅಥವಾ ಬ್ರೆಡ್ ಸ್ಪ್ರೆಡ್. ತಯಾರಿಸುವ ವಿಧಾನವೂ ತುಂಬ ಸಿಂಪಲ್, ಇದು ಬ್ರೆಡ್ ಅಥವಾ ಪರೋಟಾ ಜೊತೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.


ಬೇಕಾಗುವ ಸಾಮಗ್ರಿಗಳು:
ನೆಲಗಡಲೆ - 1 1 / 2 ಕಪ್
ಸಕ್ಕರೆ 3 - 4 ಚಮಚ (ಸಿಹಿಗೆ ತಕ್ಕಷ್ಟು)

ಮಾಡುವ ವಿಧಾನ:
ನೆಲಗಡಲೆಯನ್ನು ಚೆನ್ನಾಗಿ ಹುರಿದುಕೊಂಡು, ಅದರ ತೆಳ್ಳಗಿನ ಸಿಪ್ಪೆಯನ್ನು ತೆಗೆದುಬಿಡಿ.
ಸಿಪ್ಪೆ ತೆಗೆದ ನೆಲಗಡಲೆ ಮತ್ತು ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗಾಗುವವರೆಗೆ ತಿರುವಿ. ಇದಕ್ಕೆ ನೀರನ್ನು ಸೇರಿಸಬೇಕಿಲ್ಲ.


ಇದನ್ನು ಗಾಳಿಯಾಡದಂತೆ ಗಾಜಿನ ಅಥವಾ ಪ್ಲಾಸ್ಟಿಕ್ ಕಂಟೇನರ್ ನಲ್ಲಿ ತುಂಬಿಟ್ಟುಕೊಂಡು 1 - 2 ತಿಂಗಳು ಬಳಸಬಹುದು.
ಕ್ರಂಚಿ ಪೀನಟ್ ಬಟರ್ ಬೇಕೆಂದರೆ 2 - 3 ಚಮಚದಷ್ಟು ನೆಲಗಡಲೆಯನ್ನು ಮಿಕ್ಸಿಯಲ್ಲಿ ತರಿಯಾಗಿ ರುಬ್ಬಿಕೊಂಡು ಪೀನಟ್ ಬಟರ್ ಗೆ ಸೇರಿಸಿ. 


ಬ್ಲಾಗ್ ಫ್ರೆಂಡ್ ರಾಧಾರವರು ಹೇಳುವಂತೆ, ಪೀನಟ್ ಬಟರ್ ಮಿಶ್ರಣವನ್ನು ಮಿಕ್ಸಿಯಲ್ಲಿ ತಿರುವಲು ಕಷ್ಟವಾಗುತ್ತಿದ್ದರೆ ಸ್ವಲ್ಪ ಎಣ್ಣೆ ಸೇರಿಸಿ ತಿರುವಿದರೆ ಚೆನ್ನಾಗಿ ಬರುತ್ತದೆ.. ತುಂಬ ಧನ್ಯವಾದಗಳು ರಾಧಾರವರೆ :) 

Monday, 25 July 2011

ಹವ್ಯಕ ಸ್ಟೈಲ್ ಸಾಂಬಾರ್ (ಹುಳಿ) / Havyaka Style Sambar

Click here for English version.


ಹವ್ಯಕ ಸ್ಟೈಲ್ ಸಾಂಬಾರ್  ಎಂದರೆ ಮಸಾಲೆ ಸಾಮಗ್ರಿಗಳನ್ನು ತೆಂಗಿನತುರಿಯೊಡನೆ ರುಬ್ಬಿ ಹಾಕಿ ಮಾಡಲಾಗುತ್ತದೆ. ಇದಕ್ಕೆ 'ಹುಳಿ' ಎಂತಲೂ ಕರೆಯುತ್ತಾರೆ. ನಿಮ್ಮಿಷ್ಟದ ಯಾವುದೇ ತರಕಾರಿಗಳನ್ನು ಈ ಸಾಂಬಾರ್ ತಯಾರಿಸಲು ಬಳಸಬಹುದು. 


ಸರ್ವಿಂಗ್: 3 - 4 ಜನರಿಗೆ ಆಗುತ್ತದೆ
ತಯಾರಿಸುವ ಸಮಯ: 40 ನಿಮಿಷಗಳು
 
ಬೇಕಾಗುವ ಸಾಮಗ್ರಿಗಳು:
ಅರ್ಧ ಕ್ಯಾರೆಟ್ 
7 - 8 ಬೀನ್ಸ್ 
ಅರ್ಧ ಲೋಟ ತೊಗರಿಬೇಳೆ
ಕಾಲು ಲೋಟ ಹೆಸರುಬೇಳೆ 
ಒಂದೂವರೆ ಚಮಚ ಸಾಂಬಾರ್ ಪುಡಿ 
ಕರಿಬೇವು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ - ಕಾಲು ಚಮಚ
ಹುಣಸೆಹಣ್ಣು - ಸ್ವಲ್ಪ 
ಸಕ್ಕರೆ ಅಥವಾ ಬೆಲ್ಲ - ಕಾಲು ಚಮಚ 
ತೆಂಗಿನತುರಿ - ಕಾಲು ಲೋಟದಷ್ಟು

ಮಾಡುವ ವಿಧಾನ:
ತರಕಾರಿಗಳನ್ನು ಹೆಚ್ಚಿಕೊಂಡು ತೊಳೆದ ಬೇಳೆಯೊಡನೆ ನೀರು, 3 - 4 ಹನಿ ಎಣ್ಣೆ, ಅರಿಶಿನ ಸೇರಿಸಿ ಕುಕ್ಕರ್ ನಲ್ಲಿ ಮೂರು ವಿಸಿಲ್ ಆಗುವತನಕ ಬೇಯಿಸಿ.
ತೆಂಗಿನತುರಿ, ಸಾರಿನ ಪುಡಿ, ಹುಣಸೆಹಣ್ಣನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಬೆಂದ ತರಕಾರಿ ಮತ್ತು ಬೇಳೆಯನ್ನು ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೆ ರುಬ್ಬಿದ ಮಿಶ್ರಣ, ಉಪ್ಪು, ಸಕ್ಕರೆ / ಬೆಲ್ಲ ಸೇರಿಸಿ ಕುದಿಯಲಿಡಿ. 
ಮಿಶ್ರಣ ಕುದಿಯತೊಡಗಿದಾಗ ಅದಕ್ಕೆ ಕರಿಬೇವಿನ ಎಸಳುಗಳನ್ನು ಸೇರಿಸಿ, 4 - 5 ನಿಮಿಷ ಕುದಿಸಿ ಇಳಿಸಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪನ್ನೂ ಸೇರಿಸಬಹುದು.
ರುಚಿಕಟ್ಟಾದ ಸಾಂಬಾರನ್ನು ಅನ್ನದೊಡನೆ ಸರ್ವ್ ಮಾಡಿ.


ಆಲೂಗಡ್ಡೆ, ಬೀಟ್ ರೂಟ್ ಇತ್ಯಾದಿ ತರಕಾರಿಗಳ ಸಾಂಬಾರ್ ಮಾಡಿದರೆ ಕುದಿಸುವಾಗ ಹೆಚ್ಚಿದ ಈರುಳ್ಳಿ ಸೇರಿಸಿದರೆ ಚೆನ್ನಾಗಿರುತ್ತದೆ.

Friday, 22 July 2011

ಸಾರಿನ ಪುಡಿ / Sambar (Curry) Powder

Click here for English version.

ಸಾರಿನ ಪುಡಿಯನ್ನು ಮನೆಯಲ್ಲೇ ತಯಾರಿಸುವುದು ಎಷ್ಟು ಸುಲಭ ಗೊತ್ತಾ ನಿಮಗೆ? ಇದನ್ನು ತಯಾರಿಸಲು ಬೇಕಾಗುವ ಸಮಯವೂ ಕಡಿಮೆ, ಅಲ್ಲದೆ ಒಮ್ಮೆ ಇದನ್ನು ತಯಾರಿಸಿಕೊಂಡುಬಿಟ್ಟರೆ ತಿಂಗಳುಗಟ್ಟಲೆ ಇಟ್ಟುಕೊಂಡು ಬಳಸಬಹುದು. ಅಂಗಡಿಯಿಂದ ಕೊಂಡು ತರುವ ಸಾಂಬಾರ್ ಪುಡಿಗಿಂತ ನೀವೇ ಮನೆಯಲ್ಲಿ ಸಿದ್ಧಪಡಿಸಿದ ಸಾಂಬಾರ್ ಪುಡಿ ಅಥವಾ ಸಾರಿನ ಪುಡಿ ಬಳಸಿ ಅಡಿಗೆ ಮಾಡಿ ಬಾಯಿ ಚಪ್ಪರಿಸಿ ಊಟ ಮಾಡಿ!


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
ಲವಂಗ - 7
ಚಕ್ಕೆ - 2 ಚೂರು 
ಕಡಲೆಬೇಳೆ - 1 / 2 ಲೋಟ
ಉದ್ದಿನಬೇಳೆ - 1 / 4 ಲೋಟ 
1 1 / 2 ಚಮಚ ಮೆಂತ್ಯ 
1 / 2 ಚಮಚ ಸಾಸಿವೆ
1 / 2 ಲೋಟ ಕೊತ್ತಂಬರಿ
1 1 / 2 ಚಮಚ ಜೀರಿಗೆ
ಇಂಗು
1 / 4 ಚಮಚ ಅರಿಶಿನ 
4 - 5 ಎಸಳು ಕರಿಬೇವು
6 ಚಮಚ ಮೆಣಸಿನಪುಡಿ (ಖಾರಕ್ಕೆ ತಕ್ಕಂತೆ)

ಮಾಡುವ ವಿಧಾನ:
ಬಾಣಲೆಯಲ್ಲಿ ಒಂದೆರಡು ಹನಿ ಎಣ್ಣೆ ಹಾಕಿಕೊಂಡು ಮೆಣಸಿನಪುಡಿ, ಕರಿಬೇವು ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಹುರಿದುಕೊಳ್ಳಿ. ಕೊನೆಯಲ್ಲಿ ಕರಿಬೇವು ಸೇರಿಸಿ ತಣ್ಣಗಾಗಲು ಬಿಡಿ.
ಹುರಿದುಕೊಂಡ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
ಮೆಣಸಿನ ಪುಡಿಗೆ ಸ್ವಲ್ಪ ಎಣ್ಣೆ ಸೇರಿಸಿ ಹುರಿದು, ಸಾರಿನ ಪುಡಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಗಾಳಿಯಾಡದಂತೆ ತುಂಬಿಟ್ಟುಕೊಂಡು ಬಳಸಿ.


ಟಿಪ್ಸ್:
  • ಸಾರಿನ ಪುಡಿ ತಯಾರಿಸುವಾಗ ಇಂಗನ್ನು ಧಾರಾಳವಾಗಿ ಬಳಸಿ.     
  • ಸಾರಿನ ರುಚಿ ಬದಲಾವಣೆಗಾಗಿ ಇಲ್ಲಿ ಹೇಳಿದ ಸಾಮಗ್ರಿಗಳ ಅಳತೆಯಲ್ಲಿ ಸ್ವಲ್ಪ ಹೆಚ್ಚು - ಕಡಿಮೆ ಮಾಡಿ ಸಾರಿನ ಪುಡಿ ತಯಾರಿಸಿ ನೋಡಿ. 

Wednesday, 20 July 2011

ಕ್ಯಾರೆಟ್ ರೊಟ್ಟಿ / Carrot Rotti

Click here to read in English.

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಸಂಜೆ ಊಟಕ್ಕೆ ರೊಟ್ಟಿ ಅಥವಾ ಚಪಾತಿ ಇದ್ದೇ ಇರುತ್ತದೆ. ದಿನವೂ ಒಂದೇ ಬಗೆ ಮಾಡಲು ಬೇಸರವಾಗುವುದರಿಂದ ಬಳಸುವ ಐಟಂಗಳಲ್ಲಿ ಏನಾದರೂ ಬದಲಾವಣೆಗಳನ್ನು ಮಾಡುತ್ತಿರುತ್ತೇನೆ. ಹೀಗೇ ಒಂದಿಷ್ಟು ಪ್ರಯೋಗಗಳನ್ನು ಮಾಡಿ ಕಲಿತದ್ದು ಈ ಕ್ಯಾರೆಟ್ ರೊಟ್ಟಿ.


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಈ ಅಳತೆಯಿಂದ ಸುಮಾರು 8 - 9 ರೊಟ್ಟಿಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 2  3 / 4 ಕಪ್
ನೀರು - 1  1 / 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ
ಆಮಚೂರ್ ಪುಡಿ - 1 / 2 ಚಮಚ
ಮೆಣಸಿನಪುಡಿ - 1 / 2 ಚಮಚ (ಖಾರಕ್ಕೆ ತಕ್ಕಂತೆ)
ಕಸೂರಿ ಮೇಥಿ - 2 ಚಮಚ
ಅರ್ಧ ಕ್ಯಾರೆಟ್

ಮಾಡುವ ವಿಧಾನ:
ಮೊದಲು ಕ್ಯಾರೆಟ್ ತುರಿದುಕೊಳ್ಳಿ.
ಒಂದು ಪಾತ್ರೆಯಲ್ಲಿ ಉಪ್ಪು, ಗೋಧಿಹಿಟ್ಟು, ಮೆಣಸಿನಪುಡಿ, ಆಮಚೂರ್ ಪುಡಿ, ಕಸೂರಿ ಮೇಥಿ, ಕ್ಯಾರೆಟ್ ತುರಿ ಹಾಕಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತ, ಮೆತ್ತಗೆ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
ಕಲಸಿದ ಹಿಟ್ಟಿಗೆ 2 - 3 ಚಮಚದಷ್ಟು ಎಣ್ಣೆ ಸೇರಿಸಿ ನಾದಿ. ಇದನ್ನು 10 ನಿಮಿಷ ನೆನೆಯಲು ಬಿಡಿ.
ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಕೈಯಿಂದ ತಟ್ಟಿ ಅಗಲ ಮಾಡಿಕೊಳ್ಳಿ, ಇಲ್ಲವೇ ಚಿಕ್ಕದಾಗಿ ಲಟ್ಟಿಸಿ. ಇದರಮೇಲೆ ಎಣ್ಣೆ ಸವರಿ ಒಂದು ಮಡಿಕೆ ಮಡಿಚಿ. ಪುನಃ ಸ್ವಲ್ಪ ಎಣ್ಣೆ ಸವರಿ ಮಡಿಚಿ, ತ್ರಿಕೋನಾಕಾರಕ್ಕೆ ತನ್ನಿ. ಎಲ್ಲ ಉಂಡೆಗಳನ್ನೂ ಹೀಗೇ ಮಾಡಿಕೊಳ್ಳಿ.
 
ಉಂಡೆಗಳನ್ನು ಹಿಟ್ಟಿನಲ್ಲಿ ಹೊರಳಿಸಿಕೊಂಡು ಚಪಾತಿಯಂತೆ ಲಟ್ಟಿಸಿ. ಕಾದ ಕಾವಲಿಯ ಮೇಲೆ ರೊಟ್ಟಿಗಳನ್ನು ಸ್ವಲ್ಪ ಎಣ್ಣೆ ಸವರಿ ಎರಡೂ ಕಡೆ ಬೇಯಿಸಿ. ನಿಮ್ಮಿಷ್ಟದ ಸೈಡ್ ಡಿಷ್ ನೊಡನೆ ತಿನ್ನಿ. 
ಈ ರೊಟ್ಟಿ ಮದ್ಯಾಹ್ನದ ಲಂಚ್ ಬಾಕ್ಸ್ ಗೂ ಚೆನ್ನಾಗಿರುತ್ತದೆ.


Monday, 18 July 2011

ಮಾವಿನಹಣ್ಣಿನ ಸೀಕರಣೆ (ರಸಾಯನ) / Mango Seekarane

Click here for English version.

ಮಾವಿನ ಹಣ್ಣಿನ ಸೀಜನ್ ಬಂತೆಂದರೆ ಸಾಕು, ನಮ್ಮೂರ ಕಡೆ ಎಲ್ಲರ ಮನೆಗಳಲ್ಲೂ ಮಾವಿನ ಹಣ್ಣಿನ ಘಮ ಘಮ ಪರಿಮಳ ಮನೆತುಂಬ ಪಸರಿಸಿರುತ್ತದೆ. ಈ ವರ್ಷವಂತೂ ಯಾರನ್ನು ಕೇಳಿದರೂ ಒಂದೇ ಮಾತು: 'ಸಿಕ್ಕಾಪಟ್ಟೆ ಮಾವಿನ ಹಣ್ಣು ತಿಂದುಬಿಟ್ಟೆ' ಎಂದು! ಆದರೆ ಈ ವರ್ಷ ನಮಗೆ ಮಾತ್ರ ಇಷ್ಟು ದಿನಗಳವರೆಗೆ ಮಾವಿನ ಹಣ್ಣು ತಿನ್ನುವ ಭಾಗ್ಯ ಒದಗಿರಲಿಲ್ಲ... ಈಗ ಸ್ವಲ್ಪ ದಿನಗಳಿಂದ ಮೆಕ್ಸಿಕೋದಿಂದ ಬರುವ ಮಾವಿನ ಹಣ್ಣುಗಳು ಕೆಲವು ಅಂಗಡಿಗಳಲ್ಲಿ ದೊರೆಯುತ್ತಿವೆ.
ಮೊದಲೊಮ್ಮೆ ಮಾವಿನ ಸೀಕರಣೆ ಮಾಡಿದ್ದೆ. ಆದರೆ ಏಕೋ ಬ್ಲಾಗ್ ನಲ್ಲಿ ಹಾಕಲು ಆಗಿರಲಿಲ್ಲ. ಈಗ ಬ್ಲಾಗ್ ನ 50ನೇ ಪೋಸ್ಟಿಂಗ್ ನ ಸಿಹಿ ನೆನಪಿನೊಂದಿಗೆ ಈ ಸೀಕರಣೆ:) 


ಸರ್ವಿಂಗ್: 3 ಜನರಿಗೆ ಆಗುತ್ತದೆ 
ತಯಾರಿಸಲು ಬೇಕಾಗುವ ಸಮಯ  : 20 - 30 ನಿಮಿಷಗಳು 

ಬೇಕಾಗುವ ಸಾಮಗ್ರಿಗಳು:
ಮಾಗಿದ ಮಾವಿನಹಣ್ಣು - 2
ಸಕ್ಕರೆ ಅಥವಾ ಬೆಲ್ಲ - ಸಿಹಿಯಾಗುವಷ್ಟು
ಚಿಟಿಕೆ ಉಪ್ಪು
ಏಲಕ್ಕಿ ಪುಡಿ - 1/4 ಚಮಚ
2 1/2 - 3 ಲೋಟ ಹಾಲು
ತೆಂಗಿನ ತುರಿ (ಬೇಕಿದ್ದರೆ) - 1/2 ಲೋಟ 
 
ಮಾಡುವ ವಿಧಾನ:
ಮಾವಿನಹಣ್ಣನ್ನು ಸಿಪ್ಪೆ ತೆಗೆದು, ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ.
 
ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ತೆಂಗಿನ ತುರಿ ಬಳಸದಿದ್ದರೆ ಅರ್ಧ ಲೋಟದಷ್ಟು ಮಾವಿನ ಹೋಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪಲ್ಪ್ ತಯಾರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಹೆಚ್ಚಿದ ಮಾವಿನಹಣ್ಣು, ಚಿಟಿಕೆ ಉಪ್ಪು, ಚೆನ್ನಾಗಿ ಸಿಹಿಯಾಗುವಷ್ಟು ಸಕ್ಕರೆ ಅಥವಾ ಬೆಲ್ಲ, ಹಾಲು, ರುಬ್ಬಿದ ತೆಂಗಿನ ತುರಿ ಅಥವಾ ಮಾವಿನ ಪಲ್ಪ್ ಸೇರಿಸಿ ಕಲಕಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ.
 
ಈ ಸೀಕರಣೆ ಹಾಗೇ ತಿನ್ನಲೂ ಚೆನ್ನಾಗಿರುತ್ತದೆ. ಇದನ್ನು ದೋಸೆ, ಚಪಾತಿ ಅಥವಾ ಪೂರಿಯೊಡನೆಯೂ ತಿನ್ನಬಹುದು.

Friday, 15 July 2011

ಟೊಮೇಟೊ ರೈಸ್ / Tomato Rice

Click here for English version.

ಇದು ನಮ್ಮಿಬ್ಬರಿಗೂ ಬಹಳ ಇಷ್ಟವಾಗುವ ರೈಸ್ ಐಟಂ. ಟೊಮೇಟೊ ರೈಸ್ ಮಾಡಿದರೆ ಆ ದಿನ ಊಟ ಸ್ವಲ್ಪ ಹೆಚ್ಚೇ ಇಳಿಯುತ್ತದೆ. ಈಗ ಒಂದೆರಡು ತಿಂಗಳಿನಿಂದ ಟೊಮೇಟೊ ಬೆಲೆ ತುಂಬ ಹೆಚ್ಚಾಗಿಬಿಟ್ಟಿದ್ದರಿಂದ ಟೊಮೇಟೊ ಉಪಯೋಗಿಸುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದೆವು. ಈಗ ಪರವಾಗಿಲ್ಲ, ಬೆಲೆ ಸ್ವಲ್ಪ ಇಳಿದಿದೆ. ಟೊಮೇಟೊ ದೋಸೆ ಮಾಡದೆ ಸುಮಾರು ದಿನಗಳಾಗಿಬಿಟ್ಟಿತ್ತು ಇತ್ತೀಚೆಗೆ. ಮೊನ್ನೆ ಅದನ್ನೂ ಮಾಡಿಯಾಯಿತು. ಮತ್ತೆ ನೆನಪಾಯಿತು, ಟೊಮೇಟೊ ರೈಸ್ ಮಾಡದೆ ತಿಂಗಳಾಯಿತೆಂದು.. ಮತ್ತೇಕೆ ತಡ? ಊಟಕ್ಕೆ ಸ್ಪೆಷಲ್ ಟೊಮೇಟೊ ರೈಸ್ ತಯಾರು!
ಟೊಮೇಟೊ ರೈಸ್ ತಯಾರಿಸುವಾಗ ಒಂದು ವಿಷಯ ನಿಮ್ಮ ಗಮನದಲ್ಲಿರಲಿ. ಖಾರಕ್ಕೆ ಮೆಣಸಿನ ಪುಡಿ ಸೇರಿಸುವಾಗ ನೋಡಿಕೊಂಡು ಹಾಕಿ. ಬಣ್ಣ ಚೆನ್ನಾಗಿ ಬಂದಿಲ್ಲವೆಂದು ಸ್ವಲ್ಪ ಜಾಸ್ತಿ ಮೆಣಸಿನ ಪುಡಿ ಸೇರಿಸಿಬಿಟ್ಟರೆ ಮುಗಿಯಿತು ಕಥೆ! ಬಾಯಿಯ ಬದಲು ಕಣ್ಣಲ್ಲಿ ನೀರೂರಿಸಿಕೊಂಡು ಊಟ ಮಾಡಬೇಕಾಗುತ್ತದೆ ನೀವು!!


ಬೇಕಾಗುವ ಸಾಮಗ್ರಿಗಳು:
ಟೊಮೇಟೊ - 2
ಈರುಳ್ಳಿ - 1
ಹೆಚ್ಚಿದ ಕೊತ್ತಂಬರಿ ಸೊಪ್ಪು - 3 ಟೀ ಸ್ಪೂನ್
ಎಲಕ್ಕಿ - 2
ಚಕ್ಕೆ - 2 ಚೂರು
ಲವಂಗ - 4
ಜೀರಿಗೆ - 1/2 ಟೀ ಸ್ಪೂನ್
ಹಸಿಮೆಣಸು - 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1/2 ಟೀ ಸ್ಪೂನ್
ಅರಿಶಿನ - ಚಿಟಿಕೆ
ಮೆಣಸಿನ ಪುಡಿ - 1/2 ಚಮಚ (ಖಾರಕ್ಕೆ ತಕ್ಕಂತೆ)
ಅಕ್ಕಿ - 1 1/2 ಕಪ್
ನಿಂಬೆರಸ - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - 3 ಟೀ ಸ್ಪೂನ್
ನೀರು - 2 3/4 ಕಪ್

ಮಾಡುವ ವಿಧಾನ:
ಟೊಮೇಟೊ, ಈರುಳ್ಳಿ, ಹಸಿಮೆಣಸು ಎಲ್ಲವನ್ನೂ ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಚಕ್ಕೆ, ಲವಂಗ, ಎಲಕ್ಕಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಜೀರಿಗೆ, ಚಿಟಿಕೆ ಅರಿಶಿನ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿಮೆಣಸು ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಮೆಣಸಿನ ಪುಡಿ ಸೇರಿಸಿ, ಟೊಮೇಟೊ ಸ್ವಲ್ಪ ಮೆತ್ತಗಾಗುವವರೆಗೆ ಹುರಿದುಕೊಂಡು, ಅದಕ್ಕೆ ತೊಳೆದ ಅಕ್ಕಿ, ಬೇಯಲು ಬೇಕಾಗುವಷ್ಟು ನೀರು (ನಾನು ಇಲ್ಲಿ 2 3/4 ಲೋಟ ನೀರು ಬಳಸಿದ್ದೇನೆ) ಸೇರಿಸಿ.
 
ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನಿಂಬೆರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕುಕ್ಕರ್ ನಲ್ಲಿ ಉದುರಾಗಿ ಬೇಯಿಸಿ.
ಬೇಕಿದ್ದರೆ ಕೊನೆಯಲ್ಲಿ ಹುರಿದ ಗೇರುಬೀಜ ಸೇರಿಸಿ. ಟೊಮೇಟೊ ರೈಸ್, ರಾಯಿತಾ ಇಲ್ಲವೇ ಬರೀ ಮೊಸರಿನೊಡನೆಯೂ ಚೆನ್ನಾಗಿರುತ್ತದೆ.

Wednesday, 13 July 2011

ಈರುಳ್ಳಿ ಚಟ್ನಿ / Onion chutney

Click here for English Version.

ದಿನವೂ ತಿಂಡಿಗೆ ದೋಸೆ ಮಾಡುವುದಾದರೆ ಎಷ್ಟು ಬಗೆಯ ಚಟ್ನಿಗಳನ್ನು ಕಲಿತರೂ ಸಾಲದು. ಒಂದೇ ಬಗೆಯ ಚಟ್ನಿಯನ್ನು ಎಷ್ಟು ದಿನ ತಿನ್ನಲು ಸಾಧ್ಯ ಅಲ್ಲವೇ? ಇತ್ತೀಚೆಗೆ ನಮಗೆ ತೆಂಗಿನಕಾಯಿ ಕೊಳ್ಳುವುದೆಂದರೆ ದೊಡ್ಡ ಸಾಹಸವೇ ಆಗಿಬಿಟ್ಟಿದೆ. ಸಾಮಾನ್ಯವಾಗಿ ತೆಂಗಿನಕಾಯಿಯನ್ನು ಅಂಗಡಿಯಿಂದ ತಂದರೆ ತೆಂಗಿನ ತುರಿಯನ್ನೆಲ್ಲ ಒಮ್ಮೆಲೇ ತುರಿದು ಫ್ರೀಜರ್ ನಲ್ಲಿ ಇಟ್ಟುಕೊಂಡು ಅಭ್ಯಾಸ. ಹಿಂದಿನ ವಾರ ಅಂಗಡಿಯಿಂದ ತೆಂಗಿನಕಾಯಿಯನ್ನು ತಂದಿದ್ದೆ; ಒಡೆದು ನೋಡಿದರೆ ಕೆಟ್ಟುಹೋಗಿತ್ತು. ಪುನಃ ಎರಡು ದಿನಗಳ ನಂತರ ಇನ್ನೊಂದು ಅಂಗಡಿಯಿಂದ ಕೊಂಡುತಂದೆ..ನೋಡಿದರೆ ಅದೂ ಸಹ ಹಾಳಾಗಿಬಿಟ್ಟಿತ್ತು :( ನಮ್ಮ ಮನೆಯಲ್ಲಿ ತೆಂಗಿನಕಾಯಿ ಇಲ್ಲದೆ ಅಡಿಗೆ ಮಾಡುವುದು ಸ್ವಲ್ಪ ಕಷ್ಟವೇ..ಹೀಗಾಗಿ ಇಂಥ ರಿಸ್ಕ್ ಗಳನ್ನು ಆಗಾಗ್ಗೆ ತೆಗೆದುಕೊಳ್ಳುತ್ತಿರಬೇಕಾಗುತ್ತದೆ.
ಈಗ ನಾನು ಹೇಳುತ್ತಿರುವ ಚಟ್ನಿ ನನ್ನ ಅಕ್ಕನಿಂದ ಕಲಿತದ್ದು. ದೋಸೆ, ಇಡ್ಲಿ ಇಲ್ಲವೇ ಚಪಾತಿಯೊಡನೆ ಒಳ್ಳೆಯ ಕಾಂಬಿನೇಷನ್.


ಬೇಕಾಗುವ ಸಾಮಗ್ರಿಗಳು:
1 ಈರುಳ್ಳಿ
1/2 ಕಪ್ ತೆಂಗಿನತುರಿ
ಹಸಿಮೆಣಸು 2 - 3
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ : ಎಣ್ಣೆ, ಸಾಸಿವೆ

ಮಾಡುವ ವಿಧಾನ:
ಈರುಳ್ಳಿಯನ್ನು ಸಿಪ್ಪೆ ತೆಗೆಯದೆ ಸಮನಾಗಿ ಎರಡು ಭಾಗಗಳಾಗಿ ಕತ್ತರಿಸಿಕೊಳ್ಳಿ.
ಇದಕ್ಕೆ ಒಗ್ಗರಣೆ ಸೌಟು ಇದ್ದರೆ ಅನುಕೂಲ. ಒಗ್ಗರಣೆ ಸೌಟಿನಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಈರುಳ್ಳಿ, ಹಸಿಮೆಣಸು (ಇಡಿಯಾಗೇ ಹಾಕಿ) ಹಾಕಿ ಒಂದು ಪ್ಲೇಟ್ ಮುಚ್ಚಿ ಬೇಯಲು ಬಿಡಿ. 3 - 4 ನಿಮಿಷ ಬೇಯಿಸಿ ಒಮ್ಮೆ ಈರುಳ್ಳಿ ಚೂರುಗಳನ್ನು ಮಗುಚಿ ಪುನಃ ನಾಲ್ಕೈದು ನಿಮಿಷ ಬೇಯಿಸಿ.
ಈರುಳ್ಳಿ ಚೂರುಗಳು ಸ್ವಲ್ಪ ತಣ್ಣಗಾದ ಅವುಗಳ ಮೇಲಿನ ಸಿಪ್ಪೆ ತೆಗೆದುಬಿಡಿ.
ನಂತರ ಹಸಿಮೆಣಸು ಮತ್ತು ಈರುಳ್ಳಿ ಚೂರುಗಳನ್ನು ತೆಂಗಿನ ತುರಿಯೊಡನೆ ತರಿಯಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಎಣ್ಣೆ, ಸಾಸಿವೆಯ ಒಗ್ಗರಣೆ ಮಾಡಿ, ದೋಸೆ ಇಲ್ಲವೇ ಇಡ್ಲಿಯೊಡನೆ ಸರ್ವ್ ಮಾಡಿ.

Monday, 11 July 2011

ಸ್ಪೈಸಿ ಅಕ್ಕಿ ರೊಟ್ಟಿ / Spicy Akki Rotti

Click here for English version.

ಅಬ್ಬಾ, ಈ ವೀಕ್ಎಂಡ್ ಅಂತೂ ಎಷ್ಟು ಬೇಗ ಕಳೆದೇ ಹೋಗಿಬಿಡುತ್ತದೆ! ನೆಂಟರಿಷ್ಟರಿಗೆ ಕಾಲ್ ಮಾಡುವುದು, ಫ್ರೆಂಡ್ಸ್ ಜೊತೆ ಚಾಟಿಂಗ್, ಒಂದಿಷ್ಟು ಶಾಪಿಂಗ್, ಊಟ, ನಿದ್ರೆ, ಇಷ್ಟರಲ್ಲೇ ಸೋಮವಾರ ಬಂದೇಬಿಡುತ್ತದೆ. ಮತ್ತೆ ಅದೇ ಮನೆಕೆಲಸ, ಮನೆಯವರನ್ನು ಆಫೀಸಿಗೆ ಕಳಿಸಿಕೊಡುವುದು, ಹೀಗೆ..
ಬ್ಲಾಗ್ ನಲ್ಲಿ ನಾನು ಪೋಸ್ಟ್ ಮಾಡುತ್ತಿರುವ ಮೂರನೇ ಬಗೆಯ ಅಕ್ಕಿ ರೊಟ್ಟಿ ಇದು; ನನ್ನ ಮಂಗಳೂರು ಫ್ರೆಂಡ್ ಒಬ್ಬರಿಂದ ಕಲಿತದ್ದು. ಬೆಳಗಿನ ತಿಂಡಿ ಇಲ್ಲವೇ ಮದ್ಯಾಹ್ನದ ಲಂಚ್ ಬಾಕ್ಸ್ ಗೆ ಚೆನ್ನಾಗಿರುತ್ತದೆ. ನಿಮಗಿಷ್ಟವಾದರೆ ಕೊತ್ತಂಬರಿ ಸೊಪ್ಪಿನ ಬದಲು ಸಬ್ಬಸಿಗೆ ಸೊಪ್ಪನ್ನೂ ಈ ರೊಟ್ಟಿಗೆ ಬಳಸಬಹುದು.


ತಯಾರಿಸಲು ಬೇಕಾಗುವ ಸಮಯ: 45 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ


ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - 1 1/2 ಕಪ್
ನೀರು - 2 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹಸಿಮೆಣಸು - 3 (ಖಾರಕ್ಕೆ ತಕ್ಕಂತೆ)
ಕೊತ್ತಂಬರಿ ಸೊಪ್ಪು - 1/2 ಕಪ್
ಈರುಳ್ಳಿ - 1
ಎಣ್ಣೆ - 2 ಚಮಚ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಹಾಕಿ ಒಂದು ಪ್ಲೇಟ್ ಮುಚ್ಚಿ ಒಲೆಯಮೇಲೆ ಕಾಯಲಿಡಿ. ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಎಣ್ಣೆ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ.
ನೀರು ಕುದಿಯತೊಡಗಿದಾಗ ಅದಕ್ಕೆ  ಅಕ್ಕಿಹಿಟ್ಟನ್ನು ಗೋಪುರದಂತೆ ಹಾಕಿ. ಇದಕ್ಕೆ ಒಂದು ಬಟ್ಟಲನ್ನು ಅರೆಬರೆ ಮುಚ್ಚಿ, 8 - 10 ನಿಮಿಷ ಬೇಯಿಸಿ. ನಂತರ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ, ತಣ್ಣಗಾಗಲು ಬಿಡಿ.


ಹಿಟ್ಟು ತಣ್ಣಗಾದ ನಂತರ ಚಿಕ್ಕ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ಕೈಯಿಂದ ರೊಟ್ಟಿಯಂತೆ ತಟ್ಟಿ, ಮಧ್ಯೆ ತೂತು ಮಾಡಿ.
ಕಾದ ಕಾವಲಿಯ ಮೇಲೆ ರೊಟ್ಟಿಯನ್ನು ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ.
ಈ ರೊಟ್ಟಿಗೆ ತೆಂಗಿನತುರಿ ಚಟ್ನಿ ಒಳ್ಳೆಯ ಕಾಂಬಿನೇಷನ್.


Wednesday, 6 July 2011

ಬ್ರೆಡ್ ಉಪ್ಪಿಟ್ಟು / Bread Upma

Click here for English version.

ಸಾಮಾನ್ಯವಾಗಿ ರವೆ ಉಪ್ಪಿಟ್ಟು ಎಂದರೆ ಮೂಗು ಮುರಿಯುವವರೇ ಜಾಸ್ತಿ. ಅದಕ್ಕೆ ವಾಡಿಕೆಯಲ್ಲಿ ಬಂದಿರುವ ಇನ್ನೊದು ಹೆಸರೆಂದರೆ 'ಕಾಂಕ್ರೀಟ್' :D ರವೆಯನ್ನು ಸರಿಯಾಗಿ ಹುರಿಯದಿದ್ದರೆ ಅದು ಕಾಂಕ್ರೀಟ್ ನಂತೆ ಆಗುವುದೂ ನಿಜ. ಆದರೆ ರವೆಯನ್ನು ಚೆನ್ನಾಗಿ ಹುರಿದು, ಹೆಚ್ಚಿದ ತರಕಾರಿಗಳನ್ನು ಸೇರಿಸಿ ಮಾಡಿದರೆ ರವಾ ಉಪ್ಪಿಟ್ಟು ಕೂಡ ಸೂಪರ್ಬ್ ಎನ್ನಿಸಿಬಿಡುತ್ತದೆ. 
ಅದಿರಲಿ, ಈಗ ವಿಷಯಕ್ಕೆ ಬರೋಣ..ಫಟಾ ಫಟ್ ಎಂದು ರುಚಿಯಾದ ಉಪ್ಪಿಟ್ಟು ತಯಾರಿಸಬೇಕೆ? ಇಲ್ಲಿದೆ ನೋಡಿ ಉಪಾಯ..ಬ್ರೆಡ್ ಉಪ್ಪಿಟ್ಟು! ಬೆಳಗ್ಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್ ಗೆ ಈ ಉಪ್ಪಿಟ್ಟು ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ದೊಡ್ಡದಾದ ಬ್ರೆಡ್ ಸ್ಲೈಸ್ ಗಳು - 6
ಹಸಿಮೆಣಸು 3 - 4 
ಕರಿಬೇವು 7 - 8 ಎಸಳು
ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಟೀ ಚಮಚ 
ಎಣ್ಣೆ - ಎರಡೂವರೆ ಟೀ ಚಮಚ 
ಉದ್ದಿನಬೇಳೆ - 1 / 2 ಚಮಚ
ಸಾಸಿವೆ - 1 / 4 ಚಮಚ
ಅರಿಶಿನ - 1 / 4 ಚಮಚ 
1 ಚಿಕ್ಕ ಈರುಳ್ಳಿ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 / 2 ಚಮಚ 
ನಿಂಬೆರಸ - ಸ್ವಲ್ಪ

ಮಾಡುವ ವಿಧಾನ:
ಹಸಿಮೆಣಸು, ಈರುಳ್ಳಿ ಹೆಚ್ಚಿಕೊಳ್ಳಿ.
ಬ್ರೆಡ್ ಸ್ಲೈಸ್ ಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿಕೊಳ್ಳಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ ಕಾದನಂತರ ಉದ್ದಿನಬೇಳೆ, ಸಾಸಿವೆ ಹಾಕಿ ಸಿಡಿಸಿ ನಂತರ ಕಾಲು ಚಮಚ ಅರಿಶಿನ, ಹೆಚ್ಚಿದ ಹಸಿಮೆಣಸು ಸೇರಿಸಿ ಕೈಯಾಡಿಸಿ. 
ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಒಂದು ನಿಮಿಷ ಬಾಡಿಸಿಕೊಂಡು, ಬ್ರೆಡ್ ಚೂರುಗಳನ್ನು ಸೇರಿಸಿ. ಜೊತೆಗೇ ಉಪ್ಪು, ಸಕ್ಕರೆ ಸೇರಿಸಿಕೊಂಡು ಕಾಲು ಲೋಟದಷ್ಟು ನೀರು ಮತ್ತು ಸ್ವಲ್ಪ ನಿಂಬೆರಸ ಚಿಮುಕಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಪ್ಲೇಟ್ ಮುಚ್ಚಿ 5 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿ. 
ಈ ಉಪ್ಪಿಟ್ಟು ಬಿಸಿಯಾಗಿದ್ದಾಗಲೇ ತಿನ್ನಲು ಚೆಂದ.

Tuesday, 5 July 2011

ಕಡ್ಲೆ ಉಸ್ಲಿ / Bengal Gram Usli

Click here for English version.

ಸಂಜೆಯ ಸ್ನ್ಯಾಕ್ಸ್ ಗೆ ಇಲ್ಲವೇ ರೊಟ್ಟಿ, ಚಪಾತಿಯೊಡನೆ ತಿನ್ನಲು ಈ ಉಸ್ಲಿ ಚೆನ್ನಾಗಿರುತ್ತದೆ. ತುಳಸಿ ವಿವಾಹದ ದಿನ ನಮ್ಮೂರ ಕಡೆ ಕಡ್ಲೆ ಉಸ್ಲಿ, ಅದಿಲ್ಲದಿದ್ದರೆ ಕೋಸಂಬರಿಯನ್ನು ಹೆಚ್ಚಿನ ಮನೆಗಳಲ್ಲಿ ಮಾಡಿಯೇ ಮಾಡುತ್ತಾರೆ. ತುಳಸಿ ವಿವಾಹ ಅಥವಾ ಕಾರ್ತೀಕದ ದಿನ ಇದನ್ನು ಪ್ರಸಾದದಂತೆ ಎಲ್ಲರಿಗೂ ವಿತರಿಸುವ ಪದ್ಧತಿ ಮೊದಲಿನಿಂದಲೂ ನಮ್ಮ ಕಡೆಯ ಮನೆಗಳಲ್ಲಿದೆ. ಈ ಉಸ್ಲಿ ತಯಾರಿಸಲು ಕೆಲವರು ಕೆಂಪು ಕಡ್ಲೆಯ ಬದಲು ಕಾಬೂಲಿ ಚನಾ (ಬೆಳ್ಳಗೆ, ಸ್ವಲ್ಪ ದೊಡ್ಡದಾಗಿರುವ ಕಡಲೆ) ಕೂಡ ಬಳಸುತ್ತಾರೆ.
 

ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಕಡ್ಲೆ - ಒಂದೂವರೆ ಕಪ್ (ನಾಲ್ಕೈದು ಘಂಟೆ ನೀರಿನಲ್ಲಿ ನೆನೆಸಿಟ್ಟಿರಿ)
ಲವಂಗ 3 - 4
ಚಕ್ಕೆ - 2 ಚೂರು
ಒಣಮೆಣಸು - 3 (ಖಾರಕ್ಕೆ ತಕ್ಕಂತೆ)
ಕಡಲೆಬೇಳೆ - 3 ಚಮಚ
ಉದ್ದಿನಬೇಳೆ - ಒಂದೂವರೆ ಚಮಚ
ಕೊತ್ತಂಬರಿ - 2 ಚಮಚ
ಜೀರಿಗೆ - 1 / 2 ಚಮಚ
ಸಾಸಿವೆ - 1 / 4 ಚಮಚ
ಇಂಗು - ಚಿಟಿಕೆ
ಅರಿಶಿನ - 1 / 4 ಚಮಚ 
ಕರಿಬೇವು - ಸ್ವಲ್ಪ
ಬೆಲ್ಲ ಅಥವಾ ಸಕ್ಕರೆ - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಅಡಿಗೆ ಸೋಡಾ - ಚಿಟಿಕೆ 
ಆಮ್ ಚೂರ್ ಪುಡಿ - 1 / 2 ಚಮಚ
ಎಣ್ಣೆ - ಸ್ವಲ್ಪ
ತೆಂಗಿನತುರಿ - 1 / 2 ಕಪ್


ಮಾಡುವ ವಿಧಾನ:
ನೀರಿನಲ್ಲಿ ನೆನೆಸಿಟ್ಟ ಕಡಲೆಯನ್ನು ಚೆನ್ನಾಗಿ ತೊಳೆದುಕೊಂಡು, ಬೇಯಲು ಬೇಕಾದಷ್ಟು ನೀರು ಮತ್ತು ಚಿಟಿಕೆ ಅಡಿಗೆ ಸೋಡಾ ಸೇರಿಸಿ ಕುಕ್ಕರ್ ನಲ್ಲಿ 3 ವಿಸಿಲ್ ಆಗುವತನಕ ಬೇಯಿಸಿ. ಸ್ವಲ್ಪ ಹೊತ್ತಿನ ನಂತರ ಕುಕ್ಕರ್ ನ ಮುಚ್ಚಳ ತೆಗೆದು, ಕಡ್ಲೆಯೊಡನೆ ಇರುವ ನೀರನ್ನೆಲ್ಲ ಬಸಿದು ತೆಗೆದುಬಿಡಿ.
ಒಂದು ಬಾಣಲೆಯಲ್ಲಿ ಅರ್ಧ ಚಮಚದಷ್ಟು ಎಣ್ಣೆ ಎಣ್ಣೆ ಕಾಯಿಸಿಕೊಂಡು ಚಕ್ಕೆ, ಲವಂಗ, ಒಣಮೆಣಸು, ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕೊತ್ತಂಬರಿ, ಜೀರಿಗೆ, ಇಂಗು, ಅರಿಶಿನ ಸೇರಿಸಿ ಹುರಿಯಿರಿ. ಕೊನೆಯಲ್ಲಿ ಎರಡು ಎಸಳು ಕರಿಬೇವನ್ನೂ ಸೇರಿಸಿ.


ಹುರಿದುಕೊಂಡ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನತುರಿ ಸೇರಿಸಿ ಒಂದು ಸುತ್ತು ತಿರುವಿ, ತರಿಯಾಗಿ ಮಾಡಿ ಹೊರತೆಗೆಯಿರಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, 2 - 3 ಚಮಚದಷ್ಟು ಎಣ್ಣೆ ಕಾಯಿಸಿ. ಅದಕ್ಕೆ ಸಾಸಿವೆ ಹಾಕಿ ಚಟಗುಡಿಸಿ, ರುಬ್ಬಿಕೊಂಡ ಮಿಶ್ರಣ, ಬೇಯಿಸಿದ ಕಡ್ಲೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪುಡಿ, ಸ್ವಲ್ಪ ಸಿಹಿಯಾಗುವಷ್ಟು ಬೆಲ್ಲ ಅಥವಾ ಸಕ್ಕರೆ, ಸ್ವಲ್ಪ ನೀರು ಸೇರಿಸಿ ಬೇಯಲು ಬಿಡಿ. ಇದರೊಡನೆ ನಾಲ್ಕೈದು ಎಸಳು ಕರಿಬೇವನ್ನೂ ಸೇರಿಸಿ. ಹದವಾದ ಉರಿಯಲ್ಲಿ ಸ್ವಲ್ಪ ಸಮಯ ಬೆಂದ ನಂತರ ಉರಿಯಿಂದ ಇಳಿಸಿ. ಸ್ನ್ಯಾಕ್ಸ್ ನಂತೆ ಇಲ್ಲವೇ ಸೈಡ್ ಡಿಷ್ ಆಗಿ ಬಳಸಬಹುದು.
 

Friday, 1 July 2011

ಕುಕ್ಕರ್ ನಲ್ಲಿ ತಯಾರಿಸಬಹುದಾದ ಎಗ್ ಲೆಸ್ ಕೇಕ್ / Eggless cake in pressure cooker

Click here for English version.

ನಾವೆಲ್ಲಾ ಚಿಕ್ಕವರಿದ್ದಾಗ ಕೇಕ್ ಇತ್ಯಾದಿ ಬೇಕರಿ ತಿಂಡಿಗಳನ್ನು ಮನೆಗೆ ತರುತ್ತಿದ್ದುದು ಬಹಳ ಅಪರೂಪ. ಮನೆಯಲ್ಲಿ ಎಷ್ಟೇ ಚೆನ್ನಾಗಿ ಬೇರೆ ತಿಂಡಿಗಳನ್ನು ಮಾಡಿಕೊಟ್ಟರೂ ಅಂಗಡಿಯಿಂದ ತಂದ ತಿಂಡಿಗಳ ಮೇಲಿನ ಪ್ರೀತಿ ಒಂದು ಕೈ ಜಾಸ್ತಿ! ನನ್ನ ಅಮ್ಮ ಒಮ್ಮೆ ಯಾರೋ ನೆಂಟರ ಮನೆಗೆ ಹೋದಾಗ ಕುಕ್ಕರ್ ಉಪಯೋಗಿಸಿ ಕೇಕ್ ಮಾಡುವುದನ್ನು ಕಲಿತುಕೊಂಡು ಬಂದರು. ಅಂದಿನಿಂದ ಮನೆಯಲ್ಲಿ ನಮಗೆ ಬೇಕೆನಿಸಿದಾಗಲೆಲ್ಲ ಕೇಕ್! ಅದರಲ್ಲೂ ಸ್ವಲ್ಪ ಸ್ವಲ್ಪವೇ ಹಿಟ್ಟಿಗೆ ಬೇರೆ ಬೇರೆ ಬಣ್ಣ ಸೇರಿಸಿ ಬಣ್ಣಬಣ್ಣದ ಕೇಕ್ ಮಾಡಿದರೆ ಎಷ್ಟೊಂದು ಖುಷಿ ನಮಗೆ :) ನಂತರದ ದಿನಗಳಲ್ಲಿ ಆ ಕೇಕ್ ಗೆ ಬೇರೆ ಬೇರೆ ಫ್ಲೇವರ್ ಗಳನ್ನು ಸೇರಿಸಿ ನೋಡಿದ್ದಾಯಿತು. ಜೊತೆಗೆ ಒಂದಿಷ್ಟು ಡ್ರೈ ಫ್ರೂಟ್ಸ್ ಸೇರಿಸುವುದು, ಇತ್ಯಾದಿ. ಇಷ್ಟು ವರ್ಷಗಳು ಕಳೆದರೂ ಆ ಕೇಕ್ ನ ಸಂತತಿ ನಮ್ಮ ಮನೆಯಲ್ಲಿ ಮುಂದುವರಿಯುತ್ತಲೇ ಇದೆ..
ಹಿಂದಿನ ವಾರ ಒಂದು ದಿನ ಈ ಕೇಕ್ ಮಾಡುವ ನೆನಪಾಯಿತು. ಆದರೆ ನನ್ನ ಬಳಿ ಕುಕ್ಕರ್ ನಲ್ಲಿ ಇಡುವ ಅಗಲವಾದ ಪಾತ್ರೆ ಇರಲಿಲ್ಲ. ಹೀಗಾಗಿ ಫಸ್ಟ್  ಟೈಮ್ ಈ ಕೇಕ್ ನ್ನು ಓವನ್ ನಲ್ಲಿ ಟ್ರೈ ಮಾಡಿದೆ. ಕೇಕ್ ಬಹಳ ಚೆನ್ನಾಗಿ ಬಂತು. ಆದರೆ ಇದಕ್ಕೆ ಓವನ್ ಬೇಕೆಂದೇ ಇಲ್ಲ, ಆರಾಮಾಗಿ ಕುಕ್ಕರ್ ನಲ್ಲಿಯೂ ಮಾಡಬಹುದು. ಒಂದೇ ವ್ಯತ್ಯಾಸವೆಂದರೆ ಓವನ್ ನಲ್ಲಿ ಮಾಡಿದಾಗ ಕೇಕ್ ನ ತಳಭಾಗದ ಬಣ್ಣ ಬದಲಾಗುವುದಿಲ್ಲ, ಕುಕ್ಕರ್ ನಲ್ಲಿ ಮಾಡಿದಾಗ ಕೇಕ್ ನ ತಳ ನಸುಗಂದು ಬಣ್ಣಕ್ಕೆ ಬಂದಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ
ಈ ಅಳತೆಯಿಂದ ಒಂದು ರೌಂಡ್ ಕೇಕ್ ತಯಾರಿಸಬಹುದು

ಕೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - 2 ಕಪ್
ಸಕ್ಕರೆ ಹಿಟ್ಟು - 1 ಕಪ್
ಮಿಲ್ಕ್ ಪೌಡರ್ - 1 ಕಪ್
ಬೆಣ್ಣೆ - ನಿಂಬೆಗಾತ್ರದಷ್ಟು 
ಬೇಕಿಂಗ್ ಪೌಡರ್ - 1 ಟೀ ಚಮಚ 
ಅಡಿಗೆ ಸೋಡಾ - 1 / 2 ಟೀ ಚಮಚ
ಹಾಲು - 2 ಕಪ್
ದಾಲ್ಚಿನ್ನಿ ಪುಡಿ - 1 ಟೀ ಚಮಚ (ಅಥವಾ ವೆನಿಲ್ಲಾ ಎಸೆನ್ಸ್ ಬಳಸಬಹುದು)
 
ಮಾಡುವ ವಿಧಾನ:
ಮೈದಾಹಿಟ್ಟು ಮತ್ತು ಬೇಕಿಂಗ್ ಪೌಡರ್ ನ್ನು ಒಟ್ಟಿಗೆ ಸೇರಿಸಿ ಜರಡಿಯಾಡಿಕೊಳ್ಳಿ.  
ಸಕ್ಕರೆ ಹಿಟ್ಟು, ಮೈದಾಹಿಟ್ಟು, ಮಿಲ್ಕ್ ಪೌಡರ್ - ಇಷ್ಟನ್ನೂ ಸೇರಿಸಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. 
ಬೆಣ್ಣೆಯನ್ನು ಸ್ವಲ್ಪವೇ ಬಿಸಿಮಾಡಿ ಕರಗಿಸಿಕೊಳ್ಳಿ. ಇದನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ಹಾಲು ಸೇರಿಸುತ್ತ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಿಟ್ಟನ್ನು ಕಲಸುವಾಗ ಮುಖ್ಯವಾಗಿ ಅನುಸರಿಸಬೇಕಾದ ಅಂಶವೆಂದರೆ, ಹಿಟ್ಟನ್ನು ಒಂದೇ ನೇರದಲ್ಲಿ ಕಲಸಬೇಕು.
ಕೊನೆಯಲ್ಲಿ ಇದಕ್ಕೆ ಅಡಿಗೆ ಸೋಡಾ ಮತ್ತು ದಾಲ್ಚಿನ್ನಿ ಪುಡಿ ಅಥವಾ ವೆನಿಲ್ಲಾ ಎಸೆನ್ಸ್ ಸೇರಿಸಿ ಕಲಸಿ, ಜಿಡ್ಡು ಸವರಿದ ಅಗಲವಾದ ಪಾತ್ರೆಗೆ ಒಂದೇ ನೇರದಲ್ಲಿ ಹಾಕಿ. ಮೇಲಿನಿಂದ ಡ್ರೈ ಫ್ರೂಟ್ಸ್ ಬೇಕಿದ್ದರೆ ಸೇರಿಸಿ. ಅಲಂಕಾರಿಕವಾಗಿ ಹಾಕಬೇಕೆಂದೇನೂ ಇಲ್ಲ; ಏಕೆಂದರೆ ಬೇಯುವಷ್ಟರಲ್ಲಿ ಅವೆಲ್ಲ ಕೇಕ್ ನ ಒಳಗಡೆ ಸೇರಿಕೊಂಡುಬಿಟ್ಟಿರುತ್ತವೆ.
 

  
- ಕುಕ್ಕರ್ ನಲ್ಲಿ ಬೇಯಿಸುವುದಾದರೆ:
ತಯಾರಿಸಿದ ಹಿಟ್ಟನ್ನು ಕುಕ್ಕರ್ ನಲ್ಲಿ ಇಡಬಹುದಾದ ಅಗಲ ತಳದ ಪಾತ್ರೆಗೆ ಹಾಕಿಕೊಳ್ಳಿ. 
ಕುಕ್ಕರ್ ನ್ನು ನೀರು ಹಾಕದೆ ಕಾಯಲಿಟ್ಟು ಅದರಲ್ಲಿ ಹಿಟ್ಟು ಹಾಕಿದ ಪಾತ್ರೆಯನ್ನಿಟ್ಟು ಭದ್ರವಾಗಿ ಕುಕ್ಕರ್ ಮುಚ್ಚಳ ಮುಚ್ಚಿ. ಆದರೆ ಕುಕ್ಕರ್ ಗೆ ವೇಯ್ಟ್ ಹಾಕದೆ, ಆ ಜಾಗದಲ್ಲಿ ಒಂದು ತಟ್ಟೆಯನ್ನು ಬೋರಲು ಹಾಕಿ.
 

ಒಲೆಯ ಉರಿಯನ್ನು ಬಹಳ ಕಡಿಮೆ, ಅಂದರೆ ಸಿಮ್ ನಲ್ಲಿಡಿ. ಕೇಕ್ ಬೇಯಲು 40 ರಿಂದ 45 ನಿಮಿಷದಷ್ಟು ಸಮಯ ಬೇಕಾಗುತ್ತದೆ.
ಕುಕ್ಕರ್ ನ ತಳಕ್ಕೆ ನೀರು ಹಾಕಿಲ್ಲ; ಸೀದುಹೋಗಬಹುದೆನ್ನುವ ಹೆದರಿಕೆ ಬೇಡ. ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಹಾಗಾಗುವ ಸಂಭವ ಬಹಳ ಕಡಿಮೆ.  
ಕುಕ್ಕರ್ ಗೆ ವೇಯ್ಟ್ ಹಾಕಿಲ್ಲದ ಕಾರಣ ನಿಮಗೆ ಬೇಕಾದಾಗ ಮುಚ್ಚಳ ತೆರೆದು ನೋಡಬಹುದು. 30 - 35 ನಿಮಿಷ ಬೇಯಿಸಿದ ನಂತರ ಒಮ್ಮೆ ಮುಚ್ಚಳ ತೆರೆದು ಒಂದು ಚಾಕು ಅಥವಾ ಕಡ್ಡಿಯನ್ನು ಕೇಕ್ ನೊಳಗೆ ತಳದವರೆಗೆ ಹಾಕಿ ನೋಡಿ. ಹಿಟ್ಟು ಚಾಕುವಿಗೆ ಅಂಟಿಕೊಳ್ಳದಿದ್ದರೆ ಕೇಕ್ ಬೆಂದಿದೆಯೆಂದರ್ಥ.
 
- ಓವನ್ ನಲ್ಲಿ ಬೇಯಿಸುವುದಾದರೆ:
ಜಿಡ್ಡು ಸವರಿದ ಬೇಕಿಂಗ್ ಪಾತ್ರೆಗೆ ಹಿಟ್ಟನ್ನು ವರ್ಗಾಯಿಸಿಕೊಳ್ಳಿ. 350 F ಗೆ ಪ್ರೀಹೀಟ್ ಮಾಡಿದ ಓವನ್ ನಲ್ಲಿ ಇದನ್ನು 50 - 55 ನಿಮಿಷ ಬೇಯಿಸಿ. ಆಗಾಗ್ಗೆ ಕೇಕ್ ಬೆಂದಿದೆಯೇ ಎಂದು ಪರೀಕ್ಷಿಸುತ್ತಿರಿ.

ತಯಾರಾದ ಕೇಕ್ ನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು, ನಂತರ ಒಂದು ಪ್ಲೇಟ್ ಮೇಲೆ ಕೇಕ್ ಮಾಡಿದ ಪಾತ್ರೆಯನ್ನು ಬೋರಲು ಹಾಕಿ, ಕೇಕ್ ನ್ನು ಪಾತ್ರೆಯಿಂದ ಹೊರತೆಗೆಯಿರಿ.
 

ಐಸಿಂಗ್:
ಐಸಿಂಗ್ ಮಾಡುವುದಾದರೆ ಕೇಕ್ ಪೂರ್ತಿ ತಣ್ಣಗಾದ ನಂತರವೇ ಮಾಡಿ. ಇಲ್ಲದಿದ್ದರೆ ಐಸಿಂಗ್ ಎಲ್ಲ ಕರಗಿಬಿಡುತ್ತದೆ.
ಸ್ವಲ್ಪ ಬೆಣ್ಣೆ, ಕೊಕೋವಾ ಪೌಡರ್ ಮತ್ತು ಸ್ವಲ್ಪ ಸಿಹಿಯಾಗುವಷ್ಟು ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕ್ರೀಮ್ ನಂತೆ ಮಾಡಿಕೊಂಡು ಅದನ್ನು ಕೇಕ್ ಗೆ ಸವರಿಬಿಟ್ಟರೆ ಆಯಿತು, ಕೇಕ್ ತಿನ್ನಲು ಸಿದ್ಧ!


ಟಿಪ್ಸ್: 
  • ಕೊಕೋವಾ ಪೌಡರ್ ಬದಲು ಚಾಕೊಲೇಟ್ ಫ್ಲೇವರ್ ಉಳ್ಳ ಹಾರ್ಲಿಕ್ಸ್, ವಿನ್ನರ್ ಇತ್ಯಾದಿ ಯಾವುದಾದರೂ ಪುಡಿಯನ್ನು ಐಸಿಂಗ್ ಗೆ ಬಳಸಿದರೂ ಚೆನ್ನಾಗಿರುತ್ತದೆ.
  • ಇದಕ್ಕೆ ಫುಡ್ ಕಲರ್ ಬಳಸುವುದಾದರೆ ಹಿಟ್ಟಿನ ಮಿಶ್ರಣ ತಯಾರಾದ ನಂತರ ಅದನ್ನು ಪಾಲು ಮಾಡಿ 2 - 3 ಬೌಲ್ ಗಳಿಗೆ ಹಾಕಿಕೊಳ್ಳಿ. ಒಂದೊಂದು ಬೌಲ್ ನ ಹಿಟ್ಟಿಗೆ ಒಂದೊಂದು ಬಣ್ಣ ಸೇರಿಸಿ ಕಲಸಿಕೊಳ್ಳಿ. ನಂತರ ಒಂದೊಂದೇ ಬೌಲ್ ನ ಹಿಟ್ಟನ್ನು ಬೇಕಿಂಗ್ ಟ್ರೇಗೆ ಸಮನಾಗಿ ಹರವಿ, ವಿವಿಧ ಬಣ್ಣಗಳ ಲೇಯರ್ ಗಳನ್ನು ಮಾಡಿ. ತಳದಲ್ಲಿ ಡಾರ್ಕ್ ಕಲರ್ ಬಳಸಿದರೆ ಕೇಕ್ ನ ಬುಡ ನಸುಗಂದು ಬಣ್ಣಕ್ಕೆ ಬಂದಿರುವುದು ಗೊತ್ತೇ ಆಗುವುದಿಲ್ಲ.
 

Related Posts Plugin for WordPress, Blogger...